ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

29 October 2012

ಏನೋ ಗೀಚಬೇಕೂ ಮಾಸಿ ಹೋಗುವ ಮುನ್ನಾ!!

ಆಯುಧಪೂಜೆ ಮುಗಿಸಿಕೊಂಡು ಊರಿನಿಂದ ಆತುರಾತುರವಾಗಿ ಬೆಂಗಳೂರಿಗೆ ಬಂದು ತಲೆ ಹೋಗುವಷ್ಟು ಕೆಲಸವಿರುವಾಗಲೂ ನನ್ನ ಉಢಾಫೆತನದ ಕಥೆಯನ್ನು ಹೇಳಲು ನನ್ನ ಉಢಾಪೆಯನ್ನು ಪ್ರದರ್ಶಿಸುತ್ತಿದ್ದೇನೆ. ಕೆಟ್ಟ ಗಳಿಗೆಯೂ, ದುಷ್ಟ ಬುದ್ದಿಯೋ, ವಿನಾಶ ಕಾಲಕ್ಕೆ ವೀಪರೀತ ಬುದ್ದಿಯೆಂಬಂತೆಯೋ ಅಥವಾ ವಿನಾಶ ಕಾಲಕ್ಕೆ ಕೋತಿ ಮೊಟ್ಟೆ ಇಟ್ಟಿತೆಂಬಂತೆಯೋ ತಿಳಿದಿಲ್ಲ ಒಮ್ಮೊಮ್ಮೆ ದುಃಖಗಳು ಒಟ್ಟೋಟ್ಟಿಗೆ ಬರುತ್ತವೆ. ಕಷ್ಟವನ್ನು ಯಾರೂ ಪೇಟೇಂಟ್ ಮಾಡಿಕೊಂಡಿಲ್ಲ ಕಾಪಿ ರೈಟ್ಸ್ ಚಿಂತೆಯಯೂ ಇಲ್ಲ. ಇದು ಎಲ್ಲರಿಗೂ ಅತಿಯಾಗಿ ಉಚಿತವಾಗಿ ದೊರೆಯುತ್ತದೆ. ಮಧ್ಯಮ ವರ್ಗ ಮತ್ತು ಕೆಳವರ್ಗದವರಿಗೆ ಹೇರಳವಾಗಿಯೇ ಬರುತ್ತದೆ. ನಾನು ಕೆಳ ವರ್ಗಕ್ಕೆ ಸೇರಿದವನಾದ್ದರಿಂದ ಕಷ್ಟಗಳು ಅತಿಯಾಗಿಯೇ ಬಂದಿವೆ. ಊರಿಗೆ ಹಬ್ಬ ಮಾಡುವುದಕ್ಕೆಂದು ಹೋಗಲು ನಿರ್ಧರಿಸಿದೆ, ಹಾಗೆಯೇ ನನ್ನ ಕೆಲವು ಆತ್ಮೀಯ ಸ್ನೇಹಿತರನ್ನು ಕರೆದೆ. ನಂದ ಹೊಸದಾಗಿ, ಹತ್ತು ತಿಂಗಳ ಹಿಂದೆ ಒಂದು ಟೆಂಟ್ ತಂದು ಅದನ್ನು ಉದ್ಘಾಟನೆ ಮಾಡಲು ಸತತವಾಗಿ ಪ್ರಯತ್ನಿಸುತ್ತಿದ್ದರಿಂದ, ನಾವು ಭಾನುವಾರ ಬೆಂಗಳೂರಿನಿಂದ ಹೊರಟು ವಿರಾಜಪೇಟೆಯ ಹತ್ತಿರವಿರುವ ತಡಿಯಂಡಮೊಳ್ ಗೆ ಹೋಗಿ ರಾತ್ರಿ ಅಲ್ಲಿಯೇ ತಂಗುವುದಾಗಿ ನಿರ್ಧರಿಸಿದೆವು. ಕೆಲವೊಮ್ಮೆ ಯಾವೊಂದು ಕೆಲಸವೂ ಸರಿಯಾಗಿ ಆಗುವುದಿಲ್ಲ, ಏನನ್ನು ಮಾಡುವುದಕ್ಕೂ ಮನಸ್ಸು ಇರುವುದಿಲ್ಲ. ಈ ಬಾರಿಯೂ ಅಷ್ಟೇ ನನಗೆ ಊರಿಗೆ ಹೋಗುವುದಕ್ಕಾಗಲೀ, ತಡಿಯಂಡಮೋಳ್ ಗೆ ಹೋಗುವುದಕ್ಕಾಗಲೀ ಮನಸಿಲ್ಲದಿದ್ದರೂ, ಮುಂಚಿತವಾಗಿಯೇ ಅವರಿಗೆ ಹೇಳಿದ್ದೆ ಎಂಬ ಸೌಜನ್ಯಕ್ಕಾಗಿ ಹೊರಟೆ. ಕೆಲವೊಮ್ಮೆ ಈ ದಾಕ್ಷಿಣ್ಯ, ಸೌಜನ್ಯ ನಮಗೆ ಬಹಳಷ್ಟೂ ಇರಿಸು ಮುರಿಸು ಮಾಡುತ್ತವೆ. ಹಳ್ಳಿಯಲ್ಲಿಯಾದರೇ, ಸರಿಯಾಗಿ ಹೇಳುತ್ತಾರೆ, ಮುಲಾಜಿಗೆ ಬಸಿರಾಗೋಕೆ ಆಗುತ್ತಾ? ಎಂದು. ಅದೇನೆ ಇರಲಿ ವಿಷಯಕ್ಕೆ ಬರೋಣ.

ನಾನು ಮಧು, ನಂದ ಮತ್ತು ಸುಧಿ, ಕೆಂಗೆರಿ ನೈಸ್ ಕಾರಿಡಾರ್ ಬಳಿ ಸೇರಿ, ಎರಡು ಬೈಕ್ ಗಳಲ್ಲಿ ಸುಮಾರು ಎಂಟು ಮುವತ್ತಕ್ಕೆ ಹೊರಟೆವು. ಮೈಸೂರು ಬೆಂಗಳೂರು ರಸ್ತೆಯಲ್ಲಿ ಅದೆಷ್ಟು ವಾಹನಗಳು ಚಲಿಸುತ್ತವೆಂದರೆ ಹೇಳತೀರದು. ಇತ್ತೀಚೆಗೆ ಸ್ವಂತ ವಾಹನಗಳ ಸಂಖ್ಯೆ ಅತಿಯಾಗುತ್ತದೆ. ಇದು ಹೀಗೆ ಮುಂದುವರೆದರೆ, ದೇಶದ ರಸ್ತೆಗಳೆಲ್ಲ ವಾಹನ ನಿಲುಗಡೆಗೆ ಪಾರ್ಕಿಂಗ್ ಏರಿಯಾ ಆಗುತ್ತದೆ. ಬೆಂಗಳೂರು ಸಿಟಿ ಒಳಗೆ ಇರುವಷ್ಟೇ ದಟ್ಟನೆ ವಾರದ ಕೊನೆಯಲ್ಲಿ ಮತ್ತು ಈ ದಸರಾ ಸಮಯದಲ್ಲಿರುತ್ತದೆ. ಒಂದು ಕ್ಷಣಕ್ಕೆ ಕೂಡ ಆಚೇ ಈಚೆ ತಿರುಗುವ ಹಾಗಿಲ್ಲ, ಕನ್ನಡಿ ನೋಡದೇ ಗಾಡಿ ಓಡಿಸುವುದಕ್ಕೆ ಸಾಧ್ಯವೇ ಇಲ್ಲ. ಅದರಲ್ಲಿಯೂ ಬೈಕ್ ಗಳಲ್ಲಿ ಹೋಗುವಾಗ ಬಹಳ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ಇತ್ತೀಚೆಗೆ ಬರುವ ಕಾರುಗಳಲ್ಲಿ ಪವರ್ ಸ್ಟೇರಿಂಗ್ ಇರುವುದರಿಂದ ಮತ್ತು ರಸ್ತೆಗಳು ಚೆನ್ನಾಗಿರುವುದರಿಂದ ರಾಕೇಟ್ ವೇಗದಲ್ಲಿ ಕಾರುಗಳನ್ನು ಚಲಿಸುತ್ತಾರೆ. ವಿಪರ್ಯಾಸವೆಂದರೇ ಅದನ್ನು ಕಂಟ್ರೋಲ್ ಮಾಡುವ ಮಟ್ಟಕ್ಕೆ ಅವರಿಗೆ ತರಬೇತಿ ಇರುವುದಿಲ್ಲ. ನೀವು ಸಾಮಾನ್ಯವಾಗಿ ಗಮನಿಸಿದರೇ, ವೈಟ್ ಬೋರ್ಡುಗಳೇ ಹೆಚ್ಚು ಆಕ್ಸಿಡೆಂಟ್ ಆಗುವುದು. ಕಾರಣ ಅವರಿಗೆ ಕಂಟ್ರೋಲಿಂಗ್ ಕೆಪಾಸಿಟಿ ಇರುವುದಿಲ್ಲ. ಚನ್ನಪಟ್ಟಣದ ಬಳಿಯಲ್ಲಿ ಎರಡು ಕಾರುಗಳು ಗುದ್ದಾಡಿಕೊಂಡು ನಿಂತಿದ್ದವು. ಪಾಪ ಎರಡು ದೊಡ್ಡ ಕಾರುಗಳೇ! ಆದರೇನೂ ಮಾಡುವುದು ವೇಗದಿಂದ ಬಂದು ಹಂಪ್ಸ್ ಬಳಿಯಲ್ಲಿ ಕಂಟ್ರ‍ೋಲಿಗೆ ಸಿಗದೆ ಮುಂದಿದ್ದ ಕಾರಿಗೆ ಗುದ್ದಿದ್ದ. ಒಂದು ನಿಮಿಷದ ತಪ್ಪಿಗೆ ಇಡೀ ದಿನವೇ ಹಾಳಾಗಿ ಹೊಗಿತ್ತು. ಇಂಥಹ ವೇಗ ಯಾಕೆ ಬೇಕು? ಹತ್ತು ನಿಮಿಷ ತಡವಾಗಿ ಹೋದರೇನು ತಪ್ಪು? ಮೈಸೂರು ಎಲ್ಲಿಗಾದರೂ ಓಡಿ ಹೋಗುತ್ತದೆಯೇ? ಅಂತು ನಿಂತು ನಾವು ಸ್ವಲ್ಪ ಎಚ್ಚರಿಕೆಯಿಂದಲೇ ನಿಧಾನವಾಗಿ ಮಂಡ್ಯ ತಲುಪಿದೆವು. ಜನರು ಅದೆಷ್ಟರ ಮಟ್ಟಿಗೆ ಸುಲಿಗೆ ಮಾಡುವುದಕ್ಕೆ ತಯರಾಗಿದ್ದಾರೆಂದರೇ, ಅಬ್ಬಾ ಎನಿಸುತ್ತದೆ. ಮಂಡ್ಯದಲ್ಲಿ ತಿಂಡಿಗಾಗಿ ನಿಲ್ಲಿಸಿ ತಿಂಡಿ ತಿಂದೆವು, ನಾಲ್ಕು ಜನರ ತಿಂಡಿಯ ಬೆಲೆ ಕೇವಲ ಮೂನ್ನೂರ ಮುವತ್ತು. ಭಗವಂತನೇ ಕಾಪಾಡಬೇಕೆಂದು ಬೇಡಿ ಹೊರಟೆವು.

ತಿನ್ನುವ ಊಟ ತಿಂಡಿ ಈ ಮಟ್ಟಕ್ಕೆ ದುಬಾರಿಯಾಗಿರುವುದು ಕಣ್ಣೀರು ತರಿಸುತ್ತದೆ. ರೂಪಾಯಿ, ನೂರಕ್ಕೆ ಹೋಗಲಿ ಸಾವಿರಕ್ಕೆ ಬೆಲೆ ಇಲ್ಲದ ಸ್ಥಿತಿ ಬಂದೊದಗಿದೆ. ಹೀಗೆ ಹೋದರೆ ನಾವೆಲ್ಲಿಗೆ ತಲುಪುತ್ತೇವೆಂಬುದು ಭಯ ಉಂಟು ಮಾಡುತ್ತದೆ. ಅದೇನೆ ಆಗಲಿ, ಜಗತ್ತೇ ಆ ಹಾದಿಯಲ್ಲಿ ನಡೆದಿರುವಾಗ ನಾನೊಬ್ಬ ಚಿಂತಿಸಿ ಸುಧಾರಣೆ ತರುವ ಅಗತ್ಯವಿಲ್ಲ ಬಿಡಿ. ಅಲ್ಲಿಂದ ಮುಂದೆ ಹೋಗುವಾಗ ನೆನಪಾಗಿದ್ದು, ಅಲ್ಲಿ ಅಡುಗೆ ಮಾಡಲು ಬೇಕಿರುವ ಪಾತ್ರೆ ಮತ್ತು ಸೌದೆ ಕಡಿಯಲು ಮಚ್ಚು. ಮೈಸೂರಿಗೆ ಹೋಗದೇ, ಇಲವಾಲ ಬೈಪಾಸಿನಲ್ಲಿ ಹೋಗೋಣವೆನ್ನುವ ಸಮಯಕ್ಕೆ ಕಿರಣನ ನೆನಪಾಗಿ, ಅವನ ಮನೆಗೆ ಹೋಗಿ ಒಂದು ದೊಡ್ಡ ಪಾತ್ರೆ ಮತ್ತೂ ಮಚ್ಚು ತರಲು ಸಿದ್ದವಾದೆವು. ಕಿರಣನ ಅಪ್ಪ ಅಮ್ಮ ಬಹಳ ಒಳ್ಳೆಯವರು. ಸಾಮಾನ್ಯವಾಗಿ ಎಲ್ಲ ಅಪ್ಪ ಅಮ್ಮಂದಿರು ಬೇರೆಯವರ ಮಕ್ಕಳ ವಿಷಯದಲ್ಲಿ ಬಹಳ ಒಳ್ಳೆಯವರು. ಇದು ಹಳೆಯ ಮಾತು, ನಮ್ಮ ಅಪ್ಪ ಅಮ್ಮನ ವಿಷಯದಲ್ಲಿಯೂ ಅಷ್ಟೇ ನನ್ನ ಸ್ನೇಹಿತರೆಲ್ಲರೂ ಒಳ್ಳೆಯವರಂತೆ ಕಾಣುತ್ತಾರೆ ನಾನು ಮಾತ್ರ ಕೆಟ್ಟವನು. ಆದರೇ, ಸಿಟಿಯಲ್ಲಿ ಹಾಗಿಲ್ಲ, ಇಲ್ಲಿ ಬೇರೆ ಮಕ್ಕಳೆಲ್ಲಾ ಕೆಟ್ಟವರು ತಮ್ಮ ಮಕ್ಕಳು ಮಾತ್ರ ದೇವರುಗಳು. ಸ್ವಾರ್ಥದ ಉತ್ತುಂಗವೆಂದರೇ ಇದು. ಪುಟ್ಟಾ ಅವನ ಜೊತೆ ಹೋಗಬೇಡ ಅವನು ಕೆಟ್ಟವನು ಎನ್ನುತಾರೆ, ಅದೇ ನನ್ನೂರಿನಲ್ಲಿ ನೋಡು ಅವನ ಜೊತೆ ಹೋಗಿ ಕಲಿ ಎನ್ನುತ್ತಾರೆ. ನಗರದ ಜನರಿಗೆ ಕಲಿಯುವುದೇನಿದ್ದರೂ ಪುಸ್ತಕದಲ್ಲಿ ಮಾತ್ರ, ಹಳ್ಳಿಯ ಜನರಿಗೆ ಜನರ ಜೊತೆ ಕಲಿಯಬೇಕು. ಪುಸ್ತಕ ಹಿಡಿದು ಕೂತವನಿಗೆ ಅಲ್ಲಿ ಬೆಲೆ ಇಲ್ಲ. ಅದೇನೆ ಇರಲಿ, ವಿಷಯಕ್ಕೆ ಬರೋಣ. ಕಿರಣನ ಮನೆಯಿಂದ ಒಂದು ದೊಡ್ಡ ಪಾತ್ರೆ ಅದಕ್ಕೊಂದು ಮುಚ್ಚುಳ ಮತ್ತು ಕಡಿದರೂ ಹರಿಯದ ಒಂದು ಮಚ್ಚನ್ನು ತೆಗೆದುಕೊಂಡು ಮೈಸೂರು ಬಿಟ್ಟೆವು.

ಬಿಳಿಕೆರೆಯ ಬಳಿಗೆ ನಮ್ಮ ವಿಜಿ ಬಂದು ಎರಡು ಗಂಟೆಗಳೇ ಕಳೆದಿದ್ದವು. ಅವನ ಕಾಲಡಿಯಲ್ಲಿದ್ದ ಸಿಗರೇಟು ತುಂಡುಗಳೇ ಹೇಳುತ್ತಿದ್ದವು. ಅವನು ಬಂದು ಬಹಳ ಸಮಯವಾಗಿದೆಯೆಂದು. ಎಲ್ಲರೂ ಮತ್ತೊಮ್ಮೆ ಅವನಿಗೆ ಕಂಪನಿ ಕೊಡುವುದಕ್ಕೆಂದು ಪರಿಸರಕ್ಕೆ ನಾಲ್ಕು ಸಿಗರೇಟು ಹೊಗೆಯನ್ನು ಸೇರಿಸಿದೆವು. ಬಹಳ ತಿಂಗಳುಗಳ ತರುವಾತ ನನ್ನ ಹಳೆಯ ಕುದುರೆ (ನನ್ನ ಬೈಕ್) ನನ್ನ ಕೈಗೆ ಸಿಕ್ಕಿತ್ತು. ಸಿಕ್ಕಿದ ಖುಷಿಯಲ್ಲಿ ಕೇವಲ ಹತ್ತೇ ಹತ್ತು ನಿಮಿಷದಲ್ಲಿ ಹುಣಸೂರು ತಲುಪಿದೆವು. ಅಲ್ಲಿಂದ ಗೋಣಿಕೊಪ್ಪ ತಲುಪುವುದಕ್ಕೆ ಸ್ವಲ್ಪ ಹೆಚ್ಚಿನ ಸಮಯವೇಬೇಕಾಯಿತು. ಕಾಡಿನೊಳಗಿನ ಆ ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಅದರ ಜೊತೆಗೆ ಕಾಡಿನ ನಡುವೆ ಹೋಗುವಾಗ ಯಾವುದಾದರೂ ಪ್ರಾಣಿ ಸಿಗಲೆಂಬ ಆಸೆ. ಗುಂಡಿಗಳೇ ರಸ್ತೆಯಾಗಿದ್ದ ಹಾದಿಯಲ್ಲಿ ಚಲಿಸಿ ಗೋಣಿಕೊಪ್ಪವನ್ನು ತಲುಪಿದೆವು. ಅಲ್ಲಿ, ಟೀ ಕುಡಿದು, ರಾತ್ರಿ ಊಟ ಮಾಡಲು ಬೇಕಿದ್ದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡೆವು. ಅಲ್ಲಿಂದ ವಿರಾಜಪೇಟೆ ತಲುಪಿ ಮೂರ‍್ನಾಲ್ಕು ಅಂಗಡಿಗಳಿಗೆ ಅಲೆದು ಒಂದೆರಡು ಒಲ್ಡ್ ಮಂಕ್, ಸ್ವಲ್ಪ ಥಮ್ಸ್ ಅಪ್, ಹತ್ತೆನ್ನರಡು ಲೀಟರ್ ನೀರು, ಒಂದೆರಡು ಕೆಜಿ ಕೋಳಿಯನ್ನು ಕೊಂಡು ಹೊರಟೆವು. ವಿರಾಜಪೇಟೆ ಬಿಡುವಾಗಲೇ ಸಂಜೆ ಐದು ದಾಟಿತ್ತು. ಕತ್ತಲಾಗುವ ಮುನ್ನಾ ಬೆಟ್ಟದ ತುದಿಯನ್ನಾದರೂ ತಲುಪುವ ಬಯಕೆ ನನ್ನದಿತ್ತು. ನನಗೊಬ್ಬನಿಗಿದ್ದರೆ ಬಂತೇ ಭಾಗ್ಯ? ಎಲ್ಲರಿಗೂ ಇರಬೇಕಲ್ಲ. ವಿರಾಜಪೇಟೆಯಲ್ಲಿ ಸಿಗರೇಟು ಕೊಳ್ಳದೇ, ತಡಿಯಂಡಮೋಳ್ ಬೆಟ್ಟದ ತುದಿಯಲ್ಲಿ ಅಂಗಡಿಗೆ ಹುಡುಕಲು ಯತ್ನಿಸತೊಡಗಿದರು ನಮ್ಮ ದಂಡಾಧಿಕಾರಿಗಳು. ಅಂತೂ ಇಂತೂ ತಡಿಯಂಡಮೋಳ್ ಬೆಟ್ಟದ ಪಾದಕ್ಕೆ ಹೋದಾಗ ಸಂಜೆ ಆರುವರೆಯಾಗಿತ್ತು. ಸೂರ‍್ಯ ನಮ್ಮ ಮುಖವನ್ನು ನೋಡಲು ಇಷ್ಟವಿಲ್ಲದೇ ಮರೆಯಾಗಿದ್ದ. ನಮ್ಮ ಮುಖವನ್ನು ನೋಡಲು ಯಾರು ತಾನೇ ಇಷ್ಟಪಡುತ್ತಾರೆ ಬಿಡಿ.

ನಾನು ಮುಂದುವರೆಯುವ ಮುನ್ನಾ ತಡಿಯಂಡಮೋಳ್ ಬಗ್ಗೆ ನಾಲ್ಕು ಸಾಲುಗಳನ್ನು ನಿಮಗೆ ಹೇಳಿಬಿಡುತ್ತೇನೆ. ತಡಿಯಂಡಮೋಳ್ ಕರ್ನಾಟಕದ ಎರಡನೇ ಎತ್ತರದ ಬೆಟ್ಟ. ಇದು ಸಮುದ್ರ ಮಟ್ಟದಿಂದ ಸುಮಾರು 5724 ಅಡಿಗಳಷ್ಟು ಎತ್ತರದಲ್ಲಿದೆ. ವಿರಾಜಪೇಟೆಯಿಂದ ಸುಮಾರು 25 ಕೀಮೀ ಮತ್ತು ಮಡಿಕೇರಿಯಿಂದ ಸುಮಾರು 35 ಕೀಮಿಯಷ್ಟು ದೂರವಿದೆ. ಇದನ್ನು ತಲುಪುವ ಮಾರ್ಗ ಮಧ್ಯದಲ್ಲಿ, ಮೈಸೂರು ಅರಸರು ಕಟ್ಟಿಸಿರುವ ಹತ್ತೊಂಬತ್ತನೇ ಶತಮಾನದ ನಾಲ್ಕ್ನಾಡು ಅರಮನೆಯಿದೆ. ಅರಮನೆಯ ಜಾಗದಿಂದ ಮೇಲಕ್ಕೆ ಸುಮಾರು ಆರು ಕೀಮಿಗಳಷ್ಟು ಎತ್ತರಕ್ಕೆ ಬೈಕಿನಲ್ಲಿ ಅಥವಾ ಜೀಪಿನಲ್ಲಿ ಹೋಗಬಹುದು. ಅಲ್ಲಿಗೆ ಹೋದರೆ, ಥಾರು ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಂದ ನೀವು ಸುಮಾರು ಆರು ಕೀಮೀ ರಷ್ಟು ದೂರ ನಡೆದು ಬೆಟ್ಟವನ್ನು ಏರಿದ್ದಾದ್ದರೇ ಕೇರಳ ಗಡಿಯನ್ನು ದಾಟುತ್ತೀರ ಮತ್ತು ತಡಿಯಂಡಮೋಳಿನ ತುದಿಯಲ್ಲಿರುತ್ತೀರ. ದೂರಕ್ಕೆ ಎಲ್ಲೆಲ್ಲಿಯೋ ಒಂದೊಂದು ಮನೆಗಳಿದ್ದರೂ ಆ ಮನೆಯನ್ನು ತಲುಪುವುದು ಕಷ್ಟಕರ.

ನಾವು ಹೀಗೆಲ್ಲಾ ಸರ್ಕಸ್ ಮಾಡಿಕೊಂಡು ಬೆಟ್ಟದ ತಪ್ಪಲಿಗೆ ಬಂದಾಗ ಕತ್ತಲಾಗಿತ್ತು. ಇತ್ತೀಚೆಗೆ ನಾನು ಬಹಳ ಸೋಮಾರಿಯಾಗಿದ್ದೇನೆ. ಯಾವಾಗ ಸೋಮಾರಿಯಾಗಿರಲಿಲ್ಲವೆಂದು ಕೇಳಬೇಡಿ. ನಾನು ಸುತ್ತಾಡುವುದರಲ್ಲಿ ಸ್ವಲ್ಪ ಶ್ರಮ ವಹಿಸುತ್ತಿದ್ದೆ. ಈಗ ಅದಕ್ಕೂ ನಿರಾಸಕ್ತನಾಗಿದ್ದೇನೆ. ನಾನು ಈ ಬಗೆಯ ನಿರಾಸಕ್ತನಾದದ್ದು ಯಾವಾಗವೆಂಬುದೇ ತಿಳಿಯಲಿಲ್ಲ. ನಾವು ನಮ್ಮನ್ನು ಪ್ರತಿನಿತ್ಯ ಗಮನಿಸಬೇಕಾಗುತ್ತದೆ. ಇಲ್ಲದಿದ್ದರೇ ಒಂದು ದಿನ ನಾವು ಸಂಪೂರ್ಣ ಸರ್ವನಾಶಕ್ಕೆ ಬಂದಾಗ ಅಯ್ಯೋ ಭಗವಂತ ನಾನು ಮುಳುಗಿ ಹೋದೇನಾ? ಎನಿಸುತ್ತದೆ. ಹಡಗಿನಲ್ಲಿ ಕುಳಿತವ ಕ್ಷಣ ಕ್ಷಣಕ್ಕೂ ಎಚ್ಚರವಹಿಸಬೇಕಾಗುತ್ತದೆ. ಹಡಗಿನೊಳಕ್ಕೆ ನೀರು ನುಗ್ಗಿ ಬರುವ ಮುನ್ನವೇ ಅವನು ಎಚ್ಚರಿಕೆವಹಿಸಬೇಕು. ನಾನು ಅಷ್ಟೇ, ಅಲ್ಲಿಗೆ ಹೋದಾಗ ತಿಳಿದದ್ದು, ಚಾರಣಕ್ಕೆಂದು ಹೋಗಿದ್ದೇನೆ, ಒಂದು ಟಾರ್ಚ್ ಇಲ್ಲ, ಕಾಲಿಗೆ ಬೂಟ್ಸ್ ಇಲ್ಲ, ಜರ್ಕೀನ್ ಇಲ್ಲ, ಒಂದು ರಗ್ಗು ಇಲ್ಲ, ಸ್ವೆಟರ್ ಇಲ್ಲ, ಬೆಂಕಿಪೊಟ್ಟಣವಿಲ್ಲ, ಜಿಗಣೆಗಳ ತವರೂರಿಗೆ ಕಾಲಿಟ್ಟಿದ್ದೇನೆ, ಅದನ್ನು ಎದುರಿಸುವ ಯಾವೊಂದು ತಯಾರಿಯೂ ಆಗಿಲ್ಲ. ಒಂದು ಸಣ್ಣ ಹಿಟ್, ಚಿಕ್ಕ ಪುಟ್ಟ ಹೊಗೆಸೊಪ್ಪು, ಉಪ್ಪು, ಹೀಗೆ ಏನಾದರೂ ಇದ್ದಿದ್ದರೇ ಆಗುತ್ತಿತ್ತು ಇದಾವುದು ಇಲ್ಲ. ಹೀಗೆ ಯಾರದೋ ಸ್ನೇಹಿತರ ಮನೆಗೆ ಹೋಗುವ ಹಾಗೆ ಬರಿಗೈಯಲ್ಲಿ ಹೋಗಿದ್ದೇನೆಂದರೇ ನನ್ನ ಉಢಾಫೆತನಕ್ಕೆ ಹಿಡಿದ ಕೈಗನ್ನಡಿಯಲ್ಲವೇ? ದೇವರು ಸದಾ ನಮ್ಮೊಂದಿಗಿರುತ್ತಾನೆಂದು ಹೇಳಲಾಗುವುದಿಲ್ಲ. ಹಿಂದೆ ಬಹಳಷ್ಟೂ ಬಾರಿ ನಮ್ಮನ್ನು ಕಾಪಾಡಿದ್ದಾನೆ, ಯಡಕುಮೇರಿಯಲ್ಲಿ ಹೊಳೆದಾಟುವಾಗ ಯಮನ ಹಗ್ಗ ಕತ್ತಿಗೆ ಸುತ್ತಿದ್ದನ್ನು ತೆಗೆದಿದ್ದಾನೆ, ಒಂಬತ್ತು ಗುಡ್ಡದಲ್ಲಿ ಯಮನ ಮನೆಯ ಬಾಗಿಲಲ್ಲಿ ಮಲಗಿದ್ದವರನ್ನು ಎಬ್ಬಿಸಿ ಕರೆದು ತಂದಿದ್ದಾನೆ, ಅನೇಕ ಲಾಂಗ್ ರೈಡ್ ಗಳಲ್ಲಿ ಕೈಹಿಡಿದಿದ್ದಾನೆ, ಅದನ್ನೆ ನಾವು ಉಢಾಫೆತನದಿಂದ ನೋಡಿದರೆ, ಎತ್ತರದ ಬೆಟ್ಟಕ್ಕೆ ಏರಿಸಿ ಒಮ್ಮೆಗೆ ದೊಪ್ಪೆಂದು ಎಸೆಯುವುದಿಲ್ಲವೇ? ಅದು ಈ ಭಾರಿಯಾಗುತ್ತದೆಂಬ ಬಲವಾದ ನಂಬಿಕೆ ನನಗೆ ಬರಲಾರಂಬಿಸಿತು.

ಡಾಂಬರು ರಸ್ತೆ ಕೊನೆಯಾಗುವ ಸ್ಥಳದಲ್ಲಿ ಯಾರೊ, ಮನೆ ಕಟ್ಟಿಸುತ್ತಿದ್ದರು. ಮನೆ ಅರ್ಧ ಕಟ್ಟಿ ನಿಂತಿತ್ತು. ಎಲ್ಲರೂ ಇಲ್ಲಿಯೇ ಉಳಿಯಬಹುದೆಂದು ಸೂಚಿಸಿದರು. ಆದರೇ ನನಗೆ ಆ ಜಾಗ ಅಷ್ಟು ಸಮಂಜಸವೆನಿಸಲಿಲ್ಲ. ಕಾರಣ ಅದು ಅಂಥಹ ರಕ್ಷಿತ ಸ್ಥಳವಲ್ಲ. ಪ್ರಾಣಿಗಳು ಅಡ್ಡಾಡುವಂತಿತ್ತು. ಆನೆಗಳು ಹೆಚ್ಚಿರುವ ಸ್ಥಳವಾದ್ದರಿಂದ ನಾವು ಸೂಕ್ಷ್ಮವಾಗಿ ಪರಿಗಣಿಸಬೇಕಿತ್ತು. ಅಲ್ಲಿಯೇ ಗಾಡಿ ನಿಲ್ಲಿಸಿ ಅಲ್ಲಿ ಕೆಲವು ಮನೆಗಳಿವೆ ವಿಚಾರಿಸೋಣವೆಂದೆ. ಆದರೇ, ನಮ್ಮ ಸ್ನೇಹಿತ ವರ್ಗದವರು ಅಲ್ಲಿಯೇ ತಂಗೋಣವೆಂದರು. ನಾನು ಇಲ್ಲಿ ನೋಡುವುದಕ್ಕಿಂತ ಮೇಲೊಮ್ಮೆ ಹೋಗಿ ಯಾವುದಾದರೂ ಮನೆಯಲ್ಲಿ ನೋಡೋಣ, ಅವರು ನಮಗೆ ಅಡುಗೆ ಮಾಡಿಕೊಡಲು ಒಪ್ಪಿದರೇ ಅಥವಾ ನಾವೇ ಮಾಡಿಕೊಳ್ಳಲು ಅನುಮತಿ ನೀಡಿ ನಾಲ್ಕು ಸೌದೆ ನೀಡಿದರೆ ಒಲಿತೆಂದು ತಿಳಿಸಿದೆ. ಮಳೆ ಸುರಿದು ನಮಗೆ ಹೊರಗಡೆ ಸೌದೆ ಸಿಗುವುದು ಅಸಾಧ್ಯವಾಗಿತ್ತು, ಅದನ್ನು ಒತ್ತಿಸಲು ನಮ್ಮ ಬಳಿಯಲ್ಲಿ ಸೀಮೆ ಎಣ್ಣೆಯಾಗಲಿ ಹೆಚ್ಚಿನ ಪೇಪರ್ ಆಗಲಿ ಇರಲಿಲ್ಲ. ಸ್ವಲ್ಪ ಮೇಲಕ್ಕೆ ಗಾಡಿಯಲ್ಲಿ ಒಬ್ಬರೊಬ್ಬರೇ ಹೋದರು, ನಾನು ನಡೆದುಕೊಂಡು ಹೋದೆ. ಹೋಗಿ ಇನ್ನೂ ಮುಂದೆ ಹೋಗುವಾಗ ಕವಲು ದಾರಿ ಬಂತು ಮಳೆಯ ಹನಿಗಳು ಶುರುವಾಯಿತು. ಅದೇ ಸಮಯಕ್ಕೆ ಯಾರೋ ದಾರಿಹೋಕರು ಬಂದರು. ಅವನನ್ನು ವಿಚಾರಿಸಿದೆವು. ನಾವು ಯಾವೊಂದು ತೀರ್ಮಾನಕ್ಕೂ ಬರಲಾಗಲಿಲ್ಲ. ಕಡೆಯದಾಗಿ, ಅಲ್ಲೊಂದು ಅರಣ್ಯ ಇಲಾಖೆಯ , ಅಲ್ಲಿಗೆ ಹೋಗಿ ನೋಡೋಣವೆಂದು ಹೊರಟೆವು. ಕಷ್ಟಪಟ್ಟು, ಓಡೋಡಿ, ಗಾಡಿಯನ್ನು ಓಡಿಸಿಕೊಂಡು ಬಂದು ಅರಣ್ಯ ಇಲಾಖೆಯ ಕಚೇರಿಯನ್ನು ತಲುಪಿದೆವು.

ಕಚೇರಿಯ ಮುಂದೆ ನಿಂತು ಒಳಕ್ಕೆ ಹೋಗಬೇಕೋ ಬೇಡವೋ? ಎಂದು ಯೋಚಿಸುತ್ತಿದ್ದೆವು. ಆಫೀಸಿನ ಮುಂಬಾಗದಲ್ಲಿ ಮೈದಾನವಿದ್ದು ಇಲ್ಲಿ ಟೆಂಟ್ ಹೊಡೆಯಬಹುದೆಂಬ ಲೆಕ್ಕಾಚಾರದಲ್ಲಿದ್ದಾಗಲೇ ಜೋರು ಮಳೆ ಬಂತು. ಮಳೆ ನಮ್ಮನ್ನು ಬಲವಂತವಾಗಿ ಕಚೇರಿಯ ಹತ್ತಿರಕ್ಕೆ ಹೋಗುವಂತೆ ಪ್ರೇರೇಪಿಸಿತು. ನಾವು ಕಚೇರಿಯ ಹೊರಾಂಡಕ್ಕೆ ಬಂದು ಕುಳಿತೆವು. ಕುಳಿತು ಸೇದಲು ಸಿಗರೇಟು ಇಲ್ಲದಿದ್ದರಿಂದ, ನಾಲ್ಕ್ನಾಡು ಅರಮನೆಯ ಬಳಿಯಲ್ಲಿ ತಂದಿದ್ದ ಬೀಡಿಯನ್ನು ಸೇದಿದೆವು. ಸೇದಿ ಸ್ವಲ್ಪ ಸಮಯದ ನಂತರ ಅಥವಾ ಸೇದುವಾಗಲೇ ನಮ್ಮ ಮುಂದಿನ ಯೋಜನೆಯನ್ನು ರೂಪಿಸತೊಡಗಿದೆವು. ಹತ್ತು ಹದಿನೈದು ನಿಮಿಷಗಳ ಬ್ರೈನ್ ಸ್ಟಾರ್ಮಿಂಗ್ ಆದಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಇದು ಅರಣ್ಯ ಇಲಾಖೆಯವರ ಆಫೀಸು, ಅವರ ಅನುಮತಿಯಿಲ್ಲದೆ ಇಲ್ಲಿ ತಂಗುವುದು ಸೂಕ್ತವಲ್ಲ. ನಕ್ಷಲರ ಸಮಸ್ಯೆ ಇರುವುದರಿಂದ ನಮ್ಮನ್ನು ಅವರು ಹೇಗೆ ಪರಿಗಣಿಸುತ್ತಾರೆಂದು ಹೇಳಲಾರದು. ಇಲ್ಲಿಗೆ ಬಂದೆವು ಮಳೆ ಬರುತ್ತಿತ್ತು ನೀವ್ಯಾರು ಇರಲಿಲ್ಲ ಅದಕ್ಕೆ ನಾವು ಇಲ್ಲಿ ಉಳಿದೆವೆಂದರೇ ಯಾರಾದರು ಒಪ್ಪಿಯಾರೆ? ನಮ್ಮ ಮನೆ ಬೀಗ ಹಾಕಿರುವ ಸಮಯದಲ್ಲಿ ಯಾರಾದರು ದಾರಿ ಹೋಕರು ನಮ್ಮ ಮನೆಗೆ ಬಂದು ನೀವ್ಯಾರು ಇರಲಿಲ್ಲ ಅದಕ್ಕೆ ಬಂದು ಉಳಿದೆವೆಂದರೇ? ನಾವು ಒಪ್ಪುತ್ತೇವಾ? ಇದು ಯಾಕೋ ಮನಸ್ಸಿಗೆ ಬಹಳವಾಗಿ ಕೊರೆಯತೊಡಗಿತು. ಇಲ್ಲಿ ನ್ಯಾಯ ಅನ್ಯಾಯ ಎನ್ನುವುದಕಿಂತ ನೀತಿ ಮುಖ್ಯವೆನಿಸಿತು. ಮನೆಯ ಸುತ್ತ ಒಮ್ಮೆ ಸುತ್ತಾಡಿ ಬಂದೆವು. ಹೇಳುವುದಕ್ಕೆ ಆಫೀಸಾದರೂ, ಇದು ಮನೆಯಂತೆಯೇ ಇತ್ತು. ಮನೆಯ ಹಿಂಬದಿಯಲ್ಲಿ, ಒಂದು ಸ್ನಾನದ ಮನೆಯಂತೆ, ಅದಕ್ಕೊಂದು ಒಲೆಯೂ ಇತ್ತು. ಮನೆಯ ಕಿಟಕಿ ತೆಗೆದು ನೋಡಿದಾಗ, ಯಾರೋ ಆಗ ತಾನೆ, ಬಿಸಿ ನೀರು ಕಾಯಿಸಿಕೊಂಡು, ಸ್ನಾನ ಮಾಡಿ ಪೂಜೆ ಮಾಡಿರುವಂತೆ ಕಾಣಿಸಿತು. ಅದಕ್ಕೆ ಸಾಕ್ಷಿಯಂತೆ, ಒಲೆಯಲ್ಲಿ ಬೆಂಕಿಯಿತ್ತು, ಮನೆಯೊಳಗೆ ದೇವರ ದೀಪ ಉರಿಯುತಿತ್ತು.

ಇದೆಲ್ಲವನ್ನೂ ಗಮನಿಸಿದ ಮೇಲೆ ಒಂದು ತೀರ್ಮಾನಕ್ಕೆ ಬಂದೆವು. ಹೇಗೂ ನಾವು ಈ ಜಡಿ ಮಳೆಯಲ್ಲಿ ಹೊರಗಡೆ ಅಡುಗೆ ಮಾಡುವುದಕ್ಕೆ ಸಾಧ್ಯವಿಲ್ಲ, ಟೆಂಟ್ ಇರುವುದರಿಂದ ಮಲಗಲು ಪ್ರಯತ್ನಿಸಬಹುದು. ಮೊದಲು ಹೊಟ್ಟೆಗೆ ಬಿದ್ದರೆ ನಂತರ ನಿದ್ದೆಯ ಬಗ್ಗೆ ಯೋಚಿಸಬಹುದು. ಯಾರೂ ಇಲ್ಲದ ಮನೆಗೆ ಹೋಗಿ ಅಡುಗೆ ಮಾಡಿಕೊಂಡು ಊಟಮಾಡುವುದು ನೈತಿಕವಾಗಿ ಸರಿಯಿಲ್ಲ. ಇದು ಕೇವಲ ಸಿನೆಮಾದಲ್ಲಿ ಮಾತ್ರ ಕಾಮೆಡಿಯಾಗುತ್ತದೆ, ನಿಜ ಜೀವನದಲ್ಲಿ ಕಂಬಿಯ ಹಿಂದೆ ಗಾನ ಬಜಾನ ಹಾಡಬೇಕಾಗುತ್ತದೆ. ಆದ್ದರಿಂದ, ಮೊದಲು ಹಿಂದಿನ ಅವರ ಸ್ನಾನದ ಮನೆಯ ಒಲೆಯಲ್ಲಿ ಅಡುಗೆ ಮಾಡಿ ಮುಗಿಸೋಣ. ಚೆನ್ನಾಗಿ ಒಣಗಿರುವ ಸೌದೆಗಳಿವೆ, ಒಂದು ಗಂಟೆಯಲ್ಲಿ ತಂದಿರುವ ಕೋಳಿ ಮತ್ತು ಅಕ್ಕಿಯಿಂದ ಅನ್ನವನ್ನೂ ಬೆಯಿಸಬಹುದು. ಮೊದಲು ಹೋಗಿ ನಮ್ಮ ಪಾತ್ರೆಯ ಅಳತೆಗೆ ಒಲೆಯನ್ನು ಸಿದ್ದ ಮಾಡಿದೆವು. ಅಲ್ಲಿದ್ದ ಒಲೆಯು ನೀರು ಕಾಯಿಸುವ ಅಂಡೆಯನ್ನು ಇಡುವುದಕ್ಕಾದ್ದರಿಂದ ಅಲ್ಲಿಯೇ ಸುತ್ತ ಇದ್ದ ಮೂರು ಕಲ್ಲುಗಳನ್ನು ತಂದು ನಮ್ಮಲ್ಲಿದ್ದ ಪಾತ್ರೆಯ ಅಳತೆಗೆ ಸಿದ್ದಮಾಡಿದೆವು. ವಿಜಿ ಮತ್ತು ಮಧು ಅಡುಗೆ ಉಸ್ತುವಾರಿ ತೆಗೆದುಕೊಂಡರು. ನಾನು ಮತ್ತು ನಂದ ಅವರಿಗೆ ಬೇಕಿರುವ ಸಹಾಯಕ್ಕೆ ಸಹಾಯಕರಾದೆವು. ನಾನು ಅಲ್ಲಿಯೇ ಇದ್ದ ಕಲ್ಲುಗಳಿಂದ ಒಲೆಯನ್ನು ಸಿದ್ದ ಮಾಡಿದೆ. ಇನ್ನೂ ನಮ್ಮ ಜೊತೆ ಬಂದಿದ್ದ ನಂದನ ತಮ್ಮ ಸುಧಿ, ಅಮಾಯಕನಂತೆಯೋ ಅಥವಾ ತಾನು ಈ ಜಗತ್ತಿಗೆ ಸಂಬಂಧಿಸಿದವನಲ್ಲವೆನ್ನುವಂತೆಯೋ, ತನ್ನ ಪಾಡಿಗೆ ತಾನು ಐಪೋಡ್ ಹಿಡಿದು ಹಾಡು ಕೇಳಲು ಕುಳಿತ. ನಾವು ಅವನಿಗೆ ಜವಬ್ದಾರಿ ಹೊರಿಸುವ ಧೈರ್ಯ ಮಾಡಲಿಲ್ಲ.

ನಾನು ಅಕ್ಕಿಯನ್ನು ತೊಳೆದುಕೊಟ್ಟು, ಅನ್ನಕ್ಕೆ ಇಟ್ಟೆ. ವಿಜಿ ನಳ ಮಹರಾಜನಾದ. ಮಧು, ಈರುಳ್ಳಿ, ಟೋಮೋಟೋ, ಇತ್ಯಾದಿಗಳನ್ನು ಕೋಳಿ ಸಾರಿಗೆ ತಯಾರು ಮಾಡತೊಡಗಿದ. ಇದರ ನಡುವೆ ನನಗೆ ಸ್ವಲ್ಪ ಅಂಜಿಕೆಯಾಗತೊಡಗಿತು. ಯಾರಾದರೂ ಬಂದರೇ ಏನು ಹೇಳುವುದು? ಯಾರದೋ ಮನೆಯಲ್ಲಿ ಹೀಗೆ ಕದ್ದು ಅಡುಗೆ ಮಾಡುವುದು ಅದೆಷ್ಟೂ ನಾಚಿಕೆಗೇಡುತನ ಎನಿಸಿತ್ತು. ಇದನ್ನು ಹೇಳಿದಾಗ ಎಲ್ಲರೂ ನನ್ನ ಮಾತಿಗೆ ಒಪ್ಪಿದರೂ, ಮತ್ತೊಮ್ಮೆ ಬಂದರೇ 200-300 ಕೊಟ್ಟರೆ ಆಯ್ತು ಬಿಡು ಎಂದರು. ಇದು ಹಣ ಕೊಡುವ ಮಾತಲ್ಲ, ಮಾನ ಮರ‍್ಯಾದೆಯ ಮಾತೆಂಬುದನ್ನು ಅವರಿಗೆ ಅರ್ಥ ಮಾಡಿಸಬೇಕಾಯಿತು. ಅನ್ನ ತಯಾರಾಯಿತು. ಅಲ್ಲಿಯೇ ಇದ್ದ ಒಂದು ಬಾಳೆ ಎಲೆಯನ್ನು ತಂದೆವು, ಅದರ ಮೇಲೆ ಅನ್ನ ಸುರಿದು. ಕೋಳಿ ಸಾರು ಮಾಡಲು ತಯಾರಾದೆವು. ನನಗೆ ಅಂಥಹ ಸಮಯದಲ್ಲಿ ಸ್ವಲ್ಪ ತಾಳ್ಮೆ ಕಡಿಮೆ. ಎಲ್ಲವೂ ಬೇಗ ಆಗಬೇಕೆನ್ನುವವನು. ಇತರೆ ಸಮಯದಲ್ಲಿಯೂ ಅಷ್ಟೇ ತಾಳ್ಮೆಗೇಡಿ ನಾನು. ಇದರಿಂದಲೇ ಎಲ್ಲರೊಡನೆ ಜಗಳವಾಡುತ್ತೇನೆ. ಅದೇ ಸಮಯಕ್ಕೆ ಮಧು, ಈರುಳ್ಳಿಯನ್ನು ಅಳತೆ ಇಟ್ಟು ಕತ್ತರಿಸುತ್ತಿದ್ದ, ನಾನು ನೋಡಿ ಬೇಸತ್ತಿ ಹೋದೆ. ಗುರು ಇದು ಮನೆಯಲ್ಲ, ಬೇಗ ಮುಗಿಸು ಎಂದರೂ ಕೆಳಲಿಲ್ಲ. ಅದರ ಜೊತೆಗೆ ಸುಧಿ, ಅದೇನೋ ಮಾತಾಡುವುದು, ಇದರ ಮಧ್ಯದಲ್ಲಿ ನಂದ ಜಿಗಣೆಯ ಜೊತೆ ಆಟವಾಡಲು ನಿಂತ. ಮೊದಲೇ ಇದ್ದದ್ದು ಒಂದೇ ಒಂದು ಟಾರ್ಚ್. ಅದಕ್ಕೆ ಮೂರು ಬ್ಯಾಟರಿ ಬೇಕೆಂದು ತಿಳಿದಿದ್ದರೂ ಅವನು ಕೇವಲ ಎರಡೂ ಬ್ಯಾಟರಿ ತಂದಿದ್ದ. ದೇವರ ದಯೆಯಿಂದ ನನ್ನ ಕ್ಯಾಮೆರಾಗೆ ನಾಲ್ಕು ಬ್ಯಾಟರಿ ಬೇಕಿದ್ದರಿಂದ ಚಾರ್ಜರ್ ಬ್ಯಾಟರಿಯನ್ನು ಅದಕ್ಕೆಂದು ಉಪಯೋಗಿಸಿದೆವು. ಅದನ್ನು ಇವನು ಅಡುಗೆ ಮಾಡುವ ಸಮಯದಲ್ಲಿ ನನಗೆ ಜಿಗಣೆ ಹತ್ತಿದೆ, ಇರು ನೋಡೋಣ ಅದೆಷ್ಟು ದಪ್ಪವಾಗಬಹುದೆಂದು ಪರೀಕ್ಷೀಸತೊಡಗಿದ. ನಾನಂತೂ ಅದೆಷ್ಟರ ಮಟ್ಟಿಗೆ ತಾಳೆ ಕಳೆದುಕೊಂಡಿದ್ದೆಯೆಂದರೇ ಮನ ಬಂದಂತೆ ಬೈಯ್ಯತೊಡಗಿದೆ.

ಕೋಳಿ ಸಾರು ಬೇಯ್ಯುತ್ತಿದೆ, ಸಮಯ ಸುಮಾರು ಎಂಟೂವರೆ, ಯಾವುದೋ ಶಬ್ದ ಗುರ‍್ರ‍್ ಗುರ‍್ರ‍್ ಎಂದಂತೆ ಬರತೊಡಗಿತು. ಇರುವುದೊಂದೆ ಟಾರ್ಚ್, ಐದು ಜನರು ಎತ್ತ ನೋಡುವುದು. ಸುತ್ತಲೂ ಕತ್ತಲು, ಮಳೆ ಸುರಿದು ನಿಂತಿದೆ ಆದರೂ ಹನಿ ಬೀಳುತ್ತಿವೆ. ಇದೆಂಥಹ ಶಬ್ದವೆಂಬುದನ್ನು ಅರಿಯಲಾಗುತ್ತಿಲ್ಲ. ಯಾವುದೋ ಪ್ರಾಣಿ ಬಂದಿದೆಯೆಂಬುದು ಖಾತರಿ ಮಾಡಿಕೊಂಡರು. ನಾನು ಮುಂದೆ ಹೋಗಿ ನೋಡೋಣವೆಂದು ಒಂದೆಜ್ಜೆ ಮುಂದಿಟ್ಟೆ, ಹರೀ ಹೋಗಬೇಡ! ಎಂದರು. ಯಾರೆಂದರೆಂಬುದು ಅರಿವಿಲ್ಲ. ಮೂವರ ಬಾಯಿಂದಲೂ ಬಂದಿತ್ತು ಮಾತು. ನಾನು ಕ್ಷಣಕ್ಕೆ ಬೆಚ್ಚಿ ಬಿದ್ದೆ. ಅಯ್ಯೋ! ಯಾವ ಪ್ರಾಣಿ ಇರಬಹುದು?! ಪ್ರಶ್ನಾಚಕ, ಆಶ್ಚರ್ಯಸೂಚಕ! ಭಯ! ಆತಂಕ!ನಿಶಬ್ದತೆ! ಅಳುಕು! ಯಾವುದಿಲ್ಲ ನಮ್ಮ ಮೊಗದಲ್ಲಿ? ಎಲ್ಲಾ ಭಾವನೆಗಳ ಮಿಶ್ರಿತ. ನಗುವೊಂದು ಬಿಟ್ಟು ಮಿಕ್ಕಿದ್ದೆಲ್ಲಾ ಇದೆ. ನಗು ಬರುವ ಸಮಯವಲ್ಲ. ಚಾರ್ಲೀ ಚಾಪ್ಲೀನ್ ಅಲ್ಲಾ, ಮತ್ತೊಬ್ಬ ಹುಟ್ಟಿ ಬಂದರೂ ನಮ್ಮನ್ನು ನಗಿಸಲು ಸಾಧ್ಯವಿಲ್ಲ ಬಿಡಿ. ನಗಿಸಿವುದಿರಲಿ, ನಮ್ಮೊಳಗಿದ್ದ ಭಯವನ್ನು ಕಡಿಮೆ ಮಾಡುವ ಶಕ್ತಿಯೂ ಇರಲಿಲ್ಲ. ಅದು ಇದ್ದಿದ್ದರೇ ಆ ದೇವರಿಗೆ ಮಾತ್ರ. ಆತನಿಗೆ ಮಾತ್ರವೇ ಸಾಧ್ಯವಿತ್ತು. ಇದೆಲ್ಲವೂ ನಡೆಯುವಾಗ, ಯಾವುದೋ ಪ್ರಾಣಿ ಕೋಳಿ ಮಾಂಸದ ವಾಸನೆಯನ್ನು ಹಿಡಿದು ಬಂದಿದೆಯೆಂಬುದು ಖಾತ್ರಿಯಾಗಿತ್ತು. ಆದರೇ, ಆ ಪ್ರಾಣಿ ಯಾವುದು? ಚಿರತೆಗಳಿವೆಯೆಂಬುದು ನಂದನ ಅನಿಸಿಕೆ, ಚಿರತೆ ಬಂದಿರಬಹುದೇ? ಬಂದಿದ್ದರೇ? ನರಿಗಳಿವೆಯೆಂಬುದು ವಿಜಿಯ ಅಭಿಪ್ರಾಯ, ನರಿಗಳೆಂದರೇ ಎಷ್ಟಿರಬಹುದು? ಅದರ ಜೊತೆಗೆ ಕಾಳಿಂಗ ಸರ್ಪಗಳು ಹೆಚ್ಚಿರುವ ಸ್ಥಳ ಕೂಡ ಹೌದು. ಕಾಳಿಂಗ ಸರ್ಪವೂ ಪಾಲು ಕೇಳಿ ಬಂದರೇ? ಎರಡು ಕೆಜಿ ಕೋಳಿ ಮಾಂಸ ನಮಗೆ ಈ ಮಟ್ಟಕ್ಕೆ ಹಿಂಸೆ ಕೊಡುವುದೇ? ಮೂರಿಂಚು ಮಾಂಸಕ್ಕೆ ಅದೆಷ್ಟೋ ಜನರು ಬಲಿಯಾಗಿದ್ದಾರೆ, ಇನ್ನೂ ಕೋಳಿಗೆ ಪ್ರಾಣ ಕಳೆದುಕೊಳ್ಳುವುದು ದೊಡ್ಡದೇನಲ್ಲ ಎನಿಸಿತು.

ಕೋಳಿ ಮಾಂಸಕ್ಕೆ ಈ ಬಗೆಯೆಂದರೇ, ಇನ್ನೂ ಹಂದಿ ಮಾಂಸ ತೆಗೆದುಕೊಂಡು ಹೋಗೋಣವೆನ್ನುತ್ತಿದ್ದೆವಲ್ಲಾ? ಎಂಬ ಭಯದ ಜೊತೆಗೆ ಸಮಾಧಾನವಾಯಿತು. ದೆವ್ವಗಳು ಇರಬಹುದೆಂಬ ಊಹಾಪೋಹಗಳು ನಮ್ಮ ಖಾಕ್ ಬ್ರದರ್ಸ್ ಕಡೆಯಿಂದ ಬಂದಿತು. ಇಷ್ಟೇಲ್ಲಾ ನಡೆಯುವಾಗಲೂ ಆ ಶಬ್ದ ಕಡಿಮೆಯಾಗಲಿಲ್ಲ. ನಾನು ಟಾರ್ಚ್ ಹಿಡಿದು ಆ ಕಡೆಗೆ ಈ ಕಡೆಗೆ ಹಿಡಿಯುವುದು ತಪ್ಪಲಿಲ್ಲ. ಒಂದೆಡೆ, ಯಾರಾದರೂ ಬಂದರೆಂಬ ಭಯವಿತ್ತು, ಮತ್ತೊಂದೆಡೆಗೆ ಅಲ್ಲಿ ಯಾವುದೋ ಪ್ರಾಣಿ ಬಂದಿದೆಯಲ್ಲಾ ಎಂಬ ಆತಂಕ, ಯಾವುದಕ್ಕೆ ಗಮನಕೊಡಬೇಕೆಂಬುದೇ ಚಿಂತೆಯಾಯಿತು. ಈ ಭಯ ಈ ಆತಂಕದಲ್ಲಿ ಜೀವನ ಮಾಡುವುದು ದುಸ್ತರ. ಚಿಕನ್ ಶೇ.90 ರಷ್ಟು ಬೆಂದಿತ್ತು. ನಾನು ವಿಜಿ ಇಲ್ಲಿಯೇ ಬೆಂಕಿಯ ಬಳಿಯಲ್ಲಿ ಕುಳಿತು ಊಟ ಮುಗಿಸಿದರೆ ನಮಗೆ ಒಳ್ಳೆಯದೆಂದು ವಾದಿಸಿದೆವು. ಮಿಕ್ಕಿದವರು ಇಲ್ಲಿ ಕೂರುವುದು ಕಷ್ಟ ಮನೆಯ ಮುಂಬಾಗಕ್ಕೆ ಹೋಗೋಣ, ಇಲ್ಲಿದ್ದರೆ ನಾವು ನಾಲ್ಕು ಕಡೆಗೂ ಗಮನವಿಡಬೇಕು, ಮುಂದೆ ಇದ್ದರೆ ಒಂದು ಕಡೆಗೆ ಸಾಕೆಂದರು. ಸರಿಯಾಗಿ ಒಂಬತ್ತು ಗಂಟೆಗೆ ಅಡುಗೆ ಸಿದ್ದವಾಯಿತು. ನಾವು ಅಲ್ಲಿ ಅಡುಗೆ ಮಾಡಿದ್ದೇವೆಂಬ ಯಾವ ಸುಳಿವು ಸಿಗದಂತೆ ಎಲ್ಲವನ್ನು ಶುಚಿಗೊಳಿಸಿದೆವು. ಒಲೆಗೆಂದು ಇಟ್ಟಿದ್ದ ಕಲ್ಲುಗಳನ್ನು ಎಸೆದೆವು. ನನಗೆ ಒಂದು ನಂಬಿಕೆಯಿತ್ತು, ಬ್ಯಾಗಿನಲ್ಲಿ ಎರಡು ಫುಲ್ ಬಾಟಲಿ ಒಲ್ಡ್ ಮಂಕ್ ಇದೆ, ಅದು ಒಂದು ಸುತ್ತು ನಮ್ಮ ದೇಹಕ್ಕೆ ಸೇರಿದರೇ ಸಾಕು, ಚಿರತೆಯ ಮೊಲೆಯಲ್ಲಿ ಹಾಲು ಕರೆದು ಕುಡಿಯುವ ಧೈರ್ಯ ನಮ್ಮ ಹುಡುಗರಿಗೆ ಬಂದೇ ಬರುತ್ತದೆ ಎಂದು.

ಅಡುಗೆ ಮನೆಯಿಂದ (ಸ್ನಾನದ ಮನೆಯಿಂದ) ಅನ್ನ, ಸಾರು ಎಲ್ಲವನ್ನು ತಂದು ಊಟಕ್ಕೆ ತಯಾರು ಮಾಡಿದೆವು. ವಿಚಿತ್ರವೆನಿಸಿದ್ದು ಮತ್ತೊಂದು. ನಾವು ವಿರಾಜಪೇಟೆಯಿಂದ ಹತ್ತು ಲೀಟರು ನೀರು ತಂದೆವು. ಅಲ್ಲಿ ನೀರು ಸಿಗದಿದ್ದರೆ ಸಮಸ್ಯೆಯಾಗಬಾರದೆಂದು. ಆದರೇ, ಇಲ್ಲಿ ಮಳೆ ಸುರಿದು ಹೆಜ್ಜೆ ಇಟ್ಟಲೆಲ್ಲ ಶುದ್ದ ನೀರು ಹರಿಯುತ್ತಿತ್ತು. ಹೆಚ್ಚಿದ್ದರೇ ತೊಂದರೆ ಇಲ್ಲ ನೀರಿಲ್ಲದ್ದಿದ್ದರೇ? ಒಂಬತ್ತು ಗುಡ್ಡ ಬಾಗ -2 ಆಗುತ್ತಿತ್ತು. ಎಲ್ಲವನ್ನು ತಯಾರಿ ಮಾಡಿ, ಮಾಮೂಲಿ ಕಾಡಿನಲ್ಲಿ ಕೂರುವಂತೆಯೇ, ಸುತ್ತಲೂ ಗಮನಿಸುವ ನಿಟ್ಟಿನಲ್ಲಿ ಕುಳಿತೆವು. ಸುಧಿಯನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲವಾದ್ದರಿಂದ, ನಾನು, ವಿಜಿ, ಮಧು ಮತ್ತು ನಂದ ನಾಲ್ಕು ದಿಕ್ಕುಗಳನ್ನು ಗಮನಿಸುವ ಜವಬ್ದಾರಿ ವಹಿಸಿಕೊಂಡೆವು. ಕುಳಿತು ಹತ್ತು ನಿಮಿಷ ಸುತ್ತಲೂ ಟಾರ್ಚ್ ಬಿಡುವುದು ನೋಡುವುದು ಮಾಡಿದೆವು. ಎಣ್ಣೆ ಹೊಟ್ಟೆ ಸೇರಿದಮೇಲೆ ಅದರ ಅರಿವೇ ಬರಲಿಲ್ಲ. ಆದರೂ, ಆ ಶಬ್ದ ಮಾಡಿದ್ದು ಏನು? ಎನ್ನುವಾಗ ಅದು ಮರಗಳ ನಡುವೆ ವೇಗವಾಗಿ ಚಲಿಸುತ್ತಿದ್ದ ಗಾಳಿ ಮಾಡುತ್ತಿದ್ದ ಶಬ್ದ. ಅದಕ್ಕೆ ತಕ್ಕಂತೆ ಮೇಳೆ ಒದಗಸಿಕೊಡುತ್ತಿದ್ದದ್ದು, ಗುಡುಗು ಮತ್ತು ಮಿಂಚು. ಅದೇನೆ, ಆಗಲಿ ಸಮಯ ಹತ್ತಾಯಿತು, ಅರಣ್ಯ ಇಲಾಖೆಯವರು ಬರುವಂತೇ ಕಾಣುತ್ತಿಲ್ಲ, ಇದೇ ಜಗಲಿಯ ಮೇಲೆ ಮಲಗೋಣ. ಮುಂಜಾನೆ ಐದಕ್ಕೆ ಎದ್ದು ಬೆಟ್ಟ ಏರಲು ಹೋಗೋಣವೆಂದು ತೀರ್ಮಾನಿಸಿದೆವು. ಎಣ್ಣೆ ಖಾಲಿಯಾಗಿತ್ತು, ಚಿಕನ್ ಅಂತೂ ಅದ್ಬುತಾವಾಗಿತ್ತು. ಎಲ್ಲವೂ ಸಮರ್ಪಕವಾಗಿತ್ತು. ಮುಗಿಸಿ ಎದ್ದು, ತೊಳೆದು ಇಡುವ ಸಮಯವೂ ಬಂತು. ಇನ್ನೂ ಎಣ್ಣೆ ಇದ್ದಿದ್ದರೇ, ಚಿಕನ್ ಇದ್ದಿದ್ದರೇ ಎಂದು ಮುಗಿಸಿದೆವು.

ಇಷ್ಟೇಲ್ಲಾ ಮೋಜು ಇರುವಾಗ, ನಾವು ನಾಲ್ಕು ಹೆಜ್ಜೆ ಕುಣಿಯಬಾರದೇ? ಕುಣಿಯೋಣವೆಂದು ಮೊಬೈಲ್ ನಿಂದ ಹಾಡು ಹಾಕಿದೆವು. ನಂತರ ಲಾಪಟಾಪಿನಲ್ಲಿ ಹಾಡು ಹಾಕಿ ಕುಣಿಯಬೇಕು, ಯಾರೊ ಬರುವ ಶಬ್ದ ಮತ್ತು ಟಾರ್ಚ್ ಬೆಳಕು ಬಿತ್ತು. ಯಾರು ಕುಡಿದ್ದಿದ್ದವರು? ಎಲ್ಲವೂ ಇಳಿದು ಹೋಗಿತ್ತು. ಎರಡೇ ಕ್ಷಣಕ್ಕೆ ನಾವ್ಯಾರು ಕುಡಿದೇ ಇಲ್ಲವೆನ್ನುವಂತಾದರು. ಬಂದವರಿಗೂ ನಮ್ಮನ್ನು ಕಂಡು ಭಯವಾಗಿತ್ತು. ಬಂದವರು ಕೇವಲ್ ಇಬ್ಬರು, ತುಂಬಾ ತೆಳ್ಳಗಿದ್ದರು. ನಾವು ದಢೂತಿಗಳು ಐದು ಜನರು! ಮಾತಿಗೆ ಇಳಿಯಲು ಸ್ವಲ್ಪ ಅಂಜಿದರು. ನಂತರ ಯಾರಿಗೋ ಫೋನ್ ಮಾಡಿ ಮಾತನಾಡಿದರು. ಆ ಕಡೆಯಿದ್ದ ವ್ಯಕ್ತಿ ಕೇಳಿತು, ಹೇಗಿದ್ದಾರೆ? ನಾನು ಬರಲೇ ಬೇಕಾ? ಎಂದು. ನಂತರ ಅವರು ಹೊರಗೆ ಬಂದು ಖಾಲಿಯಾಗಿದ್ದ ಬಾಟಲಿಗಳನ್ನು ಎರಡೆರಡು ಬಾರಿ ಟಾರ್ಚ್ ಬಿಟ್ಟು ನೋಡಿದರು. ಎಲ್ಲವನ್ನೂ ಕುಡಿದು ಮುಗಿಸಿದ್ದಾರೆಂಬ ಬೇಸರ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮೊದಲಿಗೆ ಅವರು ಹೊರಗಡೆ ಟೆಂಟ್ ಹೊಡೆದು ಮಲಗಿ ಎಂದರೂ, ನಂತರ ಅಲ್ಲಿಯೇ ಮಲಗಿ ಎಂದರು. ಬೇಕೆಂದರೇ ಒಳಗೆ ಬಂದು ಮಲಗಬಹುದೆಂಬುದನ್ನು ಹೇಳಿದರು. ನಾವು ಹೊರಗಡೆ ಜಗಲಿಯಲ್ಲಿಯೇ ಮಲಗಿದೆವು. ಕೊನೆಗೂ ನಂದನ ಟೆಂಟ್ ಮೇಲೇರಲಿಲ್ಲ. ಅದನ್ನೇ ಹಾಸಿಕೊಂಡು ಮಲಗಿದೆವು. ಭರ್ಜರಿ ಗಾಳಿ, ಭಯಂಕರ ಚಳಿ ಆದರೂ ಮಲಗಿದೆವು, ಮುಂಜಾನೆ ಕಣ್ಣು ತೆರೆದಾಗ ಗಂಟೆ ಆರಾಗಿತ್ತು.

ನಾನು ವಿಜಿ ಹೊರಗೆ ಬಂದು ಹಿಂದಿನ ದಿನ ಬಚ್ಚಿಟ್ಟುಕೊಂಡಿದ್ದ ಸಿಗರೇಟು ಸೇದಿದೆವು. ಸುತ್ತೆಲ್ಲಾ ಮಂಜು ಮುಸುಕಿದೆ, ಅದ್ಬುತಾವಾಗಿದೆ ಪರಿಸರ. ನನ್ನಾಕೆ ನಿಸರ್ಗ ನನ್ನನ್ನು ಬಿಗಿದಪ್ಪುತ್ತಿದ್ದಾಳೆ. ಸ್ವರ್ಗಕ್ಕೆ ನಾಲ್ಕೇ ಗೇಣು. ಎಲ್ಲರೂ ಎದ್ದು ಹೊರಟೆವು. ಸುಮಾರು ಏಳು ಗಂಟೆಗೆ ಬೆಟ ಏರಳು ಶುರು ಮಾಡಿದೆವು. ಏನೂ ಕಾಣಿಸುತ್ತಲ್ಲ. ಬರೀ ಮಂಜು ಮಾತ್ರ. ನಮ್ಮ ಜೊತೆಗೆ ಅಲ್ಲಿಯೇ ಇದ್ದ ಎರಡು ನಾಯಿಗಳು ಬಂದವು. ಈ ನಾಯಿಗಳು ಬಹಳ ಬುದ್ದಿವಂತರು. ಒಂದು ಕಪ್ಪನೆಯ ನಾಯಿ ಮತ್ತೊಂದು ಕೆಂಚ ನಾಯಿ. ಒಂದು ಮುಂದೆ ಹೋಗುತ್ತಿತ್ತು ಮತ್ತೊಂದು ಹಿಂದೆ ಬರುತ್ತಿತ್ತು. ನಮ್ಮನ್ನು ಅದೆಷ್ಟು ಹುಷಾರಾಗಿ ಕರೆದೊಯ್ದೆವೆಂದರೇ ಹೇಳತೀರದು. ಸ್ವಲ್ಪ ಆಚೀಚೆ ಸದ್ದಾದರೂ ಸರಿಯೇ ಓಡಿ ಹೋಗುತ್ತಿದ್ದೋ, ಬೊಗಳುತ್ತಿದ್ದವು. ಒಟ್ಟಾರೆಯಾಗಿ ಎರಡು ಉತ್ತಮ ಭೇಟೆ ನಾಯಿಗಳೆಂಬುದನ್ನು ಒಪ್ಪಬೇಕು. ಬೆಟ್ಟದ ತುತ್ತ ತುದಿಗೆ ಹೋದಾಗ ಸುಮಾರು ಒಂಬತ್ತು ಗಂಟೆಯಾಗಿತ್ತು. ಕಡಿಮೆಯೆಂದರೂ 80ಕೀಮೀ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಹತ್ತುವರೆ ತನಕವೂ ಕಾಯ್ದೆವು. ಮಂಜು ಕಡಿಮೆಯಾಗಲಿಲ್ಲ ಹಾಗೆಯೇ ಇಳಿದು ಬಂದೆವು.

No comments:

Post a Comment