17 ಆಗಸ್ಟ್ 2017

ಸ್ಮಾರ್ಟ್ ಕ್ಲಾಸ್ ಎಂಬ ಮಾಯೆಗೆ ಆಹುತಿಯಾಗಲೆತ್ನಿಸುತಿಹ ಶಿಕ್ಷಕ ಸಮೂಹ!!!


ಕಲಿಕೆಯನ್ನು ಸುಲಭ ಮಾಡುವುದಕ್ಕಾಗಿ ಸ್ಮಾರ್ಟ್ ಕ್ಲಾಸ್‍ಗಳ ಹಿಂದೆ ಕೆಲವು ಶಾಲೆಗಳು ಬಿದ್ದಿವೆ. ಕಲಿಕೆಯನ್ನು ಸುಲಭ ಮಾಡಲು ಹೋಗಿ, ಶಿಕ್ಷಕರನ್ನು/ಮಕ್ಕಳನ್ನು ಸೋಮಾರಿ ಮಾಡಬಾರದೆಂಬುದು ನನ್ನ ಕಾಳಜಿ. ಅದರ ಜೊತೆಗೆ ಶಿಕ್ಷಕ ಹಾಗೂ ಮಕ್ಕಳ ಸೃಜನಶೀಲತೆ, ಕ್ರಿಯಾತ್ಮಕ ಚಿಂತನೆಗಳು ಮಣ್ಣಾಗಬಾರದೆಂಬುದನ್ನು ಹಿನ್ನಲೆಯನ್ನಾಗಿಟ್ಟುಕೊಂಡು ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ, ತಂತ್ರಜ್ಞಾನದಿಂದ ಕೆಲಸಗಳು ಸುಲಭವಾಗಬೇಕು ಹಾಗೆಂದು ಸೋಮಾರಿಗಳಾಗುವಂತೆ ಮಾಡಬಾರದು. ಏಕೆಂದರೆ, ನಾನು ಗಮನಿಸಿರುವ ಹಾಗೆ ಅಥವಾ ಅನೇಕಾ ತತ್ವಜ್ಞಾನಿಗಳು ಹೇಳಿರುವಂತೆ, ಮನುಷ್ಯ ಔಪಚಾರಿಕ ಶಿಕ್ಷಣದಲ್ಲಿ ಕಲಿತು ತನ್ನನ್ನು ತಾನು ಕುಬ್ಜನಾಗಿಸಿಕೊಳ್ಳುತ್ತಾನೆ ಮತ್ತು ತಾನೇ ನಿರ್ಮಿಸಿದ ಪೆಟ್ಟಿಗೆಯೊಳಗೆ ಬಂಧಿಯಾಗುತ್ತಿದ್ದಾನೆ. ಶಾಲೆಗಳಲ್ಲಿ ಕಲಿತ ಹತ್ತು ಹದಿನೈದು ವರ್ಷದ ಶಿಕ್ಷಣದ ಬಲೆಯಿಂದ ಹೊರಕ್ಕೆ ಬರಲಾಗದೇ ತನ್ನ ಇಡೀ ಆಯಸ್ಸನ್ನು ಕಳೆಯುತ್ತಾನೆ. ತಾನು ಕಲಿತಿದ್ದು ಸರಿಯೋ ತಪ್ಪೋ, ಉಪಯುಕ್ತವೋ ಇಲ್ಲವೋ ಎನ್ನುವ ಗೊಂದಲದಲ್ಲಿಯೇ ಜೀವನ ಸವೆಸುತ್ತಾನೆ. 


ಸ್ಮಾರ್ಟ್ ಕ್ಲಾಸ್ ಅಥವಾ ಕಂಪ್ಯೂಟರ್ ಬಳಸಿ ಕಲಿಸುವುದರ ಕಡೆಗೆ ಸರ್ಕಾರಿ ಮತ್ತು ಖಾಸಗಿ ಎರಡೂ ಶಾಲೆಯ ಶಿಕ್ಷಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅದರ ಕುರಿತು ಸ್ವಲ್ಪ ಬರೆಯೋಣವೆನಿಸಿ ಈ ಬರವಣಿಗೆಯನ್ನು ಬರೆಯುತ್ತಿದ್ದೇನೆ. ಈ ಸ್ಮಾರ್ಟ್ ಕ್ಲಾಸ್‍ಗಳ ಸಾಧಕ ಬಾಧಕಗಳ ಚರ್ಚೆಯನ್ನು ವಿವಿಧ ರೂಪದಲ್ಲಿ ನಿಮ್ಮ ಪ್ರಸ್ತಾಪಿಸುತ್ತಿದ್ದೇನೆ.

ಮೊದಲನೆಯದಾಗಿ, ಶಿಕ್ಷಕರ ಸೃಜನಶೀಲತೆ: ಶಿಕ್ಷಕ ಎಂದರೆ ಸೃಜನಶೀಲತೆಗೆ ಇನ್ನೊಂದು ಹೆಸರು ಎಂದು ನಂಬಿರುವವನು ನಾನು. ಹಾಗೆಯೇ, ನಾನು ಬಹಳ ಗೌರವಿಸುವ ಒಂದು ವೃತ್ತಿ ಎಂದರೇ ಅದು ಶಿಕ್ಷಕನ ವೃತ್ತಿ. ಶಿಕ್ಷಕ ಅಥವಾ ಗುರು ಎಂದರೆ ಕೇವಲ ನಾಲ್ಕು ಅಕ್ಷರ ಕಲಿಸುವುವವನು ಮಾತ್ರವಲ್ಲ. ಅವನೊಬ್ಬ ದೇವರ ರೀತಿ, ನಿರಂತರ ಕಾಯುವ ಕಾಯಕ ಅವನದ್ದು. ಗುರುವೆನ್ನುವವನು ಮಗುವಿಗೆ ನಡೆದಾಡುವ ದೇವರಂತೆಯೇ ಕಾಣುತ್ತಾನೆಂದರೆ ತಪ್ಪಲ್ಲ. ಅದರಲ್ಲಿಯೂ ಎಳೆ ವಯಸ್ಸಿನಲ್ಲಿ ಮಗುವು ಅತಿ ಹೆಚ್ಚು ನಂಬಿದ ಮತ್ತು ವಿಶ್ವಾಸವಿಟ್ಟ ವ್ಯಕ್ತಿ ಅವನ ನೆಚ್ಚಿನ ಗುರು. ಯಾವುದೇ ಸಂಬಂಧಗಳು ಬೆಳೆಯುವುದು ಸಂವಹನದಿಂದ. ಅದರಲ್ಲಿಯೂ, ಗುರು ಮತ್ತು ಶಿಷ್ಯನ ಸಂಬಂಧ ಬೆಳೆಯುವುದು ಮಮತೆಯ ಮಾತುಕತೆಯಿಂದ ಆರೈಕೆ ಪೋಷಣೆಯಿಂದ. ನಾನು ಗಮನಿಸಿರುವ ಹಾಗೆ, ಯಾವೊಬ್ಬ ಶಿಕ್ಷಕ ಶಾಲೆಗೆ ತಲುಪಿತ್ತಿರುವ ಸಮಯದಲ್ಲಿ ಯಾವುದೋ ಮೂಲೆಯಲ್ಲಿದ್ದ ಶಾಲೆಯ ಮಗು ಓಡೋಡಿ ಬರುತ್ತದೆ, ಖುಷಿಯಿಂದ ನಮಸ್ತೆ ಹೇಳುವುದಕ್ಕೆ. ಆ ಮಗು ಬರುವುದು ಭಯದಿಂದ ಅಲ್ಲ ಗುರುವಿನ ಮೇಲಿನ ಪ್ರೀತಿಯಿಂದ, ಅಕ್ಕರೆಯಿಂದ. ತನ್ನ ತಂದೆ ಮನೆಗೆ ಬಂದಾಗಲೂ ಅಷ್ಟು ಅಕ್ಕರೆಯಿಂದ ಹೋಗುತ್ತದೆಯೇ? ಎನ್ನುವುದು ನನ್ನ ಅನುಮಾನ. ಆದ್ದರಿಂದ ಸ್ಮಾರ್ಟ್ ಕ್ಲಾಸ್ ಮಕ್ಕಳೊಡನೆ ಭಾವನೆ ಸಂವಹನಕ್ಕೆ ಮಾರಕವಾಗಬಹುದೇ? ಇದು ನನ್ನ ಆತಂಕವೂ ಹೌದು.

ಎರಡನೆಯದಾಗಿ, ಹೆಚ್ಚು ಗೌರವಿಸುವ ಶಿಕ್ಷಕ ವೃತ್ತಿ ಸ್ಮಾರ್ಟ್ ಕ್ಲಾಸ್ ಹೆಸರಿನಲ್ಲಿ, ಒಂದು ಕಂಪ್ಯೂಟರ್ ಆಪರೇಟರ್ ವೃತ್ತಿ ಆಗಿಬಿಡುತ್ತದೆಯೇ? ಇದು ನನ್ನನ್ನು ಕಾಡುತ್ತಿರುವ ಮತ್ತೊಂದು ಸಂಶಯ. ಏಕೆಂದರೆ, ಸ್ಮಾರ್ಟ್ ಕ್ಲಾಸ್‍ನ ವಿಷಯಗಳನ್ನು ಮತ್ತು ಅದರ ಮಾದರಿಯನ್ನು ಸಿದ್ದಪಡಿಸುವುದು ಯಾವುದೋ ಕಂಪನಿಯಲ್ಲಿ ಕುಳಿತಿರುವ ಯಾರೋ ಒಬ್ಬ ಸಿಬ್ಬಂದಿ. ಅದನ್ನು ತಂದು ನಿಮ್ಮೆಡೆಗೆ ಕೊಡುವುದು ಮತ್ತೊಬ್ಬ ಸಿಬ್ಬಂದಿ, ಅದರ ತರಬೇತಿ ನೀಡುವವನು ಮಗದೊಬ್ಬ. ಅದೆಲ್ಲವೂ ಆದಮೇಲೆ, ನಿಮ್ಮ ಕೆಲಸ ಕಂಪ್ಯೂಟರ್ ಆನ್ ಮಾಡುವುದು, ಪ್ರೋಜೆಕ್ಟರ್ ಆನ್ ಮಾಡುವುದು, ನಂತರ ಆಫ್ ಮಾಡುವುದು. ಇದು ಹೀಗೆ ಮುಂದುವರೆದರೆ, ಮುಂದೊಂದು ದಿನ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಒಂದು ಶಾಲೆಗೆ ಒಬ್ಬರು ಕಂಪ್ಯೂಟರ್ ಆಪರೇಟರ್ ಸಾಕು ಅವರ ಜೊತೆಗೆ ಒಬ್ಬರೋ ಅಥವಾ ಇಬ್ಬರೋ ಶಿಕ್ಷಕರನ್ನು ಕೊಡೋಣ, ಯಾಕೆಂದರೆ ಬೋಧಿಸುವುದೇನು ಇಲ್ಲವಲ್ಲ, ಕೇವಲ ಕಂಪ್ಯೂಟರ್ ಆನ್ ಮತ್ತು ಆಫ್ ಮಾಡುವುದಲ್ಲವೇ ಎಂದರೇ, ನೀವು ಏನು ಮಾಡುತ್ತೀರಿ? ಗುರುವಿನ ಪದವಿಯಿಂದ ದೊಪ್ಪನೆ ಬೀಳುವುದು ಒಬ್ಬ ಸಾಧಾರಣ ಕಂಪ್ಯೂಟರ್ ಆಪರೇಟರ್ ಪದವಿಗೆ? ಅದರ ಜೊತೆಗೆ ಶಿಕ್ಷಣ ಇಲಾಖೆ ಅಥವಾ ಸರ್ಕಾರ ನೀವುಗಳು ಕಂಪ್ಯೂಟರ್ ಬಳಸಿ ಬೊಧಿಸುತ್ತಿರುವಾಗ ನಿಮಗೆ ಶೈಕ್ಷಣಿಕ ಅಬಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ತರಬೇತಿಯ ಅವಶ್ಯಕತೆಯಿರುವುದಿಲ್ಲ ಹಾಗಾಗಿ ಇನ್ನು ಮುಂದೆ ತರಬೇತಿಯನ್ನು ನಿಲ್ಲಿಸಿದರೆ? ನೀವು ಎಲ್ಲಿಂದ ಕಲಿಯುತ್ತೀರಿ? ಅಯ್ಯೋ ಬಿಡಿ ಆ ತರಬೇತಿ ಅನಿವಾರ್ಯತೆ ಏನು ಇರಲಿಲ್ಲವೆನ್ನಬಹುದು. ಆದರೇ, ನಿಮಗೆ ತಿಳಿದೋ ತಿಳಿಯದೆಯೋ ಪ್ರತಿಯೊಂದು ತರಬೇತಿಯಿಂದ ನೀವು ಮುಂದುವರೆಯುತ್ತಾ ಬಂದಿದ್ದೀರಿ. ಇದು ಹೀಗೆ ಮುಂದುವರೆದು, ಕಾಲಾಂತರದಲ್ಲಿ ಶಿಕ್ಷಕರ ಅವಶ್ಯಕತೆಗಿಂತ ಕಂಪ್ಯೂಟರಿನ ಅನಿವಾರ್ಯತೆ ಹೆಚ್ಚಾಗಿ ಡಿಎಡ್, ಬಿಎಡ್ ಕೋರ್ಸ್‍ಗಳು ನಿಂತು ಕೇವಲ ಬಿಟೆಕ್ ಅಥವಾ ಬಿಎಸ್ಸಿ ಕಂಪ್ಯೂಟರ್ ಮಾಡಿರುವವರು ಸಾಕು, ಅವರನ್ನೇ ನೇಮಿಸೋನವೆಂದರೇ? ಶಿಕ್ಷಣ ವ್ಯವಸ್ಥೆ ಎಲ್ಲಿಗೆ ತಲುಪಬಹುದು? ಆಲೋಚಿಸಿ, ಸಾಧ್ಯವಾದರೆ ಅವಲೋಕಿಸಿ. . .

ಈ ಚರ್ಚೆಯ ನಡುವೆ ನಿಮಗೊಂದು ಪ್ರಶ್ನೆ ಉದ್ಭವವಾಗಿರಬಹುದು, ನಾವು ಗಮನಿಸಿರುವ ಹಾಗೆ ಅಥವಾ ಸೀಕೋ ಸಂಸ್ಥೆಯಿಂದ ಕೇಳಿರುವ ಹಾಗೆ ವಿಡಿಯೋ ಮೂಲಕ ಅಥವಾ ಫೋಟೋ ಮೂಲಕ ಆಕರ್ಷಿಕವಾಗಿ ಬೋಧನೆ ಮಾಡಬಹುದು, ಅದು ಮಕ್ಕಳಿಗೆ ಬೇಗ ಮುಟ್ಟುತ್ತದೆ ಎಂದಿದ್ದೀರಿ, ಈಗ ನೀವೇ ಉಲ್ಟಾ ಹೊಡೆಯಬಹುದೇ ಎಂದು. ಹೌದು, ವಿಡೀಯೋ ಮತ್ತು ಫೋಟೋಗಳಿಗೆ ಸಾವಿರ ಸಾಲುಗಳಲ್ಲಿ ಹೇಳದೇ ಇರುವುದನ್ನು ಹೇಳಿಕೊಡುವ ತಾಕತ್ತಿದೆ. ಅದರಲ್ಲಿ ಎರಡು ಅನುಮಾನವಿಲ್ಲ. ಬೇಗ ಮನ ಮುಟ್ಟತ್ತದೆ, ಬೇಗ ಕಲಿಯುತ್ತವೆ. ಆದರೆ, ಯಾರೋ ಮಾಡಿದ ವಿಡಿಯೋ, ಯಾರೋ ಸಿದ್ಧಪಡಿಸಿದ ಚಿತ್ರಗಳ ಮೇಲೆ ಶಿಕ್ಷಕ ಅವಲಂಬಿತನಾದರೇ, ಅವನ ಸೃಜನಶೀಲತೆ ಎಲ್ಲಿ ಮರೆಯಾಯಿತು? ಇದನ್ನು ಸ್ವಲ್ಪ ವಿವರಣೆ ನೀಡಿ ಹೇಳುತ್ತೇನೆ, ಕೆಲವು ಶಿಕ್ಷಕರು ತಾವೇ ಸ್ವತಃ ಅಂತರ್ಜಾಲದಲ್ಲಿ ಹುಡುಕಿ, ತೆಗೆದು ತಂದು ತೋರಿಸುತ್ತಾರೆ ಅಥವಾ ಇನ್ನೂ ಕೆಲವರು ತಾವೇ ಸ್ವತಃ ಒಂದು ವಿಡಿಯೋ ಮಾಡಿ ತೋರಿಸುತ್ತಾರೆ. ಅದರಲ್ಲಿ ಅವರ ಶ್ರಮವಿದೆ, ಏನು ಬೇಕೆನ್ನುವದು ತಿಳಿದಿದೆÉ. ಆದರೆ ಬೇರೆಯವರು ಮಾಡಿ ನಿಮಗೆ ನೀಡಿರುವುದನ್ನು ತೋರಿಸುವಾಗ ನಿಮಗೆ ಬೇಕು, ಬೇಡವೆನ್ನುವ ಹಕ್ಕೂ ಕೂಡವಿರುವುದಿಲ್ಲ. ಅವರು ಮಾಡಿರುವುದು ಸರಿಯೆಂದೇ ತೋರಿಸಬೇಕು, ಅದನ್ನೇ ಬೋಧಿಸಬೇಕು. ನೀವಾಗಿಯೇ ಬೋಧಿಸುವಾಗ ಅನೇಕಾ ಮಾರ್ಗಗಳು ನಿಮಗೆ ಇರುತ್ತವೆ. ಆದರೆ, ಸ್ಮಾರ್ಟ್ ಕ್ಲಾಸ್‍ನಲ್ಲಿ? ವ್ಯತ್ಯಾಸಗಳು ಕಾಣುತ್ತಿವೆಯೇ? ನನ್ನ ವಾದ ನಿಮಗೆ ತಲುಪುತ್ತಿದೆಯೇ?

ಇಷ್ಟಾದಮೇಲೂ, ನಿಮಗೆ ಕಂಪ್ಯೂಟರ್ ಮೂಲಕವೇ ಬೋಧಿಸಬೇಕೆನಿಸಿದರೆ, ಅದೇ ಸರಿ ಎನಿಸಿದರೆ, ತಾವುಗಳೆ ಸಿದ್ಧಪಡಿಸಿ ಅಥವಾ ಈ ದಿನಗಳಲ್ಲಿ ಬಹುತೇಕ ಎಲ್ಲರ ಬಳಿಯಲ್ಲಿಯೂ ಸ್ಮಾರ್ಟ್ ಫೋನಗಳಿವೆ, ಕಡಿಮೆ ದರದಲ್ಲಿ ಇಂಟರ್‍ನೆಟ್ ಇದೆ, ಅದರಲ್ಲಿ ಹುಡುಕಿ ನೀವೆ ಸಿದ್ಧಪಡಿಸಿ ನಿಮ್ಮ ಲ್ಯಾಪ್‍ಟಾಪಿನಲ್ಲಿಯೋ ಅಥವಾ ಕಂಪ್ಯೂಟರ್‍ನಲ್ಲಿಯೋ ತೋರಿಸಿ. ಆಗ ನಿಮ್ಮ ಬಗ್ಗೆ ನಿಮಗೂ ಹೆಮ್ಮೆ ಎನಿಸುತ್ತದೆ, ಹಾಗೇಯೇ ನಿಮ್ಮ ವಿದ್ಯಾರ್ಥಿಗಳಿಗೂ ನಿಮ್ಮಯ ಕಡೆಗೆ ವಿಶೇಷ ಗೌರವ ಬರುತ್ತದೆ. ನಮ್ಮ ಮಾಸ್ಟರು, ನಮಗೋಸ್ಕರ ಕಷ್ಟ ಪಟ್ಟು ಏನೆಲ್ಲಾ ಮಾಡುತ್ತಾರೆ ಗೊತ್ತಾ ಎಂದು ಬೇರೆಯವರಿಗೂ ಹೇಳುತ್ತಾರೆ. ಅದಿಲ್ಲದೇ ಇದ್ದರೆ, ನೀವು ಕಂಪ್ಯೂಟರ್ ಆಪರೇಟ್ ಮಾಡುವುದನ್ನು ನೋಡು ನೋಡುತ್ತಾ ಅವರು ಅದನ್ನು ಕಲಿಯುತ್ತಾರೆ. ಕೆಲವು ದಿನಗಳು ಕಳೆದ ನಂತರ, ಅವರೇ ಹೇಳುತ್ತಾರೆ ಸ್ಮಾರ್ಟ್ ಕ್ಲಾಸಿನ ಕೀ ತೆಗೆದುಕೊಂಡು ಬಾ, ಮಾಸ್ಟರು ಬರೋದು ಏನು ಬೇಡ, ನನಗೆ ಗೊತ್ತು ನಾನೇ ಆನ್ ಮಾಡುತ್ತೇನೆ, ಅದೇನು ಮಹಾಕಾರ್ಯವಲ್ಲವೆನ್ನುತ್ತಾರೆ. ಅಥವಾ ನಿಮ್ಮ ಶಾಲೆಯ ಕೆಲವು ಶಿಕ್ಷಕರು ಪ್ರೊಜೆಕ್ಟರ್ ಆನ್ ಮಾಡಿ ನೋಡುತ್ತಾ ಇರಿ ಎಂದು ಹೇಳಿ ಸಾಫ್ಟ್ ರೂಮಿನಲ್ಲಿರಬಹುದು. ಅತಿ ಹೇಳುವುದು ಬೇಡ ಸದ್ಯಕ್ಕೆ ಇಷ್ಟಿರಲಿ.

ಶಿಕ್ಷಕರ ವಿಷಯದ ನಂತರ, ಮಕ್ಕಳ ವಿಷಯಕ್ಕೆ ಬರೋಣ, ವಿಡಿಯೋ ನೋಡಿ ಪರಿಕಲ್ಪನೆಯ ಬಗ್ಗೆ ಒಂದು ವಿವರಣೆ ಸಿಗಬಹುದು, ಆದರೆ ಅವರು ನೋಡುವ ಸಮಯದಲ್ಲಿ ಬರೆಯುತ್ತಾರಾ? ನೋಟ್ಸ್ ಮಾಡಿಕೊಳ್ಳುತ್ತಾರಾ? ಸಾಧ್ಯವೇ ಇಲ್ಲಾ ಯಾಕೆಂದರೇ, ಯಾವೊಂದು ವಿಡಿಯೋ ನೋಡುವಾಗ ಮಕ್ಕಳು ನೋಟ್ಸ್ ಮಾಡಿಕೊಳ್ಳುವುದು ಕಷ್ಟವೆನಿಸುತ್ತದೆ, ನಮ್ಮ ಬಹುತೇಕ ಮಕ್ಕಳು ಟಿವಿ/ವಿಡಿಯೋ ನೋಡಿರುವುದು ಕೇವಲ ಮನೋರಂಜನೆಗೆ ಮಾತ್ರ, ಹಾಗಾಗಿ ಅವರು ಅದನ್ನು ನೋಡಿ ಆನಂದಿಸುತ್ತಾರೆ ಹೊರತು ಆ ಸಮಯದಲ್ಲಿ ಕಲಿಕೆ ಎನಿಸುವುದಿಲ್ಲ. ಈ ಹಾದಿಯಿಂದ ಮಕ್ಕಳ ಕ್ರಿಯಾತ್ಮಕ ಚಿಂತನೆಗಳಿಗೆ ಪೆಟ್ಟಾಗುತ್ತದೆ. ಅದರಲ್ಲಿಯೂ ಸರ್ಕಾರಿ ಶಾಲಾ ಮಕ್ಕಳು ಮನೆಯಲ್ಲಿ ಹೇಗೆ ಓದಿಕೊಳ್ಳಬೇಕು? ನೋಟ್ಸ್ ಹೇಗೆ? ಅವನ ಪ್ರಪಂಚ ಪರದೆಯೊಳಕ್ಕೆ ಸೀಮಿತವಾಗುತ್ತದೆ.

ಮಕ್ಕಳು ವಿಡಿಯೋ ನೋಡಿ ಆನಂದಿಸುವುದು ತಪ್ಪಲ್ಲ, ಆದರೆ ಅದರ ಜೊತೆಗೆ ಅವರೇ ವಿಡಿಯೋ ಮಾಡುವಂತೆ ಅಥವಾ ಪ್ರಾಯೋಗಿಕವಾಗಿಯೇ ಕಲಿಯುವಂತೆ ಮಾಡುವುದು ಒಳ್ಳೆಯದು. ನಾವು ನಿಜವಾಗಿಯೂ ಮಕ್ಕಳಿಗೆ ಕಲಿಸಲೇ ಬೇಕೆಂದರೆ ಅದಕ್ಕೆ ಉತ್ತಮವಾದ ಅಥವಾ ಕನಿಷ್ಠ ಬಂಡವಾಳ ಹೂಡಿಕೆಯಲ್ಲಿ ಪ್ರಯೋಗಾಲಯ ಹೊಂದುವುದು ಉತ್ತಮ. ಕಂಪ್ಯೂಟರ್ ಶಿಕ್ಷಣವೂ ಸೇರಿದಂತೆ. ಯಾವುದೋ ಒಂದು ವಿಷಯವನ್ನು ನೀವು ಬೋಧಿಸುವಾಗ ವಿಡಿಯೋ ಉಪಯೋಗಿಸುವ ಸ್ಥಳದಲ್ಲಿ ಖುದ್ದಾಗಿ ತಾವೂ ಮಕ್ಕಳೊಡನೆ ಸೇರಿ ಅದರ ಮಾದರಿಯನ್ನು ಸಿದ್ಧಪಡಿಸುವಂತಾದರೇ? ಹೌದು, ಇದೆಲ್ಲಾ ಅತಿಯೆನಿಸಬಹುದು ಅಥವಾ ವಿಭಿನ್ನಾವೆನ್ನಿಸಬಹುದು ಅಥವಾ ನಿಮಗೆ ರೇಜಿಗೆ ಬಂದು ಅಯ್ಯೋ ಬಿಡಿ ಸಾರ್, ಯಾರೋ ಬಂದು ಸ್ಮಾರ್ಟ್ ಕ್ಲಾಸ್ ಹಾಕಿ ಕೊಡುತ್ತಾರೆ, ನಮಗೆ ಸುಲಭ ಆಗುತ್ತೆ, ಮಕ್ಕಳಿಗೂ ಸುಲಭ ಎನ್ನುತ್ತಿದ್ದರೆ, ನನ್ನ ಈ ಎಲ್ಲಾ ಮಾತುಗಳು ನಿಜವಾಗಿಯೂ ನಿಮಗೆ ಎನ್ನುವುದು ದೃಢ.

ಪ್ರಾಯೋಗಿಕವಾಗಿ ಕಲಿಯುವುದರ ಅನುಕೂಲವನ್ನು ಈ ಉದಾಹರಣೆ ಸರಿಯಾಗಿ ವಿವರಿಸಬಹುದು. ಒಂದು ಮಗುವು, ಹತ್ತನೆಯ ವಯಸ್ಸಿನಲ್ಲಿ ಒಮ್ಮೆ ಸೈಕಲ್ ಬ್ಯಾಲೆನ್ಸ್ ಕಲಿತರೆ ಅಥವಾ ಈಜುವುದನ್ನು ಕಲಿತರೆ ಅದು ಎಷ್ಟೇ ವರ್ಷದ ನಂತರವಾದರೂ ಸರಾಗವಾಗಿ ಸೈಕಲ್ ಚಲಿಸಬಲ್ಲದು. ಅರವತ್ತು ದಾಟಿದರೂ ಈಜಬಹುದು. ನಮ್ಮನ್ನೇ ನೋಡಿ, ಕಡೆಯ ಬಾರಿ ನಾವು ಸೈಕಲ್ ಓಡಿಸಿದ್ದು ಯಾವಾಗ? ಬಹುಶಃ ಇಪ್ಪತ್ತು ವರ್ಷಗಳ ಹಿಂದೆ, ನಮ್ಮ ಹೈಸ್ಕೂಲ್ ದಿನಗಳು, ಹೆಚ್ಚೆಂದರೆ ಪಿಯುಸಿ ಟ್ಯೂಷನ್ ದಿನಗಳು, ಆದರೂ ನಮಗೆ ಬ್ಯಾಲೆನ್ಸ್ ಮರೆತಿಲ್ಲ. ಅದೇ ರೀತಿಯಲ್ಲಿ, ಒಂದು ಮಗುವಿನಿಂದ ಯಾವುದಾದರು ಒಂದು ಮಾದರಿ(ವರ್ಕಿಂಗ್ ಮಾಡೆಲ್) ಸಿದ್ಧಪಡಿಸಿ ನೋಡಿ, ಆ ಮಗು ಅದರ ಕೌಶಲ್ಯವನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಈ ಉದ್ದೇಶದಿಂದಲೇ, ನಾವು ಚಟುವಟಿಕೆಯ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಿಸುತ್ತೀವಿ, ಮತ್ತು ಅದರ ಮೂಲಕವೇ ಪರಿಸರ ಶಿಕ್ಷಣವನ್ನು ಅಳವಡಿಸಿಕೊಳ್ಳುವಂತೆ ಬೋಧಿಸುತ್ತೇವೆ. ಸಂರಕ್ಷಣೆಯ ಬಗ್ಗೆ ಅತ್ಯುನ್ನತ ವಿಡಿಯೋಗಳನ್ನು ತೋರಿಸಬಹುದಿತ್ತು. ಅದರಿಂದ ಸಂರಕ್ಷಣೆ ಸಾಧ್ಯವೇ? ಸಾಲುಮರದ ತಿಮ್ಮಕ್ಕನ ಜೊತೆ ನಿಂತು ಫೋಟೋ ತೆಗೆಸಿಕೊಂಡವರೆಲ್ಲಾ ಕನಿಷ್ಠ ಒಂದೊಂದು ಗಿಡ ನೆಟ್ಟು ಬೆಳೆಸಿದ್ದರೂ ಈ ದಿನಕ್ಕೆ ಅದೆಷ್ಟೋ ಮರಗಳಿರುತ್ತಿದ್ದವು. ಆದರೇ ಹಾಗೆ ಮಾಡುವುದು ಬೇಕಿಲ್ಲ ಜನರಿಗೆ. ಯಾರೋ ಬೆಳೆಸಿದ ಮರದಡಿಯಲ್ಲಿ ಗಾಡಿ ನಿಲ್ಲಿಸಿದರೆ ಸಾಕು. ಹಾಗೆಯೇ ಯಾರೋ ಸಿದ್ಧಪಡಿಸಿದ ಪಾಠದ ತೊರಿಸುವುದರಲ್ಲಿ ದೊಡ್ಡಸ್ತಿಕೆ ಎನಿಸುವುದಿಲ್ಲ ನನಗೆ.

ವಿಷಯಾಂತರವಾಗುವುದು ಬೇಡ, ನಿಮಗೆ ಸ್ಮಾರ್ಟ್ ಕ್ಲಾಸ್ ಬೇಕಿರುವ ಉದ್ದೇಶ ಸ್ಪಷ್ಟವಾಗಬೇಕು. ಅದು ನಿಮ್ಮ ಕೆಲಸವನ್ನು ಸುಲಭ ಮಾಡಿಸುವುದಕ್ಕೆ ಬೇಕಾ? ಅಥವಾ ಪರಿಣಾಮಕಾರಿಯಾಗಿ ತಿಳಿಸುವುದಕ್ಕಾ? ಬೇರೆಯವರಿಂದ ತಯಾರಿಸಿದ ಮಾದರಿಗಳು ಎರಡಕ್ಕೂ ಅನ್ವಯವಾಗುದು ಸಾಧ್ಯವಿಲ್ಲ. ನಿಮ್ಮ ಕೆಲಸ ಕಡಿಮೆಯಾದರೇ ಸಾಕೆನ್ನುವುದು ಮೂಲ ಉದ್ದೇಶವಾಗಿರಬೇಕು. ಇದು ನಿಮ್ಮ ಉದ್ದೇಶವೂ ಇರಬಹುದು ಮತ್ತು ಊಹೆಯೂ ಇರಬಹುದು. ಆದ್ದರಿಂದ, ಸ್ಮಾರ್ಟ್ ಕ್ಲಾಸ್ ಅಳವಡಿಸಿಕೊಂಡಿರುವ ಶಾಲೆಗಳ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನೊಮ್ಮೆ ಭೇಟಿ ನೀಡಿ, ಅವರ ಅಬಿಪ್ರಾಯ ಸಂಗ್ರಹಿಸಿ. ಅದರ ಸಾಧಕ ಬಾಧಕಗಳನ್ನು ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಿ. ಪಕ್ಕದ ಜಮೀನಿನವನು ಆಲೂಗೆಡ್ಡೆ ಹಾಕಿದ್ದಾನೆ ತಡಿ ನಾನೂ ಹಾಕುತ್ತೇನೆ ಎನ್ನುವ ಮನೋಭಾವ ಬದಲಾಗಬೇಕು, ಒಂದೊಂದು ಜಮೀನು ವಿಭಿನ್ನಾ. ಅದೇ ರೀತಿ ಒಂದೊಂದು ಶಾಲೆಯೂ ಮತ್ತು ಶಾಲೆಯ ವಿದ್ಯಾರ್ಥಿಗಳು ವಿಭಿನ್ನಾ. ಯಾರೋ ಹಾಕಿಸಿದ್ದಾರೆ, ನಾವು ಹಾಕಿಸೋಣ, ಉಚಿತವಾಗಿ ಸಿಗುತ್ತದೆ ಎನ್ನುವುದನ್ನು ವಿಮರ್ಶಿಸಿಕೊಳ್ಳಿ. ಉಚಿತವಾಗಿ ಸಿಗುವುದನ್ನೆಲ್ಲಾ ಸ್ವೀಕರಿಸುವುದು ಒಳ್ಳೆಯದಲ್ಲ. ಇದಕ್ಕೊಂದು ಉದಾಹರಣೆ ಕೊಡುತ್ತೇನೆ ಕೇಳಿ.

ಒಮ್ಮೆಯೂ ಚಪ್ಪಲಿಯನ್ನು ಕಂಡಿರದ ಒಂದು ಹಳ್ಳಿಗೆ ಒಬ್ಬ ಚಪ್ಪಲಿ ವ್ಯಾಪಾರಿ ಬಂದ. ಎಲ್ಲರೂ ಬಂದು ನೋಡಿದರು, ಕೆಲವರು ಹಾಕಿ ಸ್ವಲ್ಪ ದೂರ ಓಡಾಡಿದರು, ಚೆನ್ನಾಗಿದೆ ಎಂದರು. ಸಂತೋಷವನ್ನು ಪಟ್ಟರು. ಆದರೇ, ಬೆಲೆ ಐದು ರೂಪಾಯಿ ಎಂದಾಗ ಬೇಡವೆಂದು ದೂರ ಸರಿದರು. ಯಾರೊಬ್ಬರೂ ಒಂದೇ ಒಂದು ಜೊತೆ ಚಪ್ಪಲಿ ತೆಗೆದುಕೊಳ್ಳಲಿಲ್ಲ. ಬೇಸರಗೊಂಡ ವ್ಯಾಪಾರಿ ವಾಪಸ್ಸು ಅವನ ಕಂಪನಿಗೆ ಹೋಗಿ ತನ್ನ ಸೋಲನ್ನು ಒಪ್ಪಿಕೊಂಡ. ಕಂಪನಿಯು ಆಲೋಚಿಸಿ ಅದೇ ಹಳ್ಳಿಗೆ ಬೇರೆಯವನನ್ನು ನೇಮಿಸಿತು. ಹೊಸ ವ್ಯಾಪಾರಿ ಬಂದವನೆ ಇಡೀ ಊರಿನ ಎಲ್ಲರನ್ನು ಕರೆದು ಚಪ್ಪಲಿಗಳನ್ನು ಉಚಿತವಾಗಿ ನೀಡಿದ. ಎಲ್ಲರೂ ತೆಗೆದುಕೊಂಡು ಹೋದರು, ಅನುಭವಿಸಿದರು, ಆನಂದಿಸಿದರು. ಎರಡು ಮೂರು ತಿಂಗಳಾಯಿತು, ಚಪ್ಪಲಿಯಿಲ್ಲದೆ ಓಡಾಡುವುದು ಅಸಾಧ್ಯ ಎನ್ನುವಷ್ಟು ಅವರು ಚಪ್ಪಲಿಗಳಿಗೆ ಹೊಂದಿಕೊಂಡರು. ಹೊಸ ಚಪ್ಪಲಿಗಳು ಹಳೆಯದದಾವು, ಸವೆದು ಹೋದವು, ಕೆಲವು ಕಿತ್ತು ಹೋದವು. ಚಪ್ಪಲಿಗಳಿಗೆ ಹೊಂದಿಕೊಂಡಿದ್ದ ಜನರು, ಚಪ್ಪಲಿಯಿಲ್ಲದೆ ನಡೆಯುವುದೇ ಸಾಧ್ಯವಿಲ್ಲವೆಂದು ಅರಿತರು. ಎಲ್ಲರೂ ಒಟ್ಟಾಗಿ ಉಚಿತ ಚಪ್ಪಲಿ ನೀಡಿದ ವ್ಯಾಪಾರಿಯನ್ನು ಹುಡಕತೊಡಗಿದರು. ಕಡೆಗೂ ವ್ಯಾಪಾರಿ ಸಿಕ್ಕಿದಾಗ, ಚಪ್ಪಲಿಗಳು ಸವೆದುಹೋಗಿವೆ, ಬೇರೆ ಚಪ್ಪಲಿಗಳು ಬೇಕು ಎಂದರು. ಅದಕ್ಕೆ ವ್ಯಾಪಾರಿಯು, ಒಂದು ಜೊತೆಗೆ 30ರೂಪಾಯಿ ಆಗುತ್ತದೆ ಎಂದ. ಹಳ್ಳಿಯವರೆಲ್ಲಾ ಸುಸ್ತಾಗಿ ಹೋದರು. ಚಪ್ಪಲಿಗಳಿಲ್ಲದೆ ನಡೆದಾಡುವುದು ದುಸ್ತರವಾಗಿತ್ತು. ವಿಧಿಯಿಲ್ಲದೆ, ಚಪ್ಪಲಿಗಳನ್ನು ಕೊಂಡುಕೊಂಡರು. ಈ ಉದಾಹರಣೆ ಇಲ್ಲಿಗೆ ಏಕೆ? ಅನೇಕರು ಸ್ಮಾಟ್ ಕ್ಲಾಸ್‍ಗಳನ್ನು ಮಾರುವುದಕ್ಕೆ ಬರುತ್ತಾರೆ, ಅವರಲ್ಲಿ ಬಹುತೇಕರು ಇದೇ ವರ್ಗಕ್ಕೆ ಸೇರಿದವರು.

ಅದರಲ್ಲಿಯೂ ಸರ್ಕಾರಿ ಶಾಲೆಗಳಿಗೆ ಬರುವವರು, ಏನನ್ನೂ ಬೇಕಿದ್ದರು ಮಾರಬಹುದು ಅಥವಾ ಏನು ಕೊಟ್ಟರೂ ತೆಗೆದುಕೊಳ್ಳುತ್ತಾರೆಂಬ ಧೋರಣೆಯಿಂದಲೇ ಬರುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ದಡ್ಡರು ಅಥವಾ ಸುಲಭವಾಗಿ ವಂಚಿಸಬಹುದೆಂಬುದು ದೃಢವಾಗಿರುವಂತೆ ಕಾಣುತ್ತವೆ. ಇದರ ಕುರಿತ ಚರ್ಚೆಯನ್ನು ಇನ್ನೂ ಆಳಕ್ಕೆ ಇಳಿಸೋಣ. ಇದು ಸ್ಮಾರ್ಟ್ ಕ್ಲಾಸ್‍ಗೆ ಮಾತ್ರ ಅನ್ವಯವಲ್ಲ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣದ ವಿಷಯವನ್ನು ಒಮ್ಮೆ ನೋಡೋಣ. ಐಸಿಟಿ ಯೋಜನೆಯಡಿಯಲ್ಲಿ ಕಂಪ್ಯೂಟರ್ ತೆಗೆದುಕೊಂಡ ಎಷ್ಟು ಶಾಲೆಗಳಲ್ಲಿ, ಕಂಪ್ಯೂಟರ್‍ಗಳು ಚಾಲ್ತಿಯಲ್ಲಿವೆ? ಈ ಯೋಜನೆಯಡಿಯಲ್ಲಿ, ಕಂಪ್ಯೂಟರ್, ಬ್ಯಾಟರಿ/ಯುಪಿಎಸ್, ಪ್ರಿಂಟರ್ ಎಲ್ಲವನ್ನೂ ನೀಡಿತ್ತು. ಕನಿಷ್ಟ ಒಂದು ಶಾಲೆಯಲ್ಲಿ ಒಬ್ಬರಾದರೂ ಶಿಕ್ಷಕರು ಕಂಪ್ಯೂಟರ್ ಜ್ಞಾನವಿದ್ದವರು ಇದ್ದರು, ಅವರು ಅದನ್ನು ನಿಭಾಯಿಸಬಹುದಿತ್ತು. ಅದಿಲ್ಲದೇ ಇದ್ದರೆ, ಎಸ್‍ಡಿಎಂಸಿ ಮೂಲಕ ಅಥವಾ ದಾನಿಗಳ ಸಹಾಯದಿಂದ ಸ್ಥಳಿಯ ಒಬ್ಬ ಕಂಪ್ಯೂಟರ್ ಆಪರೇಟರ್ ಅನ್ನು ನೇಮಿಸಕೊಳ್ಳಬಹುದಿತ್ತು. ಕನಿಷ್ಟ ಯುಪಿಸ್‍ಗಳಿಗೆ 20ರೂಪಾಯಿಗಳ ಡಿಸ್ಟಿಲ್ ನೀರು ಹಾಕಿ ಅದೇ ಯುಪಿಸ್‍ಗಳನ್ನು ಶಾಲೆಯ ಬಳಕೆಗೆಗಾದರೂ ಬಳಸಬಹುದಿತ್ತು. ಅದ್ಯಾವುದನ್ನು ಮಾಡಲು ಶಿಕ್ಷಕರು ಮುಂದೆ ಬರಲಿಲ್ಲ, ನೋಡ ನೋಡುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿಗಳ ಕಂಪ್ಯೂಟರ್‍ಗಳು ನಿರುಪಯುಕ್ತವಾದವು. ಇಂದಿಗೂ ಕಂಪ್ಯೂಟರ್‍ಗಳು ಮತ್ತು ಅದನ್ನು ಇರಿಸಿರುವ ಕೊಠಡಿ ಯಾವುದಕ್ಕೂ ಉಪಯೋಗವಿಲ್ಲದೇ ಉಳಿದಿವೆ. ಇದಕ್ಕೇ ಜವಬ್ದಾರರಾರು?

ಮುಂದೊಂದು ದಿನ ಈ ಸ್ಮಾರ್ಟ್ ಕ್ಲಾಸ್‍ಗಳು ಅದೇ ಹಾದಿಯನ್ನು ಹಿಡಿಯುವುದಿಲ್ಲವೆನ್ನುವುದಕ್ಕೆ ಏನು ಸಾಕ್ಷಿ? ಸಿಲಬಸ್ ಬದಲಾಯಿತು ಎಂದಿಟ್ಟುಕೊಳ್ಳೋಣ ಅಥವಾ ನಿಮ್ಮ ಹೆಚ್‍ಎಂ ವರ್ಗಾವಣೆಯಾದರು ಎಂದುಕೊಳ್ಳೋಣ, ಅಷ್ಟು ದೂರಕ್ಕೆ ಬೇಡ ನಿಮಗೆ ಸ್ಮಾರ್ಟ್ ಕ್ಲಾಸ್ ನೀಡಲು ಬರುವ ಕಂಪನಿಯ ಪ್ರಬಂಧಕ ಬದಲಾದರೇ ಸಾಕು. ಚಪ್ಪಲಿ ವ್ಯಾಪಾರಿಯನ್ನು ಹುಡುಕುವಂತೆ ಹುಡುಕಬೇಕಾದೀತು. ಇದು ಶಾಲಾ ಮಟ್ಟದಲ್ಲಿ ಅನುಮತಿ ನೀಡಿದ್ದರೆ, ಇಲಾಖೆಯೂ ಮುಂದೆ ಬರುವುದಿಲ್ಲ. ಬಂದರೂ ಇರೋ ತಲೆನೋವಿನ ಜೊತೆಗೆ ಇದನ್ನು ಸೇರಿಸಿಕೊಳ್ಳಲು ಸಿದ್ಧರಿರುವುದಿಲ್ಲ. ಇದಕ್ಕೆ ಅನುಗುಣವಾಗುವ ನನ್ನ ಒಂದು ಅನುಭವವನ್ನು ಹೇಳುತ್ತೇನೆ. ನಾನು ನನ್ನ ಮನೆಗೆ ಕುಶಾಲನಗರದ ಒಂದು ಅಂಗಡಿಯವನ ಕಡೆಯಿಂದ ಸೋಲಾರ್ ಹಾಕಿಸಿದ್ದೆ. ಕೆಲವು ತಿಂಗಳ ನಂತರ ನಮ್ಮ ಮನೆಗೆ ಸೋಲಾರ್ ಹಾಕಲು ಬಂದಿದ್ದ ಹುಡುಗ ಆ ಅಂಗಡಿಯ ಕೆಲಸ ಬಿಟ್ಟಿದ್ದ, ಅವನು ಬಿಟ್ಟ ಮೇಲೆ ನಮ್ಮ ಮನೆಯ ಸೋಲಾರ್ ರಿಪೇರಿಗೆ ಅಥವಾ ಮೆಂಟೆನೆನ್ಸ್‍ಗೆ ಎಷ್ಟು ಪರದಾಡಿದೆ ಎಂದರೇ ಯಾಕಪ್ಪ ಬೇಕಿತ್ತು ಎನಿಸಿಬಿಡ್ತು. ಅವರು ಕೊಟ್ಟಿದ್ದ ಆಶ್ವಾಸನೆಗಳೆಲ್ಲಾ ಮರೆಯಾದವು. ಒಂದು ಬಲ್ಬಿಗೆ 600-700 ಪಾವತಿಸುವ ಮಟ್ಟಕ್ಕೂ ಹೋಗಬೇಕಾಯಿತು.

ಇದಕ್ಕೆ ಇನ್ನೊಂದು ಉದಾಹರಣೆ ನೀಡುತ್ತೇನೆ, ನಮ್ಮ ಸಂಸ್ಥೆಯ ವತಿಯಿಂದ ಕಳೆದ ವರ್ಷ 2016ರ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನ ಹೊರವಲಯದ ಕಡಬಗೆರೆ ಪ್ರೈಮರಿ ಮತ್ತು ಹೈಸ್ಕೂಲಿಗೆ ಶುದ್ಧ ನೀರಿನ ವ್ಯವಸ್ಥೆ ಮಾಡಿದ್ದೆವು. ಘಟಕ ಹಾಕಿದ್ದ ಕಂಪನಿಯವರು ಅದರ ನಿರ್ವಹಣೆ ಮಾಡುವುದಾಗಿಯೂ ಹಣ ಪಡೆದರು, ಕೆಲವು ತಿಂಗಳ ನಂತರ ಪ್ರಶಾಂತ್ ಎನ್ನುವ ಹುಡುಗ ಕೆಲಸ ಬಿಟ್ಟ, ಅದಾದ ನಂತರ ಅವರ ಕಛೇರಿ ಕೂಡ ಬೇರೆ ಕಡೆಗೆ ಸ್ಥಳಾಂತರಿಸಿದರು. ನಾವು ಅವರನ್ನು ನಂಬಿ, ವಾಟರ್ ಫಿಲ್ಟರ್ ಹಾಕಿಸಿ ಸರ್ಕಾರಿ ಶಾಲೆಯ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ನಂಬಿದಕ್ಕೆ ಅವರ ಹಿಂದೆ ಸುತ್ತಾಡಿ ಅವರನ್ನು ಹಿಡಿಯುವುದೇ ಒಂದು ಬೃಹತ್ ಯೋಜನೆಯಾಯಿತು. ಈ ರೀತಿಯ ಹಲವಾರು ಅನುಭವಗಳು ನನ್ನ ನೆನಪಿನ ಹೊತ್ತಿಗೆಯಲ್ಲಿಯೇ ಇವೆ.

ಈಗ ಮುಂದಿನ ವಿಷಯವಾದ ಹಣಕಾಸಿನ ವೆಚ್ಚಕ್ಕೆ ಬರೋಣ. ಎಲ್ಲಾ ಯೋಜನೆಯಲ್ಲಿಯೂ ಬಹಳ ಮುಖ್ಯವಾದ್ದು ಹಣಕಾಸು. ನಮ್ಮಲ್ಲಿ ಹಣಕಾಸು ವ್ಯವಹಾರ ಎಂದರೇ ಸಾಕು, ಇದೇನು ವ್ಯಾಪಾರನಾ? ಎನ್ನುತ್ತಾರೆ. ನಮ್ಮ ಈ ನಿರ್ಲಕ್ಷ್ಯದಿಂದಲೇ ಈ ದಿನ ಸರ್ಕಾರದ ಬೊಕ್ಕಸದಿಂದ ಅಂಕೆಯಿಲ್ಲದೆ ಪೋಲಾಗುತ್ತಿರುವುದು. ನನ್ನ ದೃಷ್ಠಿಯಲ್ಲಿ ಪ್ರತಿಯೊಂದು ಯೋಜನೆಯು ಆರ್ಥಿಕ ಲಾಭವನ್ನು ನೋಡಿಕೊಂಡು ಸಿದ್ಧಪಡಿಸಬೇಕು. ಎಷ್ಟು ಮೊತ್ತದಲ್ಲಿ ಏನನ್ನು ಸಾಧಿಸುತ್ತೇವೆ? ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಮತ್ತು ಅದೇ ಗುಣಮಟ್ಟವನ್ನು ಕಾಪಾಡುವುದಕ್ಕೆ ಆಗುವುದೇ? ಕಡಿಮೆ ದುಡ್ಡು ಎಂದಾಕ್ಷಣ ಮನಸ್ಸಿಗೆ ಬರುವುದು ಕಳಪೆ ಗುಣಮಟ್ಟ, ಸರ್ಕಾರಿ ಶಾಲೆ ಉಚಿತ ಶಿಕ್ಷಣ ಎಂದಾಕ್ಷಣ ಕಡಿಮೆ ಗುಣಮಟ್ಟ ಎನ್ನುವ ಚಾಲಿಯಿದೆ. ಕಡಿಮೆ ಖರ್ಚು ಸರ್ಕಾರಿ ಆಸ್ಪತ್ರೆ ಎಂದರೆ ಸಾಕು ಕಳಪೆ ಆರೋಗ್ಯ ಎನ್ನುತ್ತಾರೆ. ಹೆಚ್ಚು ಹಣ ಖರ್ಚು ಮಾಡಿದರೆ ಹೆಚ್ಚು ವಿದ್ಯಾಬ್ಯಾಸ ಸಿಗುತ್ತದೆ, ಹೆಚ್ಚು ದುಡ್ಡು ಕೊಟ್ಟರೆ ಹೆಚ್ಚು ಆರೋಗ್ಯವೆನ್ನುವುದು ಸುಳ್ಳು ಎನ್ನುವ ಅರಿವು ಬರಬೇಕು. ಕಡಿಮೆ ಹಣಕಾಸಿನಲ್ಲಿಯೂ ಗುಣಮಟ್ಟವನ್ನು ಕಾಪಾಡಬಹುದು, ಸೋರಿಕೆಯನ್ನು ತಡೆಯಬೇಕಷ್ಟೆ. ನಾನು ಬಹಳ ದಿನದ ನಂತರ ಬರೆಯುತ್ತಿರುವುದರಿಂದಲೋ ಏನೋ, ವಿಷಯಾಂತರವಾಗುತ್ತಿದೆ, ಇಲ್ಲದಿದ್ದರೂ ನಾನು ಸುತ್ತಿ ಬಳಸಿ ವಿಷಯ ಹೇಳುವುದು ಹೆಚ್ಚು. ಮಠ ಸಿನೆಮಾ ರೀತಿ ಉಪಕಥೆಗಳು ಜಾಸ್ತಿ, ಅದರಿಂದಲೇ ಸಿನೆಮಾ ಚೆನ್ನಾಗಿದ್ದರೂ ಓಡಲಿಲ್ಲ.

ಈಗ ನೇರ ಹಣಕಾಸಿನ ವಿಷಯಕ್ಕೆ ಬರೋಣ: ಒಂದೊಮ್ಮೆ ಒಂದು ಶಾಲೆಗೆ 80-90 ಸಾವಿರ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಹಾಕಿಸಿದರೆ, ಅದರಿಂದ ಆಗುವ ಲಾಭಗಳೇನು? ಎಷ್ಟು % ಫಲಿತಾಂಶ ಹೆಚ್ಚಾಗಬಹುದು? ಬಹುತೇಕ ಶಾಲೆಗಳ ದೃಷ್ಠಿ ನೇರವಾಗಿ ಪರಿಕ್ಷೆಯ ಮತ್ತು ಫಲಿತಾಂಶದ ಕಡೆಗೆ ಇರುತ್ತದೆ. ಇದು ತಪ್ಪಲ್ಲ, ಇಲಾಖೆ ಕೇಳುವುದು ಅದನ್ನೆ. ಆದ್ದರಿಂದ, ಕಂಪನಿಯವರು ನಿಮಗೆ ಭರವಸೆ ಕೊಡುತ್ತಾರಾ? ಸ್ಮಾರ್ಟ್ ಕ್ಲಾಸಿನಿಂದ ಕಲಿತರೆ, ಕನಿಷ್ಠ ಇಷ್ಟು % ಫಲಿತಾಂಶ ಹೆಚ್ಚಳವಾಗುತ್ತದೆ ಎಂದು? ಅಥವಾ ನಿಮಗೆ ಆ ಭರವಸೆ ಇದ್ಯಾ? ನಿಮಗೆ ಆ ಭರವಸೆಯಿದ್ದರೆ ನಾನು ನಿಮ್ಮನ್ನು ಬೆಂಬಲಿಸುತ್ತೇನೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುತ್ತೇನೆ. ಕೆಲವು ಶಿಕ್ಷಕರು ಟ್ಯೂಷನ್ ಮಾಡುತ್ತಾರೆ, ಅವರು ನಿಮಗೆ ಭರವಸೆ ಕೊಡುತ್ತಾರೆ ನಮ್ಮಲ್ಲಿ ಟ್ಯೂಷನ್‍ಗೆ ಬಂದರೆ ಕನಿಷ್ಟ ಇಷ್ಟು % ಬಂದೇ ಬರುತ್ತದೆ ಎಂದು. ಅದಕ್ಕಾಗಿಯೇ ಅಲ್ಲಿಗೆ ಪೋಷಕರು ಟ್ಯೂಷನ್‍ಗಾಗಿ ತಮ್ಮ ಮಕ್ಕಳನ್ನು ಕಳುಹಿಸುವುದು. ಮತ್ತು ಅದನ್ನು ಬಹುತೇಕ ಅವರು ಸಾಧಿಸಿ ತೋರಿಸುತ್ತಾರೆ, ಇಲ್ಲದಿದ್ದರೇ ಆ ಟುಟೋರಿಯಲ್ ಮುಚ್ಚಬೇಕಾಗುತ್ತದೆ. ಅಥವಾ ಅವರನ್ನು ಹೀಗೆ ಕೇಳೋಣ, 90 ಸಾವಿರ ರೂಪಾಯಿಗಳಿಗೆ ಒಪ್ಪಿಗೆಯಿದೆ, ನಮ್ಮ ಶಾಲೆಯಲ್ಲಿ ಕಳೆದ ವರ್ಷ ಇಷ್ಟು % ಫಲಿತಾಂಶವಿತ್ತು, ಅದಕ್ಕಿಂತ ಹೆಚ್ಚಾದರೆ ಅದು ನಿಮ್ಮಿಂದಲೇ ಎನ್ನುವುದನ್ನು ಒಪ್ಪುತ್ತೇವೆ. ಫಲಿತಾಂಶ ಬಂದ ನಂತರ ನಾವು ನಿಮಗೆ ಬಡ್ಡಿ ಸಮೇತ ಕೊಡುತ್ತೇವೆಂದು? ಆಲೋಚಿಸಿ ನೋಡಿ. ಹಾಕಿದ ಹಣಕ್ಕೆ ತಕ್ಕ ಲಾಭ ಹಾಕಬೇಕಲ್ಲವೇ? ಬೆಂಗಳೂರಿನಲ್ಲಿ ಪಿಝಾ ಹಟ್ ಕಂಪನಿಯವರು, ಅವರು ಹೇಳಿದ ಸಮಯಕ್ಕಿಂತ ತಡವಾಗಿ ನಿಮಗೆ ಪಿಝಾ ಡಿಲಿವರಿ ನೀಡಿದರೆ ಅದರ ಹಣವನ್ನು ಪಡೆಯುವುದಿಲ್ಲ. ಏಕೆಂದರೆ ಅವರ ವಸ್ತುವಿನ ಬಗ್ಗೆ ಅವರಿಗೆ ನಂಬಿಕೆಯಿದೆ. ಅದೇ ರೀತಿ ಸ್ಮಾರ್ಟ್ ಕ್ಲಾಸ್ ನೀಡುವ ಕಂಪನಿಯವರಿಗೂ ಇರಬೇಕಲ್ಲವೇ?

ನಾನು ಮೇಲಿನದ್ದೆಲ್ಲಾ ಹೇಳಿದ ಮೇಲೆ, ಪ್ರಮುಖವಾದ ಒಂದಿಷ್ಟು ವಿಷಯಗಳನ್ನು ಸರ್ಕಾರಿ ಶಾಲೆಗಳನ್ನು ಗಮನದಲ್ಲಿರಿಸಿಕೊಂಡು ಹೇಳುತ್ತೇನೆ. ನೀವುಗಳು ಖಾಸಗಿ ಶಾಲೆಗಳೊಂದಿಗೆ ಒಮ್ಮೆ ಹೋಲಿಕೆ ಮಾಡಿ ನೋಡಿ, ಏಕೆಂದರೆ ಶಾಲೆಯ ದಾಖಲಾತಿ ಇದೇ ರೀತಿ ಕುಸಿಯುತ್ತಾ ಬಂದರೆ ಸರ್ಕಾರಿ ಶಾಲೆಗಳು ಮುಚ್ಚುವುದು ಖಚಿತ. ನಾನೂ ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಹಲವರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅದು ಯಾವುದೆಂದರೇ, ಒಂದು ಮಗುವಿನ ಕಲಿಕೆಗೆ ಸರ್ಕಾರಿ ಶಾಲೆಯಲ್ಲಿ ಆಗುತ್ತಿರುವ ಖರ್ಚೆಷ್ಟು ಮತ್ತು ಖಾಸಗಿ ಶಾಲೆಯಲ್ಲಿ ಆಗುತ್ತಿರುವ ಖರ್ಚೆಷ್ಟು? ನಿಮಗೆ ಅಚ್ಚರಿಯಾಗಬಹುದು, ಸರ್ಕಾರಿ ಶಾಲೆಗಳ ಖರ್ಚು, ಖಾಸಗಿಯವರದಕ್ಕಿಂತ ದುಪ್ಪಟ್ಟಾಗುತ್ತಿದೆ. ನಾನು ಸುಳ್ಳು ಹೇಳುತ್ತಿಲ್ಲಾ ನೀವೇ ನಿಮ್ಮ ಶಾಲೆಯ ಅಂಕಿ ಅಂಶಗಳನ್ನು ಬರೆದುಕೊಂಡು ಲೆಕ್ಕ ಹಾಕಿ. ಕಟ್ಟಡ ಖರ್ಚು (50ರಿಂದ60ಲಕ್ಷಗಳು), ವೇತನ (35ಸಾವಿರ*7ಜನರು=2ಲಕ್ಷದ ನಲ್ವತ್ತೈದು ಸಾವಿರ ರೂಪಾಯಿಗಳು, ಒಂದು ತಿಂಗಳಿಗೆ, ವಿದ್ಯಾರ್ಥಿಗಳ ಸಂಖ್ಯೆ 50-60, ಇದನ್ನೇ ಖಾಸಗಿ ಶಾಲೆಯಲ್ಲಿ ಶಿಕ್ಷಕರ ವೇತನ-10ಸಾವಿರ ಗರಿಷ್ಠ, ವಿದ್ಯಾರ್ಥಿಗಳ ಸಂಖ್ಯೆ 500-600 ಕನಿಷ್ಠ), ಶಿಕ್ಷಕರ ತರಬೇತಿ ಖರ್ಚು? ವಿವಿಧ ಕಾರ್ಯಕ್ರಮಗಳ ಖರ್ಚು? ಮುಂದೊಂದು ದಿನ ಸರ್ಕಾರ ಖಾಸಗಿ ಶಾಲೆಗಳು ಮಾತ್ರ ನಡೆಯಲಿ, ಖಾಸಗಿ ಶಾಲೆಯಲ್ಲಿ ಓದುವ ಬಡವರ ಮಕ್ಕಳಿಗೆ ಉಚಿತ ಶಿಕ್ಷಣದ ರೂಪದಲ್ಲಿ, ಅವರ ಖರ್ಚನ್ನು ಭರಿಸೋಣ ಎಂದರೆ? ಈಗಾಗಲೇ ಮಕ್ಕಳ ಶಿಕ್ಷಣ ಕಾಯ್ದೆ ಯೋಜನೆಯಡಿಯಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಖರ್ಚನ್ನು ಸರ್ಕಾರವೇ ಭರಿಸುತ್ತಿದೆ. ಹಾಗಾಗಿ ಸರ್ಕಾರಿ ಶಾಲೆಗಳು ಕೇವಲ ಸಂಬಳ ತೆಗೆದುಕೊಂಡು ಎಷ್ಟು ಬೇಕೋ ಅಷ್ಟು ಪಾಠ ಮಾಡಿ ಹೋಗುವ ಕಾಲ ಮುಗಿಯುತ್ತಿದೆ. ಅದಕ್ಕೆ ನಿದರ್ಶನವೆನ್ನುವಂತೆ, ಖಾಸಗಿ ವಿಶ್ವವಿದ್ಯಾಲಯಗಳು ಹೆಚ್ಚುತ್ತಿರುವುದು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳ ಗುಣಮಟ್ಟ ಕುಸಿಯುತ್ತಿರುವುದು, ಅದರ ಜೊತೆಗೆ ಬಹುತೇಕ ಪ್ರಾಥಮಿಕ ಶಾಲೆಗಳು ಅಳಿವಿನಲ್ಲಿರುವುದು ಮತ್ತು ಇಂದೋ ನಾಳೆಯೋ ಬಾಗಿಲು ಹಾಕಬಹುದು ಎನ್ನುವುದು ಗೊತ್ತಿರುವ ವಿಷಯ.

ಮಕ್ಕಳ ದಾಖಲಾತಿಯ ಕುರಿತು ಚರ್ಚಿಸೋಣ. ಉದಾಹರಣೆಗೆ ಪೋಷಕರು ಖಾಸಗಿ ಶಾಲೆಗಳತ್ತ ಏಕೆ ಮುಖ ಮಾಡಿದ್ದಾರೆ? ಎಲ್ಲಾ ಖಾಸಗಿ ಶಾಲೆಗಳಲ್ಲಿಯೂ ಸ್ಮಾರ್ಟ್ ಕ್ಲಾಸ್ ಇಲ್ಲ. ಅದರ ಜೊತೆಗೆ ಶುಲ್ಕವೂ ಹೆಚ್ಚು ಆದರೂ ಅವರೆಲ್ಲರೂ ಏಕೆ, ಖಾಸಗಿ ಶಾಲೆಯೇ ಉತ್ತಮ ಎನ್ನುತ್ತಿದ್ದಾರೆ ಅಥವಾ ಬೇಕೆನ್ನುತ್ತಿದ್ದಾರೆ? ಅದನ್ನು ಗಂಬೀರವಾಗಿ ಅವಲೋಕಿಸಬೇಕಿದೆ. ಅದನ್ನು ನೀವು ಮಾಡಿಕೊಳ್ಳಿ, ನನ್ನ ವೈಯಕ್ತಿಕವಾಗಿ ಒಂದು ಶಾಲೆ ಹೇಗಿರಬೇಕೆನ್ನುವುದರ ಬಗ್ಗೆ ನನ್ನ ಅನಿಸಿಕೆಯನ್ನು ತಿಳಿಸುತ್ತೇನೆ. ಇದನ್ನು ಮಕ್ಕಳೊಂದಿಗೆ ಚರ್ಚಿಸುವುದು ಉತ್ತಮ. ಮುಖ್ಯವಾಗಿ ನಾನು ಈಗ ಹೇಳುವ ವಿಷಯಗಳನ್ನು,

1. ಭೌತಿಕ ಪರಿಸರ: ಯಾವುದೇ ಶಾಲೆಗೆ ಹೆಜ್ಜೆ ಇಟ್ಟಾಗ ಮೈ ರೋಮಾಂಚನವೆನಿಸಬೇಕು. ಅದೊಂದು ಪವಿತ್ರ ಸ್ಥಳವೆನಿಸಬೇಕು. ಮುಂದಿನ ಪೀಳಿಗೆಯ ನಾಯಕರನ್ನು ಸೃಷ್ಟಿಸುತ್ತಿದ್ದೇವೆ ಎನ್ನುವುದು ಕಾಣಬೇಕು. ನೀವು ಗಮನಿಸಿರಬಹುದು, ಕೆಲವೊಂದು ಹೋಟೆಲ್‍ಗಳು ಅಥವಾ ದೇವಸ್ಥಾನಗಳು ಹೆಜ್ಜೆ ಇಟ್ಟಾಕ್ಷಣ ಅದ್ಬುತವೆನಿಸುತ್ತವೆ. ಕೊಡಗಿನ ಮಡಿಕೇರಿಯಲ್ಲಿರುವ ರಾಜಾ ಸೀಟ್‍ಗೆ ಹೆಜ್ಜೆ ಇಟ್ಟ ತಕ್ಷಣ ಅಲ್ಲಿನ ಆವರಣ, ಉದ್ಯಾನವನ, ಸ್ವಚ್ಛತೆ ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ನೀವು ಇರುವುದು ಮಡಿಕೇರಿಯಲ್ಲಿಯೇ, ನೀವು ನೋಡಿರುವ ನಗರ ನೀವು ಸುತ್ತಾಡಿರುವ ನಗರ ಆದರೆ ರಾಜಾಸೀಟು? ಬೇರೆ ಎನಿಸುತ್ತದೆ. ಊರು ಹೇಗೋ ಇರಬಹುದು, ಆದರೆ ಶಾಲೆಯ ಆವರಣ, ಒಳಕ್ಕೆ ಬಂದಾಗ ಅಥವಾ ಬರುವುದಕ್ಕೆ ಮಗುವಿಗೆ ಆನಂದವಾಗಬೇಕು, ಅವರ ಪೋಷಕರಿಗೆ ಉಲ್ಲಾಸವಿರಬೇಕು ಅಂಥವ ಪರಿಸರವನ್ನು ನಿರ್ಮಿಸಬೇಕು. ಇದಕ್ಕೇನು ಹಣದ ಅವಶ್ಯಕತೆ ಇದ್ಯಾ? ಮೂರು ದಿವಸಗಳು ಪೋಷಕರು, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ನಿಂತರೆ ಸಾಕು. ಅದನ್ನು ಶಿಕ್ಷಕರು ಮಾಡಿಸಬೇಕು. ಊರಿನವರಿಗೆ ಶಾಲೆಗೆ ಏನು ಬೇಕೆನ್ನುವುದು ತಿಳಿದಿರುವುದಿಲ್ಲ, ಅದನ್ನು ತಿಳಿಸಬೇಕು, ತಿಳಿಸಿದರೆ ಬರುವುದಿಲ್ಲವೆನ್ನುವುದಿಲ್ಲ.

2. ಕಲಿಕೆಯ ಪರಿಸರ: ಸದಾ ಕೊಠಡಿಯಲ್ಲಿಯೇ ಪಾಠ ಮಾಡುವುದು ಶಿಕ್ಷಕರಿಗೂ ಬೇಸರವಾಗಬಹುದು ಮತ್ತು ಮಕ್ಕಳಿಗೂ ಕೂಡ. ಅವರಿಗಾಗಿ ಒಂದು ರೌಂಡ್ ಟೇಬಲ್ (ದುಂಡು ಮೇಜಿನ ವ್ಯವಸ್ಥೆ), ಪರಿಸರ ಸ್ನೇಹಿ ಮತ್ತು ಕಲಾತ್ಮಕ ಸೀಟಿನ ವ್ಯವಸ್ಥೆಯಿರಬೇಕು. ಉದಾಹರಣೆಗೆ ಕುಶಾಲನಗರದ ನಿಸರ್ಗಧಾಮದಲ್ಲಿರುವಂತೆ ಒಂದು ತರಗತಿಯವರು ಒಮ್ಮೆಗೆ 15-20 ವಿದ್ಯಾರ್ಥಿಗಳು ಕುಳಿತು (ವೃತ್ತಾಕಾರದಿಂದ) ಚರ್ಚಿಸುವುದು, ಕಲಿಯುವುದು. ಉತ್ತಮ ಆಮ್ಲಜನಕ ನೀಡುವ ಮತ್ತು ಔಷಧಿ ಗುಣಗಳಿರುವ ಮರಗಳನ್ನು ಬೆಳೆಸಿ, ಅದರ ನೆರಳಲ್ಲಿ ಬೆಂಚಿನ ವ್ಯವಸ್ಥೆ ಮಾಡಿದರು ಆಗಬಹುದು.

3. ಆರೋಗ್ಯಕರ ಪರಿಸರ: ಇದು ಏನು ಎಂಬುದು ಎಲ್ಲಾ ಮಕ್ಕಳಿಗೂ ತಿಳಿದಿದೆ. ಶುದ್ಧ ಕುಡಿಯುವ ನೀರು. ಶುದ್ದೀಕರಣ ಘಟಕವೇ ಇರಬೇಕೆಂಬ ನಿಯಮವಿಲ್ಲ, ಆದರೆ, ನೀರಿನ ತೊಟ್ಟಿಯ ಶುಚಿತ್ವ, ಸಾಧ್ಯವಾದಷ್ಟು ಮಡಕೆಯಲ್ಲಿ, ಹಿತ್ತಾಳೆ/ತಾಮ್ರದ ಪಾತ್ರೆಗಳಲ್ಲಿ ಕುಡಿಯುವ ನೀರನ್ನು ಇಡುವ ವ್ಯವಸ್ಥೆ. ಕುಡಿಯುವ ನೀರಿನ ತೊಟ್ಟಿ, ಪಾತ್ರೆ ತೊಳೆಯುವುದು ಕಷ್ಟದ ಕೆಲಸವೇ? ಅದರ ಜೊತೆಗೆ ತಾವೇ ಬೆಳೆದು ತಿನ್ನುವ ತರಕಾರಿ. ಸರ್ಕಾರ ಬಿಸಿಯೂಟದಲ್ಲಿ ತರಕಾರಿ ಕೊಡಬಹುದು, ಆದರೆ ಪೌಷ್ಠಿಕಾಂಶ? ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯಗೆ ಮೀರಿದ ಪೌಷ್ಠಿಕಾಂಶದ ಅವಶ್ಯಕತೆಯಿರುತ್ತದೆ. ಅದರ ಜೊತೆಗೆ ನಮ್ಮ ಅನ್ನವನ್ನು ನಾವೇ ಬೆಳೆದೆವು ಎನ್ನುವ ಹೆಮ್ಮೆಯ ಜೊತೆಗೆ  ಸ್ವಾಭಿಮಾನವೂ ಬೆಳೆಯುತ್ತದೆ. ಶಾಲಾವರಣದಲ್ಲಿ ನೈರ್ಮಲ್ಯ, ಶೌಚಾಲಯಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಸ್ವಚ್ಛಗೊಳಿಸುವ ವ್ಯವಸ್ಥೆಯಿರಬೇಕು. ಹೊರಗಿನಿಂದ ಬಂದವರಿಗೂ ಉಪಯೋಗಿಸಿದರೆ ವಾವ್ ಎನ್ನಿಸಬೇಕು. ಇವೆಲ್ಲವೂ ಖರ್ಚಿಲ್ಲದೇ ನಿರ್ವಹಿಸುವ ಯೋಜನೆಗಳು. ಮಾಡುವ ಸಂಕಲ್ಪವಿರಬೇಕು.

4. ಕಣ್ತುಂಬಿಕೊಳ್ಳುವ ಪರಿಸರ: ಶಾಲೆಯ ಆವರಣದಲ್ಲಿ ಉತ್ತಮವಾದ ಹೂವಿನ ಗಿಡಗಳು, ಔóóಷಧಿ ಉದ್ಯಾನವನವಿರಬೇಕು. ಏಕೆಂದರೆ, ಔಷಧಿ ವನದಲ್ಲಿ ಓಡಾಡಿದರೆ, ಆರೋಗ್ಯ ವೃದ್ಧಿಸುತ್ತದೆ. ಅನೇಕ ಔಷಧಿ ಸಸ್ಯಗಳೊಂದಿಗೆ ಬೆರೆತರೆ ಸಾಕು. ದಿನ ನಿತ್ಯಕ್ಕೆ ಬಳಕೆಯಾವುವಂತೆ ಔಷಧಿ ಗಿಡಗಳನ್ನು ಬೆಳೆಸುವುದು ಉತ್ತಮ. ಊಟದ ಜೊತೆಗೆ ಪಲ್ಯಕ್ಕಾಗಿಯೋ ಅಥವಾ ಚಟ್ನಿಗಾಗಿಯೋ ಬಳಸಬಹುದು. ಉದಾಹರಣೆಗೆ: ಒಂದಲಗ, ದೊಡ್ಡಪತ್ರೆ, ಪುದೀನಾ, ಮಿಂಟ್ ಪುದೀನಾ, ತುಳಸಿ, ಬಸಲೆ, ತೊಂಡೆಕಾಯಿ, ಇದೆಲ್ಲವೂ ಮಕ್ಕಳಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತಲೆನೋವು, ಜ್ವರ, ಅಲರ್ಜಿ, ಸಣ್ಣಪುಟ್ಟ ಗಾಯಗಳನ್ನು ವಾಸಿಮಾಡಲು ಸಹಾಯವಾಗುತ್ತವೆ. ಶಿಕ್ಷಣವೆಷ್ಟು ಮುಖ್ಯವೋ ಅದೇ ರೀತಿ ದೇಶದ ಅಭಿವೃದ್ಧಿಗೆ ಆರೋಗ್ಯವೂ ಬಹಳ ಮುಖ್ಯ. ಆದ್ದರಿಂದ ಶಾಲಾ ಆವರಣ ಆರೋಗ್ಯವನ್ನು ವೃದ್ಧಿಸುವಂತಿರಬೇಕು. ಸಣ್ಣ ಪುಟ್ಟ ಖಾಯಿಲೆಗಳಿಗೆ ಶಾಲೆಯಲ್ಲಿನ ಗಿಡಮೂಲಿಕೆಗಳಿಂದ ಗುಣಪಡಿಸಬೇಕು. ಅದರ ಜ್ಞಾನವೂ ಮಕ್ಕಳಲ್ಲಿ ಬೆಳೆಯುವಂತೆ ಎಚ್ಚರವಹಿಸಬೇಕು.

5. ಶಾಲಾ ಕೊಠಡಿಗಳು: ಆಕರ್ಷಿತವಾಗಿರಬೇಕು. ಅನೇಕ ಮಾಹಿತಿಗಳು ಚಿತ್ರಪಟಗಳ ಮೂಲಕ ಸಿಗುತ್ತವೆ. ಪೋಸ್ಟರ್‍ಗಳನ್ನು ಪ್ರತಿ ತರಗತಿಯಲ್ಲಿಯೂ ಹಾಕಿದ್ದರೆ, ಬಹಳ ಮುಖ್ಯವಾಗಿ ಬೇಕಿರುವಂತಹುಗಳು. ಪ್ರಪಂಚ ಭೂಪಟ, ಭಾರತ ಭೂಪಟ, ಪಿರಿಯಾಡಿಕ್ ಟೇಬಲ್, ಸಸ್ಯಗಳು, ಪ್ರಾಣಿಗಳ ವಿವರಣೆ (ವರ್ಗ, ವೈಜ್ಞಾನಿಕ ಹೆಸರುಗಳು), ಮೂಲಭೂತ ಹಕ್ಕುಗಳು, ವ್ಯಾಕರಣ, ವಿಜ್ಞಾನಿಗಳು ಮತ್ತು ಅವರ ಮಾಹಿತಿ (ಕೇವಲ ಫೋಟೋ ಹಾಕುವುದಲ್ಲ). ಇವುಗಳು ಒಳಾಂಗಣವನ್ನು ಸುಂದರಗೊಳಿಸುತ್ತವೆ ಮತ್ತು ಮಕ್ಕಳಿಗೂ ಮಾಹಿತಿ ದೊರೆಯುತ್ತದೆ.

6. ಗ್ರಂಥಾಲಯ: ಕಲಿಕೆಗೆ ಅನುಕೂಲವಾಗುವಂತಹ ಪುಸ್ತಕಗಳು, ಅದನ್ನು ತರಗತಿ ಸಮಯದ ಮುಂಚಿತವಾಗಿ ಮತ್ತು ನಂತರ, ಸಾಧ್ಯವಾದಷ್ಟು 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು ಓದಲು ಪ್ರೋತ್ಸಾಹಿಸುವುದು. ಸಣ್ಣ ಕಥೆ ಪುಸ್ತಕಗಳು, ವಿಜ್ಞಾನದ ಸಂಗತಿಗಳು, ಮನೆ ಮದ್ದು, ಆತ್ಮ ಸ್ಥೈರ್ಯ ತುಂಬುವ ಅಥವಾ ಸಾಮಾನ್ಯ ಜ್ಞಾನ ಹೆಚ್ಚಿಸುವ ಪುಸ್ತಕಗಳು, ಎರಡು ಅಥವಾ ಮೂರು ದಿನ ಪತ್ರಿಕೆಗಳು. ಓದುವುದು ಎಂದರೆ ಕೇವಲ ಪಠ್ಯವನ್ನು ಮಾತ್ರವೆಂಬ ಕಲ್ಪನೆಯಿಂದ ಹೊರಕ್ಕೆ ಬರಬೇಕು. ಹೊರಜಗತ್ತು ಕುಳಿತಿಂದಲೇ ಪರಿಚಯವಾಗಬೇಕು. ಓದು ಮಕ್ಕಳನ್ನು ಸಮಾಜಮುಖಿಯಾಗಿಸಬೇಕು. ತಾನು ಮಾತ್ರ ಓದಿ, ತಾನು ಅಂಕ ಗಳಿಸಿ ಪಾಸಾಗಿ, ಕೆಲಸ ತೆಗೆದುಕೊಂಡರೆ ಸಾಕೆನ್ನುವ ಸ್ವಾರ್ಥದಿಂದ ಹೊರಬಂದು, ನಾನು ನನ್ನ ಸಮಾಜ, ನಾವೆಲ್ಲರೂ ಒಂದಾಗಿ ಸಾಗೋಣವೆನ್ನುವುದನ್ನು ತುಂಬಬೇಕು.

7. ಪ್ರಯೋಗಾಲಯ: ಕಂಪ್ಯೂಟರ್ ಮೂಲಕ ಕಲಿತರೆ ಕಲಿಕೆಯ ವೇಗ ಹೆಚ್ಚುತ್ತದೆ. ಹೆಚ್ಚಿಸಿ ಏನು ಮಾಡುತ್ತೀರಿ? ಟಿವಿಯಲ್ಲಿ ಒಗ್ಗರಣೆ ಡಬ್ಬಿ ನೋಡಿ ಏನು ಮಾಡುತ್ತೀರಿ? ಅದನ್ನು ಮತ್ತೊಮ್ಮೆ ಬರೆಯುತ್ತೀರಿ? ಸ್ಮಾರ್ಟ್ ಕ್ಲಾಸಲ್ಲಿ ಕುಳಿತು, ಕಲಿತು ಏನು ಮಾಡುತ್ತೀರಿ? ಅದನ್ನ ಪರಿಕ್ಷೆಯಲ್ಲಿ ಬರೆಯುತ್ತೀರಿ? ಮೊದಲು ಅದನ್ನೇ ತಾನೇ ಮಾಡುತ್ತಿದ್ದದ್ದು? ಮಾಸ್ಟರು ಪಾಠ ಮಾಡಿದ್ದನ್ನು ಕೇಳಿ ಅದನ್ನು ಕಲಿತು/ಓದಿಯೋ/ನೆನಪಿಟ್ಟುಕೊಂಡೋ ಪರೀಕ್ಷೆಯಲ್ಲಿ ಬರೆದು ಪಾಸಾಗುತ್ತಿದ್ದಿರಿ ಅಲ್ವಾ? ವ್ಯತ್ಯಾಸವೇನು? ಸ್ಮಾರ್ಟ್ ಕ್ಲಾಸಿನಿಂದಾದ ಬದಲಾವಣೆ ಏನು? ಮೈಸೂರು ಪಾಕ್ ತೋರಿಸಿ ಅದರ ಸಿಹಿಯನ್ನು ವಿವರಿಸಿದಂತೆ ಇದೂ ಕೂಡ. ಅದು ಹೇಗಿದೆ ಅನ್ನೋದು ಕಣ್ಣಿಗೆ ಗೊತ್ತಾದರೆ ಸಾಕೇ? ಅದರ ರುಚಿ ನಾಲಗೆಗೆ ಗೊತ್ತಾಗೋದು ಬೇಡವೇ? ಆದ್ದರಿಂದ ಪ್ರಾಯೋಗಿಕವಾಗಿ ಅಭ್ಯಸಿಸುವುದು ಮುಖ್ಯ. ಅದಕ್ಕಾಗಿ, ದುಬಾರಿ ಪ್ರಯೋಗಾಲಯ ಬೇಡ, ಒಂದು ಚಿಕ್ಕದಾದ ಪ್ರಯೋಗಾಲಯ, ಅಲ್ಲಿ ನೀವು ತರಗತಿಯಲ್ಲಿ ಕಲಿಯುವ ಪಾಠವನ್ನು ಪ್ರಾಯೋಗಿಕವಾಗಿ ಮಾಡುವಂತಾಗಬೇಕು. ಅದನ್ನು ನೀವು ಅನುಭವಿಸಬೇಕು. ಉದಾಹರಣೆಗೆ, ಲವಣಗಳನ್ನು ಬೆಂಕಿಗೆ ಹಿಡಿದಾಗ ಬೇರೆ ಬೇರೆ ಬಣ್ಣದ ಕಿಡಿಗಳು/ಬೆಂಕಿ ಕಾಣುತ್ತದೆ. ಅದನ್ನು ನಾನು ಹೇಳಿದರೆ ಗೊತ್ತಾಗುವುದಿಲ್ಲ, ನೀವು ಸ್ವಲ್ಪ ಉಪ್ಪನ್ನು (ಸೋಡಿಯಂ ಕ್ಲೋರೈಡ್) ಬೆಂಕಿಗೆ ಹಿಡಿದು ನೋಡಿ ಅಥವಾ ಕೆಲವೊಮ್ಮೆ ಕೋಳಿ ತಿನ್ನುವವರು ಅದರ ಲಿವರ್ ಅನ್ನು ಸುಟ್ಟು ತಿನ್ನುತ್ತಾರೆ, ಸುಡುವ ಸಮಯದಲ್ಲಿ ಗಮನಿಸಿ, ಬೇರೆ ಬೇರೆ ಬಣ್ಣದ ಕಿಡಿಗಳು ಹೊತ್ತುತ್ತವೆ. ಅದನ್ನು ನೀವಾಗಿಯೇ ಪ್ರಾಯೋಗಿಕವಾಗಿ ಮಾಡಿದಾಗ ನಿಮಗೆ ಅದರ ಹಿನ್ನಲೆ ಮತ್ತು ಕಾರಣಗಳು ಸಿಗುತ್ತವೆ. ನಿಮಗೂ ಕುತೂಹಲ ಉಂಟಾಗಿ ಜಗತ್ತಿನ ವಿಸ್ಮಯಗಳಿಗೆ ಕಣ್ತೆರೆಯುತ್ತೀರಿ. ಅದು ವಿಜ್ಞಾನಿಯಾಗುವ ಮೊದಲ ಹೆಜ್ಜೆ.

ನೀವು ಕಲಿಯುವ ಶಾಲೆ, ನೀವು ವಿಜ್ಞಾನಿಗಳಾಗುವ ಒಂದು ಪ್ರಯೋಗಾಲಯವಿರಬೇಕು. ಉಪಯೋಗಿಸಿದ ವಸ್ತುಗಳನ್ನು ಬಳಸಿ, ಹಳೆ ಮೊಬೈಲ್ ಫೋನ್, ಯಾವುದೋ ಆಯಸ್ಕಾಂತ, ಪೆನ್ಸಿಲ್ ಲೆಡ್, ಫ್ಯಾನ್ ಮೋಟಾರ್ ಯಾವುದು ಸಿಗುತ್ತದೆ ಅದನ್ನೆಲ್ಲಾ ಬಳಸಿಕೊಂಡು ಏನಾದರು ತಯಾರಿಸಬಹುದಾ ಯೊಚಿಸಬೇಕು. ಸದಾ ಸಂಶೋಧನಾ ಮನೋವೃತ್ತಿ ಬೆಳೆಸಿಕೊಳ್ಳುವಂತಿರಬೇಕು. ಶಿಕ್ಷಕರು ನಿಮ್ಮ ಸೃಜನಶೀಲತೆಯನ್ನು ಗುರುತಿಸಿ ಬೆಳೆಸಬೇಕು. ಕೇವಲ ಶಾಲೆಗೆ ಬರುವುದು ಪಾಠ ಕೇಳಿಸಿಕೊಳ್ಳುವುದು ನಂತರ ಪರೀಕ್ಷೆಯಲ್ಲಿ ಅದನ್ನು ಬರೆಯುವುದು ಮರೆಯುವುದು ಅನ್ನೋದು ಶಿಕ್ಷಣ ಹೇಗೆ ಆಗುವುದಕ್ಕೆ ಸಾಧ್ಯ?

8. ಕಂಪ್ಯೂಟರ್ ಶಿಕ್ಷಣ: ಕಂಪ್ಯೂಟರ್ ಈ ಜಗತ್ತಿನ ಈ ದಿನದ ಬಹಳ ಮುಖ್ಯ ಮೂಲಭೂತ ಅವಶ್ಯಕ ವಸ್ತುವಾಗಿದೆ. ಅದಿಲ್ಲದೆ ಜೀವನವೇ ಅಸಾಧ್ಯವೆನಿಸುವಷ್ಟು ಅದರ ಮೇಲೆ ನಾವು ಅವಲಂಬಿತರಾಗಿದ್ದೇವೆ. ಈ ಸಮಯದಲ್ಲಿ ನಾವು ಕಂಪ್ಯೂಟರ್ ಬಳಸಿ ಪಾಠ ಮಾಡುವುದಕ್ಕಿಂತ ಮಕ್ಕಳಿಗೆ ಕಂಪ್ಯೂಟರ್ ಉಪಯೋಗಿಸುವಂತೆ ತಯಾರಿ ಮಾಡುವುದು ಉತ್ತಮ. ಹಸಿದವನಿಗೆ ಅನ್ನ ನೀಡುವುದು ಒಳ್ಳೆಯದು ಆದರೆ ಅನ್ನ ಸಂಪಾದನೆಯನ್ನು ಹೇಳಿಕೊಡುವುದು ಶಾಸ್ವತ. ಆದ್ದರಿಂದ ಶಾಲೆಯಲ್ಲಿ ಬಹುತೇಕ ಶಿಕ್ಷಕರಿಗೆ ಕಂಪ್ಯೂಟರ್ ಜ್ಞಾನವಿದೆ, ಅದರ ವಿವರಣೆ, ತಾಂತ್ರಿಕತೆ ಗೊತ್ತಿಲ್ಲದೆ ಇದ್ದರೂ ಪರವಾಗಿಲ್ಲ. ತಾಂತ್ರಿಕತೆಯಾಗಲೀ, ಸಿದ್ಧಾಂತವನ್ನಾಗಲಿ ತಿಳಿದಿರಲೇಬೇಕೆಂಬ ನಿಯಮವಿಲ್ಲ. ಏಕೆಂದರೆ, ನಮ್ಮಲ್ಲಿ ಅನೇಕರು ಮೊಬೈಲ್, ಟಿವಿ, ಫ್ಯಾನ್ ತೆಗೆದುಕೊಂಡು ಬಂದಿದ್ದೇವೆ, ಅದರ ಜೊತೆಗೆ ಒಂದು ಯೂಸರ್ ಮಾನ್ಯುಲ್ ಕೊಟ್ಟಿರುತ್ತಾರೆ, ಅಲ್ಲಿ ಏನೆನೋ ಬರೆದಿರುತ್ತಾರೆ. ಆದರೆ, ಅದನ್ನು ಒಮ್ಮೆಯೂ ಓದುವುದಿಲ್ಲ ಹಾಗಿದ್ದೂ ನಮಗೆ ಎಲ್ಲವೂ ತಾನೇ ತಾನಾಗಿ ತಿಳಿದಿರುತ್ತದೆ. ಏಕೆಂದರೆ, ಅದು ನಾವು ಅಭ್ಯಾಸ ಮಾಡುತ್ತಾ ಮಾಡುತ್ತಾ ಬರುವುದರಿವಂದ. ಓದುವುದಕ್ಕೆ ಬರದೇ ಇರುವವರು ಕೂಡ ಮೊಬೈಲ್ ಬಳಸುತ್ತಾರೆ ಅಲ್ವಾ? ಹೇಗೆ? ಅಳವಡಿಕೆಯಿಂದ.

ಕಂಪ್ಯೂಟರ್ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಅದನ್ನು ಬಳಸುವುದು, ಅದನ್ನು ಬಳಸಿ ಶಾಲೆಗೆ ಬೇಕಿರುವ ಅಥವಾ ವಿದ್ಯಾರ್ಥಿಗಳಿಗೆ ಬೇಕಿರುವ ಪ್ರಾಜೆಕ್ಟ್ ವರ್ಕ್ ಮಾಡುವಂತೆ ಮಾಡಬೇಕು. ಒಂದು ಶಾಲೆಯಲ್ಲಿ ಕೇವಲ ಕಲಿಯುತ್ತಾ ಸಮಯ ಕಳೆದರೆ ಅದನ್ನು ಅನುಕರಣೆ ಅಥವಾ ಅಳವಡಿಸಿಕೊಳ್ಳುವುದು ಯಾವಾಗ? ಕಲಿಕೆ ಮತ್ತು ಅಳವಡಿಸಿಕೊಳ್ಳುವುದು ಜೊತೆಯಲ್ಲಿಯೇ ಸಾಗಬೇಕು. ಇಲ್ಲವಾದ್ದಲ್ಲಿ ಚೈತನ್ಯ ತುಂಬುವ ಭಾಷಣ ಕೇಳಿದಂತೆಯೇ ಆಗುತ್ತದೆ. ಉತ್ತಮ ಭಾಷಣಕಾರರ ಭಾಷಣವನ್ನು ಕೇಳುತ್ತೇವೆ, ಚಪ್ಪಾಳೆ ತಟುತ್ತೇವೆ. ಕೆಲವು ಸಮಯದ ತನಕ ಖುಷಿ, ಹುಮ್ಮಸ್ಸು ಇರುತ್ತದೆ, ಮನೆಗೆ ಹೋಗಿ ಊಟ ಮಾಡಿ ಮಲಗಿದ ಮೇಲೆ ಎಲ್ಲವೂ ಮರೆಯಾಗುತ್ತದೆ. ನಾಳೆ ಬೆಳ್ಳಿಗ್ಗೆ ಅದೇ ಹಳೆ ಚಾಲಿ ಮುಂದುವರೆಯುತ್ತದೆ. ವಿಡೀಯೋ ಬಗ್ಗೆ ಹೇಳಿದೆ ಅಲ್ವಾ? ಯಾರೋ ಮಾಡಿದ ವಿಡಿಯೋ ತೋರಿಸುವ ಬದಲು, ಒಂದು ಚಿಕ್ಕ ಮೊಬೈಲ್ ಅಥವಾ ಕ್ಯಾಮೇರಾವನ್ನು ವಿದ್ಯಾರ್ಥಿಗಳಿಗಾಗಿ ತಂದು ಅದರಿಂದ ವಿದ್ಯಾರ್ಥಿಗಳೇ ಶಾಲೆಯ ಚಟುವಟಿಕೆಗಳ ಕುರಿತು ವಿಡಿಯೋ ಮಾಡಲಿ, ಭಾಷಣಗಳು, ಕಲಿಕೆ ಇತ್ಯಾದಿಗಳನ್ನು ರೆಕಾರ್ಡ್ ಮಾಡಿ ಬೇರೆ ಶಾಲಾ ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಿ. ಕಲಿತ ಹಾಗೂ ಆಗುತ್ತದೆ, ಅಳವಡಿಕೆಯೂ ಆಗುತ್ತದೆ.

ಈ ಮೇಲಿನ ಅಂಶಗಳನ್ನೊಳಗೊಂಡಿರುವುದೇ ನನ್ನ ಕನಸಿನ ಮಾದರಿ ಶಾಲೆ. ಏಕೆಂದರೆ ಶಿಕ್ಷಣವೆಂಬುದು ಕೇವಲ ಕಲಿಕೆಯಲ್ಲ, ಕಲಿಯುತ್ತಾ ಅಳವಡಿಸಿಕೊಳ್ಳುವುದು, ಅಳವಡಿಸಿಕೊಳ್ಳುತ್ತಾ ಬೆಳೆಯುವುದು, ಬೆಳೆಯುತ್ತಾ ನಲಿಯುವುದು ನಲಿಯುತ್ತಾ ಬದುಕುವುದು. ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದೇನೆ, ನಿಮಗೆ ಈ ವಿಚಾರಗಳ ಕುರಿತು ತಕರಾರಿದ್ದರೇ ಅಥವಾ ಅಸಮಧಾನವಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು. ಚರ್ಚಿಸೋಣ, ನಮ್ಮೆಲ್ಲರ ಗುರಿಯೊಂದೆ. ಉತ್ತಮ ಸಮಾಜ ನಿರ್ಮಾಣ. ಮಾರ್ಗ ಬೇರೆ ಬೇರೆಯಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...