ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

12 September 2015

ನನ್ನ ಜೀವನ ನಿಮ್ಮಿಂದ, ನಿಮ್ಮ ಜೀವನಕ್ಕೆ ಲ್ಯಾಂಡಮಾರ್ಕ್ ನೋಡಿ!!!

ನಾನು ಕಳೆದ ಬ್ಲಾಗ್ಗಿನಲ್ಲಿ ಹೇಳಿದ ಹಾಗೆ, ನಾನು ಇನ್ನು ಮುಂದೆ ನಿಮ್ಮನ್ನು ನನ್ನ ಬರವಣಿಗೆಯ ಮೂಲಕವೇ ಸೇರುವುದಕ್ಕೆ ಬಯಸುತ್ತೇನೆ. ಬರವಣಿಗೆಯ ಜೊತೆಗೆ, ಮಾತುಕತೆಯಲ್ಲಿಯೂ ಇರುತ್ತೇನೆ. ಇದೇನಪ್ಪ, ನಮ್ಮ ಫೋನಿಗೆ ಉತ್ತರ ಹೇಳುವುದಿಲ್ಲವೆಂಬ ಆತಂಕ ಬೇಡ. ನನ್ನದೊಂದು ಕೊಳಕು ಜೀವನ, ಕೊಳಕು ಮನಸ್ಸೆಂಬುದು ನಿಮಗೆ ಮೊದಲು ತಿಳಿದಿತ್ತು ಎನಿಸುತ್ತದೆ. ಆದರೇ, ನಿಜಕ್ಕೂ ನನ್ನ ಕೊಳಕುತನ ನನಗೆ ತಿಳಿದಿರಲಿಲ್ಲ. ಅದೂ ಬೆಳಕಿಗೆ, ಅಂದರೇ ನನ್ನ ಮನಸ್ಸಿಗೆ ಬಂದದ್ದು, ಕಳೆದ ತಿಂಗಳು ಅಂದರೇ, ಜುಲೈ ೨೦೧೫ರಲ್ಲಿ. ಇದೇನಪ್ಪಾ ಇವನು ಮೆಂಟಲ್ ಆಗಿಬಿಟ್ಟನಾ! ಆಶ್ಚರ್ಯ ಅಥವಾ ಪ್ರಶ್ನೆ? ಎರಡು ಒಂದೇ, ಅಥವಾ ನನ್ನ ಉತ್ತರವೂ ಒಂದೇ. ನೀವು ನನ್ನ ಕೆಳಗಿನ ಎಲ್ಲಾ ಸಾಲುಗಳನ್ನು ಸಂಪೂರ್ಣವಾಗಿ ಓದುವ ತನಕ ಯಾವುದೇ ತರ್ಕ ಅಥವಾ ತೀರ್ಮಾನಕ್ಕೆ ಬರಬೇಡಿ. ಓದಿದ ಮೇಲೂ ಯಾವುದೇ ತೀರ್ಮಾನಕ್ಕೂ ಬರಬೇಡಿ, ಅದು ನನ್ನಿಷ್ಟವೆಂದರೇ ನನಗೇನೂ ಇಲ್ಲ ಕಷ್ಟ. 

ನಾನು ಕೆಲಸ ಮಾಡುತ್ತಿದ್ದ, ಸಿಡಿಡಿ ಸಂಸ್ಥೆಯ ಜೊತೆಗೆ ಸ್ವಲ್ಪ ಅಪಸ್ವರವಿತ್ತು. ನಾನು ಇಲ್ಲಿಯ ತನಕ ಕೆಲಸ ಮಾಡಿದ ಎಲ್ಲಾ ಕಡೆಯಲ್ಲಿಯೂ ಇದು ಮಾಮೂಲಿಯಾಗಿತ್ತು. ಆದರೇ, ಸಿಡಿಡಿಯಲ್ಲಿ ಸ್ವಲ್ಪ ಹೆಚ್ಚಿಗೆಯೇ ಇತ್ತು. ಇದಕ್ಕೆ ಕಾರಣ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ತಲೆಯಿಲ್ಲವೆಂಬುದು ನನ್ನ ವಾದ, ತಲೆ ಯಾವುದೆಂಬುದರ ಅರಿವಿಲ್ಲ ಇವನಿಗೆ ಎಂಬುದು ಅವರ ಪ್ರತಿವಾದ. ವಾದ ಪ್ರತಿವಾದಗಳಿಂದ ನನ್ನ ಮತ್ತು ಸಿಡಿಡಿಯ ಸಂಬಂಧ ಸಂಪೂರ್ಣ ಕುಲಗೆಟ್ಟಿತ್ತು. ಇದು ಇಂದಿನದಲ್ಲ, ನಾನು ಸಾಧಾರಣ ಹೈಸ್ಕೂಲಿಗೆ ಕಾಲಿಟ್ಟಾಗಲಿಂದ, ನನಗೆ ಯಾವ ಮಾಸ್ಟರುಗಳು ಅಷ್ಟಾಗಿ ಹಿಡಿಸಿಲ್ಲ. ಅವರೊಂದಿಗೆ ಜಗಳ, ಅವರನ್ನು ಕೆಣಕುವುದು, ರೇಗಿಸುವುದು, ಮನಸ್ಸಿಗೆ ಬಂದಂತೆ ಅನ್ನುವುದು. ಇದು ಮೊದಲಿಗೆ ಶುರುವಾಗಿದ್ದು ಹೈಸ್ಕೂಲಿನ ಮಾಸ್ಟರ ವಿರುದ್ದವಾದರೂ, ನಂತರ ಪಿಯುಸಿಯಲ್ಲಿನ ಪ್ರಭುದೇವ, ಯುವರಾಜ, ಸೋಮಶೇಖರ್, ಯುವರಾಜ ಕಾಲೇಜಿನ ಸುರೇಶ್, ಪದ್ಮಾಜಿ, ಬೆಂಗಳೂರು ವಿವಿಯ ನಂದಿನಿ, ಸುನೀತಾ, ಮತ್ತೆ ನಮ್ಮ ಗುರುಗಳಾದ ಶ್ರೀಕಂಠಸ್ವಾಮಿ, ಐಸೆಕ್ ನ ಲೆನಿನ್, ಐರಾಪ್ ನ ದಿನೇಶ್, ಅರ್ಘ್ಯ್ಂ ನ ವಿಜಯ್, ಡೆವಲಪ್ ಫೌಂಡೇಶನ್ನಿನ ಕುಮಾರ್, ಸಿಎಸ್ ಡಿಯ ಶ್ರೀನಿವಾಸ್, ಕ್ಲೀನ್ ಟೆಕ್ನಾಲಜೀಸ್ ನ ಮಹೇಶ್ವರಿ, ಸಿಡಿಡಿಯ ಸ್ಟಾಂಜೀನ್, ಹೀಗೆ ಎಲ್ಲರೊಡನೆಯೂ ನನ್ನ ಜಗಳಕ್ಕೆ ವಿಷಯ ಹೆಚ್ಚೂ ಕಡಿಮೆ ಒಂದೇ! ಇವರಿಗೆ ನಮ್ಮ ಸೆಕ್ಟರಿನ ಜ್ನಾನವಿಲ್ಲ, ಇವರು ಅನರ್ಹರು. ಇವರಿಗೆ ಮೌಲ್ಯಗಳಿಲ್ಲ, ಅಯೋಗ್ಯರು.
ಜೂನ್ ತಿಂಗಳಲ್ಲಿ, ನಾನು ಮೇಲೆ ತಿಳಿಸಿರುವ ಅರ್ಘ್ಯಂನ ವಿಜಯ್ ಗೆ ಸುಮ್ಮನೆ ಕರೆ ಮಾಡಿದೆ. ಅವರು ಸಿಂಗಾಪುರಕ್ಕೆ ಹೆಚ್ಚಿನ ವಿದ್ಯಾಬ್ಯಾಸಕ್ಕೆ ಹೋಗುತ್ತಿರುವುದರಿಂದ, ನನ್ನ ಎನ್.ಜಿ.ಓಗೆ ಏನಾದರೂ ಸಹಾಯವಾಗಬಹುದು, ಅರ್ಘ್ಯಂ ಕಡೆಯಿಂದ ಎಂಬುದು ನನ್ನ ನಿರೀಕ್ಷೆಯಾಗಿತ್ತು. ವಿಜಯ್ ಗೆ ಕರೆ ಮಾಡಿ ಮಾತನಾಡುವಾಗ, ನಡುವೆ ನನ್ನ ಎಲ್ಲಾ ವಿಷಯಗಳನ್ನು ಕೇಳಿದ. ನಾನು ಮುಚ್ಚು ಮರೆಯಿಲ್ಲದೇ ಎಲ್ಲವನ್ನೂ ಹೇಳಿದೆ. ನಡುವೆ ಅವನು ಲ್ಯಾಂಡ್ ಮಾರ್ಕ್ ಎಂಬುದೊಂದಿದೆ ನೋಡು ಎಂದ. ನಾನು ಮನೆಗೆ ಬಂದು ವೆಬ್.ಸೈಟ್ ನೋಡಿದೆ. ನಿಜಕ್ಕೂ ತಲ ಬುಡ ಅರ್ಥವಾಗಲಿಲ್ಲ. ಮತ್ತೆ ಅವನು ನನಗೆ ಕರೆ ಮಾಡಿದ. ನಾನು ಇಷ್ಟವಯಿತು, ಮುಂದೆ ಒಮ್ಮೆ ಮಾಡುತ್ತೇನೆಂದೆ. ಅವನು ನನ್ನನ್ನು ಲ್ಯಾಂಡ್ ಮಾರ್ಕ್ ನ ಪರಿಚಯದ ವಿಶೇಷ ಸಂಚಿಕೆಗೆ ಬರಲು ಆಹ್ವಾನಿಸಿದ. ನಾನು ನಾಲ್ಕಾರು ಸುಳ್ಳು ಹೇಳಿ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸಿದೆ. ಮೊದಲಿಗೆ, ಮಳೆ ಬರುವಂತಿದೆ ಎಂದೆ. ನಂತರ, ಲೇಟ್ ಆಗುತ್ತದೆಯೆಂದೆ, ಮೀಟಿಂಗ್ ಇದೆಯೆಂದೆ. ಅವನು ಕಾಲ್ ಮಾಡುವುದು, ವಾಟ್ಸಪ್ ಸಂದೇಶಕ್ಕೆ ಉತ್ತರವನ್ನು ಕೊಡಬೇಕೋ ಬೇಡವೋ ಚಿಂತೆಗೀಡಾದೆ. 
ಬಹಳಷ್ಟು ಬಾರಿ ನಾವು ನಮ್ಮ ಸ್ನೇಹಿತರಿಗೆ ನೇರವಾಗಿ ಇಲ್ಲವೆನ್ನುವುದಕ್ಕೆ ಆಗುವುದಿಲ್ಲ. ಆ ಧೈರ್ಯವಿರುವುದಿಲ್ಲ, ಅದರಲ್ಲಿ ನಾನು ಮೊದಲನೆಯವನು. ನಾನು ನನ್ನ ಮನಸ್ಸಿನಲ್ಲಿರುವುದನ್ನು ನೇರ ಹೇಳುವುದಕ್ಕೆ ಹೆದರುವವನು. ನಾನು ಮನೆಯಲ್ಲಿ ನನ್ನ ಹೆಂಡತಿಗೆ ಈ ವಿಷಯ ತಿಳಿಸಿದೆ. ಅವಳೋ, ಮನಸ್ಸಿಗೆ ಬಂದಷ್ಟೂ ಮಂಗಳಾರತಿ ಮಾಡಿದಳು. ನಾನು ಬೇಸರಗೊಂಡು ಒಂದು ಕ್ವಾರ್ಟರ್ ಎಣ್ಣೆ ಹೊಡೆದೆ. ಅವಳು ಬೈಯ್ಯುವುದಕ್ಕೂ ಕಾರಣವಿತ್ತು. ನನ್ನ ಎನ್.ಜಿ.ಓಗೆ ಫಂಡ್ ರೈಸ್ ಮಾಡಿಕೊಡುತ್ತೇನೆಂದು ಐದು ಸಾವಿರದ ಕೆಂಪು ಮತ್ತು ಬಿಳಿ ನಾಮ ಹಾಕಿದ್ದರು. ನಿಮಗೆ ಏನೂ ಗೊತ್ತಿಲ್ಲಾ, ಸುಮ್ಮನೆ ದುಡ್ಡು ವ್ಯಯ ಮಾಡುವುದನ್ನು ಬಿಟ್ಟು ಎಂದು ಚೆನ್ನಾಗಿ ಜಡಾಯಿಸಿದಳು. ಅದು ಸತ್ಯವೇ, ಮದುವೆಯಾಗಿ ಒಂದೂವರೆ ವರ್ಷವಾಗಿದೆ, ಮದುವೆಯ ಆಲ್ಬಮ್ ತಂದಿಲ್ಲ, ಸ್ನೇಹಿತರ ಬಳಿ ಮಾಡಿದ ಸಾಲ ತೀರಿಸಿಲ್ಲ, ಆರು ವರ್ಷದಿಂದ ಎನ್.ಜಿ.ಓ ಅನ್ನುವುದೊಂದಿದೆ ಅದರಲ್ಲಿ ಯಾವೊಂದು ಸರಿಯಾದ ಕೆಲಸ ಮಾಡಿಲ್ಲ, ಅದೆಲ್ಲವೂ ಏಕೆ, ಕಾರಿನ ಹಿಂದಿನ ಲೈಟ್ ಒಡೆದು ಹೋಗಿ ಒಂಬತ್ತು ತಿಂಗಳಾಯಿತು ಅದನ್ನೂ ಹಾಕಿಸಿಲ್ಲ, ಕಾರು ಸರ್ವೀಸ್ ಮಾಡಿಸಿ ಮೂರು ತಿಂಗಳು ಕಳೆಯಿತು ಅದನ್ನು ಮಾಡಿಸಿಲ್ಲ, ಮನೆಯಲ್ಲಿ ನಲ್ಲಿ ರಿಪೇರಿಯಾಗಿ ನಾಲ್ಕು ತಿಂಗಳಾಯಿತು, ಮದುವೆಯ ಸಂದರ್ಭದಲ್ಲಿ ಪುರೋಹಿತ ಸರಿ ಇರಲಿಲ್ಲ, ಅಲಂಕಾರ ಮಾಡುವವನು ಸರಿಯಾಗಿ ಹೂವು ಹಾಕಿರಲಿಲ್ಲ, ಹನೀಮೂನಿಗೆ ಸರಿಯಾದ ಜಾಗಕ್ಕೆ ಕರೆದೊಯ್ಯಲಿಲ್ಲ, ಊಟಿಗೆ ಹೋದರೂ ಅಲ್ಲಿ ಬರೀ ಜಗಳ, ಊರಿಗೆ ಹೋದರೇ ಸ್ನೇಹಿತರ ಜೊತೆ ಸೇರಿ ಕುಡಿಯುವುದ್ ಊರೂರು ಅಲೆಯುವುದು, ಇಷ್ಟೊಂದು ಗುಣಗಳು ಮತ್ತು ಪಟ್ಟಿಗಳು ನನ್ನನ್ನ ಬಣ್ಣಿಸುವಾಗ ಯಾವ ಹೆಂಡತಿಯಾದರೂ ನನ್ನನ್ನು ಜವಬ್ದಾರಿ ಗಂಡಸು ಎನ್ನುವಳೇ!
ನಾನು ಇರಲಾರದೇ ಇರುವವನು ಇರುವೆ ಬಿಟ್ಟುಕೊಂಡ ಹಾಗೇ ಆಯಿತು. ವಿಜಯ್ ಮಾತ್ರ ನನ್ನ ಹಿಂದೆ ಬೀಳುವುದನ್ನು ನಿಲ್ಲಿಸಲಿಲ್ಲ. ನಾನೋ ಸುಮ್ಮನಿದ್ದರೇ ಆಗುತ್ತಿತ್ತು, ಸಾರಿ ಮುಂದಿನ ಸಲ ಗ್ಯಾರಂಟೀ ಎಂದೆ. ಅದಾದ, ಎರಡನೆಯ ದಿನಕ್ಕೆ, ಯಾರೋ ಮಹಾನುಭವ ನನ್ನ ಸ್ಕೂಟರಿಗೆ ಗುದ್ದಿದ, ನಾನು ಬಿದ್ದು ಉಷಾರು ತಪ್ಪಿದೆ. ವಿಜಯ್ ಮಾತ್ರ ಪದೇ ಪದೇ ಕಾಲ್ ಮಾಡುವುದನ್ನು ನಿಲ್ಲಿಸಲಿಲ್ಲ. ಅದರ ಜೊತೆಗೆ ರಿಜಿಸ್ಟ್ರೇಶನ್ ಮಾಡಿಸಬೇಕೆಂದು ಒತ್ತಾಯಿಸಿದ. ಅಯ್ಯೋ ಬರಗಾಲದಲ್ಲಿ ಅಧಿಕ ಮಾಸವೆನ್ನುವಂತಾಯಿತು. ಇದು ಯಾವ ಹಣೆ ಬರಹ ಗುರುವೇ! ನಾನು ಫೋನ್ ಸ್ವಿಚ್ ಆಫ್ ಮಾಡುವುದು, ಸೈಲೆಂಟ್ ಆಗಿ ಇಡುವುದು, ಎಸ್ ಎಂಎಸ್ ಗೆ ಉತ್ತರ ನೀಡದಿರುವುದು ಮಾಡಿದೆ. ಇದು ಮಾಮೂಲಿಯಾಗಿ ನಿಮಗೂ ಮಾಡಿದ್ದೇನೆ. ನಾನು ಸಮಸ್ಯೆ ಬಂದಾಗ ಅದರಿಂದ ಓಡಿ ಹೋಗುವುದನ್ನು ಬಹಳ ಚೆನ್ನಾಗಿ ಅಭ್ಯಸಿಸಿದೇನೆ, ಅದರಂತೆಯೇ ಇಲ್ಲಿಯೂ ಹಾಗೆಯೇ ಮಾಡಿದೆ. ಆದರೇ, ವಿಜಯ್ ನನ್ನನ್ನು ಸುಲಭಕ್ಕೆ ಬಿಡುವಂತೆ ಕಾಣಲಿಲ್ಲ. ಮತ್ತೆ ಮತ್ತೆ ಕರೆ ಮಾಡತೊಡಗಿದ, ನನಗೆ ನನ್ನ ಎನ್.ಜಿ.ಓ ಬಗ್ಗೆ ಆರ್ಘ್ಯಂ ನಲ್ಲಿ ಕೆಟ್ಟದ್ದಾಗಿ ಹೇಳಿದರೆಂಬ ಆತಂಕ. ಕೊನೆಗೆ ಒಂದು ಶನಿವಾರ ಅವರ ಮನೆಯಲ್ಲಿಯೇ ಇಂಟ್ರೂಡಕ್ಸನ್ ಇರುತ್ತದೆಯೆಂದ, ನಾನು ಓಕೆ ಎಂದೆ. ಅಂದು ಹೋಗುವುದಕ್ಕೆ ಹಿಂಜರಿದೆ, ಕಾರಣ ಹುಡುಕಿದೆ, ಮತ್ತೊಮ್ಮೆ ನಿರ್ಧರಿಸಿದೆ, ಇವನು ನನ್ನನ್ನು ಬಿಡುವುದಿಲ್ಲವೆಂದು.
ಶನಿವಾರ ನಾಲ್ಕು ಗಂಟೆಗೆ ಮನೆಯಿಂದ ಹೊರಟೆ, ನನ್ನ ಉದ್ದೇಶ ವಿಜಯ್ ಜೊತೆಗೆ ಮಾತನಾಡಿ, ಎನ್.ಜಿಓಗೆ ಫಂಡ್ ರೈಸ್ ಬಗ್ಗೆ ಸ್ವಲ್ಪ ಟಿಪ್ಸ್ ತೆಗೆದುಕೊಳ್ಳುವುದು. ಅದರಂತೆಯೇ, ಅವನ ಮನೆ ಹುಡುಕಿಕೊಂಡು ತಲುಪುವಾಗ ಐದು ಮೂವತ್ತಾಗಿತ್ತು. ಅವನ ಮನೆ ಇರುವುದು ಐಟಿಸಿ ಬಳಿಯಲ್ಲಿ, ಬಾಣಸವಾಡಿ. ಮನೆ ಒಳಕ್ಕೆ ಹೋದೆ, ನೋಡಿದರೆ ನಾನೊಬ್ಬನೇ! ಅವನು ಮೊದಲು ಹೇಳಿದ್ದು ಐದಾರು ಮಂದಿ ಇರುತ್ತಾರೆಂದು. ನನ್ನನ್ನು ಒಳಕ್ಕೆ ಕರೆದ ಮೇಲೆ, ಒಬ್ಬ ಬಹಳ ಎತ್ತರದ ವ್ಯಕ್ತಿ ಹೆಸರು ಮದನ್, ಪರಿಚಯಿಸಿದ. ನಾನು, ಪರಿಚಯವಿಲ್ಲದವರ ಜೊತೆ ಮಾತನಾಡುವುದು ಕಡಿಮೆ. ಅವರು, ನನ್ನನ್ನು ಬಹಳ ಆತ್ಮೀಯವಾಗಿ ಪರಿಚಯಿಸಿಕೊಂಡು, ಶುರು ಮಾಡಿದರು. ನನ್ನ ಜೀವನ, ಜೀವನಕ್ಕೆ ಬಹಳ ಮುಖ್ಯವಾದದ್ದು, ಅದರಲ್ಲಿನ ಸಮಸ್ಯೆ, ಹೀಗೆ...ನಾನು ನನ್ನ ವೃತ್ತಿ ಜೀವನ ಹಣಕಾಸಿನ ಸಮಸ್ಯೆಯ ಬಗ್ಗೆ ತೆಗೆದುಕೊಂಡೆ. ಅದನ್ನು ಅವರು ವಿವರಿಸಿದ ರೀತಿ ಮೆಚ್ಚುಗೆಯಾಯಿತು. ನಂತರ ನನ್ನನ್ನು ರಿಜಿಸ್ಟರ್ ಮಾಡಲು ಹೇಳಿದರು. ದುಡ್ಡು ಎಲ್ಲಿದೆ!? ದುಡ್ಡಿಲ್ಲ ಆದರೂ ದುಡ್ಡಿಲ್ಲವೆನ್ನಲು ನಾಚಿಕೆ. ಛೀ! ಎಂಥಹ ಬದುಕು ಅಲ್ಲವೇ? ದುಡ್ಡಿದೆ ಎಂದು ಸುಳ್ಳು ಹೇಳುವುದು, ನಾನು ನಿನಗೆ ಅದನ್ನು ಕೊಡಿಸುತ್ತೀನಿ, ಇದನ್ನು ಕೊಡಿಸುತ್ತೀನೆಂದು ಸುಳ್ಳು ಆಶ್ವಾಸನೆ ಕೊಡುವುದು. ದುಡ್ಡಿಲ್ಲವೆಂದರೇ ನೇರ ಹೇಳಬೇಕು, ಅದನ್ನು ಬಿಟ್ಟು ಸುಳ್ಳು ಯಾಕೆ ಹೇಳಬೇಕು. ನಾನು ಬಹಳಷ್ಟೂ ಬಾರಿ ಇಂಥಹದ್ದನ್ನು ಮಾಡಿದ್ದೇನೆ.
ಆ ರಾತ್ರಿ ಕೂಡ ಅದನ್ನೇ ಹೇಳತೊಡಗಿದೆ. ಮುಂದಿನ ತಿಂಗಳು ದುಡ್ಡು ಬರುತ್ತದೆ ಆಗ ಸೇರುತ್ತೇನೆ, ಅದು ಇದು ಎಂದು. ಅವರು ಅನೇಕ ಉದಾಹರಣೆ ನೀಡಿದರು. ನಾನು ಒಪ್ಪಲಿಲ್ಲ. ನಾಚಿಕೆಯಾಯಿತು. ನಂತರ, ಎರಡು ಮೂರು ದಿನಗಳಾಯಿತು. ನಾನು ವಿಜಯ್ ನನ್ನು ತುಂಬಾ ದೂರವಿಟ್ಟೆ. ಅದರ ನಡುವೆ ಪವನ್ ನನ್ನು ಕೇಳಿದೆ, ಅವನು ಅಂಥಹದ್ದು ಇಷ್ಟ ಆದರೇ ಹದಿಮೂರು ವರೆ ಸಾವಿರ ಕಡಿಮೆನಾ ಮಗಾ ಎಂದ. ನಾಲ್ಕೈದು ದಿನಗಳು ಕಳೆದ ನಂತರ ಒಂದು ದಿನ ಇದ್ದಕ್ಕಿದ್ದ ಹಾಗೆ, ವಿಜಯ್ ನನಗೆ ಮೆಸೆಜ್ ಮಾಡಿದ, ನಾನು ನಿಮ್ಮ ಆಫೀಸ್ ಹತ್ತಿರ ಬರುತ್ತೇನೆಂದು. ನನಗೆ ದಿಗಿಲಾಯಿತು. ನಾನು ಆಫೀಸ್ ಹತ್ತಿರ ಯಾರಾದರೂ ಬರುತ್ತಾರೆಂದರೇ ದಿಗಿಲು, ಮರ್ಯಾದೆ ಹೋಗುತ್ತದೆಯೆಂದು. ಅಯ್ಯೊ ಬೇಡ, ಬರುವುದು ಬೇಡ, ನಾನೇ ಕಾಲ್ ಮಾಡ್ತೀನಿ ಎಂದೆ. ಅದರಂತೆಯೇ, ಮುಂದಿನ ಐದು ನಿಮಿಷದಲ್ಲಿ ನಾನು ಕಾಲ್ ಮಾಡಿದೆ. ನಾನು ಬಿಜಿ ಬಿಜಿ ಎನ್ನುತ್ತಿದ್ದವನು, ಅವನು ಬರುತ್ತೇನೆಂದೊಡನೆ ಕರೆ ಮಾಡಿದೆ. ನನಗೆ ಅನಿಸುತ್ತು, ಅಯ್ಯೋ ಎಷ್ಟು ಕೀಳು ಮಟ್ಟದಲ್ಲಿದ್ದೀನಿ ನಾನು! ಅವನು ಹೇಳಿದ, ಪರವಾಗಿಲ್ಲ, ನೀನು ಕಳೆದ ವಾರ ರಿಸ್ಕ್ ತೆಗೆದುಕೊಂಡು ನಮ್ಮನೆ ತನಕ ಬಂದಿಲ್ವಾ? ನಾನು ಬರುವುದರಲ್ಲೇನು, ಬಂದು ನಿನ್ನನ್ನು ಮಾತನಾಡಿಸುತ್ತೇನೆಂದ. ಇದೆಂಥಹ ಪಜೀತಿ ಗುರೂ!
ಅಂತೂ, ಸುಮಾರು ಮೂರು ಘಂಟೆಯ ಹೊತ್ತಿಗೆ ಆಫೀಸಿಗೆ ಬಂದ. ಅವನಿಂದ ನಾನು ಕಲಿಯಬೇಕಿರುವುದು, ತಾಳ್ಮೆ ಮತ್ತು ಕೇಳುವ ಸಾಮರ್ಥ್ಯ. ಅವನು ಬಂದವನು ನಾನು ಹೇಳಿದ ಎಲ್ಲಾ ಸುಳ್ಳುಗಳನ್ನು ಕೇಳಿದ, ಯಾವುದನ್ನು ತಪ್ಪು ಎನ್ನಲಿಲ್ಲ. ಎಲ್ಲದಕ್ಕೂ ಉತ್ತರಿಸಿದ. ಸುಮಾರು ಐದುವರೆ ವರೆಗೂ ಎಂದರೇ ಎರಡು ವರೆ ಗಂಟೆಗಳ ಕಾಲ ಮಾತನಾಡಿದ್ದೇನೆ, ಎಲ್ಲವೂ ನನ್ನಯ ಬಗ್ಗೆ ನನ್ನ ಕೊಳಕು ಜೀವನದ ಬಗ್ಗೆ, ನಾರುತ್ತಿರುವ ಮನಸ್ಸಿನ ಬಗ್ಗೆ, ನನಗೆ ಅಸಹ್ಯ ಹುಟ್ಟಿಸಿದರೂ ಅವನು ತಾಳ್ಮೆಯಿಂದ ಕೇಳಿದ. ಆದರೇ, ನನಗೆ ಅನುಮಾನ ಬಂದಿದ್ದು, ಇವನಿಗೆ ಕಮಿಷನ್ ಸಿಗಬಹುದೇ? ಇಲ್ಲ, ಇಲ್ಲ, ಅವನಲ್ಲಿ ಕೋಟ್ಯಾಂತರ ರೂಪಾಯಿ ದುಡ್ಡಿದೆ, ಅವನಿಗ್ಯಾಕೆ ಈ ಕಮಿಷನ್ ಕೆಲಸ, ಅದರಲ್ಲಿಯೂ ಹದಿಮೂರು ಸಾವಿರಕ್ಕೆ ಇಪ್ಪತ್ತು ಪರ್ಸೆಂಟ್ ಎಂದರೂ ಮುರು ಸಾವಿರ ಅದೊಂದು ದುಡ್ಡೇ ಅವನಿಗೆ! ಇದ್ಯಾವ ಹುಚ್ಚು, ಕ್ರೈಸ್ತನಾಗಿ ಕನ್ವರ್ಟ್ ಮಾಡುವುದೇ? ಇಂಥಹ ನೂರೆಂಟು ಕೆಲಸಕ್ಕೆ ಬಾರದ ಪ್ರಶ್ನೆಗಳು, ಉತ್ತರ ಹುಡುಕುವ ಆತುರವಿಲ್ಲ, ಆದರೂ ಪ್ರಶ್ನೆಗಳು ಜನಿಸುತ್ತಿವೆ, ಹರಿಯುತ್ತಿವೆ, ಎಲ್ಲೆಯಿಲ್ಲದೆ. ಕಟ್ಟ ಕಡೆಯದಾಗಿ ನಾನು ಅವನಿಗೆ ಹೇಳಿದೆ, ನಾನು ನಿನಗೆ ಸುಳ್ಳು ಹೇಳಿದೆ, ನನ್ನ ಬಳಿಯಲ್ಲಿ ದುಡ್ಡಿಲ್ಲ. ನಾನು ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದೇನೆ, ಸಾಲವಿದೆ, ಕುಡಿತದ ದಾಸನಾಗಿದ್ದೇನೆ. ಅವನು ತಾಳ್ಮೆಯಿಂದ ಕೇಳಿ, ನಂತರ, ಚಿಂತಿಸಬೇಡ, ನಾನು ಹಣ ಕಟ್ಟುತ್ತೇನೆ, ನಿನಗೆ ಅನುಕೂಲವಾದಾಗ ಹಿಂದಿರುಗಿಸು ಎಂದ, ಅಯ್ಯೋ ಬೇಡ, ನಾನೇ ಮುಂದಿನ ತಿಂಗಳು ಜೋಡಿಸಿ ಸೇರುತ್ತೇನೆಂದೆ. ಅವನು ನನ್ನ ಹೆಸರು ವಿಳಾಸ ತೆಗೆದುಕೊಂಡು ಹೋದ. ನನ್ನನ್ನು ಆಗಸ್ಟ್ ತಿಂಗಳ ಕೋರ್ಸ್ ಗೆ ಸೇರಿಸಿದ. ಅದಾದ ಮೇಲೆ, ಒಂದು ಬುಧವಾರ, ಲ್ಯಾಂಡ್ ಮಾರ್ಕ್ ಪರಿಚಯದ ಸಂಜೆಯಿದೆ, ಬಾ, ಸತ್ಯ ಸಾಯಿ ಸದನದಲ್ಲಿ ಎಂದ. ನಾನು, ಹೇಗೂ ಸೇರಿದ್ದೀನಿ, ಇನ್ನೇನು, ಚಳಿಯಾದರೇನು ಮಳೆಯಾದರೇನು, ತಿರ್ಮಾನಿಸಿ ಹೋದೆ. ಉದ್ದಕ್ಕೂ ಜನರು, ಹೆಸರಿನ ಪಟ್ಟಿ ಹಾಕಿಕೊಂಡಿದ್ದಾರೆ, ವಿಜಯ್ ಸಿಕ್ಕಿದ ಮಾತನಾಡಿಸಿದೆ. ಏಳು ಗಂಟೆಗೆ ಒಬ್ಬರು ಬಂದರು, ಹೆಸರು ಮಹೇಶ್ ನಂಬಿಯಾರ್, ಎರಡು ಗಂಟೆಗಳು ಮಾತನಾಡಿದರು, ನನಗೆ ಅಲ್ಪ ಸ್ವಲ್ಪ ಅರ್ಥವಾಯಿತು, ಆದರೂ ನನ್ನ ತಲೆಯೊಳಗೆ ಏನೇನೋ ಲೆಕ್ಕಚಾರ, ನನಗೆ ಸರಿಯಾದ ಆದಾಯವಿಲ್ಲ, ಮನೆಯಲ್ಲಿ ಹೆಂಡತಿ ಜೊತೆಗೆ ಬೆಳ್ಳಗ್ಗೆ ಎದ್ದರೇ, ರಾತ್ರಿ ಮಲಗಿದರೆ ಜಗಳ, ಜಗಳ, ಯಾಕೆ ಜಗಳವಾಡುತ್ತಿದ್ದೀವೆಂಬುದು ಗೊತ್ತಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಅವಳು ರೇಗುವುದು, ನಾನು ಬೈಯ್ಯುವುದು, ಥೂ, ಛೀ, ಇದೆಂಥಹ ಬದುಕು ಎಂದು ಬೇಸರವಾಗುವುದು. ಮದುವೆ ಬೇಕಿತ್ತಾ ಎನ್ನುವ ಮಟ್ಟಕ್ಕೆ ಎನಿಸತೊಡಗಿತ್ತು. ಅಲ್ಲಿ ಏನೇನೋ ಹೇಳಿದೆ, ಎಲ್ಲವೂ ನಕರಾತ್ಮಕವಾಗಿಯೇ ಹೇಳಿದ್ದು.
ಅಲ್ಲಿಂದ ಬಂದ ಮೇಲೆ, ನಾನು ಅವನಿಗೆ ಹೇಳಿದೆ, ಹೇಗೂ ನೀನು ನನ್ನನ್ನು ಸೇರಿಸಿದ್ದೀಯಾ, ಆಗಸ್ಟ್ ಯಾಕೆ, ಈ ತಿಂಗಳು, ಅಂದರೇ, ಜುಲೈನಲ್ಲಿಯೇ ಮಾಡುತ್ತೇನೆಂದೆ. ಅವನು ಒಪ್ಪಿದ, ಅದರೊಂದಿಗೆ ಮತ್ತೊಂದು ಷರತ್ತು ವಿಧಿಸಿದ! ನೀನು ಜುಲೈನಲ್ಲಿಯೇ ಮಾಡು, ನಿನಗೆ ಅನುಕೂಲವಾದಾಗ ನನಗೆ ಹಣವನ್ನು ಹಿಂದಿರುಗಿಸು, ಆದರೇ, ಲ್ಯಾಂಡಮಾರ್ಕ್ ಫೋರಂ ಆದಮೇಲೆ ಮುಂದಿನ ಅಡ್ವಾನ್ಸ್ ಕೋರ್ಸ್ ಇದೆ, ಅದನ್ನು ನೀನು ಮಾಡಬೇಕೆಂಬುದು ನನ್ನ ಆಸೆ, ಅದಕ್ಕೆ ಹದಿನಾರು ಸಾವಿರ ರೂಪಾಯಿಯಾಗುತ್ತದೆ. ಇದು ಯಾವುದೋ ಮಾರ್ಕೆಂಟಿಂಗ್ ಜಾಲವೆನಿಸಿತು. ಅದರೊಂದಿಗೆ, ನಾನು ರಜೆ ಹಾಕುವುದಕ್ಕೆ ನಮ್ಮ ಟೀಂ ಲೀಡ್ ರೂಪ ಬಳಿಗೆ ಹೋದೆ, ಅವರು ಯಾಕೆಂದರು. ನಾನು, ಮೊದಲಿಗೆ ಯಾವುದೋ ಟ್ರೈನಿಂಗ್ ಎಂದೆ, ನಂತರ ಹೇಳಿದೆ. ಅವರು "ಅಯ್ಯೋ ನಿಮಗೇನಾಗಿದೆ, ಲ್ಯಾಂಡ್ ಮಾರ್ಕ್ ಮಾಡುವುದಕ್ಕೆ, ಅದು ನಿಮ್ಮಂಥವರಿಗಲ್ಲಾ", ವ್ಯಕ್ತಿ ವಿಕಸನ, ಸಮಸ್ಯೆ ಇರುವವರಿಗೆಂದರು. 
ನಿಮಗೆ ಲ್ಯಾಂಡ್ ಮಾರ್ಕ್ ಬಗ್ಗೆ ತಿಳಿದಿದೆಯೇ? ಎಂದೆ. ಅದಕ್ಕವರು, ಹೌದು, ಅದೊಂದು ಮಾಯಾಜಾಲ, ನಾನು ೨೦೦೭-೦೮ರಲ್ಲಿ ಹೋಗಿದ್ದೆ, ನನ್ನ ಸ್ನೇಹಿತರೊಬ್ಬರು ಸೇರಿಸಿದ್ದರು. ನಾನು ಅವರೊಂದಿಗೆ ಜಗಳವಾಡಿಕೊಂಡು ಬಂದೆ. ಅವರ ಮೆಥಡಾಲಜಿ ಸರಿಯಿಲ್ಲ, ಅದೊಂದು ವೇಸ್ಟ್, ನೀವು ಯಾಕೆ ಬಕ್ರಾ ಆದ್ರಿ ಎಂದರು. ನನಗೆ ದಿಗಿಲಾಗತೊಡಗಿತು, ನಾನು ಹೋಗಿ ಪವನ್ ಬಳಿ ಹೇಳಿದೆ. ಅವನು, ನನಗೆ ಸ್ವಲ್ಪ ಸಮಧಾನ ಮಾಡಿದ, ಮತ್ತು ನಾನು ಸಮಧಾನ ಮಾಡಿಕೊಂಡೆ, ಹಣ ಕೊಟ್ಟಿದ್ದಾನೆ, ಇದು ಮೊದಲನೆಯ ಮೋಸವಲ್ಲ, ಅನೇಕ ಬಾರಿ ಮೋಸ ಹೋಗಿದ್ದೇನೆ, ಇದು ಅದರಲ್ಲಿ ಒಂದು ಎಂದುಕೊಂಡಾರಯಿತೆಂದು ತೀರ್ಮಾನಿಸಿದೆ. ರೂಪ ಅವರ ಬಗ್ಗೆ ಏನನ್ನೂ ಬರೆಯುವುದಿಲ್ಲ, ಅವರಿಗೆ ಲ್ಯಾಂಡ್ ಮಾರ್ಕ್ ನಿಂದ ಯಾವುದೇ ತರಹದ ಉಪಯೋಗವಾಗಿಲ್ಲ ಮತ್ತು ಅವರಿಗೆ ಇಷ್ಟವಾಗಿಲ್ಲವೆನ್ನುವುದು ಸಾವಿರಕ್ಕೆ ಸಾವಿರ ಪಾಲು ಸತ್ಯ. ಅಂತೂ, ಆ ದಿನ ಬಂತು, ಲ್ಯಾಂಡ್ ಮಾರ್ಕ್ ಬಗ್ಗೆ ಏನೂ ತಿಳಿದಿಲ್ಲ. ಮೂರು ದಿನ, ಇರುವುದಕ್ಕೆ ಅಲ್ಲಿಯೇ ಸ್ಥಳ ಕೊಡುತ್ತಾರೋ, ಇಲ್ಲವೋ? ಮನೆಯಿಂದ ಹೊರಟೆ, ಅಂಜಿಕೆಯಿಂದಲೇ ಅಲ್ಲಿಗೆ ಹೋದೆ. ಮೊದಲ ದಿನ ಅಲ್ಲಿಂದ ಹೊರಟು ಬಿಡೋಣವೆನಿಸಿತ್ತು. ವಿಜಯ್ ಗೆ ಫೋನ್ ಮಾಡಿದೆ. ಅವನು ಹೇಳಿದ, ನೀನು ಏನೂ ಮಾಡಬೇಡ, ಸುಮ್ಮನೆ ಕುಳಿತುಕೋ, ಅವರು ಹೇಳುವ ಹೋಂ ವರ್ಕ್ ಮಾಡು, ಅಷ್ಟೇ ಸಾಕೆಂದ. ನಾನು ಅವನಿಗೆ ವಾದ ಮಾಡತೊಡಗಿದೆ. ಆದರೂ, ಒಂದು ಮನಸ್ಸಿಗೆ ಮನವರಿಕೆ ಮಾಡಿದ. ಹರೀಶ್ ಇದು ನಿನ್ನ ಈಗಿರುವ ಗುಣ, ಯಾವುದನ್ನೂ ನೀನು ಸಂಪೂರ್ಣಗೊಳಿಸುವುದಿಲ್ಲ, ನೀನು ಹಾಗೆಯೇ ನಿನ್ನ ಜೀವನವನ್ನು ಹಿಂದಿರುಗಿ ನೋಡು ಎಂದ.
ಹೌದು, ಅದು ಸತ್ಯವೆನಿಸತೊಡಗಿತ್ತು. ನಾನು ಏನೆಲ್ಲಾ ಯೋಜನೆಗಳನ್ನು ಎತ್ತಿಕೊಂಡಿದ್ದರೂ ಯಾವುದನ್ನೂ ಸಂಪೂರ್ಣಗೊಳಿಸುತ್ತಿಲ್ಲ. ಎಲ್ಲವೂ ಅರ್ಧಕ್ಕೆ ನಿಲ್ಲುತ್ತಿವೆ, ನಿಂತಿವೆ. ಒಮ್ಮೆ ನನ್ನ ಮನಸ್ಸಿನ ಮೆಮೋರಿ ಕಾರ್ಡ್ ತೆರೆದೆ. ನಾನು ರಂಗಾಯಣಕ್ಕೆ ಸೇರಲು ಹೋಗಿದ್ದೆ, ಎನ್ ಸಿಸಿ ಗೆ ಸೇರಿದ್ದೇ, ಕಡೆಯ ದಿನ ಕ್ಯಾಂಪ್ ಗೆ ಹೋಗುವ ಮುಂಜಾನೆ ನಿರ್ಧಾರ ಬದಲಾಯಿಸಿದೆ, ಮೆಡಿಕಲ್ ರೆಪ್ ಕೆಲಸಕ್ಕೆ ಹಿಂಜರಿದೆ, ಎಂಎಸ್ಸಿ ಸಮಯದಲ್ಲಿ ಆದರ್ಶ ಇನ್ಸ್ಟಿಟೂಟ್ ಗೆ ಸೇರಿದ್ದೆ, ಅದೆಲ್ಲವು ಯಾಕೆ ನಾನು ಪ್ರಿತಿಸುತ್ತಿದ್ದ ಹುಡುಗಿಗೆ ಪಿಯುಸಿ ಸಮಯದಲ್ಲಿ ಹೇಳುವುದಕ್ಕೆ ಹಿಜರಿದೆ, ವರ್ಷಗಟ್ಟಲೇ ಕಾಯ್ದಿದ್ದೆ, ೨೦೧೩ರಲ್ಲಿ ಇಕ್ರಿಸಾಟ್ ನಲ್ಲಿ ಕೆಲಸಕ್ಕೆ ಸೇರುವುದಕ್ಕೆ ರೈಲು ಹತ್ತಿ ಹಿಂದೂಪುರದ ತನಕ ಹೋಗಿ ವಾಪಾಸ್ಸಾಗಿದ್ದೆ, ಪ್ರೀತಿಸಿದ ಹುಡುಗಿಯ ಮದುವೆಯಾಗಲು ಮನೆಯವರಿಗೆ ವಿಷಯ ಮುಟ್ಟಿಸಲು ಹೆದರಿದ್ದೆ, ಇವೆಲ್ಲವೂ ಹೆದರಿಕೆಯ ಮತ್ತೊಂದು ರೂಪ ಅಥವಾ ಸೋಲಿನ ಭಯ. ದಿಡೀರನೆ ವಾಸ್ತವಕ್ಕೆ ಬಂದೆ, ಇಲ್ಲಾ ಇಲ್ಲಿಗೆ ಬಂದಿರುವುದು ಬದಲಾವಣೆಗೆ ಇಲ್ಲಿಂದಲೂ ಓಡಿದರೇ ಮತ್ತಿನ್ನೆಲ್ಲಿ. ಡೆವಲಪ್ ಫೌಂಡೇಶನ್ ಬಿಟ್ಟಿದ್ದು ಭಯದಿಂದ, ಅಲ್ಲಿಂದ ಓಡಿದೆ, ವರ್ಷಗಟ್ಟಲೇ ಫೋನ್ ಸ್ವಿಚ್ ಆಫ್ ಮಾಡಿದೆ, ಇರುವ ವಿಷಯವನ್ನು ಹೇಳಲು ಹೆದರಿದೆ, ಹಿಂಜರಿದೆ, ಮಾನ ಮರ್ಯಾದೆಯೆಂಬ ಸೋಗನ್ನು ಮುಖವಾಡವಾಗಿಸಿಕೊಂಡೆ, ಇದೆಲ್ಲವೂ ಮೋಸದ ಕೈಗುಣ. ಮತ್ತೆ ಲ್ಯಾಂಡ್ ಮಾರ್ಕ್ ಒಳಕ್ಕೆ ಹೋದೆ.
ಮೊದಲನೆಯ ದಿನ ಮುಗಿಯಿತು, ನನ್ನ ತಲೆಗೆ ಏನೂ ಹತ್ತಲಿಲ್ಲ, ಸ್ವಲ್ಪ ಹೋಂ ವರ್ಕ್ ನೀಡಿದರು. ಮನೆಗೆ ಬಂದೆ, ಮನೆಯಲ್ಲಿ ಹೆಂಡತಿ ಗರಂ, ಮನೆಗೆ ಬಂದಾಗ ಹನ್ನೆರೆಡು ದಾಟಿತ್ತು. ಮುಂಜಾನೆ ಎದ್ದು ಹೋಂವರ್ಕ್ ಮಾಡಿದೆ. ನಾನು, ಮೊದಲೇ ಹೇಳಿದಂತೆ ನನಗೆ ಹಿಡಿಸುವವರ ಜೊತೆಯಲ್ಲಿ ಬಿಟ್ಟು ಮಿಕ್ಕಿದವರ ಜೊತೆಯಲ್ಲಿ ಕುಳಿತುಕೊಳ್ಳುವುದು ಹಿಡಿಸುವುದಿಲ್ಲ. ಲ್ಯಾಂಡ್ ಮಾರ್ಕಿನಲ್ಲಿ, ಇಂಫೋಸಿಸ್ ನ ಸಂಜೋಯ್ ಮತ್ತು ಗುಪ್ತಾ ಎಂಬ ಇಬ್ಬರನ್ನು ಪರಿಚಯ ಮಾಡಿಕೊಂಡೆ. ಅವರನ್ನು ಬಿಟ್ಟರೇ ಇನ್ನೊಂದಿಬ್ಬರು ಪರಿಚಯವಾಗಿದ್ದಿರಬಹುದಷ್ಟೇ! ಹಿಂದಿನ ತಪ್ಪುಗಳು ನಮ್ಮನ್ನು ಭಯದಲ್ಲಿರುಸುತ್ತವೆ. ನಾನು ನನ್ನ ಹಿಂದಿನ ತಪ್ಪಿನಿಂದಾಗಿ, ಹುಡುಗಿಯರನ್ನು ಪರಿಚಯ ಮಾಡಿಕೊಳ್ಳುವುದಕ್ಕೂ ಹೆದರುತ್ತೇನೆ. ಅಂತೂ, ಭಾನುವಾರ ಸಂಜೆಯ ವೇಳೆಗೆ ನನಗೆ ಜೀವನ ಮತ್ತು ಲ್ಯಾಂಡ್ ಮಾರ್ಕ್ ಅದ್ಬುತವೆನಿಸಿದೆವು. ಸೋಮವಾರ ಬೆಳ್ಳಿಗ್ಗೆ ಎದ್ದು ಆಫೀಸಿಗೆ ಹೊರಡುವಾಗ ನನ್ನ ಮುಖವನ್ನು ನೋಡುತ್ತೇನೆ, ನನಗೆ ಆಶ್ಚರ್ಯ. ಅಂಥಹ ಒಂದು ಸೊಗಸು, ಸಂತೋಷ ನನ್ನ ಮುಖದಲ್ಲಿ ನಾನೆಂದೂ ಕಂಡಿರಲಿಲ್ಲ. ಇದೆಲ್ಲವೂ ಹೇಗೆ ಸಾಧ್ಯ, ಅದಕ್ಕೆ ಉತ್ತರ ಲ್ಯಾಂಡ್ ಮಾರ್ಕ್. ಆಫೀಸಿಗೆ ಹೋದೆ, ಎಲ್ಲರ ಜೊತೆಯಲ್ಲಿಯೂ ಬಹಳ ಖುಷಿಯಿಂದ ಮಾತನಾಡಿದೆ, ನನ್ನಲ್ಲಿದ್ದ, ಅಥವಾ ಹೇಳಬೇಕಿದ್ದನ್ನೂ ಶೀವಿದ್ಯಾ ಬಳಿಯಲ್ಲಿ ಹೇಳಿದೆ. ಸಿಡಿಡಿ ಬಿಡುವ ನೈಜತೆಯನ್ನೂ ಒಪ್ಪಿದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ, ನಮ್ಮ ಲ್ಯಾಂಡ್ ಮಾರ್ಕ್ ಫೋರಂ ಲೀಡರ್ ಹೇಳಿದ್ದು.
ನಾನು ಸೀಕೋ ಎಂಬ ಸಂಸ್ಥೆ ಹುಟ್ಟು ಹಾಕಿ ಆರು ವರ್ಷಗಳು ಸಂದಿವೆ, ಆದರೇ, ಅಲ್ಲಿ ಏನೋಂದು ಸರಿಯಾಗಿ ಮಾಡಿಲ್ಲ. ಕಳೆದ ಒಂಬತ್ತು ವರ್ಷದಲ್ಲಿ, ಡ್ರೀಮ್ ಸ್ಕೂಲ್ ಫೌಂಡೇಶನ್, ಐಸೆಕ್, ಐರಾಪ್, ಆರ್ಘ್ಯಂ, ಡಿಎಫ಼್, ಸಿಎಸ್.ಡಿ, ಸಿಟಿ, ಸಿಡಿಡಿ, ಎಂಟು ಸಂಸ್ಥೆಗಳಿಗೆ ಇನ್ ಆಂಡ್ ಔಟ್! ಎಲ್ಲಿಯೂ ನೆಮ್ಮದಿಯಿಲ್ಲ, ಯಾವುದರಲ್ಲಿಯೂ ಖುಷಿಯಿಲ್ಲ. ಪ್ರೀತಿಸಿದವರನ್ನೂ ದೂರುವುದು, ತೂರಾಡುವುದು, ಜನರೊಟ್ಟಿಗೆ ಜಗಳವಾಡುವುದು, ಸ್ನೇಹಿತರಾದರೂ ಸರಿ, ಸ್ನೇಹಿತೆಯಾದರೂ ಸರಿ, ಅಪ್ಪ, ಅಮ್ಮ, ಯಾರೂ ಉಳಿದಿಲ್ಲ, ಎಲ್ಲರೊಂದಿಗೆ ಜಗಳ, ಅದರಿಂದ ಮತ್ತೆ ನೋವು, ನನಗೆ ನೋವು. ಇದೆಲ್ಲಿಯ ತನಕ, ನಾನು ಅಯೋಗ್ಯ ಅದು ನನಗೂ ಗೊತ್ತು ನನಗಿಂತ ಹೆಚ್ಚಾಗಿ ನಿಮಗೆ ಗೊತ್ತು. ನೀವು ನೇರವಾಗಿ ಹೇಳಿದ್ದೀರಾ, ಹೇಳದೇ ಮನಸ್ಸೊಳಗೆ ಲೆಕ್ಕಚಾರ ಹಾಕಿದ್ದೀರಾ ಕೂಡ. ಹರೀಶ ನಂಬಿಕೆಗೆ ಅನರ್ಹ, ಅಯೋಗ್ಯ, ಮುಠಾಳ, ಹಠಮಾರಿ, ಸಮಯೋಚಿತ, ಅವಕಾಶವಾದಿ, ಹೇಡಿ, ಪಲಾಯನವಾದಿ, ಇವೆಲ್ಲವೂ ನಾನಲ್ಲ, ನನ್ನೊಳಗಿರುವ ಗುಣಗಳು. ಅದು ಇಂದು ನಿನ್ನೆಯದಲ್ಲ, ಅದನ್ನು ನಿಲ್ಲಿಸುವುದು ಸುಲಭವಲ್ಲ. ಅದನ್ನು ನಿಲ್ಲಿಸಿ ಮುಂದುವರೆಯಬೇಕಲ್ಲವೇ? ಇದೇ ರೀತಿಯ ನೀತಿಯಿಲ್ಲದ ಜೀವನವಿದ್ದು ಏನು ಪ್ರಯೋಜನ? ಅದಕ್ಕೆ ಉತ್ತರ ಸಿಕ್ಕಿದ್ದು ಲ್ಯಾಂಡ್ ಮಾರ್ಕ್ ನಲ್ಲಿ. ಆದ್ದರಿಂದಲೇ, ನಾನು ನಿಮ್ಮ ಹಿಂದೆ, ಬಿದ್ದು ಲ್ಯಾಂಡ್ ಮಾರ್ಕ್ ಬಗ್ಗೆ ಹೇಳುತ್ತಿರುವುದು. ನೀವು ನನಗಿಂತ ಒಳ್ಳೆಯವರು, ನನ್ನಂಥಹ ಅಯೋಗ್ಯನೇ ಉತ್ತಮ ಬದುಕು ನಿರ್ಮಿಸಿಕೊಳ್ಳಬಹುದೆಂದರೇ, ನಿಮ್ಮಂಥಹ ಬುದ್ದಿವಂತರು ಅಸಾಮಾನ್ಯವಾಗಿ ಬದುಕಬಹುದಲ್ಲವೇ? ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ, ಅದಕ್ಕೆ ಕೀ ಇಲ್ಲಿ ಸಿಗುತ್ತದೆ.
ನನ್ನ ಬದುಕು ಹೇಗೆ ನಶ್ವರವಾಗಿತ್ತೆಂಬುದನ್ನು ನಿಮಗೆ ತಿಳಿಸುತ್ತೇನೆ. ನಾನು ಚಿಕ್ಕವನಾಗಿದ್ದಾಗ ನನ್ನ ತಂದೆ ನನ್ನನ್ನು ನಮ್ಮೂರಿನ ಪಕ್ಕದಲ್ಲಿದ್ದ ಸರಗೂರಿನ ಬ್ರಾಹ್ಮಣರ ಹುಡುಗರಿಗೆ ಹೋಲಿಸಿ ಗೇಲಿ ಮಾಡುತ್ತಿದ್ದರು. ನೋಡು ಬ್ರಾಹ್ಮಣರ ಮಕ್ಕಳನ್ನು, ಹೇಗೆ ಓದುತ್ತವೆ, ಚೆಸ್ ಆಡುತ್ತವೆ, ಇವನು ಕ್ರಿಕೇಟ್ ಅಂತೇ, ತೆಂಗಿನ ಗೊದ್ದಮಟ್ಟೆ ಹಿಡಿದು ಹೋಗ್ತಾನೆ, ಗದ್ದೆ ಹಳ್ಳಕ್ಕೆ. ನೋಡು, ಆ ಶಿವಣ್ಣನ ಮಗನನ್ನು, ವಾಲಿಬಾಲ್ ಸ್ಕೋರ್ ಎಷ್ಟು ಚೆನ್ನಾಗಿ ಹಾಕ್ತಾನೆ, ಇವನು ಆ ದನ ಕಾಯೋ ಹುಡುಗರ ಜೊತೆ ಅಲೆಯೋಕೆ ಹೋಗ್ತಾನೆ. ಅಲ್ಲಿಂದ ಮುಂದುವರೆದು ನನ್ನನ್ನು ಎಂಟನೆಯ ಕ್ಲಾಸಿಗೆ ಇಂಗ್ಲೀಷ್ ಮೀಡಿಯಂ ಗೆ ಹಾಕಿದರು. ನಾನು ನಮ್ಮ ಅಪ್ಪನನ್ನು ದ್ವೇಷಿಸುವುದಕ್ಕೆ ಶುರು ಮಾಡಿದೆ. ಕೋಪವೋ, ಭಯವೋ, ಅಂತೂ ಅವರೊಂದಿಗೆ ಒಳ್ಳೆಯ ಸಂಬಂಧ ಬೆಳೆಯಲಿಲ್ಲ. ಅಮ್ಮನ ಮುಖಾಂತರ ಅರ್ಜಿ ಹಾಕುವುದು ಮಾಮೂಲಿಯಾಯಿತು. ಅವರಿಗೆ ನನ್ನ ಮೇಲೆ ಕೋಪ ಹೆಚ್ಚುತ್ತಾ ಹೋಯಿತು, ನನಗೆ ಅವರ ಮೇಲೆ ಹೇಳಲಾರದ ನಿರುತ್ಸಾಹ, ಜಿಗುಪ್ಸೆ ಬೆಳೆಯಿತು, ಬೆಳೆದು ಹೆಮ್ಮರವಾಯಿತು. ಇದಾವುದೂ ಅಂದು ನನಗೆ ತಿಳಿದಿರಲಿಲ್ಲ. 
ನಾನು ಟಿಸಿಹೆಚ್ ಮಾಡಬೇಕೆಂಬುದು ನನ್ನ ತಂದೆಯ ಆಸೆ, ನಾನು ಬಿಎಸ್ಸಿಗೆ ಸೇರಿದೆ, ಬಿಎಡ್ ಮಾಡು ಎಂದು ಒತ್ತಾಯ ನಾನು ಎಂಎಸ್ಸಿ ಸೇರಿದೆ, ನಾನು ದುಡಿಯುವುದಕ್ಕೆ ಸೇರಲೆಂಬುದು ನನ್ನ ತಂದೆಯ ಆಸೆ, ನಾನು ಪಿಎಚ್ ಡಿ ಆಯ್ಕೆ ಮಾಡಿಕೊಂಡೆ, ಸರ್ಕಾರಿ ಕೆಲಸಕ್ಕೆ ಸೇರು ಎಂದು ಬಲವಂತ, ನಾನು ನನ್ನದೇ ಎನ್.ಜಿಓ ಮಾಡಿದೆ, ಸರ್ಕಾರದ ಕಡೆಗೆ ಹೋಗುವ ಪ್ರಮೆಯವೇ ಇಲ್ಲ. ರಾಜಕೀಯದವರನ್ನು ಬಳಸಿಕೋ ಎಂದು ಅವರ ಬೇಡಿಕೆ, ನಾನು ರಾಜಕಾರಣಿಗಳನ್ನು ಬೈಯ್ಯುತ್ತಾ ಬಂದೆ. ಅವರು ಬಹಳ ಒಳ್ಳೆಯ ಬಟ್ಟೆ ಧರಿಸಬೇಕು, ಕ್ಲೀನ್ ಶೇವ್ ಮಾಡಬೇಕು, ನಾನು ಗಡ್ಡ ಬಿಡುವುದು, ಮನ ಬಂದಂತೆ ಬಟ್ಟೆ ಹಾಕುವುದು ಸರಳತೆಯೆಂಬ ಹೆಸರು ಕೊಟ್ಟೆ. ನಾನು ಯಾರ ಮಾತನ್ನು ಕೇಳುವುದಿಲ್ಲವೆಂದು ನಿರ್ಧರಿಸಿದೆ. ಯಾರು ನನ್ನನ್ನು ಪ್ರಶ್ನಿಸಲು ಬಂದರೇ ಅವರು ನನ್ನ ತಂದೆಯಂತೆಯೇ ಕಾಣತೊಡಗಿದರು. ನನ್ನ ಮೇಲೆ ದರ್ಪ ಮಾಡುತ್ತಿದ್ದಾರೆನಿಸುತ್ತಿತ್ತು. ನನ್ನ ಹೆಂಡತಿ, ಲೈಟ್ ಸ್ವಿಚ್ ಹಾಕಿ ಅಥವಾ ಆಫ್ ಮಾಡಿ ಎಂದಾಗಲೂ ಅಷ್ಟೇ, ನನ್ನ ಮೇಲೆ ದರ್ಪ ಇವಳಿಗೆ ಎಂದು ಮನ ಬಂದಂತೆ ಬಯ್ಯುತ್ತಿದ್ದೆ. 

ನಾನು ಕೆಲಸ ಮಾಡಿದ ಕಂಪನಿಗಳಲ್ಲಿಯೂ ಅಷ್ಟೇ, ನನ್ನ ಕೆಲಸದ ಬಗ್ಗೆ ಕೇಳಿದರೇ ಕೋಪ ಬರುತ್ತಿತ್ತು. ರೇಗುತ್ತಿದ್ದೆ, ಆದ್ದರಿಂದಲೇ ಎಲ್ಲರೊಡನೆಯೂ ಜಗಳ ಕಾಯ್ಯುತ್ತಿದ್ದೆ. ಎಲ್ಲರ ಬಗ್ಗೆಯೂ ಅಸಡ್ಡೆ, ಅದೆಷ್ಟೋ ಜನ ಸ್ನೇಹಿತರನ್ನೂ ಕಳೆದುಕೊಂಡಿದ್ದೇನೆ. ಈಗ ಅದೆಲ್ಲದರ ಅರ್ಥವಾಗಿದೆ. ನಿಮ್ಮಗಳನ್ನು ದುರುಪಯೋಗಪಡಿಸಿಕೊಂಡಿದ್ದಕ್ಕೆ ಕ್ಷಮೆ, ಇದು ಪ್ರಾಯಶ್ಚಿತಕ್ಕೆ ಬರೆಯುತ್ತಿರುವುದಲ್ಲ, ಅಥವಾ ಮಾಡಿದ ತಪ್ಪಿಗೆ ಪಶ್ಚತಾಪವೂ ಅಲ್ಲ. ಬದುಕು ಕೆಟ್ಟದ್ದಾಗಿ ಬದುಕುತ್ತಿರುವುದು ನನಗೆ ತಿಳಿದಿರಲಿಲ್ಲ. ಇದನ್ನೂ ತಿಳಿಸಿದ್ದು ಲ್ಯಾಂಡ್ ಮಾರ್ಕ್. ಅದರ ಜೊತೆಗೆ ನೀವುಗಳು ನೇರವಾಗಿ ಅಥವಾ ಪರೋಕ್ಷವಾಗಿ ನನ್ನ ಜೀವನಕ್ಕೆ ಸಾಕಷ್ಟೂ ಸಹಾಯ ಮಾಡಿದ್ದೀರಿ, ಅದನ್ನು ನಾನು ಈ ಮೂಲಕ ನೆನಪಿಸಿಕೊಳ್ಳುತ್ತಿದ್ದೇನೆ. ಇದರ ಜೊತೆಗೆ, ನಾನು ಆರು ವರ್ಷಗಳಿಂದ ಮಾಡಲಾಗದೇ ಇದ್ದ ಎನ್.ಜಿಓ ಕೆಲಸ ಬಹಳ ಸೊಗಸಾಗಿ ಮುಂದುವರೆದಿದೆ. ಶಿಕ್ಷಣ ಇಲಾಖೆ, ಕೃಷಿ, ನೀರಾವರಿ, ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದೇನೆ. ನನ್ನೆಲ್ಲಾ ಹಳೆಯ ಗುರುಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರೆಲ್ಲರಿಗೂ ವಂದನೆಗಳನ್ನು ಅರ್ಪಿಸಿದ್ದೇನೆ. ಆದ್ದರಿಂದ, ನೀವೂ ಒಮ್ಮೆ ಲ್ಯಾಂಡಮಾರ್ಕ್ ಗೆ ಭೇಟಿ ನೀಡಿ, ಇಷ್ಟವಾದರೇ ಸೇರಿ, ಇಲ್ಲದಿದ್ದರೇ ಬೇಡ. ಆದರೇ, ದೊಡ್ಡ ಕನಸಿಗೆ ದೊಡ್ಡ ಆಟಕ್ಕೆ ಕೋಚ್ ಬೇಕು, ಸಣ್ಣ ಆಟಗಳಿಗೆ ಮೈದಾನವೂ ಬೇಡ, ನೀವು ನಿರ್ಧರಿಸಿ ಯಾವ ಆಟವಾಡಬೇಕೆಂದು.

No comments:

Post a Comment