20 ಏಪ್ರಿಲ್ 2015

ಮೊದಲನೆಯ ವೈಫಲ್ಯ ಕುಡಿತ



ಬಹಳ ದಿನಗಳ ನಂತರ ಬರೆಯುವುದಕ್ಕೆ ಆರಂಬಿಸಬೇಕೆಂದಿದ್ದೇನೆ. ನನ್ನ ಮನದ ತುಮುಳಗಳನ್ನು ಪದಗಳೊಂದಿಗೆ ನಿಮ್ಮ ಮನಸ್ಸಿಗೆ ತಲುಪಿಸುವ ಹಂಬಲ ನನ್ನದು. ಅದೇ ಸಮಯದಲ್ಲಿ ನಾನು ಮಾಡಿದ ಅನೇಕಾನೇಕ ದುರಂತಗಳ ಬಗ್ಗೆಯೂ ಇಲ್ಲಿಡುತ್ತಿದ್ದೇನೆ. ನಾನು ನನ್ನಲ್ಲಿದ್ದ ಒಳ್ಳೆಯ ಗುಣಗಳೆಲ್ಲವನ್ನೂ ಮರೆತು ಅಥವಾ ತೊರೆದು ಒಬ್ಬ ಮಹ ವ್ಯಾಘ್ರನಂತೆ, ಹುಟ್ಟು ಅವಿವೇಕಿಯಂತೆ, ಕ್ರೂರಿಯಂತೆ, ಅನಾಗರೀಕನಂತೆ ನಡೆದುಕೊಂಡ ಅಥವಾ ಬದುಕಿದ ೨೦೧೧ ರಿಂದ ೨೦೧೫ರ ಅಂದರೇ ನಿನ್ನೆಯ ತನಕದ ಬಗ್ಗೆ ಬರೆಯುತ್ತಿದ್ದೇನೆ. ನಾನು ಸಾಧ್ಯವಾದಷ್ಟೂ ಸತ್ಯವನ್ನು ಬರೆಯುತ್ತಿದ್ದೇನೆ. ಹುಡುಗಿಯ ವಿಷಯ ಬೆರೆತಿರುವುದರಿಂದ ಅದನ್ನು ಸ್ವಲ್ಪ ತೆಳುವಾಗಿ ತಿಳಿಸಿ ಮುಂದಿನ ನನ್ನ ಉಢಾಪೆಯ ಗುಣ್ದದ ಬಗ್ಗೆ ಮಾತ್ರ ಬರೆಯುತ್ತೇನೆ. ನಾನು ನನಗೆ ಬುದ್ದಿ ಬಂದ ದಿನದಿಂದ ಸರಿ ಸುಮಾರು ೨೬ ವರ್ಷಗಳ ತನಕ ಎಂದರೇ, ೨೦೧೦ ರ ತನಕ ಬಹಳ ಒಳ್ಳೆಯವನಾಗಿಯೇ ಬದುಕಿದ್ದೇನೆ. ಅದಾದ ನಂತರ ಎಂದರೇ ೨೦೧೧ ರಿಂದ ೨೦೧೫ ರ ವರೆಗೆ ಹೆಚ್ಚೂ ಕಡಿಮೆ ನಾಲ್ಕೈದು ವರ್ಷ ಯಾವುದಕ್ಕೂ ಬೇಡದ ನಾಯಿಯ ಬದುಕನ್ನು ನಡೆಸಿದ್ದೇನೆ. ಇದೆಲ್ಲವೂ ನಾನೇ ಆಯ್ಕೆ ಮಾಡಿಕೊಂಡಿದ್ದು. ನಾನೇ ಬಯಸಿದ್ದು, ನಾನೇ ಮೆರೆದಿದ್ದು. ಇದಕ್ಕೆಲ್ಲವೂ ನಾನೇ ಕಾರಣ.ನನ್ನದೇ ಸಂಪೂರ್ಣ ಹೊಣೆಗಾರಿಕೆ. ಬರುತ್ತಾ ಬರುತ್ತಾ ರಾಯರ ಕುದುರೆ ಕತ್ತೆ ಆಯ್ತು ಎಂಬುದೊಂದು ಗಾದೆ ಮಾತು ನನಗೆ ಅನ್ವಯವಾಗುತ್ತದೆ.
ನನ್ನ ಮೊದಲನೆಯ ವೈಫಲ್ಯ ಕುಡಿತದಿಂದಾಗಿ, ಎರಡನೆಯದು ಮೊಬೈಲ್ ಇಂದಾಗಿ. ನಾನು ಬಹಳ ಜಂಭದಿಂದ ಹೇಳುತ್ತಿದ್ದೆ. ನಮ್ಮ ಮೇಲೆ ನಮಗೆ ನಿಯಂತ್ರಣ ಇರಬೇಕು, ಮಿತಿಯಾಗಿ ಕುಡಿಯಬೇಕು. ಅತಿಯಾಗಬಾರದು. ನಾನು ಬಹಳ ಸಭ್ಯಸ್ತ, ನಾನು ನಿಯಂತ್ರಣ ತಪ್ಪುವುದಿಲ್ಲ ಅದು ಇದು ಎಂದೆಲ್ಲಾ ಬೊಗಳೆ ಬಿಡುತ್ತಿದ್ದೆ. ಆದರೇ, ಕುಡಿತ ಯಾವ ಮಟ್ಟಕ್ಕೆ ನನ್ನನ್ನು ಸೆಳೆಯಿತೆಂದರೇ? ನಾನು ಹುಟ್ಟು ಕುಡುಕನಾದೆ. ಮುಂಜಾನೆ ಆರು ಮುವತ್ತಕ್ಕೆ ಬೇಕಿದ್ದರೂ, ಬೇಕಿದ್ದರೂ ಏನು, ಬೇಕೆಂದೇ ಕುಡಿಯುವಂತಾದೆ. ಇದಕ್ಕೆಲ್ಲಾ ಕಾರಣವೇನು? ನನ್ನ ಜೀವನದಲ್ಲಿರುವ ಸಮಸ್ಯೆಯೇ? ಇಲ್ಲ ನನಗೆ ಹೇಳಿಕೊಳ್ಳುವಂಥಹ ಸಮಸ್ಯೆಗಳಿರಲಿಲ್ಲ. ಆದರೂ ಕುಡಿಯುತ್ತಿದ್ದೆ. ಕುಡಿದೆ, ತೇಳಾಡಿದೆ. ಸಮಸ್ಯೆಯೆಂದು ಕುಡಿಯುವುದು ನೆಪವಷ್ಟೇ? ಕುಡಿಯುವುದಕ್ಕೆ ನೆಪವೇ ಬೇಡ. ಕುಡಿಯುವುದಕ್ಕೆ ಮನಸ್ಸು ಬೇಡ. ಜೇಬಲ್ಲಿ ನಾಲ್ಕು ಕಾಸು ಇದ್ದರೇ ಸಾಕು. ರಾಯಲ್ ಸ್ಟಾಗ್ ಗೆ ದುಡ್ಡಿಲ್ಲದಿದ್ದರೇ ಡಿ ಎಸ್ ಪಿ, ಅದಕ್ಕಿಲ್ಲದಿದ್ದರೇ ಓಲ್ಡ್ ಮಂಕ್. ಹೀಗೆ ಜೇಬಲ್ಲಿ ಐವತ್ತು ರೂಪಾಯಿ ಸಾಕು.
ದುಡ್ಡಿಲ್ಲದಿದ್ದರೇನಂತೆ, ಕ್ರೆಡಿಟ್ ಕಾರ್ಡ್ ಇದೆಯಲ್ಲಾ! ಮುಗಿದೇ ಹೋಯಿತು. ಕಾರ್ಡ್ ಬಿಲ್ ಕಟ್ಟುವಾಗ ಒಮ್ಮೊಮ್ಮೆ ಕಣ್ಣೀರು ಬರುವಂತಾಗಿ ಪರದಾಡಿದ್ದೇನೆ. ಸಾಕಪ್ಪ ಇನ್ನು ಮುಂದೆ ಹೀಗೆ ಕುಡಿದು ದುಡ್ಡು ವೆಚ್ಚಮಾಡುವುದು ಬೇಡವೆಂದು, ಆದರೂ ಬಿಟ್ಟಿಲ್ಲ ಹೆಂಡದ ಮಾಯೆ. ಇದಕ್ಕೊಂದು ಸೂಕ್ತ ಉದಾಹರಣೆಗಳನ್ನು ಕೊಡಬೇಕು. ನಡೆದಿರುವ ಎಲ್ಲಾ ಘಟನೆಗಳು ಉದಾಹರಣೆಗೆ ಯೋಗ್ಯವಾಗಿದ್ದರೂ ಒಂದೆರಡನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇನೆ.
ಅದು ನವೆಂಬರ್ ಒಂದನೇ ತಾರೀಖು, ಸುಮಾರು ಹನ್ನೊಂದು ಗಂಟೆಗೆ ನಂದ ಕರೆ ಮಾಡಿ, ಮಗಾ ಬಾ ಎಲ್ಲಿಯಾದರೂ ಹೋಗಿ ಬರೋಣವೆಂದ. ಅದು ಕಾರ್ತಿಕ ಮಾಸವಾಗಿದ್ದರಿಂದ, ಅವನು ಬೆಂಗಳೂರಿನಲ್ಲಿ ಕುಡಿಯುವುದು ಸೇದುವುದು ಮಾಡುವುದಿಲ್ಲ. ಆದ್ದರಿಂದ ನಮ್ಮ ಮನಸ್ಸಿಗೆ ಮೂರ್ನಾಲ್ಕು ದಾರಿಗಳು ಕಂಡವು. ಮೊದಲನೆಯದಾಗಿ, ಕನಕಪುರ ರಸ್ತೆಯಲ್ಲಿರುವ ಚುಂಚಿ ಜಲಪಾತ, ಎರಡನೆಯದು ಮೈಸೂರು ರಸ್ತೆ ಢಾಬಗಳು, ಮೂರನೆಯದು ತುಮಕೂರು ಅಥವಾ ಹಾಸನ ರಸ್ತೆಯ ಢಾಬಗಳು. ಇಲ್ಲವೇ ರಸ್ತೆ ಬದಿಯಲ್ಲಿನ ಗುಡ್ಡಗಳು. ಎರಡೆರಡು ಸಿಗರೇಟ್ ಸೇದಿದ ನಂತರ ತೀರ್ಮಾನವಾಗಿದ್ದು ತುಮಕೂರು ರಸ್ತೆ. ಸರಿ ಡಾಬಸ್ ಪೇಟೆಗೆ ಹೋಗಿ ಮೊದಲು ಅಲ್ಲಿ ಹೋಲ್ ಸೇಲ್ ವೈನ್ಸ್ ಹುಡುಕಿದೆವು. ಒಂದು ಫುಲ್ ಬಾಟಲ್ ರಮ್ ಎರಡು ಲೀಟರ್ ಥಮ್ಸ್ ಅಪ್ ಜೊತೆಗೆ ಹೊರಟೆವು. ಇನ್ನೇನು ತುಮಕೂರು ರಸ್ತೆಯ ಟೋಲ್ ಸಿಗಬೇಕು ಎನ್ನುವಾಗ ಎಡಗಡೆಗೆ ಒಂದು ಢಾಬ ಕಣ್ಣಿಗೆ ಬಿದ್ದಿತು. ಐದು ನೂರು ಮೀಟರ್ ಮುಂದೆ ಹೋದರೆ ಮತ್ತೆ ಟೋಲ್ ಕಟ್ಟಬೇಕಾಗುತ್ತದೆಯೆಂದು ಅಲ್ಲಿಗೆ ಕಾರನ್ನು ತಿರುಗಿಸಿದೆ. ಅಂತೂ ಇಂತೂ ತಂದಿದ್ದ ಒಂದು ಫುಲ್ ಬಾಟಲಿಯಲ್ಲಿ ಮುಕ್ಕಾಲು ಭಾಗವನ್ನು ಮುಗಿಸಿದೆವು. ಮಾತಿನ ನಡುವೆ ನಂದ, ನಿನ್ನೆ ನನಗೆ ಬೇಸರವಾಗಿತ್ತು ಎಲ್ಲಿಗಾದರೂ ಹೋಗಬೇಕೆನಿಸಿತ್ತು, ರಾತ್ರಿ ಒಂದುವರೆಯ ತನಕ ನಿದ್ದೆ ಮಾಡಿರಲಿಲ್ಲ ಎಂದ. ಅದಕ್ಕೆ ದನಿಗೂಡಿಸಿ ನಾನೆಂದೆ, ಹೌದು ಮಗಾ ನನಗೂ ಯಾಕೋ ಬೇಸರವಾಗಿ ನಾನು ಮಲಗಿರಲಿಲ್ಲ, ಒಂದು ಕರೆ ಮಾಡಿದ್ದರೆ ಎಲ್ಲಿಗಾದರೂ ಹೋಗಬಹುದಿತ್ತಲ್ಲ ಎಂದೆ. ಹೌದು ಇಲ್ಲ ಎಂದು ಮಾತನಾಡುವ ನಡುವೆ ಒಂದು ತೀರ್ಮಾನಕ್ಕೆ ಬಂದೆವು, ಅದು ಶೃಂಗೇರಿಗೆ ಹೋಗುವುದು. ಶೃಂಗೆರಿಗೆ ಹೋಗಿ ಅಲ್ಲಿಂದ ಧರ್ಮಸ್ಥಳಕ್ಕೆ ಹೋಗಿ ಬರುವುದೆಂದು ಇದ್ದಕ್ಕಿದ್ದ ಹಾಗೆ ನಿರ್ಧರಿಸಿದೆವು.
ಅಲ್ಲಿಂದ ಒಡನೆಯೇ ಹೊರಟು ಬೆಂಗಳೂರಿಗೆ ಬಂದು ಬಟ್ಟೆ ಬರೆ ತೆಗೆದುಕೊಂಡು ರಾತ್ರಿ ಸುಮಾರು ಹತ್ತಕ್ಕೆ ಮನೆಯಿಂದ ಹೊರಟೆವು. ಹೊರಡುವಾಗ ಸುಮ್ಮನಿರಲಾರದೆ ಸ್ನೇಹಿತ ವಿಜಿಗೆ ಕರೆ ಮಾಡಿ ಕರೆದೆವು. ಅವನು ಮೊದಲಿಗೆ ತಿರಸ್ಕರಿಸಿದ, ನಂತರ ತಾನು ತನ್ನ ಅತ್ತೆಯ ಮನೆಯಲ್ಲಿದ್ದೇನೆ, ಇಲ್ಲಿಂದ ಹಾಸನಕ್ಕೆ ಬರುವುದು ಕಷ್ಟ ಎಂದ. ಎಣ್ಣೆ ದೇವತೆ ಮೈಮೇಲೆ ಇದ್ದಿದ್ದರಿಂದ ಅದಕ್ಕೇನು ಅಲ್ಲಿಗೆ ಬಂದು ಕರೆದುಕೊಂಡು ಹೋಗುತ್ತೇವೆ ಎಂದೆ. ಅದು ಯಾವುದೋ ಕುಗ್ರಾಮ, ಅಲ್ಲಿಗೆ ಹೋಗಿ ತಲುಪುವ ವೇಳೆಗೆ ಮೂರು ಗಂಟೆಯಾಯಿತು. ನಮ್ಮ ತಿಕಲುತನಕ್ಕೆ ಸಾಕ್ಷಿಯೆಂಬಂತೆ ನಮ್ಮ ಮತ್ತೊಬ್ಬ ಸ್ನೇಹಿತ ಲೋಕೇಶನನ್ನು ಕರೆದೆವು. ಅವನೋ ಅರ್ಧಗಂಟೆಗೊಮ್ಮೆ ಕರೆ ಮಾಡಿ ಮಾಡಿ ನಮ್ಮನ್ನು ಸಾಕುಮಾಡಿದ. ಹಾಸನ ತಲುಪುವಾಗ ನಾಲ್ಕುವರೆಯಾಯಿತು. ಅಲ್ಲಿಂದ, ಬೇಲೂರು ಮಾರ್ಗವಾಗಿ ಹೊರಟೆವು. ನನ್ನದೋ ಚಿಕ್ಕ ಕಾರು, ಅದರಲ್ಲಿ ನನ್ನೊಬ್ಬನನ್ನು ಬಿಟ್ಟರೆ ಮಿಕ್ಕವರೆಲ್ಲ ನೂರು ಕೇಜಿಗೆ ಸಮೀಪದವರು. ಚಿಕ್ಕ ಮಗಳೂರು ಬಿಡುವಾಗ ಆರು ಗಂಟೆಯಾಯಿತು. ಚಿಕ್ಕಮಗಳೂರು ದಾಟಿದ ನಂತರ ಶೃಂಗೇರಿಯ ರಸ್ತೆ ಹೇಳತೀರದು. ಯಾತಕ್ಕಾದರೂ ಬಂದೆ ಎನಿಸತೊಡಗಿತ್ತು. ಆದರೂ ದೇವಸ್ಥಾನಕ್ಕೆ ಹೋಗುವಾಗ ಹೀಗೆ ಹೇಳುವುದು ಸರಿಯಿಲ್ಲವೆಂದು ತೀರ್ಮಾನಿಸಿ ಗಾಡಿ ಓಡಿಸಿದೆ. ಶೃಂಗೇರಿ ತಲುಪಿದಾಗ ಹತ್ತು ಗಂಟೆಯಾಯಿತು. ನಾನು ವಿಜಿ ಬಿಟ್ಟರೆ ಮಿಕ್ಕವರೆಲ್ಲ ತಿಂಡಿಯ ಬಗ್ಗೆ ಪರದಾಡುವವರೇ! ಅಂತೂ ಯೋಗೇಶ ತಿಂಡಿ ತಿಂದ, ನಾವು ಸ್ನಾನ ಮಾಡಿ ಪೂಜೆ ಮುಗಿಸಿದೆವು. ಸ್ವಲ್ಪ ಸಮಯ ಕಾಯ್ದರೇ ದೇವಸ್ಥಾನದಲ್ಲಿ ಊಟ ಮಾಡುವುದೆಂದು ತೀರ್ಮಾನಿಸಿದೆವು. ಸಮ್ಮತಿ ಅಸಮ್ಮತಿಯ ನಡುವೆ ಹೋಟೆಲ್ಲಿಗೆ ಬಂದು ಕುಳಿತೆವು. ಅಲ್ಲಿಂದ ಮತ್ತೆ ಎದ್ದು ಭೋಜನಶಾಲೆಗೆ ತಲುಪಿದೆವು.
ಊಟವಾದ ಮೇಲೆ ಧರ್ಮಸ್ಥಳಕ್ಕೆಂದು ನಡೆದೆವು, ಅಲ್ಲಿಂದ ಮತ್ತೆ ಬೆಂಗಳೂರಿಗೆ ಹೋಗಬೇಕಿತ್ತು. ಧರ್ಮಸ್ಥಳ ತಲುಪುವಾಗ ನಾಲ್ಕು ಗಂಟೆ! ದೇವಸ್ಥಾನ ಇನ್ನೂ ಕೆಲವೇ ಕ್ಷಣದಲ್ಲಿ ಮುಚ್ಚಲಾಗುತ್ತಿತ್ತು. ಉದ್ದನೆಯ ಸಾಲು, ಒಮ್ಮೆ ಬಾಗಿಲು ಮುಚ್ಚಿದರೆ ಮತ್ತೆ ತೆರೆಯುವುದು ೭.೩೦ಕ್ಕೆ! ವಿಶೇಷ ಸಾಲಿನಲ್ಲಿ ಸಾಗುವುದಕ್ಕೆ ೧೨೫೦ ರೂ ಬೇಕು. ನನ್ನ ಅಕೌಂಟಿನಲ್ಲಿ ದುಡ್ಡಿಲ್ಲ. ಇದ್ದ ಐದುನೂರನ್ನು ತೆಗೆದೆ. ರಸ್ತೆ ಚೆನ್ನಾಗಿಲ್ಲದ ಕಾರಣ ನಮ್ಮ ನಿರೀಕ್ಷೆಗೆ ಮೀರಿದ ಪೆಟ್ರೋಲ್ ಬೇಕಾಯಿತು. ವಿಜಿ ಬಳಿಯಲ್ಲಿ ದುಡ್ಡಿಲ್ಲ, ನಂದನ ಜೇಬಲ್ಲಿ ಶಾಸ್ತ್ರಕ್ಕೂ ಐದು ಪೈಸೆ ಇಲ್ಲ, ಯೋಗೇಶನದ್ದು ಅದೇ ಕಥೆ. ಲೋಕೇಶನ ಬಳಿ! ಇದ್ದಿತೇ? ಸಾಲ ಕೇಳಿದೆ ನಾಳೆ ಕೊಡುತ್ತೇನೆ ಕೊಡು ಎಂದು. ನಂದ ಮತ್ತು ಯೋಗೇಶ ಅಯ್ಯೊ ಹೊರಗಡೆಯಿಂದ ಕೈ ಮುಗಿದರೇ ಸಾಕೆಂದರು. ಲೋಕೇಶ ೭.೩೦ರ ವರೆಗೆ ಕಾಯ್ದು ನಂತರ ಹೋಗೋಣವೆಂದ. ವಿಜಿಗೆ ಬಹುಮತದ ಕಡೆಗೆ ವಾಲುವ ಆಸೆ. ನಾನು ಅತಿಯಾಗಿ ನಂಬುವ ದೇವರು ಧರ್ಮಸ್ಥಳ ಮಂಜುನಾಥ! ನನ್ನ ಒಳಮನಸ್ಸು ನನ್ನನ್ನು ಹಂಗಿಸತೊಡಗಿತ್ತು. ಹೆಂಡ ಕುಡಿದು ನೀನು ಹೊರಟಿರುವುದರಿಂದನೇ ಇದೆಲ್ಲ ಆಗಿದ್ದು, ದೇವರು ನಿನ್ನನ್ನು ತಿರಸ್ಕರಿಸುತ್ತಿದ್ದಾನೆ. ಅವನು ಇದನ್ನೆಲ್ಲಾ ಸಹಿಸುವುದಿಲ್ಲವೆಂದು ತಿಳಿದಿದ್ದರೂ ನೀನು ಕುಡಿದು ಬಂದಿದ್ದೀಯಾ ಹೀನಾ! ನನಗೆ ಎಲ್ಲಿಲ್ಲದ ಆತಂಕ, ಭಯ ಶುರುವಾಗಿತ್ತು. ಬಹಳ ಕಾಡಿ ಬೇಡಿದ ನಂತರ ಲೋಕೇಶ ತನ್ನ ಎಟಿಎಮ್ ನಿಂದ ಹಣ ತಂದ. ಇನ್ನೇನು ಬಾಗಿಲು ಮುಚ್ಚುವ ಸಮಯದಲ್ಲಿ ಓಡಿ ಹೋದೆವು. ನಾನು ವಿಜಿ ಆತುರದಿಂದ ಒಳಕ್ಕೆ ಹೋಗುತ್ತಿದ್ದರೆ, ಮಿಕ್ಕಿದವರು ಆಮೆ ವೇಗದಲ್ಲಿ ಬರುತ್ತಿದ್ದರು. ನನಗೋ ಕೋಪ ಮಿತಿ ಮೀರುತ್ತಿತ್ತು. ನನ್ನಿಂದ ಆದ ಈ ಪ್ರಮಾದಕ್ಕೆ ಬೇರೆಯವರ ಮೇಲೆ ಕೋಪ ಮಾಡಿಕೊಳ್ಳುವುದು ಸರಿಯಿಲ್ಲವೆನಿಸಿತ್ತು. ನನ್ನ ಮೇಲೆ ಕೋಪ ಜಿಗುಪ್ಸೆ ಬಂತು. ಅಂತೂ ಕೋಪದಲ್ಲಿಯೋ ಬೇಸರದಲ್ಲಿಯೋ ದರ್ಶನವಂತೂ ಆಯಿತು.
ಅಲ್ಲಿಂದ ಬೇಗ ಹೊರಡಬೇಕು, ಮಳೆ ಬಂದರೆ ಕಷ್ಟ, ಹಾಗೇಯೇ ಕತಲಲ್ಲಿ ಘಾಟ್ ಮುಗಿದು ಸಕಲೇಶಪುರ ತಲುಪುವುದು ಸೂಕ್ತವೆಂದು ತೀರ್ಮಾನಿಸಿದೆ. ದೋಸೆ ತಿನ್ನಬೇಕೆಂದು ಲೋಕಿ ಮತ್ತು ಯೋಗಿ ಹಠ ಹಿಡಿದರು. ಅವರಿಗೆ ಹಿಮ್ಮೇಳವಾಗಿ ನಂದ ಏನಾದರೂ ಕುಡಿಯೋಣ ಕುಡಿದು ಹೋಗೋಣವೆನ್ನತೊಡಗಿದ. ನಾನು ದೃಢ ನಿರ್ಧಾರ ಮಾಡಿ ನಿಲ್ಲಿಸದೆ ಮುಂದೆ ಬಂದೆ. ಧರ್ಮಸ್ಥಳ ಬಿಟ್ಟ ಮೇಲೆ ಗೊತ್ತಾದದ್ದು ನನ್ನದೆಂಥಹ ಕೆಟ್ಟ ತೀರ್ಮಾನವೆಂದು. ಅದು ರಸ್ತೆಯಲ್ಲ ಗುಂಡಿಗಳ ತವರು. ಗುಂಡಿಗಳಲ್ಲ, ಹೊಂಡಗಳು. ಒಂದಕ್ಕಿಂತ ಒಂದು ಹೊಂಡ ದೊಡ್ಡದು. ನನ್ನ ಕಾರಲ್ಲಿ ಐದು ಜನ ದಢೂತಿಗಳು. ನನ್ನ ಕಾರು ಬೆಂಗಳೂರು ತಲುಪುವುದು ಅನುಮಾನವೆನಿಸಿತ್ತು. ಅದರ ನಡುವೆ, ಎದುರಿನಿಂದ ಬರುವ ದೊಡ್ಡ ದೊಡ್ಡ ಲಾರಿ ಟ್ಯಾಂಕರ್ ಗಳು, ಮೈ ಮೇಲೆಯೇ ಹೋಗುವಂತೆ ಹೋಗುವ ಕೆಎಸ್ ಆರ್ ಟಿಸಿ ಬಸ್ಸುಗಳು. ನಾನು ನಿಜಕ್ಕೂ ಹೆದರಿದ್ದೆ, ಕಾರು ಓಡಿಸುವುದಕ್ಕೆ! ಹೆದರಿಕೆಯಾದದ್ದು ಕಾರಿಗೆ ಏನಾದರು ಆಗುತ್ತದೆಯೆಂದಲ್ಲ. ಕಾರಿಗೆ ಏನಾದರೂ ಆದರೇ ಮುಂದಕ್ಕೆ ತೆಗೆದುಕೊಂಡು ಹೋಗುವುದಕ್ಕೆ ದುಡ್ಡಿಲ್ಲವೆಂದು. ಕಾರಿನಲ್ಲಿ ಹೊರಗೆ ಹೋಗುವಾಗ ಕನಿಷ್ಠ ಐದು ಸಾವಿರ ಜೇಬಲ್ಲಿರಬೇಕೆಂಬುದು ನನ್ನ ಅನಿಸಿಕೆ, ಆದರೆ ಇಂದು ಐದು ರೂಪಾಯಿ ಇಲ್ಲ! ಅದರ ನಡುವೆ ಏನಾದರೂ ತಿನ್ನಲೇ ಬೇಕೆಂದು ಹಠ ಹಿಡಿದು ಶಿರಾಡಿಯಲ್ಲಿ ನಿಲಿಸಿದರು. ನನಗೆ ಕತ್ತಲಾಯಿತೆಂಬ ಭಯ. ನಿನ್ನೆ ರಾತ್ರಿ ನಿದ್ದೆ ಇಲ್ಲ, ಈ ರಾತ್ರಿ ನಿದ್ದೆ ತಪ್ಪಿದರೇ! ನಾಳೆ ಆಫೀಸು, ಕೆಲಸ! ಛೇ ಥೂ ಎನಿಸತೊಡಗಿತು. ಅಲ್ಲಿ ನಿಲ್ಲಿಸಿದ್ದು ಸರಿ, ಆದರೇ ತಿಂದು ಕುಡಿದ ಮೇಲೆ ದುಡ್ಡು? ಲೋಕಿಯ ಹತ್ತಿರ ಸಾಲ ಮಾಡಿದ್ದು ಖರ್ಚಾಯಿತು. ಕಾರಿನಲ್ಲಿರುವ ಪೆಟ್ರೋಲ್ ಹಾಸನಕ್ಕೆ ಸರಿ ಅಷ್ಟೇ. ಅಲ್ಲಿಂದ ಮುಂದಕ್ಕೆ ಇನ್ನೂರು ಕೀಮೀ ಹೇಗೆ ತಲುಪುವುದು? ಮತ್ತೆ ಲೋಕಿಯನ್ನು ಕೇಳಿದೆ. ನೀರು ದೋಸೆ ತಿನ್ನಬೇಕೆಂಬ ಯೋಗಿಯ ಹಂಬಲ ತೀರಿರಲಿಲ್ಲ. ತಿನ್ನಲೇಬೇಕೆಂದು ಹಟ ಹಿಡಿದ.
ನನಗೆ ದುಡ್ಡೀಲ್ಲವೆನ್ನುವುದು ಒಂದಾದರೇ, ಸಮಯ ವ್ಯರ್ಥವಾಗುವುದೆಂಬುದು ಮತ್ತೊಂದು ಕಳವಳ. ನನ್ನ ಮಹಾನ್ ಗೆಳೆಯ ಲೋಕಿ ದುಡ್ಡು ಕೇಳಿದರೆ, ಮನೆಗೆ ಬಂದು ಅವರ ಅಮ್ಮನ ಹತ್ತಿರದಲ್ಲಿ ಕೇಳಿ ಕೊಡಿಸಿದ. ಅದೆಂಥಹ ಅವಮಾನ ಅಲ್ಲವೇ? ಕಾರಿದೆ, ಬೆಂಗಳೂರಿನಿಂದ ಬಂದಿದ್ದಾರೆ ದುಡ್ಡಿಲ್ಲ, ನನ್ನ ಮಗನ ಕೈಯಿಂದ ತೆಗೆದುಕೊಂಡಿರಬಹುದೆಂಬ ಶಂಕೆ ಅವರಿಗೆ ಬರುವಿದಿಲ್ಲವೇ? ಆದರೂ ಆ ಸಮಯದಲ್ಲಿ ದುಡ್ಡಿನ ಅನಿವಾರ್ಯತೆಯಿತ್ತು ನಮಗೆ. ಅಲ್ಲಿಂದ ಹೊರಡುವಾಗ ಹತ್ತು ಗಂಟೆ.
ಅನ್ನ ಕಂಡು ಅದೆಷ್ಟೋ ಜನ್ಮವಾದಂತೆ ನಟಿಸುತ್ತಿದ್ದ ನಂದ ಮತ್ತು ಯೋಗಿ ಊಟಕ್ಕೆ ಹಾತೊರೆಯತೊಡಗಿದರು. ಚನ್ನರಾಯಪಟ್ಟಣ ದಾಟಿದ ನಂತರ ಯಾವುದೋ ಒಂದು ಢಾಬದ ಬಳಿಯಲ್ಲಿ ಕಾರನ್ನು ನಿಲ್ಲಿಸಿದೆ. ಲೋಕೇಶನ ಹತ್ತಿರ ಪಡೆದ ಒಂದು ಸಾವಿರ ಐದು ನೂರು ರೂಪಾಯಿಯಲ್ಲಿ ಎಂಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ. ಇನ್ನೂರು ರೂಪಾಯಿ ಟೋಲ್ ಗೆ ಬೇಕಿತ್ತು. ಇನ್ನೂರು ಅಥವಾ ಮುನ್ನೂರಕ್ಕೆ ತಿಂದು ಕನಿಷ್ಠ ಇನ್ನೂರು ರೂಪಾಯಿ ಯಾವುದಕ್ಕೂ ಇರಲೆಂಬುದು ನನ್ನ ಆಶಯ. ಆದರೇ ಸಹಚಾರಿಗಳು ಆ ರೀತಿಯ ಸಣ್ಣತನಕ್ಕೆ ಆಸ್ಪದ ನೀಡಲಿಲ್ಲ. ಸಂಪೂರ್ಣ ಐದು ನೂರೈವತ್ತನ್ನು ಹೋಟೇಲ್ ಗೆ ನೀಡಿದರು. ಸುಮಾರಾಗಿ ತಿಂದು ಬೆಂಗಳೂರಿಗೆ ತಲುಪುವ ಆಸೆ ಅವರದ್ದಲ್ಲ. ಹೋಟೆಲಿನಲ್ಲಿರುವುದನ್ನೆಲ್ಲಾ ಮುಗಿಸಬೇಕೆಂಬುದು ಅವರ ತೀರ್ಮಾನ.ಹತ್ತು ಹದಿನೈದು ರೋಟಿ, ಬಜ್ಜಿ, ಎರೆಡೆರಡು ರೈಸ್ ಬಾತ್ ಮುಗಿಸಿದರೂ ತಾಳ್ಮೆಯಾಗಲಿಲ್ಲ.ಅಲ್ಲಿಂದ ಹೊರಡುವಾಗಲೇ ಸುಮಾರು ಹನ್ನೆರಡಾಗಿತ್ತು. ಮಧ್ಯದಲ್ಲಿ ನನ್ನ ಕಣ್ಣು ನಿದ್ದೆಗೆ ಜಾರುತ್ತಿದ್ದರೂ, ಕಾರು ಓಡಿಸಿದೆ. ಬೆಂಗಳೂರು ತಲುಪಿದಾಗ ಮಧ್ಯ ರಾತ್ರಿ ಎರಡು ಗಂಟೆ. ಬೆಳ್ಳಿಗ್ಗೆ ಕಣ್ಣು ಬಿಡುವುದಕ್ಕೂ ಆಗುತ್ತಿಲ್ಲ. ಅದಾದ ಮೂರನೆಯ ದಿನಕ್ಕೆ ತಿಳಿದದ್ದು, ನನ್ನ ಕಾರಿನ ಟೈರ್ ರಾಂಗ್ ಅಲೈನ್ ಮೆಂಟಿನಿಂದಾಗಿ ಹಾಳಾಗಿದೆ ಎಂದು. ಅಂತೂ ಇಂತೂ ಮೂರ್ನಾಲ್ಕು ಸಾವಿರ ರೂಪಾಯಿ ಕಾರಿಗೆ, ಅಲ್ಲಿ ಹೋಗಿ ಬಂದದ್ದಕ್ಕೆ ಮೂರ್ನಾಲ್ಕು ಸಾವಿರ ಕೈ ಬಿಟ್ಟಿತು.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...