06 ಜೂನ್ 2012

ಒಳ್ಳೆಯದು ಹುಟ್ಟಿನಿಂದ ಬರುವುದಿಲ್ಲ, ಅದನ್ನೂ ರೂಢಿಸಿಕೊಳ್ಳಬೇಕು, ನಮ್ಮೊಂದಿಗೆ ಬೆಳಸುತ್ತಾ ಹೋಗಬೇಕು!!!!!!!

ನಾನು ಬಹಳ ಬೆಳೆದಿದ್ದೇನೆಂದು ಹೇಳುವುದಿಲ್ಲ ನನಗೆ ಬೆಳವಣಿಗೆಯ ಬಗ್ಗೆ ಅಂತಹ ಒಲವಿಲ್ಲ. ನಾನು ಜೀವನವನ್ನು ನೋಡುವ ರೀತಿಯೇ ಬೇರೆ. ನನಗೆ ಜೀವನವೆಂದರೇ ಆತ್ಮ ಸಂತೃಪ್ತಿ, ಅದು ವಸ್ತುಗಳಿಂದ ಬರುವುದಲ್ಲ. ಜೀವನ ನಿಂತ ನೀರಲ್ಲ, ಅದು ಹರಿಯುತ್ತಿರಬೇಕು. ಒಮ್ಮೊಮ್ಮೆ ನೀರೇ ಬರಿದಾಯಿತೆನ್ನುವ ಮಟ್ಟಕ್ಕೆ ಹೋಗಬಹುದು, ಮತ್ತೊಮ್ಮೆ ಧುಮ್ಮಿಕ್ಕಿ ಹರಿಯಲೂಬಹುದು. ಕಷ್ಟಗಳು ಅಷ್ಟೇ ಖುಷಿಯೂ ಅಷ್ಟೇ. ಎಲ್ಲವೂ ಇರಬೇಕು. ಇನ್ನೇನು ಜೀವನ ಮುಗಿದೇ ಹೋಯಿತು, ನೇಣುಹಾಕಿಕೊಂಡು ಸಾಯುವುದು ಮೇಲೂ ಎನ್ನುವ ಮಟ್ಟಕ್ಕೆ ಬಂದ ದಿನಗಳನ್ನು ಆನಂದಿಸಿದ್ದೇನೆ, ಸ್ವೀಕರಿಸಿದ್ದೇನೆ. ಜೀವನದಲ್ಲಿ ಇದಕ್ಕಿಂತ ಸಂತೋಷದ ದಿನಗಳು ಬರುವುದಿಲ್ಲ, ಇದೇ ನನ್ನ ಕೊನೆಯ ಕ್ಷಣಗಳಾಗಲೀ ಎನ್ನುವ ದಿನಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸಿದ್ದೇನೆ. ಕೈಲಾದಷ್ಟು ಓದಬೇಕು, ಅಮೇಲೆ ಒಂದು ಕೆಲಸ, ಒಂದಿಷ್ಟು ಹಣ, ಒಂದಿಷ್ಟು ಹೆಸರು, ಕಾಲ ಮೇಲೆ ಕಾಲು ಹಾಕಿ ಅನ್ನ ತಿನ್ನುವ ದಿನಗಳು ಈ ಬಗೆಯ ದಿನಚರಿ ನನ್ನದಲ್ಲ. ಅಂಥಹ ದಿನಗಳು ಬರುವುದೇ ಬೇಡ. ಬಹಳಷ್ಟು ಜನರು ನನ್ನನ್ನು ಹುಚ್ಚನೆಂದೇ ಕರೆಯುತ್ತಾರೆ. ನೀನು ಮೆಂಟಲ್? ಎನ್ನುತ್ತಾರೆ. ಅವರೆಲ್ಲರಿಗೂ ನನ್ನ ಉತ್ತರ ಹೌದು. ಹುಚ್ಚಿನ್ನಲ್ಲಿ ಒಂದು ಕಿಕ್ ಇದೆ. ಅದಿದ್ದರೇ ಮಾತ್ರ ಜೀವನ. ಇಲ್ಲದಿದ್ದರೇ ನಿಂತ ನೀರಾಗುತ್ತದೆ.
ಒಂದು ಕೆಲಸಕ್ಕೆ ಸೇರಿ ಮೂವತ್ತು ನಲವತ್ತು ವರ್ಷಗಳು ಅದೇ ಮೆಷಿನ್ನಿನ ಮುಂದೆ ನಿಂತ ಕೂಲಿ ಮಾಡಿದರೇನು ಬಂತು, ನಿಮಗೆ ಕೂಲಿ ಸಿಗಬಹುದೇ ವಿನಾಃ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ವಾರಕ್ಕೊಮ್ಮೆ ಎಸಿ ಕಾರಿನಲ್ಲಿ ಹೋದರೇನು ಮಜಾ, ಜನಜಂಗುಳಿಯ ರೈಲಿನಲ್ಲಿ ನಿಂತು ಬರುವುದರ ಮಜಾ ಸಿಗುವುದಿಲ್ಲ. ವಿದೇಶವೆಲ್ಲಾ ಸುತ್ತಾಡಿ ಬಂದರೇನು ಬಂತು, ನನ್ನೂರ ನದಿ ದಂಡೆಯಲ್ಲಿ ಕುಳಿತು ಸಿಗರೇಟು ಸೇದುವ ಮಜಾ ಸಿಗುವುದೇ? ಖುಷಿ ಇರುವುದು ನಿರಂತರದಲ್ಲಿ. ಉಬ್ಬು ತಗ್ಗುಗಳಲ್ಲಿ, ಎಲ್ಲವೂ ಸಲೀಸಾದ ರಸ್ತೆಯಲ್ಲಿ ಅಲ್ಲಾ. ಮುಂಜಾನೆ ಟಿವಿಯಲ್ಲಿ ಒಂದು ಜಾಹಿರಾತು ಬರುತ್ತಿತ್ತು. ಕೋಕೋ ಕೋಲಾದ್ದು, ಕ್ರೀಕೇಟ್ ಆಡುವಾಗ ಟಾಸ್ ಹಾಕಲು ಕಾಸಿಲ್ಲದೇ ಕೋಲಾದ ಮುಚ್ಚಳವನ್ನು ಚಿಮ್ಮುತ್ತಾರೆ. ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು. ನಿಜಕ್ಕೂ ಹೌದು ಆ ದಿನಗಳಲ್ಲಿ ಇಡೀ ಊರಿನಲ್ಲಿ ಯಾರ ಬಳಿಯಲ್ಲಿಯೂ ಅಷ್ಟೇನೂ ಹಣವಿರಲಿಲ್ಲ. ನಾವು ಕ್ರೀಕೇಟ್ ಆಡುವ ಸಮಯದಲ್ಲಿ ಒಂದೇ ಒಂದು ನಾಣ್ಯವೂ ಇರುತ್ತಿರಲಿಲ್ಲ. ಅಲ್ಲಿಯೇ ಬಿದ್ದಿದ್ದ ಕಲ್ಲನ್ನೂ, ಹೆಂಚಿನ ಚೂರನ್ನು ಟಾಸ್ ಹಾಕಲು ಬಳಸುತ್ತಿದ್ದೇವು. ಅಂಥಹ ಬಡತನವೇ? ಇಪ್ಪತ್ತು ರೂಪಾಯಿಯ ಬಾಲು ತರಲು, ಎಲ್ಲರ ಬಳಿಯಿಂದಲೂ ಒಂದು ಎರಡು ರೂಪಾಯಿ ಚಂದ ಎತ್ತಬೇಕಿತ್ತು. ಅದರಲ್ಲಿ ಎಷ್ಟೋ ಹುಡುಗರು ಕೊಡುತ್ತಲೇ ಇರಲಿಲ್ಲ. ಕ್ರೀಕೇಟ್ ಟೂರ್ನಿಯಾದರೇ ಹೋಗುವುದಕ್ಕೆ ಪ್ರವೇಶ ಶುಲ್ಕಕ್ಕೆ ಹಣವಿರುತ್ತಿರಲಿಲ್ಲ. ನನಗಿಂದಿಗೂ ನೆನಪಿದೆ, ನಾನು ಪಿಯುಸಿಗೆ ಬರುವಾಗ ಕೊಣನೂರಿನಿಂದ ಸರಗೂರು ಗೇಟಿನ ತನಕ ವ್ಯಾನಿನಲ್ಲಿ ಬರಬೇಕಿತ್ತು. ಎ಼ಕ್ಸ್ ಪ್ರೆಸ್ ಬಸ್ಸುಗಳು ಅಲ್ಲಿ ನಿಲ್ಲಿಸುತ್ತಿರಲಿಲ್ಲ. ಆಗ ಒಂದು ರೂಪಾಯಿ ಇಂದ ವ್ಯಾನು ಚಾರ್ಜ್ ಅನ್ನು ಎರಡು ರೂಪಾಯಿ ಮಾಡಿದ್ದಕ್ಕೆ ಎರಡು ಕಿಮೀ ನಡೆದುಬರುತ್ತಿದ್ದೆ.
ಮೈಸೂರಿನಲ್ಲಿದ್ದ ಸಮಯದಲ್ಲಿಯೂ ಅಷ್ಟೇ, ಸಿಟಿ ಬಸ್ಟಾಂಡ್ ತನಕ ನಡೆದುಹೋಗುತ್ತಿದ್ದೆವು. ಶಂಕರ ಇದ್ದದ್ದು ನಾಮದಾರಿ ಹಾಸ್ಟಲ್ ನಲ್ಲಿ ನಾನು ಅಲ್ಲಿಯ ತನಕವೂ ನಡೆದು ಹೋಗುತ್ತಿದ್ದೆ. ಅಲ್ಲಿಯ ತನಕವೇ ಏನು, ಭೋಗಾಧಿಯಲ್ಲಿದ್ದ ಮಾರುತಿ ಟೆಂಟ್ ತನಕವೂ ನಡೆದುಹೋಗುತ್ತಿದ್ದೆ. ಇದು ನಾನೊಬ್ಬ ಮಾಡುತ್ತಿದ್ದೆ ಎನ್ನುವ ಅರ್ಥವಲ್ಲ. ಕೇವಲ ಹತ್ತು ವರ್ಷಗಳ ಹಿಂದೆ ಹಣಕ್ಕೆ ಅಷ್ಟೊಂದು ಬೆಲೆಯಿತ್ತು. ಜನರು ಬಹಳ ಎಚ್ಚರಿಕೆಯ ಜೀವನ ಮಾಡುತ್ತಿದ್ದರು. ನನ್ನ ಹೈಸ್ಕೂಲು ಜೀವನದಲ್ಲಿ ಪ್ರತಿ ಗುರುವಾರ ಕೊಣನೂರು ಸಂತೆ ನಡೆಯುತಿತ್ತು. ಇಪ್ಪತ್ತು ರೂಪಾಯಿ ಕೊಡುತ್ತಿದ್ದರು, ಒಂದು ವಾರಕ್ಕೆ ಬೇಕಿರುವ ತರಕಾರಿಯನ್ನು ತರುತ್ತಿದ್ದೆ. ಈಗ ಮೂರು ಸಿಗರೇಟು ಬರುವುದಿಲ್ಲ. ಎರಡು ರೂಪಾಯಿಗೆ ಅರ್ಧ ಮಸಾಲ ಪೂರಿ ತಿನ್ನುತ್ತಿದೆ. ಅದೇ ಅಂಗಡಿಯಲ್ಲಿ ಹತ್ತು ವರ್ಷಗಳಲ್ಲಿ ಹನ್ನೆರಡು ರೂಪಾಯಿಯಾಗಿದೆ. ಇದು ಯಾವ ವೇಗದಲ್ಲಿ ಬದಲಾಗಿದೆಯೆಂಬುದು ಅರಿವಾಗುತ್ತಿಲ್ಲ. ನಮ್ಮೂರ ಹಬ್ಬದಲ್ಲಿ ಇರುವ 208 ಮನೆಗಳಿಂದ 300ರಷ್ಟು ಆಡು/ಕುರಿಗಳನ್ನು ಕಡಿದಿದ್ದಾರೆ. ಇಷ್ಟೇಲ್ಲಾ ಖರ್ಚು ಮಾಡುವ ಅವಶ್ಯಕತೆ ಇತ್ತಾ ಎಂದರೇ ಬರುವ ಉತ್ತರ, 2012ಕ್ಕೆ ಪ್ರಳಯವಾಗುತ್ತದೆ ತಿನ್ನೋನ ಬಿಡು ಎಂದು. ಮೂರು ಕಾಸಿಗೆ ಪ್ರಯೋಜನವಿಲ್ಲದ ತಿಳಿಗೇಡಿ ಜ್ಯೋತಿಷಿಗಳು, ಮಾಧ್ಯಮದವರು ಜನರಿಗೆ ಈ ಬಗೆಯ ಭಾವನೆಯನ್ನು ಮೂಡಿಸಿದ್ದಾರೆ. ಇರುವುದು ಇನ್ನೂ ಕೆಲವೇ ದಿನಗಳು ಅದೆಷ್ಟು ಸಾಧ್ಯವೋ ಅಷ್ಟನ್ನೂ ಹಾಳು ಮಾಡಲು ನಮ್ಮ ಜನ ಸಿದ್ದರಾಗಿದ್ದಾರೆ.
ಇದರ ಜೊತೆಗೆ ನಾನು ನಿಮಗೊಂದು ವಿಷಯವನ್ನು ತಿಳಿಸಬೇಕಿದೆ. ನಾನು ನನ್ನ ಜೀವನದಲ್ಲಿ ಅತಿ ಹೆಚ್ಚು ಪ್ರೀತಿಸುವ ಎರಡು ಜೀವಗಳೆಂದರೆ ನನ್ನ ಅಜ್ಜಿಯಂದಿರು. ಮೊದಲನೆಯದು, ನನ್ನ ಅಮ್ಮನ ತಾಯಿ ಮತ್ತು ಎರಡನೇಯದು ನಮ್ಮ ಅಜ್ಜಿಯ ಅಕ್ಕ. ಇವರಿಬ್ಬರು ಅಕ್ಕ ತಂಗಿಯರು ನನ್ನ ಬದುಕನ್ನು ಬರೆದುಕೊಟ್ಟವರು. ಅದನ್ನು ಬಿಟ್ಟರೇ ನನ್ನ ಜೀವದ ಗೆಳತಿ. ನನ್ನೆಲ್ಲಾ ಏಳಿಗೆ ಯಶಸ್ಸು ಇವರಿಗೆ ಸಲ್ಲಬೇಕು. ನಾನು ಬಹಳ ಚಿಕ್ಕಂದಿನಿಂದಲೂ ನನ್ನಜ್ಜಿಯನ್ನು ಗಮನಿಸಿದ್ದೇನೆ. ಅವರು ನನ್ನ ಪರವಾಗಿ ನಿಂತಿದ್ದಾರೆ. ಪ್ರೋತ್ಸಾಹಿಸಿದ್ದಾರೆ. ಆ ಕಾಲದವರಾಗಿದ್ದರೂ, ಇಂದಿನ ವಿದ್ಯಮಾನಗಳ ಬಗ್ಗೆ ಬಹಳ ತಿಳಿದುಕೊಂಡಿದ್ದಾರೆ. ಅವರು ಅವರ ಜೀವನದಲ್ಲಿ ಅನುಭವಿಸಿರುವ ಕಷ್ಟಗಳ ಮುಂದೆ ನಾನು ಅನುಭವಿಸಿರುವುದು ತೃಣ ಮಾತ್ರ. ನನ್ನ ದೊಡ್ಡಜ್ಜಿ ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾರೆ. ನಾನು ಜ್ಯೋತಿಷ್ಯವನ್ನು ನಂಬುವುದು ಇವರೊಬ್ಬರ ಮಾತನ್ನು ಮಾತ್ರ. ಇವರು ನಮ್ಮಜ್ಜಿ ಎನ್ನುವುದಕ್ಕೆ ಅಲ್ಲಾ. ಅವರು ಹಣಕ್ಕಾಗಿ ಅದನ್ನು ಮಾಡುತ್ತಿಲ್ಲ. ಯಾರಿಂದಲೂ ಹಣವನ್ನು ಬಯಸುವುದಿಲ್ಲ. ಮತ್ತು ಅವರು ಹೇಳಿರುವ ಎಲ್ಲಾ ಮಾತುಗಳು ಇಲ್ಲಿಯ ತನಕ ನನ್ನ ಜೀವನದಲ್ಲಿ ಸತ್ಯವಾಗಿದೆ.
ನಾನು ಹತ್ತನೇಯ ತರಗತಿಯಲ್ಲಿ ಓದುತ್ತಿದ್ದೆ. ನಾನು ಪಾಸಾಗುವುದಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದೆ. ಆ ಸಮಯದಲ್ಲಿ ಅವರು ಕರೆದು ಹೇಳಿದರು, ಏನೂ ಯೋಚನೆ ಮಾಡಬೇಡ, ಎಲ್ಲವೂ ಸರಿ ಹೋಗುತ್ತದೆ ನೀನು ಪಾಸಾಗುತ್ತೀಯಾ ಎಂದು. ನನ್ನ ಅದೃಷ್ಟವೋ ಅವರ ಮಾತಿನ ಅರ್ಥವೋ ನಾನು ಪಾಸಾಗಿದ್ದೆ. ಇದಾದ ನಂತರ ಅದೇ ರೀತಿಯಲ್ಲಿ ಹೇಳಿದ್ದರೂ ಕೂಡ ಪಿಯುಸಿಯಲ್ಲಿ ಅವರು ಸ್ವಲ್ಪ ಹಿಂಜರಿದು ಹೇಳಿದರು, ನೀನು ಸರಿಯಾಗಿ ಓದುತ್ತಿಲ್ಲ, ಪಾಸಾಗುವುದು ಕಷ್ಟವೆಂದು. ನಾನು ಫೇಲಾದೆ. ಇದಾದ ನಂತರದ ದಿನಗಳಲ್ಲಿ ಅವರು ಹೇಳಿದರು, ನೀನು ಓದುತ್ತೀಯಾ, ಹೆಚ್ಚು ಓದುತ್ತೀಯಾ, ಪಾಸಾಗುತ್ತೀಯಾ ಹೋಗು ಯೋಚನೆ ಮಾಡಬೇಡವೆಂದು. ಆ ದಿನಗಳಲ್ಲಿ ಅವರು ಹೇಳಿದ ಅನೇಕ ಮಾತುಗಳು ನನಗೆ ಇಂದಿಗೂ ನೆನಪಿದೆ. ನಾನು ಪಿಯುಸಿಯನ್ನು ಮತ್ತೆ ಕಟ್ಟಲು ಮನಸ್ಸಿರಲಿಲ್ಲ. ವಿದ್ಯೆಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದೆ. ಬೇರೆ ಏನಾದರೂ ವ್ಯಾಪಾರ ಮಾಡಬೇಕೆಂಬುದು ನನ್ನಾಸೆಯಾಗಿತ್ತು. ಅದು ಕೈಗೂಡಲಿಲ್ಲ. ನಾನು ಇಷ್ಟೊಂದು ಓದುತ್ತೇನೆಂದು ನನಗೆ ಕನಸಿನಲ್ಲಿಯೂ ತಿಳಿದಿರಲಿಲ್ಲ. ಪಿಯುಸಿ ಪಾಸಾದ ಮೇಲೂ ನಾನು ಓದನ್ನು ನಿಲ್ಲಿಸುವ ಪ್ರಯತ್ನ ಮಾಡಿದೆ. ಆ ಸಮಯದಲ್ಲಿ ವಿಡೀಯೋಕಾನ್ ಕಂಪನಿಗೆ ಸೇರುವುದಕ್ಕೆಂದು ಸಿದ್ದಪಡಿಸಿದ್ದ ನನ್ನ ಬಯೋ ಡೇಟ ನನ್ನಲ್ಲಿದೆ. ಇದರ ಜೊತೆಯಲ್ಲಿಯೇ ಬೆಂಗಳೂರಿನಲ್ಲಿ ಆ ದಿನಗಳಲ್ಲಿ ನಮ್ಮ ಕುಟುಂಬದಲ್ಲಿ ದೊಡ್ಡ ಹೆಸರು ಮಾಡಿದ್ದ ನಾರಯಣ ಗೌಡರ ಕಂಪನಿಗೆ ಹೋಗಿ ಕೆಲಸ ಸೇರುವುದೆಂದು ತೀರ್ಮಾನಿಸಿದ್ದೆ. ಇದಾವುದೂ ಕೈಗೂಡಲಿಲ್ಲ. ಬಿಎಸ್ಸಿ ಆದ ಮೇಲೆ ಕೂಡ ನಾನು ಓದುವುದಿಲ್ಲವೆಂದು ಕೆಲಸ ಮಾಡಲು ಬಂದಿದ್ದೆ, ಅದೂ ಕೈಗೂಡಲಿಲ್ಲ. ಎಂಎಸ್ಸಿ ಮುಗಿದ ಮೇಲೆ ಸಾಕು ಏನಾದರೂ ಕೆಲಸ ಮಾಡಿಕೊಂಡಿರಬೇಕೆಂದು ತೀರ್ಮಾನಿಸಿದ್ದೆ, ಆದರೇ ಪಿಎಚ್ ಡಿ ಕಡೆಗೆ ವಾಲಿದೆ. ಪಿಎಚ್ ಡಿ ಮುಗಿದ ಮೇಲೆ ಸಾಕೆಂದು ಸುಮ್ಮನಿದ್ದರೂ ಮೊನ್ನೆ ಹೋಗಿ ಗಾಂಧಿ ಅಧ್ಯಯನಕ್ಕೆ ಸೇರ್ಪಡೆಯಾದೆ. ಇದೆಲ್ಲವೂ ಆದ್ದದ್ದು ನನ್ನಿಂದ ಅಲ್ಲಾ, ಕಾಣದ ಕೈ ಆಡಿಸಿದೆ.
ಅದರಂತೆಯೇ, ಆ ದಿನಗಳಲ್ಲಿ ನಾನು ಬಹಳ ಜಗಳ ಮಾಡಿಕೊಳ್ಳುತ್ತಿದ್ದೆ. ಮತ್ತು ನನಗೆ ಯಾರೂ ಅಷ್ಟೇನೂ ಮರ್ಯಾದೆ ನೀಡುತ್ತಿರಲಿಲ್ಲ. ಅಜ್ಜಿ ನನಗೆ ಹೇಳಿದ್ದರು. ನೀನು ಮುಂದೆ ಬಹಳ ಒಳ್ಳೆಯ ಮನುಷ್ಯನಾಗುತ್ತೀಯಾ, ಹೆಚ್ಚು ಜನರನ್ನು ಸಂಪಾದಿಸುತ್ತೀಯಾ ಎಂದು. ನನಗೆ ಆಶ್ಚರ್ಯವೆಂದರೇ ಈ ಒಳ್ಳೆಯತನ ನನಗೆ ಎಲ್ಲಿಂದ ಬಂತು? ನಾನು ಸತ್ಯವಾಗಿಯೂ ಒಳ್ಳೆಯವನಲ್ಲ, ಒಳ್ಳೆಯವನಾಗಿ ಬೆಳೆದವನಲ್ಲ. ನನ್ನಲ್ಲಿ ಇಂದು ಬದಲಾವಣೆಯಾಗಿದೆ. ನನಗೆ ಹಣ ಮುಖ್ಯವಲ್ಲ. ಪ್ರೀತಿ ವಿಶ್ವಾಸ ಮಾತ್ರ ಮುಖ್ಯ. ಸಮಾಜಕ್ಕೆ, ದೇಶಕ್ಕೆ, ಜನರಿಗೆ ಕೈಲಾದ ಸಹಾಯ ಮಾಡಬೇಕು, ಜಾತಿ, ಧರ್ಮ, ಮೇಲು ಕೀಳು ಮುಖ್ಯವಲ್ಲ. ಹಿರಿಯರಿಗೆ ಮರುಗುತ್ತೇನೆ, ಗೌರವಿಸುತ್ತೇನೆ. ಒಂದೆರಡು ಹುಡುಗಿಯರಿಗೆ ಮೋಸ ಮಾಡಿದ್ದೇನೆಂಬ ದುಃಖವಿದೆ. ನಾನು ಈ ದಿನಗಳಲ್ಲಿ ಹಣ ಸಂಪಾದನೆ ಮಾಡಿದವರು, ಹೆಚ್ಚು ಓದಿದವರ ಬಗ್ಗೆ ಅತಿಯಾಗಿ ಮಾತನಾಡುವುದಕ್ಕೆ ಬಯಸುವುದಿಲ್ಲ. ನಾನು ಪಿಎಚ್ ಡಿ ಮಾಡಿರುವುದು ದೊಡ್ಡದು ಎನಿಸುತ್ತಿಲ್ಲ. ಪಿಎಚ್ ಡಿ ಎಂಬುದು ಹತ್ತು ವರ್ಷದ ಹಿಂದೆ ಕಷ್ಟಪಟ್ಟು ಮಾಡಬೇಕಿದ್ದ ವಿದ್ಯೆ. ಆದರೇ, ಇತ್ತೀಚೆಗೆ ಬಂದಿರುವ ಥೀಸಿಸ್ ಗಳನ್ನು ನೋಡಿದರೇ, ಪಿಎಚ್ ಡಿ ಮಾಡಿ ಅವರು ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೇ ನಮ್ಮೂರಲ್ಲಿ ಟ್ರಾಕ್ಟರ್ ಓಡಿಸುವವನು ಉತ್ತಮ ಎನಿಸುತ್ತದೆ. ನೀವು ಇತ್ತೀಚೆಗೆ ಯಾರನ್ನೇ ಮಾತನಾಡಿಸಿ ನೋಡಿ, ಅವರಿಗೆ ಒಂದು ಸೈದಂತಿಕ ಹಿನ್ನಲೆ ಇರುವುದಿಲ್ಲ. ಒಂದು ಸಿದ್ದಾಂತ, ಒಂದು ನೀತಿ, ನಿಯಮ, ಒಂದು ಆಳವಾದ ಜ್ನಾನ, ವಿಷಯದ ಬಗ್ಗೆ ಒಲವು ಏನೂ ಇರುವುದಿಲ್ಲ.
ಸರಿಯಾಗಿ ನಾಲ್ಕು ನಿಮಿಷ ಒಂದು ವಿಷಯದ ಬಗ್ಗೆ ಮಾತನಾಡುವ ಸರಕು ಇರುವುದಿಲ್ಲ, ಅವರೆಲ್ಲಾ ಉಪನ್ಯಾಸಕರು, ಪ್ರೋಫೆಸರುಗಳು. ನಾಚಿಕೆಯಾಗುತ್ತದೆ. ನಾನು ಬಹಳ ಮಂದಿಯನ್ನು ನೋಡಿದ್ದೇನೆ, ಅವರ ಕಳಪೆ ಮಟ್ಟದ ರಾಜಕೀಯವನ್ನು ನೋಡಿದರೇ ನಮ್ಮೂರ ಗ್ರಾಮ ಪಂಚಾಯ್ತಿಯೇ ಉತ್ತಮೆ. ದೇಶ ಅವನತಿಯ ಹಾದಿಯತ್ತ ಸಾಗುತ್ತಿದ್ದೆ. ನಿನ್ನೆ ಪರಿಸರ ವಿಜ್ನಾನದ ದಿನ, ಸುನಿಲ್ ಒಂದು ಎಸ್ ಎಂಎಸ್ ಮಾಡಿದ್ದ, ಬಹಳ ಚೆನ್ನಾಗಿತ್ತು. ಕೊನೆಯ ಮರ ಕಡಿಯುವ ದಿನ, ನದಿಯಲ್ಲಿ ಕೊನೆಯ ಹನಿ ಹರಿಯುವ ದಿನ, ಪ್ರಪಂಚದ ಕೊನೆಯ ಮೀನನ್ನು ಹಿಡಿಯುವ ದಿನ ನಾವು ಎಚ್ಚೆತ್ತುಕೊಳ್ಳುತ್ತೀವಾ? ಎಂದು. ಹೌದು, ಜನರಿಗೆ ಪರಿಸರದ ಜೊತೆ, ಸ್ನೇಹಿತರ ಜೊತೆಗೆ ಭಾವನಾತ್ಮಕ ಸಂಭಂಧ ಕಡಿಮೆಯಾಗುತ್ತಿದೆ. ನಮ್ಮೂರಿನ ಹಬ್ಬವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನಮ್ಮ ಮನೆಗೆ 150ಕ್ಕೂ ಹೆಚ್ಚು ಜನರು ಬಂದಿದ್ದರು. ಇಡೀ ಊರಿಗೆ 5ಸಾವಿರದಷ್ಟು ಜನ ಸೇರಿತ್ತು. ಇನ್ನೂ ಭಾವನೆಗಳಿಗೆ ಬೆಲೆ ಇದೆ. ಇಲ್ಲಿ ನಾನು ನಂದಗೋಪಾಲನನ್ನು ಕರೆದಾಗ, ನಾಲ್ಕು ಸೌಟು ಬಾಡು ತಿನ್ನುವುದಕ್ಕೆ ಅಲ್ಲಿಯ ತನಕ ಬರಬೇಕಾ? ಎಂದ. ಇದು ನಾಲ್ಕು ಸೌಟು ಮಾಂಸಕ್ಕೆ ಕರೆಯುವುದಲ್ಲ, ಅನ್ನವಿಲ್ಲವೆಂದು ಕರೆಯುವುದಿಲ್ಲ. ಎಲ್ಲರೂ ಒಂದು ಕಡೆ ಸೇರುವುದಕ್ಕೆ ಒಂದು ಅವಕಾಶವಷ್ಟೇ.
ನನ್ನನ್ನು ಬಹಳಷ್ಟೂ ಜನರು ರೇಗಿಸುತ್ತಾರೆ, ಎಲ್ಲರ ಮದುವೆಗೂ ಹೋಗುತ್ತೀಯಾ ನೀನು ಎಂದು. ನಾನು ಇದನ್ನು ನನ್ನ ತಂದೆಯಿಂದ ಕಲಿತದ್ದು. ನಮಗೆ ಯೋಗ್ಯತೆ ಇರುವುದರಿಂದ ಅವರು ನಮ್ಮನ್ನು ಕರೆಯುತ್ತಾರೆ. ನಾವು ದೇವರುಗಳು ಎಂದಲ್ಲ, ಅಥವಾ ನಾವು ಬಾರದಿದ್ದರೇ ಅವರು ಮದುವೆಯಾಗುವುದಿಲ್ಲವೆಂದಲ್ಲ. ನಮ್ಮ ಉಪಸ್ಥಿತಿ ಅವರಿಗೆ ಖುಷಿ ಕೊಡುತ್ತದೆ. ನಮ್ಮ ಉಪಸ್ಥಿತಿಯಿಂದ ಒಬ್ಬರೂ ಸಂತೋಷಪಡುತ್ತಾರೆಂದರೇ ಹೋಗುವುದರಲ್ಲಿ ತಪ್ಪೇನು. ಒಳ್ಳೆಯದು ಹುಟ್ಟಿನಿಂದ ಬರುವುದಿಲ್ಲ, ಅದನ್ನೂ ರೂಢಿಸಿಕೊಳ್ಳಬೇಕು, ನಮ್ಮೊಂದಿಗೆ ಬೆಳಸುತ್ತಾ ಹೋಗಬೇಕು.

2 ಕಾಮೆಂಟ್‌ಗಳು:

  1. ಹೈ,
    ಚೆನ್ನಾಗಿದೆ. ಒಂದು ಸಲಹೆ. ಸ್ವಲ್ಪ ವಿಷಯದಲ್ಲಿ ಕೊಂಟಿನೂಯಿಟಿ ಇರಲಿ. ಬೇರೆ ಎಲ್ಲೆಲ್ಲಿಗೋ ಹರಿಯುತ್ತೇ. ಶೈಲಿ ಹಿಡಿಸಿತು.

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು, ನನಗೂ ಹಾಗೆ ಎನಿಸಿತ್ತು. ಮಾತನಾಡುವಂತೆ ನಾನು ಬರೆಯುತ್ತಾ ಹೋಗುತ್ತೇನೆ, ಬರೆದ ಮೇಲೆ ತಿದ್ದುವುದಿಲ್ಲ. ತಿದ್ದಿ ತೀಡಿ ಬರೆದರೇ ಭಾವನೆಗೆ ದ್ರೋಹ ಬಗೆದಂತಾಗುತ್ತದೆಂಬುದು ನನ್ನ ಅಭಿಪ್ರಾಯ. ನಿಮ್ಮ ಸಲಹೆಗಳು ಗಂಬೀರವಾಗಿ ಪರಿಗಣಿಸುತ್ತೇನೆ. ಓದಿದ್ದಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...