ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

01 February 2013

ಯಾವುದು ಸರಿ ಯಾವುದು ತಪ್ಪು, ಒಬ್ಬ ಹಾಲಿನಿಂದ ದೇವರಿಗೆ ಅಭಿಷೇಕ ಮಾಡ್ತಾನೆ, ಆ ದೇವರು ಸಸ್ಯಹಾರಿ ನೈವೇದ್ಯವನ್ನು ಮಾತ್ರ ಬಯಸುತ್ತೆ, ಅಲ್ಲಿ ಮಾಂಸಹಾರಕ್ಕೆ, ಹಿಂಸೆಗೆ ಸ್ಥಳವಿಲ್ಲ. ಅದು ಮುಂಜಾನೆಯ ಸ್ನಾನ ಮಡಿ ಗುಡಿಯಿಂದ ಶುರುವಾಗಬೇಕು. ಮಧ್ಯಾಹ್ನ ಪೂಜೆ ಇಲ್ಲ ಮತ್ತೇ ಸಂಜೆ ಪೂಜೆಯಾಗುತ್ತದೆ, ರಾತ್ರಿ ದೇವರು ಮಲಗುತ್ತಾನೆ, ತನ್ನದೇ ಸಮಸ್ಯೆಗಳನ್ನು ಹೊದ್ದಿಕೊಂಡು ಭಕ್ತರು ಮಲಗುತ್ತಾರೆ. ಮತ್ತೊಂದೆಡೆ, ಪೂಜಾರಿ ನಡುರಾತ್ರಿಯಲ್ಲಿ ಏಳುತ್ತಾನೆ. ಕತ್ತಲೂ, ಸುತ್ತಲೂ ಕತ್ತಲೂ, ಭಯಂಕರ ಜಡೆ, ಜಡೆಯೆಂದರೇ ನಿಜಕ್ಕೂ ಜಡೆಗೆಟ್ಟಿದೆ ಪೂಜಾರಿಯ ಕೂದಲು, ಎಣ್ಣೆ ಕಂಡಿಲ್ಲ, ಗಂಟು ಕಟ್ಟಿದೆ, ಮುಖವೂ ವಿಕಾರವೋ, ವಿರೂಪವೋ? ಭಯವನ್ನುಂಟು ಮಾಡುವ ಶಕ್ತಿಯಿದೆ. ಅಲ್ಲಿಗೆ ಬರುವ ಭಕ್ತರೂ ಅಷ್ಟೇ ಯಾವುದೋ ಪಾಪ ಮಾಡಿರಬಹುದು, ಇನ್ಯಾರಿಗೋ ಅನ್ಯಾಯ ಮಾಡಿರಬಹುದು, ಅಥವಾ ಮತ್ತಾರೋ ಮಾಡುತ್ತಿರುವ ಅನ್ಯಾಯದ ವಿರುದ್ದ ಹೋರಾಡುವ ಶಕ್ತಿ ಬೇಕೆಂದು ಬೇಡುತ್ತಿರಬಹುದು. ಒಂದೆಡೆ ಬೆಳಕು, ಮತ್ತೊಂದೆಡೆ ಕಡುಗಪ್ಪು. ದೇವರೆಲ್ಲರೂ ಒಂದೆ ಎಲ್ಲವೇ? ಅದು ಹೇಗೆ ಸಾಧ್ಯ ಮನುಷ್ಯರೆಲ್ಲರೂ ಒಂದೇ ಆಗಲು ಸಾಧ್ಯವೇ? ಇಷ್ಟ ಶಕ್ತಿ ದುಷ್ಟ ಶಕ್ತಿ ಇಲ್ಲವೇ? ಋಷಿಗಳೆಲ್ಲರೂ ಸಮಾನರೇ? ಅಘೋರಿಗಳು ಅರ್ಧ ಸುಟ್ಟ ಹೆಣಗಳನ್ನು ತಿನ್ನುವುದಿಲ್ಲವೇ? ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿ ಇಲ್ಲಿ ಸತ್ತಿರುವುದನ್ನು ಮುಟ್ಟಲು ಹಿಂಜರಿಯುವುದಿಲ್ಲವೇ? ಇಬ್ಬರೂ ಹೇಗೆ ಸಮನಾದರು? ದುರ್ಯೋಧನ ಅಷ್ಟೊಂದು ಕ್ರೂರಿಯಾಗಿ ಸ್ವಾರ್ಥಿಯಾಗಿರಲಿಲ್ಲವೇ? ಧರ್ಮರಾಯ ಹುಲ್ಲು ಕಡ್ಡಿಗೆ ಅನ್ಯಾಯ ಮಾಡದೇ ಬದುಕು ನೀಗಲಿಲ್ಲವೇ? ಎಲ್ಲರೂ ಸಮನಾದರೇ, ವೈವಿಧ್ಯವೆಲ್ಲಿ? ನಿಂಬೆ ಹಣ್ಣಿಗೆ ಕುಂಕುಮ ಹಚ್ಚಿ ದೋಷ ನಿವಾರಣೆ ಮಾಡುವುದೊಂದೆಡೆಯಾದರೇ, ನರಬಲಿಯನ್ನು ಮಾಡಿ ದೋಷ ನೀಗಿಸುವುದು ಮತ್ತೊಂದು ವಿಧಿಯಲ್ಲವೇ? ವಿಧಿಯನ್ನು ನಡೆಸುವವನ ಮೇಲೆ ಅವಲಂಬಿತವಾಗಿರುತ್ತದೆ.

No comments:

Post a Comment