07 ಫೆಬ್ರವರಿ 2018

ಜೀವನದ ಸಂತಸದ ಪಯಣದಲ್ಲಿ ಕನಸುಗಳು ಮತ್ತು ಮೌಲ್ಯಗಳು: ನನ್ನನುಭವ


ನಮಸ್ಕಾರ ಸ್ನೇಹಿತರೆ,
ಈ ಲೇಖನ ಬಹಳ ಉದ್ದವಾಗಿದೆ, ಅದನ್ನು ಎಡಿಟ್ ಮಾಡುವ ಮನಸ್ಸು ಬರಲಿಲ್ಲ, ಆದ್ದರಿಂದ ದಯವಿಟ್ಟು ಅನುಸರಿಸಿಕೊಂಡು ಸಮಯಕೊಂಡು ನಿರಾಳವಾಗಿ ಓದಿ ಮತ್ತು ನಿಮಗೆ ಇಷ್ಟವಾದರೂ ಅಥವಾ ಇಷ್ಟವಾಗದೇ ಇದ್ದರೂ ಬೇರೆಯವರೊಂದಿಗೆ ಹಂಚಿಕೊಳ್ಳಿ. ಉತ್ತಮ ಸಮಾಜ ನಿರ್ಮಾಣ ನಮ್ಮ ನಿಮ್ಮ ಗುರಿ.


ಸಾಕಷ್ಟು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದ್ದಿದರೂ ನನ್ನ ಸೋಮಾರಿತನ ಬರೆಯುವುದನ್ನು ತಡೆಯುತ್ತದೆ. ಒಮ್ಮೊಮ್ಮೆ ನಿನ್ನ ಬರಹವನ್ನು ಯಾರು ಓದುತ್ತಾರೆಂದು ಇಷ್ಟು ಗಂಬೀರವಾಗಿ ಬರೆಯುತ್ತೀಯಾ ಎಂದು ತಲೆಯೊಳಗಿರುವ ಮೂನ್ನೂರು ಗ್ರಾಂ ಮಾಂಸದ ಯಾವುದೋ ನರ ಕೇಳುತ್ತದೆ. ಯಾರೇಕೆ ಓದಬೇಕು, ನಾನು ಹೇಳುವುದನ್ನ ನಾನು ಹೇಳಬೇಕು, ಒಪ್ಪುವುದು ಬಿಡುವುದು ಅವರಿಗೆ ಸೇರಿದ್ದು, ಅಂಗಡಿಗೆ ಹೋದವರೆಲ್ಲರೂ ಎಲ್ಲವನ್ನು ಕೊಂಡು ತರುತ್ತಾರಾ? ಹಾಗೆಂದು ಅಂಗಡಿಯವನು ತೋರಿಸದೆ ಇರುತ್ತಾನಾ? ನಮ್ಮಲ್ಲಿರುವ ಐಡಿಯಾಗಳನ್ನು, ಐಡಿಯಾಲಜಿಯನ್ನ ಮಣ್ಣಾಗುವ ಮುನ್ನ ಚಿನ್ನವಿರುವವರ ತಲೆಗೋ ಅಥವಾ ಹೃದಯಕ್ಕೋ ಅರ್ಪಿಸಬೇಕು, ಅವರು ಅದನ್ನು ಬೆಳೆಸುತ್ತಾ ಹೋಗುತ್ತಾರೆ. ಪಿಠಿಕೆ ಹೆಚ್ಚಾಯಿತು ಅಥವಾ ಗೊಂದಲಗಳು ಶುರುವಾಯಿತು ನಿಮಗೆ. ಗೊಂದಲಗಳು ಎಂದಾಕ್ಷಣ ಒಂದು ಮಾತು ನಿಮಗೆ ಹೇಳಬೇಕು, ನಾನು ಬಹಳ ಗೊಂದಲದಲ್ಲಿದ್ದೀನಿ ಎನ್ನುತ್ತಾರೆ. ಅದು ಹೇಗೆ ಗೊಂದಲದಲ್ಲಿರುವವನಿಗೆ ತಾನು ಗೊಂದಲದಲ್ಲಿದ್ದೀನಿ ಎಂದು ತಿಳಿಯುತ್ತದೆ? ಗೊಂದಲಮಯ ಎಂದರೇನು? ಏನು ತೋಚದ ಪರಿಸ್ಥಿತಿ ಅಲ್ವಾ? ಇರಲಿ ಮುಂದಕ್ಕೆ ಹೋಗೋಣ.

ನಾನು ನಿನ್ನೆಯ ದಿವಸ ತರಿಕೆರೆ ತಾಲ್ಲೂಕಿನ ಹಾದಿಕೆರೆ ಸರ್ಕಾರಿ ಪ್ರೌಢಶಾಲೆಗೆ ಹೋಗಿದ್ದೆ. ಅಲ್ಲಿನ ಮುಖ್ಯ ಶಿಕ್ಷಕ ಗಿರೀಶ್ ಸರ್ ಬಹಳ ಹೃದಯವಂತ, ನಿಷ್ಠಾವಂತ, ಶ್ರಮ ಜೀವಿ, ಪ್ರಾಮಾಣಿಕ, ನುಡಿದಂತೆ ನಡೆಯುವ, ನಡೆಯುವಂತೆ ನುಡಿಯುವ ವ್ಯಕ್ತಿತ್ವ, ಸ್ನೇಹ ಜೀವಿ, ಸರಳತೆ, ಹೀಗೆ ಯಾವೆಲ್ಲಾ ಒಳ್ಳೆಯ ಪದಗಳನ್ನು ಬಳಸಬಹುದೋ ಅದಕ್ಕೆಲ್ಲ ಅವರ ಗುಣಗಳು ಒಗ್ಗುತ್ತವೆ. ನಾನು ಇಲ್ಲಿಯವರೆಗೆ ಕಂಡಿರುವ ಮುಖ್ಯ ಶಿಕ್ಷಕರಲ್ಲಿ ಅಗ್ರ ಗಣ್ಯರು, ಇದರಲ್ಲಿ ಅತಿಶಯೋಕ್ತಿ ಇಲ್ಲ. ಅವರೊಂದಿಗೆ ನಡೆದ ಕೆಲವು ಚರ್ಚೆ ಮತ್ತು ಸಂವಾದವನ್ನು ಮಾತ್ರ ಇಲ್ಲಿ ಬರೆಯುತ್ತೇನೆ. ಅವರನ್ನು ಹೊಗಳುವುದು ಸುಲಭ, ನೀವುಗಳು ಅದನ್ನು ಇಲ್ಲಿ ಓದಿ ವಾಹ್ ಎಂದು ಇಲ್ಲಿಗೆ ಬಿಡುವುದು ಬೇಡ. ಕುತೂಹಲವಿದ್ದರೇ ನೇರವಾಗಿ ಅವರನ್ನೆ ಸಂಪರ್ಕಿಸಿ, ಶಾಲೆಗೆ ಭೇಟಿ ನೀಡಿ, ಮಾತನಾಡಿ, ಅದ್ಭುತವಾದ ಶಾಲೆ, ಉತ್ತಮ ಪರಿಸರದೊಳಗಿರುವ ಶಾಲೆ, ಮತ್ತು ಬಹಳ ಬೌದ್ಧಿಕ ಗುಣಮಟ್ಟವಿರುವ ಶಿಕ್ಷಕಿಯರು ಇರುವ ಶಾಲೆ, ನನಗೆ ಹೆಣ್ಣು ಮಕ್ಕಳು ಹೆಚ್ಚು ಚರ್ಚೆ ಮಾಡಿದರೆ ಬಹಳ ಸಂತೋಷವಾಗುತ್ತದೆ, ಅದು ಹೆಣ್ಣು ಮಗುವಿನ ತಂದೆ ಎನ್ನುವ ಕಾರಣಕ್ಕೂ ಇರಬಹುದು, ಆದ್ದರಿಂದ ನೀವೇ ಒಮ್ಮೆ ಭೇಟಿ ನೀಡಿ, ಒಂದು ಪಿಕ್ನಿಕ್ ಆದರೂ ಆಗಬಹುದು. ನಾವು ಆ ದಿನ ಚರ್ಚೆ ಮಾಡಿದ ಪ್ರಮುಖ ವಿಷಯಗಳು ಮತ್ತು ಗಿರೀಶ್ ಸರ್ ಅವರ ಪ್ರಮುಖ ಪ್ರಶ್ನೆ ಅಥವಾ ಅನಿಸಿಕೆ, ಸರ್, ನೀವು ನಿಮ್ಮ ಜೀವನವನ್ನು ನೋಡುವ ರೀತಿ ನನಗೆ ಬಹಳ ಇಷ್ಟವಾಯಿತು. ಎಂದು. ಆ ಹಿನ್ನಲೆಯನ್ನು ಇಟ್ಟಿಕೊಂಡು ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ. ಈ ಬರವಣಿಗೆಯಲ್ಲಿ ನೀವು ಗಮನಿಸಬೇಕಾಗಿರುವ ಎರಡು ಪ್ರಮುಖ ಅಂಶಗಳು, ನನ್ನ ಅನಿಸಿಕೆಯಲ್ಲಿ ಜೀವನವನ್ನು ಹೇಗೆ ನೋಡುತ್ತೇನೆ ಅಥವಾ ವಿವರಿಸುತ್ತೇನೆ ಮತ್ತು ನನ್ನ ಜೀವನದಲ್ಲಿ ಅದರ ಅಳವಡಿಕೆಯೆಷ್ಟಿದೆ? ಅದಕ್ಕಿರುವ ಉದಾಹರಣೆಗಳು ಮತ್ತು ನಿದರ್ಶನಗಳೇನು? ಅದಕ್ಕಾಗಿಯೇ ನಾನು ನನ್ನ ದೃಷ್ಟಿಕೋನವನ್ನು ಮೊದಲು ಹೇಳುತ್ತಾ ಹೋಗಿ ನಂತರ ಆ ಹಾದಿಯಲ್ಲಿ ನಾನು ನಡೆದಿರುವ, ನಡೆಯುತ್ತಿರುವ ಅಥವಾ ಮುಂದೆ ನಡೆಯುವ ಹೆಜ್ಜೆಗಳನ್ನು ತೋರಿಸುತ್ತಿದ್ದೇನೆ. ಇದೆಲ್ಲವೂ ರಾತ್ರೋ ರಾತ್ರಿ ಆಗಿರುವುದಲ್ಲವೆನ್ನುವುದನ್ನು ಗಮನದಲ್ಲಿಟ್ಟು ಓದಬೇಕು.

ಸಾಕಷ್ಟು ಜನರು ವ್ಯಕ್ತಿತ್ವ ವಿಕಸನದ ಕುರಿತು ಭಾಷಣಗಳ ಮೇಲೆ ಭಾಷಣವನ್ನು ಮಾಡುತ್ತಾರೆ, ಕೆಲವು ಸಂಸ್ಥೆಗಳು ಕೋಟ್ಯಾಂತರ ದುಡಿದಿದ್ದಾರೆ, ಯಾರ ವ್ಯಕ್ತಿತ್ವ ವಿಕಸನವೂ ಆಗಿಲ್ಲ, ಅಬಿವೃದ್ಧಿಯೂ ಆಗಿಲ್ಲ. ಯಶಸ್ಸಿನ ಗುಟ್ಟುಗಳು, ಸಾಧನೆಗೆ ಹತ್ತು ಹಂತಗಳು, ಹೀಗೆ ಉತ್ತಮ ಸಂಸಾರಕ್ಕೆ ಹನ್ನೆರಡು ಸೂತ್ರಗಳು, ಯಾವುದಿಲ್ಲ, ಎಲಾ ಶೀರ್ಷಿಕೆಗಳು ಇವೆ. ಆದರೆ, ಅವುಗಳಿಂದಾಗಿರುವ ಬದಲಾವಣೆಗಳು ಅಷ್ಟಕ್ಕಷ್ಟೆ. ಅವುಗಳೆಲ್ಲವೂ ಸಿನೆಮಾ ನೋಡಿದ ಎರಡು ದಿನಗಳು ಅಥವಾ ಹೊಸ ವರ್ಷದ ಅವಿಷ್ಕಾರಗಳೆಂದರೂ ತಪ್ಪಿಲ್ಲ. ತಾತ್ಕಾಲಿಕ ಬದಲಾವಣೆಗಳು, ಬೆಳವಣಿಗೆಗಳು ಎಲ್ಲಿಗೂ ಕೊಂಡೊಯ್ಯಲಾರವು. ಇನ್ಯಾವ ವಿಷಯಗಳು ನಮ್ಮನ್ನು ದೂರಕ್ಕೆ ಕರೆದೊಯ್ಯಬಹುದು? ಅಂದರೆ, ವ್ಯಕ್ತಿತ್ವ ವಿಕಸನದ ಹೆಜ್ಜೆಗಳಾವು? ಎಲ್ಲಿಂದ ಶುರು ಮಾಡಬೇಕಾಗಬಹುದು? ಹೇಗೆ ಗುರುತಿಸಿಕೊಳ್ಳುವುದು? ಇವೆಲ್ಲ ಪ್ರಶ್ನೆಗಳಿಗೆ ಜೊತೆಯಾಗಿಯೇ ಉತ್ತರ ಹುಡುಕುತ್ತಾ ಹೋಗೋಣ. ನನ್ನ ಮಾತೇ ಸತ್ಯವೆನ್ನುವ ಉಮೇದು ನನಗಿಲ್ಲ. ನಿಮ್ಮ ಅನಿಸಿಕೆ ಅಬಿಪ್ರಾಯಗಳು ಸೇರಲಿ. 

ಮೊದಲನೆಯದಾಗಿ, ಜೀವನವನ್ನು ನೋಡುವ ರೀತಿ ಅಥವಾ ಅನುಭವಿಸುವ ರೀತಿಯ ಕುರಿತು ಮಾತನಾಡೋಣ. ಪ್ರತಿಯೊಬ್ಬ ಮನುಷ್ಯನು ವಿಶ್ವ ಮಾನವನಾಗಿ ಹುಟ್ಟುತ್ತಾನೆ. ವಿಶ್ವಮಾನವ ಎಂದರೇನು? ಅವನಿಗೆ ಯಾವ ಗಡಿಯಿಲ್ಲ, ಅಂಕೆ ಶಂಕೆಯಿಲ್ಲ, ವಿಶ್ವವೇ ಅವನ ಮನೆ, ವಿಶ್ವವೇ ಅವನ ಕುಟುಂಬ, ಯಾರ ಹಂಗಿಲ್ಲ, ಯಾವುದರ ಅಂಟು ಇಲ್ಲ. ಹುಟ್ಟುವಾಗ ಅವನಿಗೆ ಏನೂ ಇರುವುದಿಲ್ಲ, ಹೆಸರಿಲ್ಲ, ಧರ್ಮವಿಲ್ಲ, ಜಾತಿಯಿಲ್ಲ, ಕುಲವಿಲ್ಲ, ದೇಶವಿಲ್ಲ, ಭಾಷೆಯಿಲ್ಲ, ಅಷ್ಟೆಲ್ಲ ಏಕೆ ಲಿಂಗವೆಂಬುದಿರುವುದಿಲ್ಲ. ಲಿಂಗವಿರುವುದಿಲ್ಲವಾ? ಮಗುವಿಗಿರುವ ಮರ್ಮಾಂಗ? ಅದು ಒಂದು ದೇಹಕ್ಕಿರಬೇಕಾದ ಒಂದು ಅಂಗ ಅಷ್ಟೆ, ಅದನ್ನ ನಾವು ಗುಪ್ತಾಂಗ ಅಂತಾ ಮಾಡಿದ್ದೀವಿ. ಮಾಡಿದ್ದೀವಿ? ಇಲ್ಲಾ ಹಾಗೆಂದು ತೀರ್ಮಾನಿಸಿದ್ದೇವೆ. ಏನೂ ಇಲ್ಲದೇ ಹುಟ್ಟಿದ ಮಗುವಿಗೆ, ನಾವು ಎಲ್ಲವನ್ನೂ ಸೇರಿಸುತ್ತೇವೆ. ಅದಕ್ಕೊಂದು ಲಿಂಗ-ಹೆಣ್ಣು ಗಂಡು, ಹೆಸರು, ಜಾತಿ, ಕುಲ, ಗೋತ್ರಾ, ಊರು, ತಂದೆಯ ಹೆಸರು, ತಾಯಿಯ ಹೆಸರು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾವು ಅಲ್ಲಿಗೆ ನಿಲ್ಲುವುದಿಲ್ಲ. 
ಅವನ ಗುಣಗಳನ್ನು ಕಟ್ಟಿಕೊಡುವುದಕ್ಕೆ ಶುರು ಮಾಡುತ್ತೇವೆ ಮತ್ತು ಅದೇ ಅವನ ವ್ಯಕ್ತಿತ್ವವೆಂದು ನಂಬಿಸುತ್ತೇವೆ. ಇವನು/ಳು ಅವರ ಅಪ್ಪನ ಹಾಗೆ, ಅಮ್ಮನ, ಹಾಗೆ, ಅಜ್ಜಿ, ತಾತ ಎಲ್ಲರಿಗೂ ಹೋಲಿಕೆ ಮಾಡುತ್ತೇವೆ. ಇವನು ಮಲಗುವುದು ಥೇಟ್ ಅವರ ಅಜ್ಜನ ತರಾನೇ.. ದೈಹಿಕವಾಗಿ ಮಾತ್ರವಲ್ಲ ಗುಣ ನಡತೆಗಳನ್ನು ಕೂಡ ನಾವೇ ಆ ಮಗುವಿಗೆ ಕಟ್ಟಿಕೊಡುತ್ತೇವೆ. ಅದು ಎಷ್ಟರ ಮಟ್ಟಿಗೆ ಎಂದರೆ, ಅವರಪ್ಪನೂ ಹೀಗೆ ಕುಡುಕ, ಅವರಪ್ಪನೂ ಹೀಗೆ ದುಷ್ಠ, ಅವರಮ್ಮನೂ ಹೀಗೆ ಬಹಳ ಹೃದಯವಂತೆ. ಒಳ್ಳೆಯದೋ ಕೆಟ್ಟದ್ದೋ ಅಂತೂ ಅವನಿಗೊಂದು ಠಸ್ಸೆ ಹಾಕುತ್ತೇವೆ. ಈ ವ್ಯಕ್ತಿತ್ವದ ಕುರಿತು ಇರುವ ಇನ್ನಷ್ಟು ವಿಷಯಗಳನ್ನು ಚರ್ಚಿಸೋಣ. ಕೆಲವು ಗಾದೆ ಮಾತುಗಳನ್ನು ಇಟ್ಟುಕೊಂಡು ಕೆಲವರ ವ್ಯಕ್ತಿತ್ವವನ್ನು ಕಟ್ಟುವುದು. ಬೆಳೆಯುವ ಸಿರಿ ಮೊಳಕೆಯಲ್ಲಿ. ನನಗೆ ಗೊತ್ತಿತ್ತು ಇವನು ಹೀಗೆ ಆಗುತ್ತಾನೆಂದು. 

ಮಗು ಮೂರನೇಯ ವಯಸ್ಸಿಗೆ ಬಂದಂತೆಯೇ ಅದಕ್ಕೊಂದು ಲೇಬಲ್ ಹಾಕುವುದು. ಇವನಿಗೆ ಸಂಗೀತ ಅಂದ್ರೇ ಇಷ್ಟ, ಇವನು ಸ್ವಲ್ಪ ದಡ್ಡ, ಇವನು ಬಹಳ ಬುದ್ದಿವಂತ, ಚುರುಕಿಲ್ಲ, ಬಹಳ ಚುರುಕು, ಖದೀಮ, ನಿಷ್ಠಾವಂತ, ಪ್ರಾಮಾಣಿಕ ಅಂತಾ. ಕೇವಲ ಹತ್ತು ವರ್ಷದ ಮಗುವಿಗೆ ನಾವು ಹೇಳುವುದು ಇವನನ್ನ ನಂಬೋಕೆ ಆಗಲ್ಲ ಅಂತಾ. ಆ ಮಗು ನನ್ನನ್ನು ಹೇಗೂ ನಂಬುವುದಿಲ್ಲ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕೆಂದು ತೀರ್ಮಾನಿಸುತ್ತದೆ. ಅದರಂತೆಯೇ ಬೆಳೆಯುತ್ತದೆ ಮತ್ತು ನಿಮ್ಮ ಮಾತು ಸತ್ಯವೆಂದು ನೀವು ಭ್ರಮಿಸುತ್ತೀರಿ ಆ ಮಗುವೂ ನಂಬುತ್ತದೆ. ಒಂದು ವ್ಯಕ್ತಿತ್ವ ಒಂದು ದಿನದ ಬೆಳವಣಿಗೆಯಲ್ಲಾ ಸ್ನೇಹಿತರೇ. ಅದೊಂದು ನಿರಂತರ ಹಾದಿ. ಕೆಲವರು ಅದನ್ನು ಹೇಗಿರಬೇಕೆಂದು ತೀರ್ಮಾನಿಸಿ ಹೋಗುತ್ತಾರೆ ಕೆಲವರು ಗೊತ್ತು ಗುರಿಯಿಲ್ಲದೆ ಸಾಗುತ್ತಾರೆ. ಕೆಲವರು ನಾನು ಮುಂಗೋಪಿಯೆಂದು ಬದುಕುತ್ತಿರುತ್ತಾರೆ, ಅದನ್ನು ಅವರ ಅಸುಪಾಸಿನವರು ಬಹಳ ಸತ್ಯವೆನ್ನುವಂತೆ ಹೌದೌದು ಇವರಿಗೆ ಕೋಪ ಬಂದರೆ ಅಷ್ಟೆ ಅಥವಾ ಇವರು ಸಣ್ಣಪುಟ್ಟದ್ದಕ್ಕೂ ಕೋಪ ಮಾಡ್ಕೋತಾರೆ ಎನ್ನುತ್ತಾರೆ. ಒಬ್ಬ ವ್ಯಕ್ತಿ ಹುಟ್ಟಿದಾಗಿನಿಂದ ಸಾಯುವ ತನಕ ಒಂದೇ ರೀತಿಯಿರುವುದಾದರೆ ಅವನು ಹುಟ್ಟಿದ ದಿನವೇ ಸಾಯಬಹುದಿತ್ತು ಅಥವಾ ನಾನು ಇಂತಹ ವ್ಯಕ್ತಿಯೆಂದು ತೀರ್ಮಾನಿಸಿದ ದಿನವೇ ಸಾಯಬಹುದಿತ್ತು, ಐವತ್ತು ಅರವತ್ತು ವರ್ಷ ಬದುಕುವ ಸಾಹಸವೇಕೆ ಬೇಕಿತ್ತು. ಶಾಲೆಯ ಆವರಣದಲ್ಲಿ ಹೇಳುವುದಾದರೇ ಹತ್ತನೆಯ ತರಗತಿಯ ಫಲಿತಾಂಶವನ್ನು ಒಂಬತ್ತನೆಯ ತರಗತಿಯಲ್ಲಿರುವಾಗಲೇ ತೀರ್ಮಾನಿಸಿರುತ್ತಾರೆ. ಈ ವರ್ಷ ಬ್ಯಾಚ್ ಪರವಾಗಿಲ್ಲ ಆದರೆ ಮುಂದಿನ ವರ್ಷದ್ದೂ ಡೌಟ್. ಆ ತೀರ್ಮಾನ ಸತ್ಯವಾಗುವಂತೆ ನೋಡಿಕೊಳ್ಳುತ್ತಾರೆ. ಆ ಮಕ್ಕಳು ಅದನ್ನು ನಂಬಿ ಅದರಂತೆಯೇ ಆಗುತ್ತವೆ. ಇದು ಹೇಗೆ ಆಗುತ್ತದೆ ಎನ್ನುವುದನ್ನು ನನ್ನ ಬಳಿ ನೇರವಾಗಿ ಚರ್ಚಿಸಿ. ಮತ್ತೊಂದು ತಮಾಷೆಯ ವಿಚಾರವನ್ನು ನೋಡೊಣ.

          ಮತ್ತೊಂದು ತಮಾಷೆಯ ವಿಷಯ ಪೋಷಕರದ್ದು. ಅದರಲ್ಲಿಯೂ ಇಂದಿನ ಪೋಷಕರದ್ದು. ಪೋಷಕರು ಅವರ ಮಕ್ಕಳ ಮೇಲೆ ಒತ್ತಡ ಹಾಕುವುದಕ್ಕೆ ಶುರು ಮಾಡುತ್ತೇವೆ. ಆ ಒತ್ತಡ ಬಹಳ ಸೊಗಸಾಗಿರುತ್ತದೆ. ನನಗೆ ಓದಬೇಕೆಂಬ ಬಹಳ ಆಸೆಯಿತ್ತು ನಮ್ಮಪ್ಪ ಓದಿಸಲಿಲ್ಲ ಅದಕ್ಕೆ ಎಷ್ಟು ಕಷ್ಟ ಆದರೂ ಪರವಾಗಿಲ್ಲ ನನ್ನ ಮಕ್ಕಳನ್ನ ನಾನು ಚೆನ್ನಾಗಿ ಓದಿಸ್ತೀನಿ. ಇದ್ಯಾವ ಕರ್ಮ ಆ ಮಗುವಿಗೆ? ಪ್ರತಿಯೊಬ್ಬ ಮನುಷ್ಯನು ಹುಟ್ಟುವುದು ಅವನ ಜೀವನವನ್ನ ನಡೆಸುವುದಕ್ಕೆ, ಅವನ ಜೀವನ ಅಂದರೆ ಅವನ ಕನಸುಗಳು ಇರುತ್ತವೆ. ನಾನು ನನ್ನ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆ ಹೊರತು ನನ್ನ ತಂದೆಯ ಕನಸು, ನನ್ನ ತಾತನ ಕನಸು, ಹೀಗೆ ಎಲ್ಲರ ಕನಸ್ಸನ್ನು ನನಸು ಮಾಡಲು ನನಗೆ ದಶರಥನ ಆಯಸ್ಸಿದ್ಯಾ? ಮಕ್ಕಳು ಕೂಡ ನನ್ನ ತಂದೆಯ ಆಸೆ ಅದಕ್ಕೆ ಯಾಕೆ ತಣ್ಣೀರು ಎರಚಬೇಕೆಂದು ಒದ್ದಾಡಿ ಸಾಯುವ ಕಾಲದಲ್ಲಿ ಮಕ್ಕಳಿಗೆ ತನ್ನ ಆಸೆಗಳನ್ನು ಹೇಳಿ ಕಣ್ಣು ಮುಚ್ಚುತ್ತಾನೆ. ಹೀಗೆ ಪ್ರಿಮಿಯಂ ಮುಂದೂಡುತ್ತಾ ಹೋಗುತ್ತದೆ.

ನನ್ನದೇ ಅನಿಸಿಕೆಗಳನ್ನು ನಿಮ್ಮ ಮುಂದಿಡಬೇಕೆಂದರೆ, ಪ್ರತಿಯೊಬ್ಬ ಮನುಷ್ಯನು ತನ್ನ ಜೀವನವನ್ನ ಜೀವಿಸಬೇಕು. ಅನುಭವಿಸಬೇಕು. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಎಲ್ಲರೂ ಒಂದೇ ಸಮನಾಗಿರಬೇಕೆನ್ನುವುದು ಸರಿಯಿಲ್ಲ. ಎಲ್ಲರೂ ಒಂದೇ ಸಮನಾಗಿರಬೇಕೆನ್ನುವುದು ನಿಯಮವಾಗಿದ್ದರೆ 730 ಕೋಟಿ ಜನರ ಅವಶ್ಯಕತೆಯಿರಲಿಲ್ಲ. ನಮಗೆ ಯಾವುದು ಇಷ್ಟವೋ ಅದನ್ನು ಮಾಡಬೇಕು ಆದರೆ ಅದು ಮಾನವೀಯತೆಯ ನೆಲೆಕಟ್ಟಿನಲ್ಲಿರಬೇಕು. ಮಾನವೀಯತೆಯೆಂದರೇನು? ನೆಲೆಕಟ್ಟು ಯಾವುದು? 

ಇಡೀ ವಿಶ್ವವೇ ನನ್ನ ಮನೆಯನ್ನುವ ಮನಸ್ಥಿತಿಗೆ ತಲುಪಬೇಕು. ಇದು ಸಾಧ್ಯವಾಗುವುದಾ? ಗೊತ್ತಿಲ್ಲ. ಆದರೆ ಚಿಂತನೆಯಲ್ಲಿ ತಪ್ಪೇನು? ಆ ಹಾದಿಯಲ್ಲಿ ನಡೆಯುವುದರಲ್ಲಿ ತಪ್ಪೇನು? ಗುರಿಯೆಂದರೆ ಅದಾಗಿರಬೇಕು, ಇಡೀ ಜಾಯಮಾನವನ್ನು ಸವೆಸಿದರೂ ತಲುಪಲಾರದ ಗುರಿಯಾಗಿರಬೇಕು. ಸವೆಸುವ ಹಾದಿಯನ್ನ ಆನಂದಿಸುವ ಮನಸ್ಸಿರಬೇಕು. ಕೆಲವು ಬಾರಿ ಹೋಗುವ ಊರಿಗಿಂತಲೂ ಆ ಊರಿನ ಹಾದಿ ಪುಲಕಗೊಳಿಸುತ್ತದೆ. ನಾನು ಈ ಕುರಿತು ಹಲವರಿಗೆ ಬೈದಿರುವುದು ಇದೆ. ಉದಾಹರಣೆಗೆ, ಧರ್ಮಸ್ಥಳ ಹೋಗುವವರು ರಾತ್ರಿ ವೇಳೆಯಲ್ಲಿ ಪ್ರಯಾಣ ಮಾಡುವುದು ನಿಮಗೆ ಆ ಶಿರಾಢಿ ಘಾಟಿನಲ್ಲಿ ಹೋಗುವುದೆ ಅದ್ಬುತ ಅನುಭವ, ಅದನ್ನು ಬಿಟ್ಟು ರಾತ್ರಿಯಲ್ಲಿ ಹೋಗಿ ಅಲ್ಲಿ ಉದ್ದ ಸಾಲಿನಲ್ಲಿ ನಿಂತು ಸರಿಯಾಗಿ ದೇವರ ದರ್ಶನವನ್ನು ಮಾಡದೇ, ಬೈದಾಡಿಕೊಂಡು ಬರುವುದು. ದೇವರನ್ನು ಗುಡಿಯಲ್ಲಿ ನೋಡುವಾಗ ಕಣ್ಮುಚ್ಚಿ ಬೇಡುವುದು. ನಾನೆಂದು ದೇವಸ್ಥಾನಗಳಲ್ಲಿ ಕಣ್ಮುಚ್ಚುವುದಿಲ್ಲ. ನಾವು ಹೋಗುವುದೇ ದೇವರ ವಿಗ್ರಹವನ್ನು ನೋಡಿ ಆನಂದಿಸಲು. ಒಮ್ಮೆ ನೀವು ದೇವರನ್ನು ನೋಡಿ ಆನಂದಿಸುವುದನ್ನು ಕಲಿಯಿರಿ, ಅದರಲ್ಲಿರುವ ಆನಂದವೇ ಬೇರೆ. ಬೇಡುವುದಲ್ಲ, ಭಕ್ತಿಯೂ ಅಲ್ಲ, ಅದೊಂದು ತೆರನಾದ ಬೇರೆಯದೇ ಅನುಭವ ನನಗೆ. ಹತ್ತು ವರ್ಷಗಳ ಹಿಂದೆ ಪೂಜೆಯೂ ಮಾಡದೇ ಇದ್ದವನು ನಾನು. ಇಂದೂ ಅಷ್ಟೆ, ನಾನು ನಿರಂತರ ಪೂಜೆ ಮಾಡುತ್ತೇನೆಂದಲ್ಲ, ನನಗೆ ಬೇಕಿನಿಸಿದರೆ ಮಾಡುತ್ತೇನಷ್ಟೆ. ಅದೆಲ್ಲವನ್ನು ಆನಂದಿಸಬೇಕು. ಮುಂದೊಂದು ದಿನ ನೀವು ಪೂಜೆಯೇ ಮಾಡದಿದ್ದರೆ ಪೂಜೆ ಮಾಡುವವರ ಮನಸ್ಥಿತಿ ಹೇಗಿರುತ್ತದೆಯೆಂದು ಹೇಗೆ ತಿಳಿಯುವುದು? ಅದರಂತೆ ನಾವು ಏಕೆ ಪೂಜೆ ಮಾಡಬೇಕು ಎನ್ನುವ ಪ್ರಶ್ನೆ ಹಾಕಿಕೊಳ್ಳದಿದ್ದರೆ, ಅವರ ಮನಸ್ಥಿತಿ ಹೇಗಿದೆಯೆಂದು ತಿಳಿಯುವುದು ಹೇಗೆ? ಜೀವನದಲ್ಲಿಯೂ ಅಷ್ಟೆ ದೂರದ ಗುರಿಯನ್ನು ತಲುಪುವ ನಡುವೆ ನಾವು ಆನಂದಿಸುವುದನ್ನು ಕಲಿಯಬೇಕು. ಆನಂದದ, ಸಂತೋಷದ ಮೂಲ ನಾವಾಗಿರಬೇಕು. ನಾವಿದ್ದಲ್ಲಿಯೇ ಸುಖ, ನಗು ಸಂತೋಷವನ್ನು ಸೃಷ್ಟಿಸುವಂತಾಗಬೇಕು, ಲವಲವಿಕೆಯ ಬದುಕಾಗಬೇಕು. ಬೇರೆಯವರ ಜಾಗದಲ್ಲಿ ನಿಂತು ಅವರ ಜೀವನವನ್ನು ಅನುಭವಿಸಬೇಕು.

ಎಲ್ಲಿಯೂ ನಿಲ್ಲದೇ ಯಾವುದಕ್ಕೂ ನಿಲುಕದ ಎಲ್ಲಿಗೂ ಅಂಟಿಕೊಳ್ಳದ ಬದುಕು ನಮ್ಮದಾಗಬೇಕು. ಎಲ್ಲವನ್ನೂ ಮೀರಿದ ಬದುಕಾಗಬೇಕು. ಇದು ಎಲ್ಲರಿಗೂ ಒಪ್ಪಿಗೆಯಾಗುವುದಿಲ್ಲ ಆದರೂ ನನಗೆ ಅದರ ಸಮಸ್ಯೆಯಿಲ್ಲ. ಇದು ನನ್ನ ಬದುಕು ನನ್ನ ಆಯ್ಕೆ. ನನ್ನ ಬಗ್ಗೆಯೇ ಹೇಳಬೇಕೆಂದರೆ, ಪಿಎಚ್‍ಡಿ ಮಾಡಿ ಯಾವುದೋ ವಿಶ್ವವಿದ್ಯಾಲಯದಲ್ಲಿ ಕುಳಿತು ಸಂಶೋಧನೆಯನ್ನು ಮಾಡಬಹುದಿತ್ತು, ಪಾಠ ಮಾಡಿ ಅಥವಾ ಮಾಡದೆ ಸಂಬಳ ಎಣಿಸಬಹುದಿತ್ತು. ಹಿಂದಿದ್ದ ಉತ್ತಮ ಕಂಪನಿಗಳಲ್ಲಿಯೂ ನೆಮ್ಮದಿಯ ಬದುಕನ್ನು ಸಾಗಬಹುದಿತ್ತು. ನಿಂತ ನೀರಾಗುವ ಮನಸ್ಸು ನನ್ನದಲ್ಲ. ನಾನು ಮಾನಸಿಕವಾಗಿ ಸಾಯುವುದಕ್ಕೆ ಸಿದ್ದನಿಲ್ಲ. ಸಂಸ್ಥೆಯನ್ನು ಕಟ್ಟಬೇಕು, ಒಂದು ಸಂಸ್ಥೆಯನ್ನು ಕಟ್ಟುವುದೇ ಆನಂದ, ಅಲ್ಲಿ ನೂರಾರು ಸಮಸ್ಯೆಗಳಿವೆ, ನೋವುಗಳಿವೆ, ದುಃಖವಿದೆ, ಅಸಹ್ಯವೆನಿಸುತ್ತದೆ, ಬೇಸರವಾಗುತ್ತದೆ, ಜೊತೆ ಜೊತೆಗೆ ಹೆಮ್ಮೆ, ಸಂತೋóಷವೂ ಸಿಗುತ್ತದೆ. ಜೀವನ ಬಯಸಿದಂತೆಯೇ ಬರುವುದಿಲ್ಲ, ನಾವು ಎಲ್ಲದ್ದಕ್ಕೂ ಸಿದ್ದರಾಗಿರಬೇಕು, ಹೊಂದಾಣಿಕೆಗಲ್ಲ, ಹೋರಾಟಕ್ಕೆ. ಯಾವುದಕ್ಕೂ ಅಂಟಿಕೊಳ್ಳದೆ ಎನ್ನುವುದಕ್ಕೆ ಮತ್ತಷ್ಟು ವಿವರಣೆಯ ಅಗತ್ಯವಿದೆಯೆಂದು ಕಾಣುತ್ತದೆ. ನಿಜ ಹೇಳಬೇಕೆಂದರೆ, ನನಗೆ ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವ ವಿದ್ಯಾಲಯಕ್ಕೆ ಹೋಗಬೇಕು ಅನ್ನುವ ಆಸೆಯಿತ್ತು. ಅದಕ್ಕೆ ಸಿದ್ದತೆಯೂ ನಡೆದಿತ್ತು, ನಂತರ ಅಲ್ಲಿ ಮಾಡುವುದನ್ನು ಇಲ್ಲಿಯೇ ಮಾಡಬಾರದೇಕೆ ಎನ್ನುವ ನಿಲುವಿಗೆ ಬಂದು ನಿಂತೆ. ವಿದೇಶಿ ವಿಶ್ವ ವಿದ್ಯಾಲಯಗಳು ಎನ್ನುವ ಭ್ರಮೆ ನನ್ನಿಂದ ದೂರಾಯಿತು, ಅದು ಆಗಿದ್ದು ಒಳ್ಳೆಯದೆ ಆಯಿತು ಎನಿಸುತ್ತದೆ. ನನ್ನ ಹಿಂದಿನ ಲೇಖನ ಮೊದಲಯಾನವನ್ನು ನೋಡಿದರೆ ಸಾಕಷ್ಟು ವಿಷಯಗಳು ನಿಮಗೆ ತಿಳಿಯುತ್ತದೆ. 

ನಾನು ಸೆಮಿನಾರ್‍ ಗಳು, ಸಮ್ಮೇಳನಗಳ ವಿರೋಧಿ. ಅದನ್ನು ಒಪ್ಪುವುದಿಲ್ಲ. ಹತ್ತು ವರ್ಷದ ಹಿಂದೆ 2008ರಲ್ಲಿ ಶ್ರೀಲಂಕಾ ಹೋಗಿದ್ದೆ, ಒಂದು ಸಮ್ಮೇಳನಕ್ಕೆ ಪಂಚತಾರಾ ಹೋಟೆಲಿನಲ್ಲಿ ಸಮ್ಮೇಳನ, ಅದನ್ನು ನೋಡಿದ ನಂತರ ಮುಂದಿನ ಸಮ್ಮೇಳನಗಳಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟೆ. ಅಲ್ಲಿ ಮಾಡುವುದಾದರೂ ಏನು? ಕೆಲವರಿಗೆ ಸಮ್ಮೇಳನಗಳಿಗೆ ಹೋಗುವುದೇ ಹೆಮ್ಮೆಯ ವಿಷಯ. ಬೇರೆ ದೇಶಗಳಿಗೆ ಹೋಗುವುದೇ ಗೌರವದ ವಿಷಯ. ನನಗೆ ಯಾವುದೋ ಹಳ್ಳಿಯ ಸರ್ಕಾರಿ ಶಾಲೆಗೆ ಹೋಗುವಾಗ ಕೊಡುವಷ್ಟು ಸಂತೋಷ, ಆ ಮಕ್ಕಳೊಂದಿಗೆ ಬೆರೆತಾಗ ಸಿಗುವ ಆನಂದ ಮತ್ತೊಂದರಲ್ಲಿ ಸಿಗುವುದಿಲ್ಲ. ನನ್ನೂರು ನದಿ ದಂಡೆಯ ಮೇಲೆ ಒಂದು ಗಂಟೆ ಕುಳಿತು ಇಡೀ ಜಗತ್ತನ್ನು ನೆನೆದು ಕಲ್ಪಿಸಿಕೊಂಡು ನನ್ನಷ್ಟಕ್ಕೆ ನಾನು ನಗುತ್ತೇನೆ, ಅದರ ಜೊತೆಗೆ ಕಣ್ಣಾಲಿಗಳು ತುಂಬಿರುತ್ತವೆ ಅದು ನನಗೆ ಸ್ವರ್ಗ. ಇರಲಿ ಎಲ್ಲರೂ ನನ್ನಂತೆಯೇ ಇರಬೇಕೆಂದೇನಿಲ್ಲ. ನನ್ನ ಜೊತೆಗಾರರು 20-30 ದೇಶಗಳನ್ನು ಸುತ್ತಿ ಬಂದಿದ್ದಾರೆ, ಅವರು ನನ್ನನ್ನು ಗೇಲಿ ಮಾಡುವುದುಂಟು, ನಿನ್ಯಾಕೆ ಸನ್ಯಾಸಿಯಾದೆ ಎಂದು. ಇದರ ಅರ್ಥವಿಷ್ಟೆ ನಾನು ಇರುವಲ್ಲಿಯೇ ಸ್ವರ್ಗ ಕಟ್ಟಿಕೊಳ್ಳಬಯಸುವವನು. ಸ್ವಲ್ಪ ವಿಷಯಾಂತರವಾಯಿತು ಮತ್ತೆ ವಿಷಯಕ್ಕೆ ಬರೋಣ.

ಇತ್ತೀಚಿನ ದಿನಗಳ ಬೆಳವಣಿಗೆಯನ್ನು ಗಮನಿಸಿ. ಕೆಲವು ಸಿದ್ದಾಂತಗಳಿಗೆ ಜೋತುಬಿದ್ದು ಅದರಿಂದ ಹೊರಕ್ಕೆ ಬರಲಾಗದೆ, ಅಲ್ಲಿ ನೆಮ್ಮದಿಯಾಗಿಯೂ ಇರಲಾಗದೆ ಬೌದ್ಧಿಕವಾಗಿ ಸತ್ತಿರುವ ಅನೇಕರನ್ನು ನೋಡಿದ್ದೇನೆ. ಬೌದ್ಧಿಕವಾಗಿ ಸಾಯುವುದು ಎಂದರೇನು? ನಾನು ಇದನ್ನು ಇಂಟಲೆಕ್ಚುವಲ್ಲಿ ಡೆಡ್ ಅಂತಾ ಕರೀತಿನಿ. ಮೆಂಟಲಿ ಡೆಡ್ ನಿಮ್ಮೆಲ್ಲರಿಗೂ ಗೊತ್ತು ಆದರೆ ಈ ಇಂಟಲೆಕ್ಚುವಲ್ಲಿ ಡೆಡ್ ಯಾವುದು? ವಿವರಿಸುತ್ತೇನೆ. ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಎರಡು ಗುಂಪಿದೆ ಇದು ಎಲ್ಲಿ ಜನಿಸಿತು, ಇದರ ಸ್ವರೂಪವೇನು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ ಅದನ್ನು ಇಲ್ಲಿ ನಾನು ವಿವರಿಸುವುದು ಇಲ್ಲ. ಆ ಉತ್ತರವನ್ನು ನೀವೇ ಹುಡುಕಿಕೊಳ್ಳಿ. ಯಾವ ದೇಶದಿಂದ ಬಂತು ಎನ್ನುವುದನ್ನು. ಅದರಂತೆಯೇ ಮೂಲಭೂತವಾದ, ಕೋಮುವಾದವೆನ್ನುವ ಪದಬಳಕೆಯೂ ಅಷ್ಟೆ, ನಮ್ಮಲ್ಲಿ ಅನೇಕ ಪದಗಳ ಬಳಕೆ ಹೇಗೆ ಬಂತು ಎನ್ನವುದರ ಅರಿವಿಲ್ಲ. ಮೂಢನಂಬಿಕ ಎನ್ನುವುದು ಮತ್ತೊಂದು ವಾದ ಮಾಡಬಲ್ಲ ಪದವೇ ಸರಿ. ಇರಲಿ ಎಲ್ಲವನ್ನು ಇಲ್ಲಿ ಹೇಳಬೇಕೆಂಬ ನಿಯಮವಿಲ್ಲ ಅಥವಾ ಅದರ ಅನಿವಾರ್ಯತೆ ಸದ್ಯಕ್ಕಿಲ್ಲ. ಈ ವಿಷಯವನ್ನು ಮುಂದೊಮ್ಮೆ ನಿಮ್ಮ ಮುಂದಿಡುತ್ತೇನೆ. ಅತಿಯಾದರೇ ಅಜೀರ್ಣವಾದೀತು!

ಸಿದ್ದಾಂತಗಳ ವಿಷಯವನ್ನು ತಿಳಿಸುತ್ತೇನೆ. ಯಾವುದಾದರೂ ಒಂದು ಸಿದ್ದಾಂತಕ್ಕೆ ಅಂಟಿಕೊಂಡರೆ ಏನಾಗಬಹುದೆಂಬುದನ್ನು ಸ್ವಲ್ಪ ಅವಲೋಕಿಸೋಣ. ಮೊದಲಿಗೆ ಪಕ್ಷಗಳ ವಿಷಯಕ್ಕೆ ಬರೋಣ, ನೀವೊಂದು ಪಕ್ಷವನ್ನು ಬೆಂಬಲಿಸಿದಿರಿ ಎಂದು ತಿಳಿಯೋಣ ಅದೆಷ್ಟು ಜನರು ಅವರ ಪಕ್ಷದವರು ತಪ್ಪು ಮಾಡಿದ್ದನ್ನು ತಪ್ಪು ಎನ್ನುವ ಧೈರ್ಯ ತೋರಿಸುತ್ತಾರೆ? ಎಲ್ಲದರ ಪರ ವಹಿಸತೊಡಗುತ್ತಾರೆ. ಅವರ ನಾಯಕರುಗಳು ಏನೇ ತಪ್ಪು ಮಾಡಿದರೂ ಅದನ್ನು ಸಮಜಾಯಿಸಿಕೊಳ್ಳುವುದಕ್ಕೆ ಮುನ್ನುಗ್ಗುತ್ತಾರೆ. ನಮ್ಮ ರಾಜ್ಯದ ಮೂರು ಪಕ್ಷದ ಕಾರ್ಯಕರ್ತರಿದ್ದಾರೆ, ಅವರ ಪಕ್ಷದ ಸರಿತಪ್ಪುಗಳೆರಡನ್ನು ಸಮಜಾಯಿಸಿಕೊಳ್ಳುತ್ತಾರೆ. ಆತ್ಮ ಸಾಕ್ಷಿಯೆಂಬುದು ಕಳಚಿದೆ ಎನಿಸುವುದಿಲ್ಲವೇ? ಅದರಂತೆ, ಯಾವುದೇ ಸಿದ್ದಾಂತ ಸಿದ್ಧ ಸೂತ್ರಗಳು ಇಡೀ ವಿಶ್ವಕ್ಕೆ ಒಪ್ಪಲು ಸಾಧ್ಯವಿಲ್ಲ. ಇದು ಎಲ್ಲಾ ಕ್ಷೇತ್ರಗಳಲ್ಲಿಯೂ ಅನ್ವಯ. ಪ್ರಾದೇಶಿಕತೆ ಮುಖ್ಯವಾಗುತ್ತದೆ. ಪ್ರಾದೇಶಿಕತೆಯ ವಿಷಯವೆಂದರೆ, ಆ ಭಾಗಕ್ಕೆ ಆಗುವುದು ಅಥವಾ ಒಪ್ಪುವುದು. ಕಮ್ಯುನಿಷ್ಠ್ ಸಿದ್ದಾಂತವೇ ಆಗಲಿ ಮತ್ತೊಂದೆ ಆಗಲಿ. ಕೆಲವೊಂದು ಸಂಘಗಳು, ಸಂಸ್ಥೆಗಳು ಅಷ್ಟೆ. ಇದಕ್ಕೆ ನಿಮಗೆ ಅರ್ಥವಾಗುವಂತೆ ಆಹಾರ ಪದ್ದತಿಯನ್ನು ಎರಡು ಅಥವಾ ಮೂರು ಸಾಲುಗಳಲ್ಲಿ ಹೇಳುತ್ತೇನೆ. ಪ್ರತಿಯೊಂದು ಸ್ಥಳಕ್ಕೂ ಅದರದ್ದೇ ಆಹಾರ ಪದ್ದತಿಯಿರುತ್ತದೆ. ಉದಾಹರಣೆಗೆ: ರಾಗಿ ಮುದ್ದೆ ಆರೋಗ್ಯಕ್ಕೆ ಒಳ್ಳೆಯದು ಯಾವ್ಯಾವ ಜಿಲ್ಲೆಗೆ? ಜೋಳದ ರೊಟ್ಟಿ? ಗೋಧಿ? ಅಕ್ಕಿ?. ಆಲೂಗೆಡ್ಡ ಉತ್ತಮ ಉದಾಹರಣೆಯೂ ಆಗುತ್ತದೆ, ಅಂಡಮಾನ್ ನಿಕೋಬಾರ್‍ಗೆ ಹೋದರೆ ಆಲೂಗೆಡ್ಡೆಯಿಲ್ಲದ ಊಟವೇ ಇಲ್ಲ. ನಮ್ಮಲ್ಲಿ ವಾಯೂ ಎನ್ನುತ್ತಾರೆ!? ಗೋಧಿಯ ಕುರಿತು ನನ್ನದು ಇದೇ ನಿಲುವು. ಮುಂದೊಂದು ದಿನ ಚರ್ಚಿಸೋಣ, ನಾನು ಗೋಧಿ ವಿರೋಧಿ!

ಈ ವಿಚಾರವನ್ನು ಮತ್ತಷ್ಟು ವಿವರಿಸೋಣ. ನಾನು ಗಮನಿಸಿರುವಂತೆ ಕೆಲವು ನೌಕರರ ಸಂಘಗಳು, ಕನ್ನಡ ಪರ ಸಂಘಟನೆಗಳು, ಕೆಲವು ಜಾತಿಯ ಸಂಘಗಳನ್ನು ದುರುಪಯೋಗ ಪಡಿಸಿಕೊಂಡಿದ್ದು ಇದೇ ರೀತಿಯೇ ಎಂದರೂ ಸರಿ. ಸಂಘದವನೇ ತಪ್ಪು ಮಾಡಿದ್ದರೂ ಅದನ್ನು ಸಮಜಾಯಿಸಿಕೊಂಡು ನಂತರ ದಬ್ಬಾಳಿಕೆ ನಡೆಸುತ್ತಿರುವುದು ನಮ್ಮ ಕಣ್ಮುಂದೆಯೇ ಇದ್ದರೂ ನಾವು ಮೌನವಾಗಿರುವುದು ದುರಂತ. ಪಕ್ಷದ ವಿಷಯದಲ್ಲಿಯೂ ಅಷ್ಟೇ ಯಾವೊಂದು ಪಕ್ಷವೂ ಪರಿಪೂರ್ಣವಾಗಿ ಸರಿಯೆಂದು ಹೇಳಲಾಗುವುದಿಲ್ಲ. ಎಲ್ಲಾ ಪಕ್ಷಗಳಲ್ಲಿಯೂ ನ್ಯೂನತೆಗಳಿರುತ್ತವೆ, ಅದನ್ನು ಒಪ್ಪಲು ಸಿದ್ದರಿರಬೇಕು. ಯಾವುದೇ ಐಡಿಯಾಲಜಿಗಳು ಅಷ್ಟೇ, ಅದು ಆ ದಿನಕ್ಕೆ, ಆ ಸಮಯಕ್ಕೆ, ಮಾಡಿರುವುದು ಎನ್ನುವುದನ್ನು ನಾವು ಮನನ ಮಾಡಿಕೊಳ್ಳಬೇಕು. ಯಾವುದೇ ಚಳುವಳಿಗಳು ಅಷ್ಟೇ. ಎಂಬತ್ತರ, ತೊಂಬತ್ತರ ಪರಿಸರ ಚಳುವಳಿಗಳು, ಭಾಷಾ ಚಳುವಳಿಗಳು ಯಶಸ್ವಿಯಾದವು. ಈಗ ಅದೇ ಮಾದರಿಯ ಯಾವೊಂದು ಚಳುವಳಿಗಳು ಯಶಸ್ವಿಯಾಗುವುದಿಲ್ಲ. ಉದಾಹರಣೆಗೆ, ಇತ್ತೀಚಿನ ಮಹದಾಯಿ ಹೋರಾಟ, ವರ್ಷ ತುಂಬಿದರೂ ಏಕೆ ಯಶಸ್ವಿಯಾಗುತ್ತಿಲ್ಲ? ಇದನ್ನು ನಾವು ಅವರ ಮೇಲೆ, ಇವರ ಮೇಲೆ, ಆರೋಪ ಮಾಡುವುದನ್ನು ನಿಲ್ಲಿಸಿ ಆವಲೋಕಿಸಬೇಕಿದೆ. ಕೊರತೆಗಳೇನು? ಎಲ್ಲಿ ನಾವು ಎಡವುತ್ತಿದ್ದೇವೆ? ಭಾಷೆಯ ವಿಷಯವೇ ಇರಲಿ ಎಲ್ಲವನ್ನೂ ಮುಕ್ತವಾಗಿ ಚರ್ಚಿಸಬೇಕಿದೆ. ವಿಷಯಾಂತರವಾಗುತ್ತಿದೆ. ಕ್ಷಮೆಯಿರಲಿ, ಮುಖ್ಯವಾದ ವಿಷಯವಾಗಿರುವುದರಿಂದ ಇದನ್ನು ಇನ್ನಷ್ಟೂ ಮುಂದುವರೆಸುತ್ತೇನೆ. 

ಇಲ್ಲಿರುವ ಕೊರತೆಗಳೇನು? ಸಮಗ್ರವಾಗಿಯೇ ಚರ್ಚಿಸೋಣ. ನನಗೆ ಇತ್ತಿಚಿನ ದಿನಗಳಲ್ಲಿ ಬಹಳ ಕಾಡುತ್ತಿರುವ ಪ್ರಶ್ನೆ. ನಮ್ಮ ಬೌದ್ದಿಕ ಗುಣಮಟ್ಟದ ಕುಸಿತ. ಇಂಟಲೆಕ್ಚುವಲ್ ಡಿಪ್ಲಿಷನ್ ಎನ್ನುತ್ತೇನೆ. ನಮ್ಮ ಅನೇಕರಲ್ಲಿ ಇಡೀ ಜಗತ್ತು ಅಥವಾ ಇಡೀ ಸಮಾಜವೇ ಒಂದು ಕುಟುಂಬವೆನ್ನುವ ಕಲ್ಪನೆಯೇ ಅಸಾಧ್ಯವೆನಿಸಿದೆ. ಪ್ರತಿಯೊಂದಕ್ಕೂ ರಾಜಕೀಯಕ್ಕೆ, ಜಾತಿಗೆ, ಭಾಷೆಗೆ ಅಂಟಿಸುತ್ತೇವೆ. ಅದೆಷ್ಟರ ಮಟ್ಟಿಗೆ ತಲುಪಿದೆಯೆಂದರೆ, ದೇವೇಗೌಡರನ್ನು ಯಾರಾದರೂ ಬೈದರೇ ಇಡೀ ಒಕ್ಕಲಿಗ ಸಮುದಾಯಕ್ಕಾದ ಅವಮಾನವೆಂದು ಬಿಂಬಿಸುತ್ತೇವೆ ಅದೇ ರೀತಿ ಯಡ್ಯೂರಪ್ಪರವರನ್ನು, ಸಿದ್ದರಾಮಯ್ಯನವರನ್ನೂ ಎಲ್ಲರನ್ನೂ ಒಂದು ಜಾತಿಗೆ ಸೇರಿಸುತ್ತೇವೆ ಒಂದು ಜಾತಿಗೇ ಸೀಮಿತಗೊಳಿಸುತ್ತೇವೆ. ಇದರ ದುರಂತಗಳನ್ನು ನೋಡೋಣ, ವಿಶ್ವ ಮಾನವರಾಗಿ ಎಂದ ಕುವೆಂಪುರವರನ್ನು ಒಕ್ಕಲಿಗರ ಕವಿಯೆನ್ನುವ ಮಟ್ಟಕ್ಕೆ ತಂದಿಟ್ಟಿದ್ದೇವೆ, ಜಾತಿಯನ್ನು ಬಿಟ್ಟು ಬನ್ನಿ ಎಂದ ಬಸವಣ್ಣರವರನ್ನು ಲಿಂಗಾಯತರಿಗೆ ಮೀಸಲಿಟ್ಟಿದ್ದೀವಿ, ಅಂಬೇಡ್ಕರ್‍ ರವರನ್ನು ಒಂದು ವರ್ಗಕ್ಕೆ ಸೀಮೀತರಾಗಿಸಿದ್ದೇವೆ. ಈ ವಿಷಯವಾಗಿಯೂ ಅಷ್ಟೇ, ಮತ್ತೊಮ್ಮೆ ಚರ್ಚಿಸೋಣ ಅಥವಾ ನಾನೇ ಬರೆಯುತ್ತೇನೆ.

ಇವರೆಲ್ಲರೂ ಇಡೀ ಮನುಕುಲದ ಒಲಿತಿಗೆ ಶ್ರಮಿಸಿದವರು ಎನ್ನುವುದನ್ನು ಮೆರೆತಿದ್ದೇವೆ. ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೆಲವರು, ರಾಜಕೀಯ ಲಾಭಕ್ಕೆ ಬಳಸಿದ್ದಾರೆಂಬುದು ತಿಳಿದಿರುವ ವಿಷಯ. ಆದರೆ ನಾವುಗಳು ನಮ್ಮ ಭೌದ್ದಿಕತೆಯ ಮಟ್ಟವನ್ನು ಮಣ್ಣು ಪಾಲು ಮಾಡಿದ್ದು ಹೇಗೆ? ಈ ಅಧಿಪತನ ಶುರುವಾಗಿದ್ದು ಹೇಗೆ ಎನ್ನುವುದನ್ನು ನೋಡೇ ಬಿಡೋಣ. ಇಪ್ಪತ್ತು ವರ್ಷ ಹಿಂದಕ್ಕೆ ಹೋಗೋಣ. ನಿಮ್ಮ ತಂದೆಯರಿಗೆ ಇದ್ದ ಬೌದ್ಧಿಕ ಗುಣಮಟ್ಟವನ್ನೊಮ್ಮೆ ಅವಲೋಕಿಸಿ, ಅವರಿಗಿದ್ದ ನ್ಯಾಯದ ಕಲ್ಪನೆ, ಅನ್ಯಾಯದ ಕಲ್ಪನೆ, ಮಾನವೀಯತೆಯ ದೃಷ್ಟಿಕೋನ, ಅವರಿಗಿದ್ದ ಸಾಮರ್ಥ್ಯ, ಅವರ ಆಲೋಚನಾ ಲಹರಿ. ಅವರು ವಿದ್ಯಾಬ್ಯಾಸದಲ್ಲಿ ಕಡಿಮೆಯಿದ್ದರಬಹುದು. ಐಪಿಸಿ ಸೆಕ್ಸನ್‍ಗಳು ಗೊತ್ತಿಲ್ಲದೇಯಿರಬಹುದು. ಆದರೇ ಎಲ್ಲರನ್ನೂ ಪ್ರೀತಿಸುವುದು ಗೊತ್ತಿತ್ತು, ಎಲ್ಲರನ್ನೂ ಗೌರವಿಸುವುದು ಗೊತ್ತಿತ್ತು. ಸ್ವಾಭಿಮಾನದ ಪ್ರತೀಕವೆಂಬಂತೆ ಬದುಕನ್ನು ನಡೆಸಿದರು. ಒಂದು ರೂಪಾಯಿಗೂ ಕೈಚಾಚದೆ ಅಥವಾ ತೆಗೆದುಕೊಂಡ ಹಣವನ್ನು ಮೋಸ ಮಾಡದೇ ಹಿಂದಿರುಗಿಸುತ್ತಿದ್ದರು. ಆದರೇ ಈಗಿನ ಅನೇಕರು ಮೋಸ ಮಾಡಿದರೂ ಅದೆಲ್ಲವೂ ಏನೂ ಅಲ್ಲವೆನ್ನುವಂತೆ ಬದುಕುತ್ತಿದ್ದಾರೆ. ಕದಿಯುವುದು ತಪ್ಪಲ್ಲ ಆದರೆ ಗೊತ್ತಾಗದಂತೆ ಕದಿಯಬೇಕೆನ್ನುವುದನ್ನು ಕಲಿಸುತ್ತಿದ್ದೇವೆ. ಉಪಸಂಹಾರವೆಂದರೆ, ನಾವು ಸಂಕುಚಿತರಾಗುತ್ತಿದ್ದೇವೆ. ಆ ಗಡಿಯನ್ನು/ಬೇಲಿಯನ್ನು ದಾಟಿ ಬೆಳೆಯಬೇಕು, ಪ್ರೀತಿಯನ್ನು ಪಸರಿಸಬೇಕು.

ಎರಡನೆಯದಾಗಿ, ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ? ನನ್ನನ್ನು ಅನೇಕರು ಕಾಲಿಗೆ ಚಕ್ರ ಹಾಕಿಕೊಂಡಿರುವವನು ಎನ್ನುತ್ತಾರೆ. ಇದನ್ನು ನಾನು ಒಪ್ಪುತ್ತೇನೆ, ಅದಕ್ಕೆ ಕಾರಣಗಳೆರಡು. ನಮ್ಮ ಸುತ್ತ ಮುತ್ತ ಏನಿದೆ? ಏನು ನಡಿತಾ ಇದೆ ಎನ್ನುವುದರ ಅರಿವು ನಮಗಿರಬೇಕು. ಸುತ್ತುವಾಗ ನಾವು ಹೊಸ ವ್ಯಕ್ತಿಗಳಾಗಿ ರೂಪುಗೊಳ್ಳುತ್ತೇವೆ. ನಾನು ಎಲ್ಲಾ ಮಾದರಿಯಲ್ಲಿಯೂ ಪ್ರಯಾಣಿಸಿದ್ದೇನೆ. ಒಂದೇ ಆಟೋದಲ್ಲಿ ಹತ್ತು ಜನರು ಪ್ರಯಾಣಿಸುವುದರಿಂದ ಹಿಡಿದು ಲಕ್ಷುರಿಯೆನಿಸುವ ಕಾರಿನಲ್ಲಿ, ಮೊದಲ ದರ್ಜೆಯ ರೈಲಿನಿಂದ ಹಿಡಿದು ತುಂಬಿತುಳುಕುತ್ತಿರುವ ರೈಲಿನ ಶೌಚಾಲಯದ ಬಳಿಯಲ್ಲಿ ರಾತ್ರಿಯೆಲ್ಲಾ ತೂಕಡಿಸುತ್ತಾ. ಕಪ್ಪು ಬೋರ್ಡಿನ ಬಸ್ಸಿನಿಂದ ಮಲ್ಟಿ ಆಕ್ಸೆಲ್ ತನಕ. ಇದರಿಂದ ನನಗಾದ ಮನಪರಿವರ್ತನೆ ಇಷ್ಟೆ, ನಾವು ಯಾವುದೇ ವಾಹನ ಬಂದರೂ ಸರಿ ಹೊರಡಲು ಸಿದ್ದರಿರಬೇಕು ಏಕೆಂದರೆ ಗುರಿ ಮಾತ್ರ ಮುಖ್ಯ, ಹೋಗುವ ವಾಹನವಲ್ಲ. ಆದರೆ ಪಾಲಿಸುವ ಮಾರ್ಗ ಅದೆಲ್ಲದಕ್ಕಿಂತ ಮುಖ್ಯ. ಉಪಸಂಹಾರವೆನ್ನಬೇಕಾದರೆ ಸರಳವಾಗಿ ಹೇಳುತ್ತೇನೆ, ನಮ್ಮ ಗುರಿಗಳು ಏನೇ ಇರಲಿ ಅವುಗಳನ್ನು ಸಾಧಿಸುವ ಮಾರ್ಗವೂ ಮುಖ್ಯ, ಅದನ್ನು ಸಂತೋಷದಿಂದ ಸಾಧಿಸಬೇಕು ಮತ್ತು ನಾವು ತೆರಳುವ ಮಾರ್ಗ ಅರ್ಥಪೂರ್ಣವಾಗಿರಬೇಕು, ಗೆಲ್ಲುವುದೇ ಮುಖ್ಯವೆಂದು ಅಡ್ಡದಾರಿಯಿಂದ ಸಾಧಿಸಬಾರದು. ನಮ್ಮತನವನ್ನು ಬಿಟ್ಟು ಬದುಕಬಾರದು.

ಮೇಲಿನ ಸಾಲುಗಳಲ್ಲಿ ನಮ್ಮತನವೆಂದು ಬಳಸಿದ್ದೇನೆ. ಈ ನಮ್ಮತನವೆಂದರೆ ಏನು? ಅದು ಹೇಗೆ ರೂಪಿತವಾಗಿದೆ ಅಥವಾ ಅದನ್ನು ಹೇಗೆ ಗುರಿತಿಸಿಕೊಳ್ಳಬೇಕು? ನಾನು ನನ್ನದು ಅನ್ನುವುದು ಅಹಂಕಾರವಲ್ಲವೇ? ಸ್ವಾರ್ಥವಲ್ಲವೇ. ನಮ್ಮತನವೆನ್ನುವುದು ನನ್ನ ಪಾಲಿಗೆ ಒಂದಿಷ್ಟು ಗುರುತುಗಳು ಅಷ್ಟೆ. ಗುರುತು ಎಂದರೆ ಐಡೆಂಟಿಟಿಯಲ್ಲ ಅದೊಂದು ನಿಯಮ ಅಂದರೆ ಬದಲಾಗದ ನಿಯಮಗಳಲ್ಲ, ಒಂದಿಷ್ಟು ಷರತ್ತುಗಳು ಆಗಿರಬಹುದು. ಉದಾಹರಣೆಗೆ: ಇಡೀ ವಿಶ್ವವೇ ನನ್ನ ಮನೆಯೆಂಬ ನಂಬಿಕೆ ನನ್ನದು ಹಾಗೆಂದ ಮಾತ್ರಕ್ಕೆ ನಾನು ನನ್ನ ದೇಶವನ್ನ ಪ್ರೀತಿಸುತ್ತಿಲ್ಲಾ, ಅಥವಾ ನನ್ನ ರಾಜ್ಯವನ್ನ, ನನ್ನೂರನ್ನ ಪ್ರೀತಿಸುವುದಿಲ್ಲವೆಂದಲ್ಲ. ಮೊದಲಿಗೆ ನಾನು ಬಾನುಗೊಂದಿಯವನು ನಂತರ ಹಾಸನದವನು ನಂತರ ಕರ್ನಾಟಕದವನು ನಂತರ ಭಾರತೀಯ ನಂತರ ವಿಶ್ವಮಾನವನೆನ್ನುವ ಹಂತಕ್ಕೆ ತಲುಪಬೇಕು. ನಾವೆಲ್ಲರೂ ಒಂದೇ ಎನ್ನುವುದು ಸುಲಭ, ಆದರೆ ಅದನ್ನು ಅನುಸರಿಸುವುದು? ಆದ್ದರಿಂದ ನನ್ನದು ಮೊದಲು ಮಾನವಿಯ ಧರ್ಮವಾಗಬೇಕೆನ್ನುವವನು. ಮೊದಲು ಮಾನವೀಯತೆಯಿಂದ ಬದುಕಬೇಕು ಎಂದು ನಂಬಿರುವವನು.

ಪ್ರಪಂಚದ ಯಾವುದೇ ಮೂಲೆಯ ಯಾವುದೇ ವ್ಯಕ್ತಿಗೆ ನೋವಾದರೂ ನಾನು ಧಾವಿಸುವಂತಾಗಬೇಕು. ನನ್ನ ಶತ್ರುವಿಗೂ ನಾನು ನನ್ನ ಸಹಾಯ ಹಸ್ತವನ್ನ ನೀಡಬೇಕು. ಭಾಷೆ, ಜಾತಿ, ಧರ್ಮ, ದೇಶ ಮೀರಿ ಆಲೋಚಿಸುವಂತಾಗಬೇಕು. ಇದು ಸಾಧ್ಯವೇ? ಮಹಾತ್ಮ ಗಾಂಧಿಯವರು ದೇಶಗಳಿಗೆ ಯಾವುದೇ ಗಡಿಯಿರಬಾರದು ಎಂದು ಪ್ರತಿಪಾದಿಸಿದರು. ಮೊದಲ ದಿನಗಳಲ್ಲಿ ಅವರು ಬ್ರಿಟಿಷರನ್ನು ತೊಳಗಿಸಲು ಹೋರಾಡಿದ್ದು ಎಷ್ಡು ಸತ್ಯವೋ ಅದೇ ರೀತಿ ಅವರ ರಾಜಕೀಯ ನೀತಿಗಳು ಸತ್ಯ. ಅದು ನನ್ನನ್ನು ಬಹಳವಾಗಿ ಕಾಡುತ್ತದೆ. ಇಡೀ ಜಗತ್ತೇ ಒಂದು ಮನೆಯಂತೆ ಜೀವಿಸುವುದಾದರೇ ಹೇಗಿರಬಹುದು? ಕಲ್ಪನೆಗೆ ನಿಲುಕದ್ದು. ಎಂತಹ ರೋಮಾಂಚಕ ಅನುಭವ ಎನಿಸುವುದಿಲ್ಲವೇ? ಕೆಲವರ ಮನಸ್ಸು ತನ್ನ ಮನೆ, ತನ್ನ ಸಂಸಾರವೆನ್ನವ ಗಡಿಯನ್ನೇ ದಾಟಲು ಸಿದ್ಧವಿರುವುದಿಲ್ಲ, ಇನ್ನೂ ವಿಶ್ವವನ್ನೇ? ಕೆಲವೊಂದು ಭಾವಾನಾತ್ಮಕ ವಿಷಯಗಳನ್ನ ಕೆಲವೇ ಕೆಲವು ಜನರು ಅವರ ಲಾಭಕ್ಕೆ ಬಳಸುತ್ತಿದ್ದಾರೆ. ಅದನ್ನೊಮ್ಮೆ ಅವಲೋಕಿಸೋಣ. 

ಅದಕ್ಕಿಂತ ಮುಂಚೆ ಬಹಳ ಮುಖ್ಯವಾದ ವಿಷಯವೊಂದನ್ನು ನಿಮಗೆ ತಿಳಿಸುತ್ತೇನೆ. ಯಾವುದೇ ಚರ್ಚೆಯನ್ನು ಅರ್ಧವಾಗಿ ಅಥವಾ ಬೇರೆ ಬೇರೆ ಭಾಗವಾಗಿ ಕೇಳಬಾರದು ಮತ್ತು ಭಾಗವಹಿಸಬಾರದು. ಯಾವುದೇ ಮಾತುಕತೆ ಯಾವ ಹಿನ್ನಲೆಯಲ್ಲಿ ನಡೆದಿದೆ ಎನ್ನುವುದನ್ನ ಮೊದಲು ಗ್ರಹಿಸಬೇಕು. ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ನೈತಿಕತೆ ಇಲ್ಲದ ಮಾಧ್ಯಮಗಳಿಂದಾಗಿ ಅನೇಕ ಗೊಂದಲಗಳು ಮತ್ತು ಸಮಾಜದ ಹೊಂದಾಣಿಕೆ ಹಾಳಾಗಿದೆ. ಅದೇನೆ ಇರಲಿ. ಇಲ್ಲಿ ನಾನು ಹೇಳುತ್ತಿರುವುದು ಈ ಚಿಂತನೆಗಳು ನಡೆಯುತ್ತಿರುವುದು ಒಬ್ಬ ವಿಶ್ವಮಾನವನನ್ನು ರೂಪಿಸುವ ಹಾದಿಯಲ್ಲಿ. ಈ ಚರ್ಚೆಯನ್ನು ಅಥವಾ ನನ್ನ ಮಾತನ್ನು/ವಾದವನ್ನು ನೀವು ಸಂಪೂರ್ಣವಾಗಿ ಗ್ರಹಿಸಬೇಕೆ ಹೊರತು, ಯಾವುದೋ ಒಂದು ಪ್ಯಾರಾವನ್ನು ಅಥವಾ ಒಂದೆರಡು ಸಾಲನ್ನು ಹಿಡಿದು ಅಪವಾದ ಮಾಡಿದರೆ ಅದಕ್ಕೆ ನೀವುಗಳೇ ಹೊಣೆಯೆಂದು ತಿಳಿಸಿರುತ್ತೇನೆ. 

ನನ್ನ ಪ್ರಕಾರ ಜೀವನವೆಂಬುದು ನಿರಂತರ ಯಾನ. ಆ ಯಾನದಲ್ಲಿ ಪ್ರತಿ ಕ್ಷಣವೂ ರೋಮಾಂಚಕಾರಿಯಾಗಿರುತ್ತದೆ. ಅದನ್ನು ಆನಂದಿಸಬೇಕು. ರೋಲರ್ ಕೋಸ್ಟರ್‍ನಲ್ಲಿ ಕುಳಿತಿರುವವರು ಏರಿಳಿತವನ್ನು ಆನಂದಿಸಬೇಕು. ಅಲ್ಲಿಯೂ ಕೋಮಾದಲ್ಲಿದ್ದರೇ? ಮಿ. ಬೀನ್ ಕಾಮೆಡಿಯೊಂದರಲ್ಲಿ ಮಿ.ಬೀನ್ ರೋ¯ರ್ ಕೋಸ್ಟರ್‍ನಲ್ಲಿ ಅಲ್ಲಾಡದೇ ಕುಳಿತಿರುತ್ತಾರೆ. ಹಾಗೆಯೇ ಕೆಲವರು ಜೀವನದಲ್ಲಿ ಏನೇ ನಡೆದರೂ ಒಂದೇ ಸಮನಾಗಿರುತ್ತಾರೆ. ಒಂದೇ ಸಮನೇ ಎಂದರೆ ನಿರ್ಭಾವುಕರಾಗಿರುತ್ತಾರೆಂದರ್ಥ. ಅಯ್ಯೋ ಬಿಡಿ ನಮ್ಮದೇನಿದೆ ಎನ್ನುತ್ತಾರೆ. ನೀವು ಹತ್ತು ಜನರನ್ನು ಮಾತನಾಡಿಸಿದರೆ ಒಂಬತ್ತು ಜನರು ಇದೇ ಉತ್ತರ ನೀಡುತ್ತಾರೆ. ವಿದ್ಯಾರ್ಥಿ ದೆಸೆಯನ್ನು ಕಳೆದ ನಂತರ ಕೆಲಸ ಹುಡುಕುವುದು, ಕೆಲಸ ಸಿಕ್ಕಿದ ನಂತರ ಒದ್ದಾಡುವುದು ಅದಾದ ನಂತರ ಸಂಸಾರದಲ್ಲಿ ಗೊಂದಲ ಮೂಡಿಸಿಕೊಂಡು ಕೊರಗುವುದು. ಇಲ್ಲ, ಯಾವುದೋ ಚಟಕ್ಕೆ ದಾಸರಾಗಿ ಮುಕ್ತರಾಗಲು ಪರದಾಡುವುದು. 

ಹೊಸ ಚಟಗಳ್ಯಾವುವು? ಇತ್ತೀಚಿನ ದಿನಗಳಲ್ಲಿ ಹಣ ಮಾಡುವುದೇ ಒಂದು ಚಪಲ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗುವುದು. ಅವನು ಸೈಟ್ ತೆಗೆದ, ಇವನು ಮನೆ ಕಟ್ಟಿದ, ಅವನು ಹೊಸ ಕಾರು ಹೀಗೆ. ಇನ್ನೂ ಕೆಲವರಿಗೆ ಇತ್ತೀಚೆಗೆ ಸುತ್ತಾಡುವ ಚಪಲ ಅದು ಪ್ರವಾಸದ ಚಪಲವಾದರೆ ಸಂತೋಷ. ಆದರೆ ಕೆಲವರದ್ದು ಮೋಜು ಮಸ್ತಿಯ ಚಟಗಳು. ನೀವು ಸುತ್ತಾಡುತ್ತೀರಿ, ಬೇರೆಯವರು ಸುತ್ತಾಡಿದರೆ ಮಾತ್ರ ಚಪಲವೇ? ನಾನು ಒಂದೇ ಸಮನೇ ಸುತ್ತಾಡುತ್ತಿರುತ್ತೇನೆ, ಆದರೆ ಅಲ್ಲಿ ವಿಭಿನ್ನತೆಗಳಿರುವಂತೆ ನೋಡಿಕೊಳ್ಳುತ್ತೇನೆ. ಸ್ಥಳೀಯತೆಯನ್ನು ತಿಳಿಯಲು, ಬೆರೆಯಲು ಯತ್ನಿಸುತ್ತೇನೆ. ನಾನು ಗಮನಿಸಿದ್ದೇನೆ ದೆಹಲಿಗೆ ಹೋಗಿ ಇಡ್ಲಿ ವಡೆ, ದೋಸೆ ಹುಡುಕುವವರನ್ನು. ಅಲ್ಲಿನ ಆಲೂ ಪರೋಟ ತಿನ್ನಬೇಕು, ಅಲ್ಲಿನ ಲಸ್ಸಿ ಕುಡಿಯಬೇಕೆ ಹೊರತು ದೆಹಲಿಯಲ್ಲಿ ಎಳನೀರು ಹುಡುಕಿದರೆ ನೀವು ದೆಹಲಿಗ್ಯಾಕೆ ಹೋಗಬೇಕು. ಕುಡಿದು ಮಲಗಲೆಂದೆ ಗೋವಾಗೆ ಹೋಗಬೇಕೆ? ಕುಡಿಯಿರಿ ಬೇಡವೆನ್ನುವುದಿಲ್ಲ ಆದರೆ ಅದೇ ಮುಖ್ಯ ಉದ್ದೇಶವಾಗಬಾರದಲ್ಲವೆ?

ನಾನು ಹೋದ ಕಡೆಯೆಲ್ಲಾ ಬೇರೆ ಬೇರೆ ಜನರೊಂದಿಗೆ ಬೇರೆ ವಿಷಯಗಳ ಕುರಿತು ಚರ್ಚಿಸುತ್ತೇನೆ ಅದೊಂದು ಬಗೆಯ ಸಮಾಜದ ಕುರಿತಾದ ಕುತೂಹಲ ಮತ್ತು ಅವರ ಬದುಕನ್ನು ಅರಿಯುವ ಪ್ರಯತ್ನ. ನಾನು ಒಂದು ಆಟೋದಲ್ಲಿಯೋ, ಒಲಾ ಉಬರ್‍ನಲ್ಲಿಯೋ ಹತ್ತಿದರೂ ಅವರೊಂದಿಗೆ ಸಂವಹನಕ್ಕಿಳಿಯುತ್ತೇನೆ ಹಾಗೆಂದು ಸದಾ ಅದನ್ನೇ ಮಾಡುತ್ತೆನೆಂದು ನಂಬಬೇಡಿ. ಬಸ್ಸಿನಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿದರೂ ಯಾರೊಂದಿಗೂ ಮಾತನಾಡಿರುವುದಿಲ್ಲ ನನ್ನದೇ ಆಲೋಚನೆಯಲ್ಲಿಯೋ ಅಥವಾ ರಸ್ತೆಬದಿಯ ಜನರನ್ನು ನೋಡುತ್ತಲೋ ಕಲ್ಪನಾ ಲೋಕಕ್ಕೆ ಇಳಿಯುತ್ತೇನೆ. ಇದು ನನ್ನ ಬದುಕು ನನ್ನಿಷ್ಠ. ನನ್ನ ಬದುಕಿನ ಶೈಲಿಯಲ್ಲಿ ಬೇರೆಯವರಿಗೆ ನೋವಾಗಬಾರದಷ್ಟೆ. ನೋವೆಂದರೆ ಯಾವ ರೀತಿಯಲ್ಲಿ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. 

ಬರವಣಿಗೆ ಅದೆಷ್ಟು ಕಷ್ಟವೆನಿಸುತ್ತಿದೆಯೆಂದರೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತವೆ. ಎಲ್ಲದ್ದಕ್ಕೂ ಒಂದು ಕ್ಲಾರಿಟಿ ಬೇಕೆನಿಸುತ್ತದೆ. ಸ್ಪಷ್ಟತೆ ಬೇಕೆನಿಸುತ್ತದೆ. ಸ್ಪಷ್ಟತೆ ಹೇಗಿರಬೇಕು? ಅಲ್ಲೆಲ್ಲಿಯೂ ಗೊಂದಲಗಳಿರಬಾರದು. ಪ್ರಶ್ನಾತೀತವಾಗಿರಬೇಕು. ಇಲ್ಲಿನ ಬರವಣಿಗೆಯಲ್ಲಿ ಸಾಧ್ಯವಾದಷ್ಟು ಸ್ಪಷ್ಟತೆಯನ್ನು ತರುವುದಕ್ಕೆ ಪ್ರಯತ್ನಿಸುತ್ತೇನೆ. ನೋವು ಬೇಸರದ ಸಂಗತಿ ಬಂದಾಗ ಉದ್ಭವವಾಗಿರುವ ಕೆಲವು ಗೊಂದಲಗಳನ್ನು ನಿಮ್ಮ ಮುಂದಿಡುತ್ತೇನೆ. ನಿಮ್ಮ ಅಕ್ಕಪಕ್ಕದವರು ತಪ್ಪು ಅಥವಾ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ನೀವು ಅದರ ವಿರುದ್ದ ದನಿಯೆತ್ತುವುದಿಲ್ಲ, ಏಕೆಂದರೆ ಸುಮ್ಮನೆ ನಮಗ್ಯಾಕೆ ನಿಷ್ಠುರ, ಅವರು ಏನೋ ಮಾಡಿಕೊಳ್ಳಲಿ ಬಿಡಿ ಎನ್ನುತ್ತೀರಿ. ಇದರಿಂದ ಎರಡು ರೀತಿಯ ನಷ್ಟಗಳಿವೆ. ಒಂದು ಸಮಾಜಕ್ಕಾಗುವ ನಷ್ಠ ಅದರ ವಿಷಯ ಬೇಡ, ಸಮಾಜಮುಖಿಯಾಗಬೇಕೆನ್ನುವ ನಿಯಮವಿಲ್ಲ. ಆದರೆ ನಿಮ್ಮ ಸ್ನೇಹಿತ, ನಿಮ್ಮ ನೆಂಟರು, ನಿಮ್ಮ ಸಂಭಂಧಿ ಭ್ರಷ್ಟನಾಗುವಾಗ ನೀವು ತಡೆಯದೇ ಇರುವುದು ಉಢಾಫೆತನದ ಪರಮಾವಧಿ. ನನ್ನ ಅನೇಕ ಸ್ನೇಹಿತರನ್ನು ನಾನು ಪ್ರೇರೇಪಿಸುತ್ತಿರುತ್ತೀನಿ, ಒಳ್ಳೆಯದರ ಕಡೆಗೆ ಪ್ರೋತ್ಸಾಹಿಸುತ್ತಿರುತ್ತೇನೆ. ಕೆಲವರು ನನ್ನಿಂದ ದೂರಾಗಿದ್ದಾರೆ, ಅವರು ಹೋದರೆ ಹೋಗಲಿ ಎನ್ನುವುದಿಲ್ಲ, ಮುಂದೊಂದು ದಿನ ವಾಪಸ್ಸು ಬರುತ್ತಾರೆ. ಈ ದಿನಕ್ಕೆ ಅವರಿಗೆ ನನ್ನ ಸಿದ್ದಾಂತಗಳ ಮೇಲೆ ನಂಬಿಕೆಯಿಲ್ಲ ಅಷ್ಟೆ. ಅವರು ನನ್ನ ವಿರೋಧಿಗಳಲ್ಲ, ನನ್ನ ಸಿದ್ದಾಂತದ ವಿರೋಧಿಗಳು.

ಯಾವುದೇ ಸಿದ್ದಾಂತ ಸಾಧಿಸುವ ತನಕ ಯಾರೂ ಒಪ್ಪುವುದಿಲ್ಲ. ಯಾರೇಕೆ ನಾವೆ ಒಪ್ಪಿರುವುದಿಲ್ಲ. ವ್ಯಕ್ತಿತ್ವ ವಿಕಸನದ ಹಾದಿಯಲ್ಲಿ ಮತ್ತೊಂದು ಬಹಳ ಮುಖ್ಯವಾದ ವಿಷಯ, ಓದುವುದು. ಓದುವುದು ಎಂದರೇನು? ಯಾವುದನ್ನ ಓದಬೇಕು? ಹೇಗೆ ಓದಬೇಕು? ಒಬ್ಬರನ್ನೇ ಓದಿಕೊಂಡು ನಾನು ಬಹಳ ಓದಿಕೊಂಡಿದ್ದೇನೆಂದು ಬೀಗುವುದಲ್ಲ. ನಾನು ಕಂಡಂತೆ ಅನೇಕರು ಮಹಾತ್ಮ ಗಾಂಧಿಜೀಯನ್ನು ದೂರುತ್ತಾರೆ. ಅವರನ್ನು ಓದಿಕೊಂಡವರು ಇಡೀ ಭಾರತದಲ್ಲೇ ಬೆರಳೆಣಿಕೆಯಷ್ಟು, ಸಂತೋಷದ ವಿಷಯವೆಂದರೆ ಅದರಲ್ಲಿ ಕೆಲವರು ನನಗೆ ಬಹಳ ಆತ್ಮೀಯ ಗುರುಗಳು. ಆದರೇ, ಅವರ ಬಗ್ಗೆ ಏನನ್ನೂ ಓದಿಕೊಳ್ಳದ ಬಹಳ ಮೇಧಾವಿಗಳು ಉದ್ದುದ್ದ ಭಾಷಣವನ್ನು, ಪರವಾಗಿಯೂ ಮತ್ತು ವಿರುದ್ದವಾಗಿಯೂ ಮಾತನಾಡುತ್ತಾರೆ. ಗಾಂಧೀಜಿ ಅನೇಕರಿಗೆ ಕೇವಲ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಕಾಣಿಸುತ್ತಾರೆ, ನನಗೆ ಅದೆಲ್ಲದಕ್ಕೂ ಮೀರಿದ ಮಹಾನ್ ಚೇತನ, ಸಂತನಂತೆ, ತಪಸ್ವಿಯಂತೆ ಕಾಣುತ್ತಾರೆ. ಅಪ್ರತಿಮ ಪರಿಸರವಾದಿ, ಸಾಮಾಜಿಕ ನ್ಯಾಯದ, ಸತ್ಯತೆಯ ಸ್ವರೂಪದಂತೆ ಕಾಣುತ್ತಾರೆ. ಹಾಗಾಗಿಯೇ ನಾನು ನನ್ನ ಪಿಎಚ್‍ಡಿ ಆದಮೇಲೆ ಗಾಂಧಿ ಅಧ್ಯಯನದಲ್ಲಿ ಡಿಪ್ಲೋಮಾ ಮಾಡಿದ್ದು. ಸ್ವತಃ ಪ್ರೋ. ಜೀವನ್ ಕುಮಾರ್‍ರವರು ಕೇಳಿದ್ದರು, ಹರೀಶ್ ನಿಮಗೆ ಏಕೆ ಡಿಪ್ಲೋಮಾ ಬೇಕು. ನಮ್ಮ ಲೈಬ್ರರಿಯಲ್ಲಿ ಬಂದು ಓದಿ ಸಾಕೆಂದು. ಇಲ್ಲ ಒಬ್ಬ ವಿದ್ಯಾರ್ಥಿಯಾಗಿಯೇ ಕಲಿಯಬೇಕೆಂದು ಕಲಿತೆ, ಓದಿದೆ. ಉಪಸಂಹಾರವೆನ್ನಬೇಕಾದರೆ ಸರಳವಾಗಿ ಹೇಳುತ್ತೇನೆ, ಪ್ರತಿಯೊಬ್ಬ ವ್ಯಕ್ತಿಯ ಬದುಕು ತನ್ನ ಸ್ವಂತದ್ದು ಅದನ್ನು ಅವನೇ ಜೀವಿಸಬೇಕು ಮತ್ತು ಅದನ್ನು ಅವನಂತೆಯೇ ಜೀವಿಸಬೇಕು.

ಮೂರನೆಯದಾಗಿ, ನಮ್ಮ ದಾರಿಯನ್ನು ಆಯ್ಕೆಮಾಡಿಕೊಳ್ಳುವುದು ಹೇಗೆ? ಯಾವುದು ಸರಿ? ಯಾವುದು ತಪ್ಪು? ಇದು ಪ್ರತಿಯೊಬ್ಬರಲ್ಲಿಯೂ ಕಾಡುವ ಪ್ರಶ್ನೆ. ಇದಕ್ಕೆ ಪ್ರಮುಖವಾಗಿ ಬೇಕಿರುವುದು ನಿಮ್ಮ ಗುರಿ ಮತ್ತು ನಿಮ್ಮ ದಾರಿ. ಇತ್ತೀಚಿನ ದಿನಗಳಲ್ಲಿ ತಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಇದು ಯಾವುದರ ಕುರಿತು ಹೋಲಿಕೆ ಮಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇತ್ತೀಚಿನ ಬಹುತೇಕ ಹೋಲಿಕೆಗಳು ಆರ್ಥಿಕತೆಗೆ ಸೇರಿರುತ್ತವೆ. ಅವನು ಅಷ್ಟು ಮಾಡಿದ ಇವನು ಇಷ್ಟು ಮಾಡಿದ ಎನ್ನುವುದರ ಕುರಿತು. ವಸ್ತು ಪ್ರಾಧನ್ಯತೆಯನ್ನು ಹತ್ತಿಕ್ಕಬೇಕಿದೆ. ನನ್ನ ಅನೇಕಾ ಸ್ನೇಹಿತರು ನನಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ದುಡಿಯುತ್ತಿದ್ದಾರೆ ನನಗೆ ಎಂದಿಗೂ ಅದು ಬೇಕು ಎನಿಸಿಲ್ಲ. ನಾನು ನನ್ನೆಲ್ಲಾ ಸ್ನೇಹಿತರಿಗಿಂತ ಹೆಚ್ಚು ದುಡಿಯುತ್ತಿದ್ದವನು, ಅದನ್ನು ಬಿಟ್ಟು ನನಗೆ ಏನು ಬೇಕು ಆ ಕಡೆಗೆ ಬಂದವನು. ಉದಾಹರಣೆಗೆ. 2008-10ರಲ್ಲಿ ಹೈದರಾಬಾದಿನ ಐರಾಪ್ ಸಂಸ್ಥೆಯಲ್ಲಿದ್ದಾಗ ನಾನು ತಿಂಗಳಿಗೆ 30 ಸಾವಿರ ರೂಗಳನ್ನು ದುಡಿಯುತ್ತಿದ್ದೆ, ಅದಕ್ಕೆ ಮುಂಚೆ 6 ಸಾವಿರಕ್ಕೆ ಐಸೆಕ್‍ನಲ್ಲಿ ಕೆಲಸ ಮಾಡುತ್ತಿದ್ದೆ. ನನಗೆ ಹಣಕಾಸು ಅಂತಹ ವ್ಯತ್ಯಾಸವನ್ನುಂಟು ಮಾಡಿಲ್ಲ, ಮಾಡುವುದೂ ಇಲ್ಲ. ನನಗೆ ನನ್ನ ಕನಸಿನ ಸಂಸ್ಥೆ ಕಟ್ಟಬೇಕೆಂಬ ಆಸೆ ಕನಸು ಬಂತು ಅದನ್ನು ಮಾಡುತ್ತಿದ್ದೇನೆ. ಈ ಅನುಭವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಪಿಎಚ್‍ಡಿ ಮಾಡಿರುವ ಎಷ್ಟೋ ಜನರು ತಲೆಯಲ್ಲಿ ಮೆದಳು ಬಿಟ್ಟು ಬೇರೆನೂ ಇಲ್ಲದಿದ್ದರು ಅಹಂ ನಿಂದಾಗಿ ಶಾಲೆ ಮಕ್ಕಳೊಟ್ಟಿಗೆ ಸಂವಾದವೇ? ಎನ್ನುತ್ತಾರೆ. ನನಗೆ ಆ ಇರಿಸು ಮುರಿಸು ಎಂದಿಗೂ ಬಂದಿಲ್ಲ. ನನಗೆ ಎಲ್ಲರೂ ವಿಶ್ವಮಾನವರು. ಎಲ್ಲರೂ ಅದ್ಬುತ ವ್ಯಕ್ತಿಗಳು. 

ನಾನು ಮುಕ್ತವಾಗಿ ಯಾವುದೇ ಪಕ್ಷದವರನ್ನು ಯಾವುದೇ ಇಲಾಖೆಯವರನ್ನು ಬೈಯ್ಯಬಹುದು, ಏಕೆಂದರೆ ನಾನು ನಿಯತ್ತಾಗಿದ್ದೇನೆ. ನಾನು ಯಾರ ಋಣದಲ್ಲಿಯೂ ಬದುಕುತ್ತಿಲ್ಲ. ಸ್ವಾಭಿಮಾನವನ್ನು ನಾನು ಒಪ್ಪುವುದಿಲ್ಲ. ನಾನು ಒಪ್ಪುವುದು ಸ್ವಾವಲಂಬನೆ ಬದುಕನ್ನು. ಹಾಗಾಗಿಯೇ ನಾವು ಅನ್ನ ಸಂಪಾದನೆಯನ್ನ ಹೇಳಿಕೊಡಿ ಎನ್ನುತ್ತೇವೆ ಹೊರತು ಅನ್ನ ಬೇಡುವುದನ್ನು ಅಲ್ಲ. ಕೆಲವರು ನಮ್ಮ ಹಕ್ಕು ಎನ್ನುತ್ತಾರೆ, ನಾನು ಎಲ್ಲಾ ಕಡೆಯಲ್ಲಿಯೂ ಪ್ರತಿಪಾದಿಸುವುದು ಮೊದಲು ನಿನ್ನ ಕರ್ತವ್ಯ ಮಾಡು ನಂತರ ಹಕ್ಕಿನ ಬಗ್ಗೆ ಮಾತನಾಡು. ಆ ನಿಟ್ಟಿನಲ್ಲಿ ಕೆಲವೊಂದು ನೀವು ಒಪ್ಪದ ವಿಷಯಗಳನ್ನು ನಾನಿಲ್ಲಿಡುತ್ತೇನೆ. ಉದಾಹರಣೆಗೆ ನಾವುಗಳು ರಾಜಕೀಯದವರನ್ನು ಅಥವಾ ಬೇರೆ ಭ್ರಷ್ಟ ಅಧಿಕಾರಿಗಳನ್ನು ದೂರುವ ಸಮಯದಲ್ಲಿ ನಾವೆಷ್ಟು ಸರಿ ಇದ್ದೀವಿ ಎನ್ನುವುದನ್ನು ಅವಲೋಕಿಸಬೇಕು. ಒಂದು ಸಂಸಾರ ಅಥವಾ ಕುಟುಂಬವನ್ನು ನಡೆಸುವುದಕ್ಕೆ ಆದಾಯ ಬರಬೇಕು. ಆ ಆದಾಯ ಎಲ್ಲಿಂದ ಬರುತ್ತದೆ? ನಾವು ದುಡಿಯಬೇಕು? ದುಡಿಮೆಗೆ ಕೆಲಸ ಹುಡುಕಬೇಕು ಅಥವಾ ಬೇರೆ ಇನ್ನೇನಾದರೂ ಮಾಡಲೇಬೇಕು. ಅದೇ ರೀತಿ ಒಂದು ಸರ್ಕಾರ ನಡೆಸಲು ಆದಾಯ ಇರಬೇಕು. ಅದು ಎಲ್ಲಿಂದ ಬರಬೇಕು? ರಾಜ್ಯವೇ ಆಗಲೀ ದೇಶವೇ ಆಗಲಿ ಹಣ ಸಂಪಾದನೆ ಹೇಗೆ ಮಾಡಬೇಕು? ನಮ್ಮ ತೆರಿಗೆ ಹಣ. ನಾವುಗಳು ತೆರಿಗೆ ವಂಚಿತರಂತೆ ನಡೆದುಕೊಂಡು ತೆರಿಗೆ ಉಳಿತಾಯ ಮಾಡಲು ಏನೆಲ್ಲಾ ಮಾರ್ಗಗಳಿವೆಯೋ ಅದನ್ನೆಲ್ಲಾ ಹುಡುಕುತ್ತೇವೆ.

ಈ ನಿಟ್ಟಿನಲ್ಲಿ ನಾನು ಮಾಡುತ್ತಿರುವುದನ್ನು ಹೇಳುತ್ತೇನೆ. ನಮ್ಮ ಸಂಸ್ಥೆಗೆ ಸಾಕಷ್ಟು ಜನರು 80ಜಿ ಸರ್ಟಿಫಿಕೇಟ್ ಇದ್ಯಾ, ನಾವು ನಿಮಗೆ ದೇಣಿಗೆ ಕೊಟ್ಟರೆ ತೆರಿಗೆ ಉಳಿತಾಯವಾಗುತ್ತದೆಯೇ? ಆ ಸಮಯದಲ್ಲಿ ನಾನು ಅವರಿಗೆ ಹೇಳುವುದು. ಹೌದು ಇದೆ. ಆದರೆ, ತೆರಿಗೆ ವಿನಾಯಿತಿಗೆಂದು ನೀವು ದೇಣಿಗೆ ನೀಡುವುದಾದರೆ ನಾವು ತೆಗೆದುಕೊಳ್ಳುವುದಿಲ್ಲ. ನೀವುಗಳು ಬಂದು ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬದಲಾವಣೆಗೆಗಾಗಿ ದೇಣಿಗೆ ನೀಡುತ್ತಿದ್ದರೆ ಮಾತ್ರ ನಾವು ಪಡೆಯುವುದು ಎಂದು. ನಿಮಗೆ ಅಚ್ಚರಿಯಾಗಬಹುದು ಸಾಕಷ್ಟು ಜನರು ಅದಕ್ಕೆ ಒಪ್ಪುವುದಿಲ್ಲ. ಇದನ್ನು ಏಕೆ ಇಲ್ಲಿ ಹೇಳುತ್ತಿದ್ದೇನೆಂದರೆ ನಮ್ಮ ಮನಸ್ಥಿತಿ ಎಲ್ಲಿಗೆ ಬಂದಿದೆಯೆಂದು ತೋರಿಸುವುದಕ್ಕೆ. ಒಂದು ದೇಶದ ಪ್ರಜೆಯಾಗಿ ಆ ದೇಶದ ಕಾನೂನು ಅವನಿಗೆ ಬೈಬಲ್ ಇದ್ದಂತೆ. ಅದನ್ನು ಅವನು ಪಾಲಿಸಲೇಬೇಕು. ನಾವುಗಳು ಪ್ರಜೆಗಳಾಗಿ ಎಷ್ಟರಮಟ್ಟಿಗೆ ಅವುಗಳನ್ನು ಪಾಲಿಸುತ್ತಿದ್ದೇವೆ? ಕಾನೂನಿನ ಅರಿವು ನಮ್ಮಲ್ಲಿ ಎಷ್ಟಿದೆ? ಸಂವಿಧಾನದ ವಿಷಯ ಬಂದಾಗ ಮೀಸಲಾತಿಯ ಹೊರಕ್ಕೆ ಮಾತನಾಡುವುದೇ ಇಲ್ಲ. ಮೀಸಲಾತಿಯ ಪರ ಅಥವಾ ವಿರೋಧ. ಸಂವಿಧಾನದ ಆಶಯವನ್ನು ಮತ್ತು ಸಂಪೂರ್ಣ ಮಾಹಿತಿಯನ್ನು ಎಲ್ಲರಿಗೂ ತಿಳಿಸಬೇಕು. 

ಕೊನೆಯದಾಗಿ ಕೆಲವು ಅಂಶಗಳನ್ನು ಹೇಳಿ ಮುಗಿಸುತ್ತೇನೆ. ನೀವು ಯಾವುದಾದರೂ ಅತ್ತ್ಯತ್ತಮ ಕಾರ್ಯಗಳನ್ನು ಮಾಡಲು ಹೊರಟಾಗ ಯಾರೂ ನಿಮ್ಮೊಂದಿಗೆ ಬರುವುದಿಲ್ಲ. ಏಕೆಂದರೆ ಅವರಿಗೆ ಆ ಮಟ್ಟಿಗೆ ಯೋಚನೆ ಮಾಡುವ ಶಕ್ತಿ ಅಥವಾ ಧೈರ್ಯವಿರುವುದಿಲ್ಲ. ಅವರು ನೋಡಿರುವ ಅಥವಾ ಅವರು ಇರುವ ಪರಿಸರ ಹಾಗಿರುತ್ತದೆ. ನೀವು ಮುನ್ನುಗ್ಗಿ ನಿಮ್ಮ ಕಾರ್ಯವೈಖರಿ ನೋಡಿ ಅವರೆಲ್ಲರೂ ಬರುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ಪ್ರಾಮಾಣಿಕತೆ ಅದರಲ್ಲಿಯೂ ಹಣಕಾಸಿನ ವಿಷಯದಲ್ಲಿ ಪ್ರಾಮಾಣಿಕತೆಯಿಂದ ಇದ್ದರೆ ನಿಮ್ಮನ್ನು ಯಾರೂ ಎಂದಿಗೂ ಬಗ್ಗಿಸಲಾಗುವುದಿಲ್ಲ. ನನ್ನನ್ನು ಬೇರೆ ವಿಷಯದಲ್ಲಿ ಬಗ್ಗಿಸಹುದು ಆದರೇ ಹಣಕಾಸಿನ ವಿಷಯದಲ್ಲಿ ನಾನೆಂದೂ ಭ್ರಷ್ಟನಲ್ಲ ಮತ್ತು ಮುಂದಿಗೂ ಆಗಲಾರೆ. ಬೇರೆ ವಿಷಯದಲ್ಲಿ ಎಂದಾಗ ನನ್ನ ಹಳೆಯ ಲೇಖನಗಳಲ್ಲಿ ಬರೆದಿದ್ದೇನೆ ನನ್ನ ಕುಡಿತ ಮತ್ತು ಸಿಗರೇಟಿನ ಕುರಿತು. ಕೆಲಸದ ವಿಷಯದಲ್ಲಿ ಮಾತನಾಡುವ ಹಾಗೆಯೇ ಇಲ್ಲ, ಕ್ಷೇತ್ರದಲ್ಲಿ ಬಹಿರಂಗವಾಗಿ ಸವಾಲು ಹಾಕುತ್ತೇನೆ ನನ್ನಷ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ತೋರಿಸಿಯೆಂದು. ಇದೆಲ್ಲದಕ್ಕೂ ಕಾರಣ ನಾನು ನನಗೆ ಪೈಪೋಟಿ ನೀಡುತ್ತಾ ನನ್ನನ್ನೇ ಅವಲೋಕಿಸಿಕೊಂಡು ಬೆಳೆಯುತ್ತಿರುವುದು. 

ಈ ಲೇಖನದಲ್ಲಿ ಸಾಧ್ಯವಾದಷ್ಟು ನನ್ನ ಬಗ್ಗೆಯೇ ಹೇಳಿದ್ದೇನೆ, ಹೊಗಳಿಕೊಂಡಿದ್ದೇನೆ. ಏಕೆಂದರೆ ನನ್ನ ಬಗ್ಗೆಯೇ ಹೇಳಿದರೆ ನಿಮಗೆ ಅರ್ಥವಾಗುತ್ತದೆ ಇಲ್ಲವಾದರೆ ಇದು ಮತ್ತೊಂದು ಜನರಲ್ ವಿಷಯ ಎನ್ನುವಂತಾಗುತ್ತದೆ. ನಿಮ್ಮ ಅನಿಸಿಕೆಗಳು ಮುಕ್ತವಾಗಿರಲಿ, ಚರ್ಚಿಸೋಣ, ನಮ್ಮ ಮತ್ತು ನಿಮ್ಮ ಉದ್ದೇಶ ಉತ್ತಮ ಸಮಾಜ ನಿರ್ಮಾಣವೆಂಬುದು ನನಗೆ ತಿಳಿದಿದೆ. ಎಲ್ಲರೂ ಒಟ್ಟಾಗಿ ಸೇರಿ ಕಟ್ಟೋಣ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...