ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

17 February 2018

ನಾನೇಕೆ ಶಬರಿಮಲೈಗೆ ಹೋಗುತ್ತೇನೆ.....


ನಾನು ಈ ಕುರಿತು ಬಹಳ ವರ್ಷಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಸಮಯದ ನೆಪವೋ ಅಥವಾ ನನ್ನ ಸೋಮಾರಿತನವೋ ಬರೆಯುವುದಕ್ಕೆ ಬಿಟ್ಟಿರಲಿಲ್ಲ. ಈ ದಿನ ನಿರ್ಧಾರ ಮಾಡಿ ಬರೆಯುತ್ತಿದ್ದೇನೆ. ಬರೆಯುತ್ತಿದ್ದೇನೆ ಎನ್ನುವುದಕ್ಕಿಂತ ನಿಮ್ಮ ಮುಂದೆ ಒಪ್ಪಿಸುತ್ತಿದ್ದೇನೆ. ಈ ಬರವಣಿಗೆಯನ್ನು ಓದಿದ ನಂತರ ನಿಮ್ಮಲ್ಲಿ ಕೆಲವೊಂದು ಪ್ರಶ್ನಾರ್ಥಕತೆ ಮೂಡಿದರೆ ನಾನು ಧನ್ಯ. ನಾನು ಮೊನ್ನೆ ಫೇಸ್‍ಬುಕ್ಕಿನಲ್ಲಿ ಒಂದು ಪೋಸ್ಟ್ ಹಾಕಿದ್ದೆ, ಒಬ್ಬ ಹಿಂದೂ ಸಂಪ್ರದಾಯದ ವಿಜ್ಞಾನ ವಿದ್ಯಾರ್ಥಿ ಪೂಜೆ ಪುನಸ್ಕಾರ ಮಾಡಿದರೆ ಅವನನ್ನು ಕೆಲವರು ಪ್ರಶ್ನಿಸುತ್ತಾರೆ, ನೀನೊಬ್ಬ ವಿಜ್ಞಾನ ವಿದ್ಯಾರ್ಥಿಯಾಗಿ ಈ ದೇವರು ದಿಂಡಿರು ಎಲ್ಲವನ್ನೂ ನಂಬುತ್ತೀಯಾ? ಅನ್ಯಾಯ ಆಗುವಾಗ, ಕೊಲೆಗಡುಕರು ಹೆಚ್ಚಾಗುತ್ತಿರುವ ಈ ಸಮಾಜದಲ್ಲಿ ದೇವರೆಲ್ಲೆದ್ದಾನೆ? ಅದೆಲ್ಲವೂ ಅಪನಂಬಿಕೆ ಅಥವಾ ಮೂಡಬಂಬಿಕೆ, ಕಂದಾಚಾರಗಳು ಹೀಗೆ? ಆದರೇ ಅದೇ ಪ್ರಶ್ನೆಯನ್ನು ಇತರೆ ಧರ್ಮದವರಿಗೆ ಕೇಳುವುದಿಲ್ಲವೆಂದು. ಇದಕ್ಕೆ ಸಾಕಷ್ಟು ಬಿನ್ನಾಬಿಪ್ರಾಯಗಳು ಬಂದವು. ನಮ್ಮ ದೇಶದಲ್ಲಿ ಕೆಲವು ಗೊಂದಲಗಳಿವೆ, ಅದನ್ನು ತೀರ್ಮಾನಿಸಲು ಅಥವಾ ಅರ್ಥೈಸಲು ವರ್ಷಗಟ್ಟಲೆ ವ್ಯಯಿಸಬೇಕಾದೀತು. ಇದಕ್ಕೆ ಮೂಲ ಕಾರಣ ಎಲ್ಲವನ್ನೂ ಭಾವುಕರಾಗಿ ನೋಡುವುದು ಮತ್ತು ಅದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು. ಭಾಷೆ, ಜಾತಿ, ಧರ್ಮ, ಲಿಂಗ ತಾರತಮ್ಯ, ಪ್ರಾದೇಶಿಕತೆ, ಎಲ್ಲವನ್ನೂ ಗಮನಿಸಿ ಭಾವನೆಗಳೊಂದಿಗೆ ಬೆರೆಸಿ ಕೆಲವೇ ಕೆಲವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಜಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಾರೆ. ಭಾಷೆಯನ್ನು ಅಷ್ಟೆ. ವಿಜ್ಞಾನವನ್ನೂ ಅಷ್ಟೆ. ವಿಜ್ಞಾನ, ಸಂಪ್ರದಾಯ, ಆಚರಣೆಗಳು, ಆಧ್ಯಾತ್ಮ ಇದೆಲ್ಲದರ ಕುರಿತು ಸಮಗ್ರ ಜ್ಞಾನವನ್ನು ನಮ್ಮ ಶಿಕ್ಷಣ ವ್ಯವಸ್ಥೆ ಹೇಳಿಕೊಡಲಿಲ್ಲ. ಜ್ಯಾತ್ಯಾತೀತತೆ ಎನ್ನುವ ಪರಿಕಲ್ಪನೆಯನ್ನೆ ಹಲವರು ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಬದ್ದತೆಯ ಕೊರತೆ ರಾಜಕಾರಣಿಗಳಲ್ಲು ಮತ್ತು ಸಂಶೋದಕರಲ್ಲು ಇರುವುದರಿಂದ ನಾವು ಯಾವುದನ್ನು ಸರಿಯಾಗಿ ಕಲಿಸಿಲ್ಲ.

ಪೂಜೆ ಪುನಸ್ಕಾರ, ಆಚರಣೆಗಳ ಪ್ರಶ್ನೆಯನ್ನು  ಯಾರೋ ನನಗೆ ಕೇಳಿದ್ದಲ್ಲ. ನಾನೇ ನನಗೆ ಹತ್ತು ಹದಿನೈದು ವರ್ಷಗಳ ಹಿಂದೆ ಕೇಳಿದ್ದು. ಇದಕ್ಕೆ ಉತ್ತರ ಹುಡುಕುವ ಹುಮ್ಮಸ್ಸಿನಲ್ಲಿ ನನ್ನ ಮನಸ್ಸನ್ನು ಹದ್ದು ಬಸ್ತಿನ ಎಲ್ಲೆ ಮೀರಿ ಓಡಿಸಿದ್ದು. ಅದಕ್ಕೆ ತಾತ್ಕಲಿಕ ಉತ್ತರ ಸಿಕ್ಕಿದೆ. ಆ ಉತ್ತರವೇ ಶಾಸ್ವತವೆಂಬುದನ್ನು ನಾನು ನಂಬುವುದಿಲ್ಲ. ನಾನು ಬದುಕುತ್ತಿರುವ ಹಾದಿಯಲ್ಲಿ ಯಾವುದೂ ಶಾಸ್ವತವಲ್ಲವೆಂದು ನಂಬಿರುವವನು. ನಾನು ನಂಬಿರುವ ಈ ಸಿದ್ದಾಂತವೇ ಶಾಸ್ವತವಲ್ಲವೆನ್ನುವವನು ನಾನು. ಮತ್ತೆ ಇನ್ಯಾವದು ಸತ್ಯ? ಇದು ನಿಮ್ಮ ಪ್ರಶ್ನೆ. ಇರಲಿ ಅದಕ್ಕೆ ಮತ್ತೊಂದು ಬರವಣಿಗೆಯಲ್ಲಿ ವಿವರಣೆ ನೀಡುತ್ತೇನೆ. ನನ್ನ ಕೆಲವು ಅಂಶಗಳನ್ನು ತಾವುಗಳು ಒಪ್ಪುವುದಕ್ಕೆ ನನ್ನೊಡನೆ ಕೆಲವೊಂದು ಚರ್ಚೆಗಳಲ್ಲಿ ತಾವುಗಳು ಭಾಗವಹಿಸಬೇಕಾಗುತ್ತದೆ. ಹಾಗಾಗಿಯೇ ನಾನು ನನ್ನ ಬರವಣಿಗೆಗಳನ್ನು ಬ್ಲಾಗ್ ಬಿಟ್ಟು ಬೇರೆಡೆ ಎಲ್ಲಿಯೂ ಮುದ್ರಿಸುವ ಗೋಜಿಗೆ ಹೋಗಿಲ್ಲ. ಟ್ರೈಲರ್ ನೋಡಿ ಸಿನೆಮಾ ಬಗ್ಗೆ ತೀರ್ಮಾನ ಮಾಡುವವರು ಹೆಚ್ಚು ನಮ್ಮಲ್ಲಿ, ಊಹಾ ಪೋಹಗಳಿಗೆ ಮತ್ತು ಯಾವುದೋ ನಾಲ್ಕು ಸಾಲನ್ನು ಓದಿ ಪುಸ್ತಕವನ್ನು ತೀರ್ಮಾನಿಸುವುದು, ಒಂದು ದೃಶ್ಯದಿಂದ ಸಿನೆಮಾದ ಗುಣಮಟ್ಟವನ್ನು, ಒಂದೆರಡು ವಾಕ್ಯದ ಭಾಷಣ ಕೇಳಿ ಅವರ ವ್ಯಕ್ತಿತ್ವವನ್ನು ಅಳೆಯುವುದು ಸಾಮಾನ್ಯವಾಗಿದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣ ಮತ್ತು ದೃಶ್ಯ ಮಾಧ್ಯಮಗಳಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಯಾವುದನ್ನೂ ಓದುವುದಿಲ್ಲ, ಕೇವಲ ಹೈಲೈಟ್ಸ್ ಸಿಕ್ಕರೆ ಸಾಕು, ದಿಡೀರನೆ ಪ್ರತಿಕ್ರಿಯಿಸಿಬಿಡುವುದು. ಅದು ತಪ್ಪೆಂದು ತಿಳಿದರು ಅದನ್ನು ತಿದ್ದಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಆದ್ದರಿಂದ ನನ್ನ ಯಾವೊಂದು ಬರವಣಿಗೆಯನ್ನು ಅಂತಹ ಮನಸ್ಥಿತಿಯುಳ್ಳವರು ಓದುವುದೇ ಬೇಡ. ನನಗೆ ಪ್ರಶಂಸೆಯ ಹುಚ್ಚಿಲ್ಲವೆನ್ನುವುದನ್ನು ಅನೇಕ ಬಾರಿ ಹೇಳಿದ್ದೇನೆ ಅದರಂತೆಯೇ ಬದುಕುತ್ತಾ ಬಂದಿದ್ದೇನೆ. ನನಗೆ ಸ್ವಾಭಿಮಾನವೆಂದರೆ ಸ್ವಾವಲಂಬನೆಯ ಬದುಕು. ಹೊಗಳಿಕೆ ಮುಜುಗರ ಕೊಡುತ್ತದೆ, ಚರ್ಚೆ ಮಜ ಕೊಡುತ್ತದೆ. ನಾನು ಚರ್ಚಿಸಲು ಸಿದ್ದನಿರುತ್ತೇನೆ, ವಿವರವಾಗಿ ನಮ್ಮತನವನ್ನು ಬಿಟ್ಟು ಚರ್ಚಿಸಬೇಕು. 

ನನ್ನನ್ನು ಭೇಟಿ ಮಾಡಿ ನಂತರ ಚರ್ಚಿಸಿ ಅವರಿಗೆ ಸಮಯ ಸಿಕ್ಕಿ, ಅದರಲ್ಲಿಯೂ ನನ್ನ ಬರವಣಿಗೆಯಿಂದ ಅವರಿಗೆ ಕನಿಷ್ಠ ಭೌದ್ಧಿಕವಾಗಿ ಅನುಕೂಲವಾಗುತ್ತದೆಯೆಂದರೆ ಓದಲಿ, ಸುಮ್ಮನೆ ಕಾಲಹರಣಕ್ಕೋ ಅಥವಾ ನನ್ನ ಬಲವಂತಕ್ಕೋ ಓದುವುದು ಬೇಡ. ಇರಲಿ ವಿಷಯಕ್ಕೆ ಬರೋಣ. ಶಿರ್ಷಿಕೆಯಲ್ಲಿರುವಂತೆಯೇ ನಿಮ್ಮಲ್ಲಿಯೂ ಸಾಕಷ್ಟು ಜನರಿಗೆ ಕುತೂಹಲವಿರಬಹುದು ಅಥವಾ ಬೇಸರವಿರಬಹುದು ಅಥವಾ ಹೆಮ್ಮೆಯೂ ಇರಬಹುದು. ಮೊದಲನೆಯದಾಗಿ, ಇದ್ಯಾವ ಸೀಮೆಯ ದೇವರಿಗೆ ಹೋಗುವುದು, ಮುಂಜಾನೆ ಎದ್ದು ಊರಿನವರೆಲ್ಲರನ್ನು ಎಬ್ಬಿಸಿ ಅಯ್ಯಪ್ಪ ಅಂತ ಕೂಗಿ, ವರ್ಷವೆಲ್ಲ ಕುಡಿದು ಮಾಲೆ ಹಾಕಿಸಿದಾಗ ಮಾತ್ರ ಸಾಚಾ ಅನ್ನೋ ತರಹ ಇರೋದು, ಇಲ್ಲಿರುವ ಅಪ್ಪ ಅಮ್ಮನಿಗೆ ಸರಿಯಾಗಿ ಮರ್ಯಾದೆ ಕೋಡೋದಿಲ್ಲ ದೂರದ ಕೇರಳ ರಾಜ್ಯಕ್ಕೆ, ಅಯ್ಯೋ ಅದೆಲ್ಲ ಊರು ಸುತ್ತಾಡಿಕೊಂಡು ಟೂರ್ ಹೋಡೆಯೋಕೆ ಅಷ್ಟೆ, ದೇವರು ಇಲ್ಲಿಲ್ವಾ? ಅಯ್ಯೋ ಜನ ಮರುಳೋ ಜಾತ್ರೆ ಮರುಳೋ ಬಿಡಿ ಏನೋ ಮಾಡಲಿ. ಆದರೂ ನೋಡಿ, ಕೇರಳ ರಾಜ್ಯ ಕಮ್ಯೂನಿಸ್ಟ್ ಸರ್ಕಾರ ಅವರಿಗೆ ದೇವರಲ್ಲಿ ಅಂತಾ ನಂಬಿಕೆಯಿಲ್ಲ,. ಸರ್ಕಾರನೇ ಒಪ್ಪಿಕೊಂಡಿದೆ ಮಕರ ಜ್ಯೋತಿನೂ ಇಲ್ಲಾ ಏನೂ ಇಲ್ಲಾ ಅದು ವೈಜ್ಞಾನಿಕವಾಗಿ ನೋಡಿದರೆ ಮೋಸ ಅಂತಾ ನಮ್ಮ ಜನಕ್ಕೆ ಬುದ್ದಿಯಿಲ್ಲ, ಸುಮ್ಮನೆ ಸುತ್ತಾಡೋಕೇ ಸಾಯ್ತಾವೇ. ಕಮ್ಯೂನಿಷ್ಟ್‍ರು ನೋಡಿ ಬುದ್ದಿವಂತರು ಅದರಲ್ಲೂ ಕೇರಳದವರು ಎಷ್ಟೇ ಆದರೂ ಮೀನು ತಿನ್ನೋರು ನೋಡಿ ದೇವಸ್ಥಾನದ ಹೆಸರಲ್ಲಿ ಎಂಥಾ ಸಂಪಾದನೆ ರೀ? ಅತಿ ಹೆಚ್ಚು ಸಾಕ್ಷರತೆ ಇರೋದು ಕೇರಳದಲ್ಲಿ, ಅದರ ಜೊತೆ ಮಾಟ ಮಂತ್ರ ಅಂದರೆ ಕೇರಳ. ಅಲ್ಲಿನ ಜನ ಮಾಡಿಸುವುದಿಲ್ಲ, ಬೇರೆ ರಾಜ್ಯದವರು ಮಾಡಿಸ್ತಾರೆ. ನೋಡಿ ನಮ್ಮ ಮಾಜಿ ಮುಖ್ಯಮಂತ್ರಿಗಳು ಅಲ್ಲಿನ ಅದೆಷ್ಟೊ ದೇವಸ್ಥಾನಕ್ಕೆ ಹೋಗಿ ಬಂದಿದ್ದಾರೆ. ಇನ್ನೂ ಜನರು ಹೋಗದೇ ಇರುತ್ತಾರಾ? 

ನಾನು ಈ ರೀತಿಯ ಮಾತುಗಳನ್ನು ಯಾವುದೇ ಆಚರಣೆಯ ಕುರಿತು ಕೇಳುವಾಗ ಮೊದಲು ನನ್ನ ತಲೆಗೆ ಹೊರಟುವುದು ಸೋಮಾರಿತನದ ವಾಸನೆ. ಸೋಮಾರಿತನವೇ? ಅಂಧಾಚಾರ ಅಲ್ವಾ? ಮೂಢನಂಬಿಕೆಯಲ್ವಾ? ಯಾರೋ ಯಾವತ್ತೋ ಮಾಡಿದ್ದನ್ನೂ ನಂಬೋದು ಹೇಗೆ? ಮನುಷ್ಯ ಬೆತ್ತಲಾಗಿರಬಾರದು, ಅವನು ಧಿರಿಸನ್ನು ಧರಿಸಬೇಕೆಂಬುದನ್ನು ಯಾರೋ ಯಾವತ್ತೋ ಮಾಡಿದಲ್ಲವೇ? ಅದು ಸರಿಯೆಂಬುದು ಹೇಗೆ ಬಂತು ನಮ್ಮ ಆಲೋಚನೆಗೆ? ಸತ್ಯ ಸುಳ್ಳು, ನ್ಯಾಯ ಅನ್ಯಾಯ, ಧರ್ಮ ಅಧರ್ಮ ಇದೆಲ್ಲವೂ ಹೇಗೆ ಬಂತು? ಕೆಲವು ಶಾಲೆಗಳಲ್ಲಿ, ಶಾಲೆಗಳಲ್ಲಿ ಮಾತ್ರವೇನು ಜೀವನದಲ್ಲಿಯೂ ಶಿಸ್ತಿನಿಂದಿರಲು ಅನೇಕರಿಗೆ ಇಷ್ಟವಿಲ್ಲ ಅದನ್ನು ಒಪ್ಪುವುದಿಲ್ಲ. ಅದೇ ರೀತಿ ಧಾರ್ಮಿಕ ಆಧ್ಯಾತ್ಮಿಕ ಎಂದಾಕ್ಷಣ ಮೊದಲು ಬರುವುದು ನಿಷ್ಠೆ, ನಿಯತ್ತು, ಶಿಸ್ತು ಅದನ್ನು ಅನೇಕರು ಪಾಲಿಸಲು ದೂರ ಉಳಿಯುತ್ತಾರೆ. ಆದರೂ, ಕೆಲವರು ಅದನ್ನು ಮೀರಿ ಸಾಧಿಸುತ್ತಾರೆ ಅದು ನನಗೆ ಯಾವತ್ತಿಗೂ ಕುತೂಹಲ ಮತ್ತು ಹೆಮ್ಮೆಯ ವಿಷಯ. ಶಬರಿ ಮಲೈ ಪ್ರವಾಸದ ಕುರಿತು ಅಷ್ಟೆ, ನನಗೆ ಮೊದಲು ಮೂಡಿದ್ದು ಅನುಮಾನ ಅಥವಾ ತಾತ್ಸಾರ ನಂತರ ಬಂದದ್ದು ಕುತೂಹಲ ಅದಾಂತ ನಂತರ ನಿರಂತರ ಬದಲಾವಣೆ. ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಬಾರದು ಅಷ್ಟೆ ಅದೊಂದು ನಿಯಮ, ಹೋದರೇನು? ದೇವರು ಹೇಳಿತ್ತಾ? ಸ್ವಾಮಿ ನಿಮ್ಮನ್ನ ದೇವರು ಕರೆದಿದ್ದಾನಾ? ಬನ್ನಿ ಎಂದು. ಇದೆಲ್ಲವೂ ಉಢಾಫೆತನ ಮತ್ತು ತಾವುಗಳು ನಿಯಂತ್ರಣದಲ್ಲಿರಲು ಆಗದೇ ಇರುವವರು ಮಾಡುವ ಹುನ್ನಾರ. ಉದಾಹರಣೆಗೆ: ಶಾಲೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರವೇಕೆ? ಮಕ್ಕಳು ವಿದ್ಯೆಯನ್ನು ತಾನೇ ಕಲಿಯಬೇಕಿರುವುದು? ಅವರು ಯಾವ ಬಟ್ಟೆ ಹಾಕಿಕೊಂಡು ಬಂದರೇನು? ಬಟ್ಟೆ ಇಲ್ಲದೇ ಬಂದರೇನು? ವಿದ್ಯೆ ನಿಮಗೆ ಹೇಳಿದೆಯಾ? ನೀನು ಸಮವಸ್ತ್ರ ಹಾಕಿದರೇ ಮಾತ್ರ ನಾನು ನಿನಗೆ ಒಲಿಯುವದೆಂದು? ಇರಲಿ ಮುಂದಕ್ಕೆ ಹೋಗೋಣ.

ಈ ಮುಂದಿನ ಹತ್ತಾರು ಸಾಲುಗಳನ್ನು ಬಹಳ ಎಚ್ಚರವಾಗಿ ಓದಿಕೊಳ್ಳಿ ಇದು ತಮ್ಮ ವಿವೇಚನೆಗೆ ಮತ್ತು ಜ್ಞಾನಕ್ಕೆ ಮೀಸಲಾಗಿರುವುದು. ಇದರ ಕುರಿತು ಹೆಚ್ಚೇನೂ ವಿವರಣೆಯನ್ನು ನಾನು ನೀಡುವುದಿಲ್ಲ. ಪೂಜೆ, ದೇವರು ವಿಷಯ ಬಂದಾಗ ನಮ್ಮಲ್ಲಿ ಅಂದರೇ ಹಿಂದೂ ಸಂಪ್ರದಾಯದಲ್ಲಿ. ನಾನು ಹಿಂದೂ ಧರ್ಮವೆಂಬುದನ್ನು ಸಂಪೂರ್ಣವಾಗಿ ಒಪ್ಪಿಲ್ಲ ಅದರ ವಿವರಣೆಯ ಅಗತ್ಯತೆಯಿಲ್ಲಿ ಬೇಕಿಲ್ಲ. ಆದರೆ ನಮ್ಮೊದೊಂದು ಸಂಪ್ರದಾಯ ಶ್ರೀಮಂತ ದೇಶವೆಂಬುದನ್ನು ಯಾವುದೇ ಮುಲಾಜಿಲ್ಲದೆ ಒಪ್ಪುತ್ತೇನೆ. ನಮ್ಮಲ್ಲಿ ಕೋಟ್ಯಾಂತರ ದೇವರುಗಳಿದ್ದಾರೆ. ಪೂಜಿಸುವುದಕ್ಕೆ, ಶಾಪ ನೀಡುವುದಕ್ಕೆ, ಉದ್ದಾರ ಮಾಡುವುದಕ್ಕೆ ಹಾಳು ಮಾಡುವುಕ್ಕೆ ಎಲ್ಲದಕ್ಕೂ. ಇದರಲ್ಲಿ ಹಲವರ ಹಲವಾರು ರೀತಿಯ ವಾದಗಳಿವೆ. ಅದು ಕೆಲವೊಮ್ಮೆ ನಿಜವೆನಿಸಿದರೂ, ನಿಜವೇ? ಎನ್ನುವುದು ಮತ್ತೊಂದು ಪ್ರಶ್ನೆ. ದೇವರುಗಳನ್ನು ಜಾತಿಗೆ ಸೇರಿಸಿರುವಂತೆ ಕಾಣುವುದು. ಇದನ್ನು ಮುಂದುವರೆದ ಜಾತಿಯೆನಿಸಿಕೊಳ್ಳುವವರು ಮತ್ತು ಹಿಂದುಳಿದವರು ಎನಿಸಿಕೊಳ್ಳುವವರು ಇಬ್ಬರೂ ಹೇಳುತ್ತಾರೆ. ಸಾಮಾನ್ಯ ಪ್ರಜೆಯಾಗಿ ನಾನು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ ಮತ್ತು ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಗಮನಿಸಿರುವ ಹಾಗೆ, ಕೆಲವೊಂದು ಹಬ್ಬಗಳು ದಿಡೀರನೆ ಪ್ರಸಿದ್ದಿಯಾದವು. ವೈಕುಂಠ ಏಕಾದಶಿ, ವರಲಕ್ಷ್ಮಿ ಹಬ್ಬ ಇದಕ್ಕೆ ಉದಾಹರಣೆ. ಇವುಗಳೆಲ್ಲವೂ ಪುರುಹಿತಶಾಹಿ ನಮ್ಮ ಮೇಲೆ ಹೇರುತ್ತಿರುವ ಹಬ್ಬಗಳೆಂಬುದು ಕೆಲವರ ವಾದ. ಆ ರೀತಿ ಗಮನಿಸಿದರೆ ಸಂಕ್ರಾಂತಿ ಹಬ್ಬದಂದು ನಾವುಗಳು ಮಾಂಸ ತಿನ್ನುವುದು ರೂಢಿಯಾಗಿತ್ತು ಇತ್ತೀಚಿನ ದಿನಗಳಲ್ಲಿ ಆ ದಿನ ಮಕರ ಜ್ಯೋತಿ ಇರುವುದರಿಂದ ತಿನ್ನುವುದಿಲ್ಲ ಮತ್ತೂ ಎಳ್ಳು ಬೆಲ್ಲ ಬೀರುವುದು ಸಾಮಾನ್ಯವಾಗಿದೆ, ನಮ್ಮ ಬಾಲ್ಯದಲ್ಲಿ ಅದಿರಲಿಲ್ಲ. 

ನಮ್ಮಲ್ಲಿ ಹರಕೆ ಹೊರುವುದು ಸಾಮಾನ್ಯದ ಸಂಗತಿ. ವಿಧವಿಧವಾದ ಹರಕೆಯನ್ನು ಹೊರುತ್ತಿದ್ದರು. ಪೂಜೆಗಳು ಅಷ್ಟೆ, ಬ್ರಾಹ್ಮಣರನ್ನು ಕರೆಸಿ ಹೋಮ ಹವನಗಳನ್ನು ಮಾಡುವುದು ಕಡಿಮೆಯಿತ್ತು. ಕಡಿಮೆಯಿತ್ತು ಎನ್ನುವುದಕ್ಕಿಂತ ಇರಲೇ ಇಲ್ಲವೆಂದರೂ ಸರಿ. ಶನಿ ದೇವರ ಪೂಜೆಯನ್ನು ಬ್ರಾಹ್ಮಣ ಜಾತಿಯವರು ಮಾಡುತ್ತಿರಲಿಲ್ಲ, ಈಗ ಬೇಡಿಕೆ ಹೆಚ್ಚಾಗಿರುವುದರಿಂದ ಮಾಡುತ್ತಿದ್ದಾರೆಂಬುದು ಕೆಲವರ ವಾದ. ಶನಿ ದೇವರು, ದೆವ್ವ ಬರುವುದು, ದೆವ್ವ ಬಿಡಿಸುವುದು ಇವೆಲ್ಲವೂ ನಾವು ಚಿಕ್ಕವರಿದ್ದಾಗ ಬಹಳ ನೋಡಿದ್ದೆ. ದೇವರಿಗೆ ಬಲಿ ಕೊಡುವುದು ವಾಡಿಕೆಯಾಗಿತ್ತು. ಆದರೆ ಈಗ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ಹವನಗಳು ಸಾಮಾನ್ಯವಾಗಿವೆ. ಇವೆಲ್ಲವೂ ಪುರೂಹಿತಶಾಹಿಗಳ ನಮ್ಮ ಮೇಲೆ ಮಾಡುತ್ತಿರುವ ಸವಾರಿಯೆಂದು ನನ್ನೊಂದಿಗೆ ಕೆಲವರು ಹೇಳಿದ್ದಾರೆ. ನನಗೆ ಅದ್ಯಾವುದು ಮುಖ್ಯವೆನಿಸುವುದಿಲ್ಲ. ಅದನ್ನು ನನ್ನನುಭವದಲ್ಲಿಯೇ ಹೇಳಬೇಕೆಂದರೆ, ನಾನು ನಮ್ಮೂರಿನ ಪಕ್ಕದಲ್ಲಿರುವ ಸರಗೂರಿನ ಬ್ರಾಹ್ಮಣರ ಮನೆಗೆ ವಿಳ್ಯೆ ಎಲೆ ತರುವುದಕ್ಕೆ ಈಗಲೂ ಒಮ್ಮೊಮ್ಮೆ ಹೋಗುವುದುಂಟು, ಅವರು ಅವರ ಮನೆಯ ಕಾಂಪೌಂಡಿನ ಮೇಲೆ ಎಲೆ ಇಡುತ್ತಾರೆ, ನಾನು ಅಲ್ಲಿಯೇ ದುಡ್ಡು ಇಡುತ್ತೇನೆ ಬರುತ್ತೇನೆ. ಅವರು ನನ್ನನ್ನು ಮುಟ್ಟುವುದಿಲ್ಲ, ನಾನು ಅವರನ್ನು ಮುಟ್ಟುವುದಿಲ್ಲ. ನನಗೆ ಅದೆಂದಿಗೂ ಅಶ್ಪøಶ್ಯತೆ ಎನಿಸಿಲ್ಲ. ಅದು ಅವರ ಆಚರಣೆ. ಅದಕ್ಕೆ ನಾನ್ಯಾಕೆ ತಲೆಕೆಡಿಸಿಕೊಳ್ಳಬೇಕು. ನನಗೆ ಇವರಲ್ಲಿ ಎಲೆ ಬೇಡವೆಂದರೆ ಬೇರೆಡೆಗೆ ಹೋಗಿ ತರಬಹುದು. ದೇವರು ದೇವಸ್ಥಾನದ ವಿಷಯದಲ್ಲಿಯೂ ಅಷ್ಟೆ, ನಿಮಗೆ ಇಷ್ಟವಿಲ್ಲವೆಂದರೆ ಬಿಡಿ ಬೇರೆಯವರ ಮೇಲೇಕೆ ನೀವು ಹೇರಿಕೆ ಹಾಕಬೇಕು? ಈಗ ಹಿಂದಿನ ರೀತಿಯಲ್ಲಿ ಸಮಾಜವಿಲ್ಲ. ನೀವು ಎಲ್ಲಿ ಹೇಗೆ ಬೇಕಿದ್ದರೂ ಬದುಕಬಹುದು. ಆ ಸ್ವಾತಂತ್ರ್ಯ ನಿಮಗಿದೆ. ನೀವ್ಯಾಕೆ ಇನ್ನೂ ಅವರು ನಮ್ಮನ್ನು ತುಳಿಯುತ್ತಿದ್ದಾರೆ, ಇವರು ತುಳಿಯುತ್ತಿದ್ದಾರೆಂದು ನಂಬುತ್ತೀರಿ?

ಇಲ್ಲಿ ಸ್ವಲ್ಪ ವಿಷಯಾಂತರವಾದರೂ ಇದನ್ನು ಇಲ್ಲಿಯೇ ಹೇಳಿ ಮುಗಿಸುತ್ತೇನೆ. ಜಾತಿ ರಾಜಕೀಯ ಮಾಡುತ್ತಾರೆಂಬುದು ಕೆಲವರ ವಾದ. ಉದಹಾರಣೆಗೆ, ಒಕ್ಕಲಿಗ ಸಮುದಾಯದ, ಕುರುಬರ ಸಮುದಾಯದ, ಲಿಂಗಾಯತ ಸಮುದಾಯದ, ದಲಿತ ಸಮುದಾಯದ ನಾಯಕರುಗಳು ಮುಖಂಡರುಗಳಿದ್ದಾರೆ. ಅವರು ಅವರ ಜಾತಿಯನ್ನು ಮುಂದಿಟ್ಟುಕೊಂಡು ನಾಯಕರಾಗಿದ್ದಾರೆ. ಎಲ್ಲಾ ರೀತಿಯ ಸವಲತ್ತನ್ನು ಅನುಭವಿಸುತ್ತಿದ್ದಾರೆ. ಅವರುಗಳು ಅವರ ಜಾತಿಗೆ ಅಥವಾ ಜಾತಿಯ ಜನರಿಗೆ ಮಾಡಿರುವ ಸಹಾಯಗಳೇನು? ಯಾವುದೇ ಜಾತಿಯ ನಾಯಕರನ್ನು ನೋಡಿ ಅವರ ಎರಡನೆಯ ತಲೆಮಾರಿನ ನಾಯಕರನ್ನು ಬೆಳೆಯಲು ಬಿಟ್ಟಿಲ್ಲ. ನಿಜವಾಗಿಯೂ ಒಬ್ಬರಿಗೆ ತನ್ನ ಜಾತಿಯನ್ನು ಮೇಲೆ ತರಬೇಕೆಂದೆದಿದ್ದರೆ ಅವರೆಲ್ಲರನ್ನೂ ಗುರುತಿಸಿ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬೇಕಿತ್ತು. ಧರ್ಮದ ವಿಷಯದಲ್ಲಿಯೂ ಅಷ್ಟೆ. ಪ್ರಾದೇಶಿಕತೆಯ ವಿಷಯದಲ್ಲಿಯೂ ಅಷ್ಟೆ. ಒಂದೇ ಒಂದು ಕ್ಷೇತ್ರವನ್ನು ತೋರಿಸಿ ಒಬ್ಬ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ, ಮಂತ್ರಿಯೋ, ಸಂಸದರೋ ಸಂಪೂರ್ಣವಾಗಿ ಅಬಿವೃದ್ದಿ ಮಾಡಿರುವುದನ್ನು. ಒಂದೇ ಒಂದು ಜಾತಿಯನ್ನು, ಧರ್ಮವನ್ನೋ ತೋರಿಸಿ ಅವರ ಮುಖಂಡರು ಬೆಳೆಸಿರುವುದನ್ನು. ಭಾಷಾ ಹೋರಾಟಗಾರರ ಕೊಡುಗೆಯೇನು? ಭಾಷೆಗೆ? ಒಂದೇ ಒಂದು ಕೃತಿ? ಒಂದು ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡು ಬೆಳೆಸಿರುವುದನ್ನು ತೋರಿಸಿ. ಹಿಂದೂ ಧರ್ಮ ದತ್ತು ಪಡೆದವರಂತೆ ಮಾತನಾಡುವ ಸಂಸದರುಗಳು ಒಂದು ದೇವಸ್ಥಾನ, ಒಂದು ಅನ್ನ ಸಂತರ್ಪನೆ, ಒಂದು ಆಶ್ರಮ ಮಾಡಿರುವುದನ್ನು ತೋರಿಸಿ. ಅದ್ಯಾವುದು ಅವರಿಗೂ ಬೇಡ, ಮತದಾರನಿಗೂ ಬೇಡ. ಸರ್ಕಾರದಿಂದ ಒಪ್ಪತ್ತಿನ ಊಟದ ಕ್ಯಾಂಟೀನ್ ಬದಲು ಉದ್ಯೋಗ ಕಲ್ಪಿಸಿ ಎಂದು ಕೇಳಲಿ. ಮತದಾರ ಬೇಡುವುದನ್ನು ನಿಲ್ಲಿಸುವುದಿಲ್ಲ. ಚುನಾಯಿತ ಪ್ರತಿನಿಧಿ ಅಷ್ಟೋ ಇಷ್ಟೋ ಹಾಕಿ ಇವರನ್ನು ಸಾಕುತ್ತಿದ್ದೇನೆಂಬ ಗುಂಗಿನಲ್ಲಿ ಬದುಕುತ್ತಾನೆ. ನಾನು ಇದನ್ನು ಬಹಳ ಹತ್ತಿರದಿಂದ ನೋಡಿದ್ದೇನೆ, ಕ್ರಿಕೇಟ್, ವಾಲಿಬಾಲ್, ನಾಟಕ ಹೀಗೆ ಕೆಲವು ರಾಜಕಾರಣಿಗಳು ದುಡ್ಡು ಕೊಡುತ್ತಾರೆ, ಚುನಾವಣೆ ಸಂದರ್ಭದಲ್ಲಿ ಇವರನ್ನು ಉಪಯೋಗಿಸಿಕೊಂಡು ದಬ್ಬಾಯಿಸಿ ಮತ ಹಾಕಿಸಿಕೊಳ್ಳುತ್ತಾರೆ. ಇವರಿಗೂ ಊರು ಉದ್ದಾರವಾಗುವುದು ಬೇಡ ಅವರಿಗೂ ಬೇಡ.

ಶಬರಿಮಲೈಗೆ ಹೋಗುವ ವಿಷಯಕ್ಕೆ ಬಂದರೆ, ನಾನು ಏಳು ಬಾರಿ ಹೋಗಿ ಬಂದಿದ್ದೇನೆ. ನಾನು ಹೋಗುವುದಕ್ಕೆ ಮುಂಚೆ ಹೋಗುತ್ತಿದ್ದವರನ್ನು ತೆಗೆಳಿದ್ದೇನೆ, ಬೈದಿದ್ದೇನೆ. ಅದೊಂದು ವಿಭಿನ್ನ ಅನುಭವ. ಆದರೆ ಹೋಗಲು ಪ್ರಾರಂಭಿಸಿದಾಗಿನಿಂದ ಆಗಿರುವ ಅನುಭವವೇ ಬೇರೆ ತೆರನದ್ದು. ಅದರಿಂದಾದ ಅನುಕೂಲಗಳನ್ನು ನಿಮ್ಮ ಮುಂದೆ ಇಡುತ್ತೇನೆ. ನಾನು ಮತ್ತು ನನ್ನ ಪೂಜೆ ಪುನಸ್ಕಾರಗಳು ಒಂದು ಬಗೆಯ ವಿಚಿತ್ರದಿಂದ ಕೂಡಿವೆ. ಅದು ವಿಭಿನ್ನತೆಯೆಂದರೂ ಸರಿಯೆ. ಮನುಷ್ಯ ತಾನೊಂದು ಜಗತ್ತು ಎನ್ನುವಂತೆ ಬದುಕಬೇಕು. ಅವನೊಳಗೆ ಹೊಸ ಸೃಷ್ಟಿಯನ್ನು ಸೃಷ್ಟಿಸಬಲ್ಲ. ನಾನು ಎಲ್ಲಾ ದೇವಸ್ಥಾನಗಳಿಗೂ ಹೋಗುವವನಲ್ಲ. ಅಂದರೇ ನಾನಾಗಿಯೇ ಬಯಸಿ ಹೋಗುವ ದೇವಸ್ಥಾನಗಳು ಬೆರಳೆಣಿಕೆಯಷ್ಟು ಮಾತ್ರ. ನಾನು ಪ್ರಯಾಣಿಸುವಾಗ ಯಾರಾದರೂ ಪುರಾತನ ದೇಗುಲಗಳು ಇವೆಯಂದರೆ ಹೋಗುತ್ತೇನೆ. ಹೊಸದಾಗಿ ಕಟ್ಟಿರುವ ದೇವಸ್ಥಾನಗಳಿಗೆ ಭೇಟಿ ನೀಡುವುದು ಕಡಿಮೆ. ಅಲ್ಲಿ ತೋರಿಕೆಯಿರುತ್ತದೆಯೆ ಹೊರತು ಭಕ್ತಿಯಿರುವುದಿಲ್ಲವೆಂದು ನನ್ನ ಅನಿಸಿಕೆ. ನಾನು ದೇವಸ್ಥಾನಗಳಿಗೆ ಮಾತ್ರವಲ್ಲ, ಮಸೀದಿ, ದರ್ಗಾ, ಚರ್ಚು ಮತ್ತು ಗುರದ್ವಾರಗಳಿದ್ದರೂ ಹೋಗುತ್ತೇನೆ. ನಾನು ಬಯಸಿ ಹೋಗುವ ದೇಗುಲಗಳಲ್ಲಿ ಬೇಲೂರು, ಧರ್ಮಸ್ಥಳ ಮತ್ತು ಶಬರಿಮಲೈ ಪ್ರಮುಖವಾದವು. ಧರ್ಮಸ್ಥಳಕ್ಕೆ ಹೋದಾಗ ಅವಕಾಶ ಸಿಕ್ಕಿದರೆ ಹೊರನಾಡು, ಶೃಂಗೇರಿ, ಸುಬ್ರಹ್ಮಣ್ಯಕ್ಕೆ ಹೋಗಿ ಬರುವುದು ಇದೆ. 

ನಾನು ಒಂಟಿಯಾಗಿ ದೂರದ ಊರು ಅಂತಾ ಹೋಗಿದ್ದು ಬೇಲೂರು. ಬೇಲೂರು ನನ್ನ ಮನೆಯ ದೇವರು ಎನ್ನುವ ಕಾರಣಕ್ಕೆ ಹೋಗುತ್ತೇನೆಂದರೂ ತಪ್ಪಿಲ್ಲ. ನಾನು ಎಂಟನೆಯ ತರಗತಿಯಲ್ಲಿದ್ದಾಗಿನಿಂದಲೂ ಬೇಲೂರಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ವರ್ಷ ಜಾತ್ರೆಗೆ ಹೋಗುತ್ತಿದ್ದೆ. ಮಧ್ಯದಲ್ಲಿ ಐದಾರು ವರ್ಷಗಳು ನಾನು ಯಾವುದೇ ಪೂಜೆ ಪುನಸ್ಕಾರಗಳನ್ನು ಮಾಡುತ್ತಿರಲಿಲ್ಲ ಆ ಸಮಯದಲ್ಲಿ ಹೋಗುವುದನ್ನು ನಿಲ್ಲಿಸಿದ್ದೆ. ಅಲ್ಲಿನ ದೇವಸ್ಥಾನ ಬಹಳ ಖುಷಿ ಕೊಡುತ್ತದೆ ಆದರೆ, ಅಲ್ಲಿನ ಅರ್ಚಕರನ್ನು ನೋಡಿದಾಗ, ಅವರು ಪೂಜೆ ಮಾಡುವ ರೀತಿಯನ್ನು ಕಂಡಾಗ ನಿಜಕ್ಕೂ ಬೇಸರ ತರಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಈ ದೇಸಸ್ಥಾನವು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬಂದಿರುವುದರಿಂದ ಅವರು ಸಂಬಳಕ್ಕೆ ಪೂಜೆ ಮಾಡುವವರಾಗಿದ್ದಾರೆ. ಅವರಲ್ಲಿ ಭಕ್ತಿಯೂ ಕಾಣುವುದಿಲ್ಲ ಭಯವಂತು ಇಲ್ಲವೇ ಇಲ್ಲ. ಸಾವಿರಾರು ಪ್ರವಾಸಿಗರು ಬೇಲೂರಿಗೆ ಭೇಟಿ ನೀಡಿದರೂ ಕೂಡ ದೇಗುಲದಲ್ಲಿ ಮಂಗಳಾರತಿ ಪಡೆಯುವವರು ವಿರಳ ಮತ್ತು ಅಲ್ಲಿರುವ ಗೈಡ್‍ಗಳು ಅದರ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಎರಡನೆಯದಾಗಿ ಧರ್ಮಸ್ಥಳ, ಹೆಸರಲ್ಲಿಯೇ ಒಂದು ಶಕ್ತಿಯಿದೆ ಎನಿಸುತ್ತದೆ. ಅಲ್ಲಿಗೆ ಪಯಣಿಸುವುದೇ ಒಂದು ಸೊಬಗು, ಕಾನನದಲ್ಲಿ, ಘಟ್ಟಗಳಿಂದ ಹೋಗಿ ಬರುವುದು, ನೇತ್ರಾವತಿಯ ಸ್ನಾನ, ಅಚ್ಚುಕಟ್ಟಾಗಿರುವ ವಸತಿ ಗೃಹಗಳು, ದೇಗುಲ, ಎಲ್ಲವೂ ಅಲ್ಲೊಂದು ಶಕ್ತಿಯಿದೆ ಎನಿಸುತ್ತದೆ. ಅದರ ಜೊತೆಗೆ ಅನ್ನ ಸಂತರ್ಪಣೆ. ಆದರೆ, ಇತ್ತೀಚೆಗೆ ಧರ್ಮಸ್ಥಳ ಬದಲಾಗುತ್ತಿದೆ. ವಾಣಿಜ್ಯಕರಣವಾಗಿದೆಯೆಂದು ನನಗನಿಸುತ್ತಿದೆ. ಉದಾಹರಣೆಗೆ: ಮಧ್ಯ ಮಧ್ಯ ಆಗ್ಗಾಗ್ಗೆ ದರ್ಶನವನ್ನು ನಿಲ್ಲಿಸುವುದು, ಅರ್ಚನೆ, ಅಭಿಷೇಕವೆಂದು. ಇದು ಉದ್ದೇಶಪೂರ್ವಕವಾಗಿ ಜನನಿಬಿಡತೆಯನ್ನು ತೋರಿಸಲು ಹೀಗೆ ಮಾಡುತ್ತಿದ್ದಾರೆಂಬುದು ಕೆಲವರ ವಾದ. ಇದು ಮೊದಲಿರಲಿಲ್ಲ. ಸಾಲುಗಳಲ್ಲಿ ನಿಂತಾಗ ಜ್ಯೂಸ್, ಬಿಸ್ಕತ್ ಇತರೆ ಕುರುಕು ತಿಂಡಿಗಳನ್ನು ಮಾರುವುದು. ಎಲ್ಲಿಯೋ ಭಕ್ತಿ ಕಡಿಮೆಯಾಗಿರಬಹುದೇ ಎನ್ನುವ ಅನುಮಾನ ನನ್ನಲ್ಲಿ ಬರುತ್ತದೆ. 

ಮೂರನೆಯದಾಗಿ, ಶಬರಿಮಲೈ. ನೀವು ಮಾಲೆ ಧರಿಸುವುದು, ಧರಿಸಿದ ನಂತರ ಅತ್ಯಂತ ಶುಚಿಯಾಗಿರುವುದು. ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಊಟಕ್ಕೆ ಮುಂಚೆ ಸ್ನಾನ ಪೂಜೆಯಾಗಬೇಕು. ಮನೆ ಸ್ವಚ್ಛವಾಗಿರಬೇಕು. ಸುಳ್ಳು ಹೇಳಬಾರದು, ಬೈಗುಳ, ಜಗಳವಿಲ್ಲ, ಅನ್ಯಾಯ ಅನಾಚಾರಗಳಿಲ್ಲ. ವರ್ಷದಲ್ಲಿ ನಾಲ್ಕೈದು ದಿವಸವಾದರೂ ನಾನು ಬಹಳ ನಿಯತ್ತಿನಿಂದ ಬದುಕಿದ್ದೆ ಎನ್ನುವ ಸಾರ್ಥಕತೆಯೇ ನಾನು ಶಬರಿಮಲೈಗೆ ಹೋಗಲು ಕಾರಣ. ಎಲ್ಲರೂ ಅಷ್ಟೇ ನಿಷ್ಟೆಯಿಂದ ಇರುತ್ತಾರೆಂದು ನಾನು ಹೇಳುವುದಿಲ್ಲ. ದೇವಸ್ಥಾನಗಳಲ್ಲಿ ನಮ್ಮವರು ನಡೆದುಕೊಳ್ಳುವ ರೀತಿಯನ್ನು ಮುಂದಿನ ಪ್ಯಾರಾದಲ್ಲಿ ಬರೆಯುತ್ತೇನೆ. ಶಬರಿ ಮಲೈಗೆ ಹೋಗಿ ಬರುವ ತನಕ ನಮ್ಮೊಳಗೆ ದೇವರಿದ್ದಾನೆಂದು ಜನರು ಭಾವಿಸುತ್ತಾರೆ ಅದೇ ರೀತಿ ಬೇರೆಯವರಲ್ಲಿಯೂ ದೇವರಿದ್ದಾನೆಂದು ನಾನು ಭಾವಿಸಿ ಗೌರವಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲೆಂದು ಭಜಿಸುತ್ತಿರುತ್ತೇವೆ. ಸ್ವಾಥದಿಂದ ಹೊರಕ್ಕೆ ಬೇಡುವುದು, ಬದುಕುವುದು ಇಲ್ಲಿ ಮಾತ್ರವೆನಿಸುತ್ತದೆ ನನಗೆ. ದಾರಿಯುದ್ದಕ್ಕೂ ಅಯ್ಯಪ್ಪನ ಶರಣು ಬಿಟ್ಟು ಬೇರಾವ ಮಾತುಗಳು ಬರುವುದಿಲ್ಲ, ಬಂದರೂ ಹೆಚ್ಚಿರುವುದಿಲ್ಲ. 

ಈ ಏಳು ವರ್ಷಗಳಲ್ಲಿ ಸಾಕಷ್ಟು ಜನರೊಂದಿಗೆ ಬೆರೆತಿದ್ದೇನೆ. ಸಾಕಷ್ಟು ಕಲಿತಿದ್ದೇನೆ. ಮೊದಲ ಮೂರು ಬಾರಿ ನಾನು ಕಾರಿನಲ್ಲಿ ಹೋಗಿದ್ದೆ. ಸ್ನೇಹಿತರೊಂದಿಗೆ ಹೋದಾಗಲೂ ಗುರುವಾಯೂರು, ಮದುರೈ, ಕೊಟ್ಟಾಣಿಕೆರೆ ಭಗವತಿ ದೇವಸ್ಥಾನಗಳನ್ನು ನೋಡಿ ಬಂದಿದ್ದೆ. ಆದರೆ, ಕಾರಿನಲ್ಲಿ ಹೋಗುವುದು ನನಗೆ ಅಷ್ಟು ಇಷ್ಟವಾಗಲಿಲ್ಲ. ಮೊದಲನೆಯದಾಗಿ, ಸತತ 12-13 ಗಂಟೆಗಳು ಕೂತಿರಬೇಕು, ಎರಡನೆಯದಾಗಿ, ಡ್ರೈವರ್ ರಾತ್ರಿ ನಿದ್ದೆ ಬಿಟ್ಟು ಗಾಡಿ ಓಡಿಸಬೇಕು ಅದು ಅಷ್ಟು ಸುರಕ್ಷಿತವಲ್ಲ, ಮೂರನೆಯದಾಗಿ ಆರ್ಥಿಕವಾಗಿ ನೋಡಿದರು ಅದು ಸ್ವಲ್ಪ ಹೆಚ್ಚಿನ ಖರ್ಚಿನದ್ದು. ಹಾಗಾಗಿಯೇ, ನಾನು ರೈಲಿನಲ್ಲಿ ಹೋಗಿ ಬರುವುದನ್ನು ಅಭ್ಯಸಿಸಿದೆ. ರಾತ್ರಿ 8ಗಂಟೆಗೆ ಇಲ್ಲಿ ಹತ್ತಿದರೆ ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ಚೆಂಗನೂರು ತಲುಪುತ್ತೇನೆ, ಅಲ್ಲಿಂದ ಬಸ್ ಹಿಡಿದು ಸುಮಾರು 1 ಗಂಟೆಗೆ ಪಂಪಾ ಸೇರಬಹುದು. ಸ್ನಾನ ಮಾಡಿ ಬೆಟ್ಟ ಹತ್ತುವುದಕ್ಕೆ ಶುರು ಮಾಡಿದರೆ 5 ಗಂಟೆ ವೇಳೆಗೆ ದರ್ಶನವಾಗಿ, ವಿಶ್ರಾಂತಿ ಗೃಹದಲ್ಲಿ ವಿಶ್ರಮಿಸಬಹುದು. ನಂತರ ಅಲ್ಲೆಲ್ಲಾ ಸುತ್ತಾಡಿ ಏನೆಲ್ಲಾ ಬದಲಾವಣೆಗಳಾಗಿವೆ, ಯಾವ್ಯಾವ ಕಡೆಯಿಂದ ಜನರು ಬಂದಿದ್ದಾರೆ, ಹೇಗೆ ಬಂದಿದ್ದಾರೆಂದು ಕೆಲವರೊಂದಿಗೆ ಹರಟುವುದು. ಒಂದೇ ಜಾಗದಲ್ಲಿ ಮೂರ್ನಾಲ್ಕು ರಾಜ್ಯದ ಬೇರೆ ಬೇರೆ ಜನರ ಬದುಕನ್ನು ನೋಡಬಹುದು. ಮುಂಜಾನೆ ಎದ್ದು ಮತ್ತೊಮ್ಮೆ ದರ್ಶನ ಮಾಡಿ, ಅಭಿಷೇಕ ಮಾಡಿಸಿಕೊಂಡು ಪಂಪಾಗೆ ಇಳಿದು ಅಲ್ಲಿಂದ ಬಸ್ ಹಿಡಿದು ಚೆಂಗನೂರು ತಲುಪಿ ಮಧ್ಯಾಹ್ನ 3.30ಕ್ಕೆ ರೈಲು ಹತ್ತಿ ಕುಳಿತರೆ ನಾಳೆ ಮುಂಜಾನೆ 6.30ರ ಸುಮಾರಿಗೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣ ತಲುಪಬಹದು. ಮತ್ತೊಂದು ವಿಶೇಷವೆಂದರೆ, ಬೆಟ್ಟದಿಂದ ಇಳಿಯುವಾಗ ಕೆಲವರು ಗ್ಲೂಕೋಸ್ ಪುಡಿಯ ಪಾಕೆಟ್ ಹಿಡಿದು ಬರುತ್ತಿರುತ್ತಾರೆ, ಬೆಟ್ಟ ಹತ್ತುತ್ತಿರುವವರಿಗೆ ನೀಡಿ ಅವರಿಗೆ ಪ್ರೋತ್ಸಾಹಿಸುತ್ತಾರೆ. ಸಾಕಷ್ಟು ಭಕ್ತಾಧಿಗಳು ಅಲ್ಲಲ್ಲಿ ಕುಡಿಯುವ ನೀರನ್ನು ನೀಡುತ್ತಿರುತ್ತಾರೆ, ಉಚಿತ ಅನ್ನ ಸಂತರ್ಪಣೆಯನ್ನು ಮಾಡುತ್ತಾರೆ. ಇಡೀ ಶಬರಿಮಲೈನಲ್ಲಿ ಬಾಟಲಿ ನೀರಿಲ್ಲ. ಅಲ್ಲಲ್ಲಿಯೇ ಶುದ್ದೀಕರಿಸಿದ ನೀರಿನ ವ್ಯವಸ್ಥೆಯಿದೆ. ಬಯೋ ಟಾಯ್ಲೆಟ್‍ಗಳಿವೆ, ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಿದೆ. ನಾನೊಬ್ಬ ಭಕ್ತನಾಗಿ ಅಲ್ಲದಿದ್ದರೂ ಒಬ್ಬ ಪರಿಸರ ವಿಜ್ಞಾನಿಯಾಗಿ ಗಮನಿಸುವ, ಕಲಿಯುವ ಸಾಕಷ್ಟು ಅಂಶಗಳು ನನಗೆ ದೊರೆತಿವೆ. 

ನಾವು ಯಾವುದನ್ನು ಅನುಭವಿಸುತ್ತೇವೆ ಅದರ ಬಗ್ಗೆ ಮಾತನಾಡಲು ಯೋಗ್ಯರಿರುತ್ತೇವೆ. ಅದನ್ನು ಅನುಭವಿಸದೇ ಹೊರಗಿನವರಾಗಿ ನಾವೆಷ್ಟೇ ಮಾತನಾಡಿದರೂ ಅನುಭವಿಸಿದಂತಾಗುವುದಿಲ್ಲ. ಹೆತ್ತವಳಿಗೆ ಮಾತ್ರ ಹೆರಿಗೆ ನೋವು ತಿಳಿದಿರುತ್ತದೆ. ದೂರದಿಂದ ನಾವೆಷ್ಟೆ ಮಾತನಾಡಿದರು ಅದು ಅನುಭವಕ್ಕೆ ಬರುವುದಿಲ್ಲ. ನಾನು ಶಬರಿಮಲೈಗೆ ಹೋಗುವುದಕ್ಕೆ ಶುರು ಮಾಡಿದ್ದು ಇದೇ ಉದ್ದೇಶಕ್ಕಾಗಿ, ಆ ಅನುಭವ ನನಗೆ ಬೇಕೆಂದು. ಅದು ಹೇಗೆ, ಮುಂಜಾನೆ ನಾಲ್ಕಕ್ಕೆ ಎದ್ದು ಕೊರೆಯುವ ಚಳಿಯಲ್ಲಿ ತಣ್ಣೀರ ಸ್ನಾನ, ಭಜನೆ, ಬರಿಗಾಲಲ್ಲಿ ನಡೆಯುವುದು. ಇದೆಲ್ಲವೂ ನನಗೆ ಕೌತುಕತ ಪ್ರಶ್ನೆಯಾಗಿತ್ತು. ಅದಕ್ಕೂ ಹಿಂದೆ ನಾವು ಶಬರಿಮಲೈಗೆ ಹೋಗುವವರನ್ನು ಬೈದಿದ್ದೆ, ದೂರಿದ್ದೆ, ಈಗ ನಾನೇ ಹೋದರೇ? ನನ್ನನ್ನು ಅಣಕಿಸುವುದಿಲ್ಲವೇ? ಅದೇ ಜೀವನ. ಕೆಲವರು ಯಾವತ್ತೋ ಏನೋ ಹೇಳಿದ್ದಕ್ಕೆ ಗಂಟುಬಿದ್ದು ಜೀವನವನ್ನೆ ಸವೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರನ್ನು ನೋಡುವಾಗ ಬಹಳ ನೋವಾಗುತ್ತದೆ. ರಾಹುಲ್ ಗಾಂಧಿಯನ್ನು ಅವರ ಮುಂದಿನ ಪ್ರಧಾನ ಮಂತ್ರಿಯೆಂದು ಒಪ್ಪಿಕೊಳ್ಳುವುದಕ್ಕೆ ಅದೆಷ್ಟು ಕಷ್ಟವಲ್ಲವೇ? ಆದರೇ, ಅವರು ಆ ಪಕ್ಷದಿಂದ ಹೊರಬರಲಾಗದೇ ಒದ್ದಾಡುತ್ತಿದ್ದಾರೆ. ನನಗೆ ಈ ರಾಜಕೀಯದ ಅದರಲ್ಲಿಯೂ ಕಾರ್ಯಕರ್ತರನ್ನು ನೋಡುವಾಗ ಕನಿಕರವುಂಟಾಗುತ್ತದೆ. ನೀವು ಸೂಕ್ಷ್ಮವಾಗಿ ಗಮನಿಸಿ, ಒಂದು ಹಳ್ಳಿಯಲ್ಲಿ ನಾಲ್ಕೈದು ಜನರು ಮಾತ್ರ ಅಲ್ಪ ಸ್ವಲ್ಪ ದುಡ್ಡು ಕಾಸು ಮಾಡಿಕೊಳ್ಳುತ್ತಾರೆ. ಮಿಕ್ಕಿದವರು ಪಕ್ಷ, ಪಕ್ಷ ಅಂತಾ ಸಾಯುತ್ತಾರೆ. ಇದೆಲ್ಲವೂ ಈ ಮೇಲಿನ ಸಾಲಿಗೆ ಸೇರುವ ಉದಾಹರಣೆಗಳು. ಬದಲಾವಣೆಗೆ ಸಿದ್ದವಿರುವುದಿಲ್ಲ. ಬದಲಾವಣೆ, ವಿಕಸನ ಯಾವತ್ತಿಗೂ ಸುಲಭದ ಹಾದಿಯಲ್ಲ. ಅದೊಂದು ರೀತಿಯ ಗರಗಸದ ಮೇಲೆ ನಡೆಯುವ ಸಾಹಸ. ನಿಮ್ಮನ್ನು ನೀವು ಕೊಯ್ಯ್ದುಕೊಳ್ಳಲು ಸಿದ್ದರಿರಬೇಕು. ಅದಕ್ಕೆ ನಾನೆಂದಿಗೂ ಸಿದ್ದನಾಗಿರುತ್ತೇನೆ. ಬದಲಾವಣೆ, ವಿಕಸನವಾಗಬೇಕು, ನಾವು ಅದನ್ನು ಒಪ್ಪುತ್ತಾ ಮುಂದೆ ಸಾಗಬೇಕು. ಈ ವಿಷಯದಲ್ಲಿಯೇ ನನಗೆ ಗಾಂಧೀಜಿ ಮಾದರಿಯಾಗುವುದು. ಅವರು ಜೀವನ ಕಳೆದಂತೆ ಬದಲಾಗುತ್ತಾ ಹೋದರು, ಅನುಭವಿಸುತ್ತಾ ವಿಕಸನಗೊಂಡರು. ಯಾವುದೋ ಒಂದು ಸಿದ್ದಾಂತಕ್ಕೆ ಅಂಟಿಕೊಳ್ಳಲಿಲ್ಲ. ಮಾರ್ಗ ಮಾತ್ರವೇ ಮುಖ್ಯವಾದದ್ದು, ಅದು ಸತ್ಯಾನ್ವೇಷಣೆ. ನಾನು ಈಗಲೂ ಅಷ್ಟೆ, ಇದನ್ನು ಹೀಗೆಯೇ ಮುಂದುವರೆಸುತ್ತೇನೆಂಬ ನಂಬಿಕೆಯಲ್ಲ, ಮುಂದೊಂದು ದಿನ ಸಾಕೆನಿಸಿದರೆ ನಿಲ್ಲಿಸಲು ಬಹುದು. ನಾನು ಯಾವುದಕ್ಕೂ ಅಂಟಿಕೊಂಡವನಲ್ಲ, ಅಂಟಿಕೊಳ್ಳುವುದೂ ಇಲ್ಲ. 

ದೇವರ ದಿಂಡಿರ ಪಾಪ ಪುಣ್ಯದ ವಿಷಯ ಕುರಿತು ನಾಲ್ಕು ಸಾಲುಗಳನ್ನು ಬರೆದುಬಿಡುತ್ತೇನೆ. ನಿಮಗೆ ಪಾಪ ಪುಣ್ಯದ ಕಲ್ಪನೆಯನ್ನು ಕೊಡದೇ ಇದ್ದಿದ್ದರೆ ಈ ಜನರು ಭಯದಿಂದ ಬದುಕುತ್ತಿರಲಿಲ್ಲ. ಪ್ರೀತಿ ಹರಡಲು ವರ್ಷಗಳು ಬೇಕು. ಭಯ ಹರಡಲು ಕ್ಷಣ ಸಾಕು. ದೇವರು ಇದ್ದಾನೆ, ಇಲ್ಲವೆನ್ನುವುದು ಇಲ್ಲಿ ಅವಶ್ಯಕತೆಯಲ್ಲ. ಆದರೆ, ಜನರು ಒಂದು ನಿಯಮವಾಗಿ ಬದುಕಬೇಕೆಂದರೆ ಇವುಗಳನ್ನು ಹಾಕಲೇಬೇಕಾದ ಅನಿವಾರ್ಯತೆಯಿದೆ. ಕಾನೂನು ಎಲ್ಲವನ್ನು ಕಾಪಾಡಲಾಗುವುದಿಲ್ಲ. ಯಾವುದೇ ಹೆಣ್ಣು ನಿನ್ನ ತಂಗಿಯಂತೆ, ತಾಯಿಯಂತೆ ಎಂದು ತಲೆಗೆ ತುಂಬುವುದು ಕೆಲಸ ಮಾಡುವಷ್ಟು ಹೆಣ್ಣಿಗೆ ಕಿರುಕುಳ ಕೊಟ್ಟರೆ ಜೈಲಿಗೆ ಹೋಗುತ್ತೀಯಾ ಎನ್ನುವುದು ಕೆಲಸ ಮಾಡುವುದಿಲ್ಲ ಇದು ನನ್ನ ನಂಬಿಕೆ. 

ಕೊನೆಯದಾಗಿ, ದೇವಸ್ಥಾನಗಳಲ್ಲಿ ನಮ್ಮ ಜನರು ನಡೆದುಕೊಳ್ಳುವುದರ ಕುರಿತು ನಾನು ಇಲ್ಲಿ ವಿವರವಾಗಿ ಬರೆಯುತ್ತಿದ್ದೇನೆ. ಇದು ಸಂಪೂರ್ಣವಾಗಿ ನನ್ನನುಭವ. ನೂರಾರು ಕಿಲೋಮೀಟರುಗಳಿಂದ ದೇವಸ್ಥಾನಗಳಿಗೆ ಬರುತ್ತಾರೆ, ಅದು ಯಾವುದೇ ದೇವಸ್ಥಾನವಿರಲಿ. ಆದರೆ, ಅಲ್ಲಿ ಅರ್ಧ ತಾಸು ಸಾಲಿನಲ್ಲಿ ನಿಂತಾಗ ಮುನ್ನುಗ್ಗಲು ಪ್ರಯತ್ನಿಸುತ್ತಾರೆ, ಜಗಳಕ್ಕೆ ಬೀಳುತ್ತಾರೆ, ಅರಚಾಡುತ್ತಾರೆ, ಕಿರುಚಾಡುತ್ತಾರೆ. ದೇವರ ಸಾನಿಧ್ಯಕ್ಕೆ ಅಥವಾ ಗರ್ಭಗುಡಿಯ ಬಳಿಗೆ ಬರುತ್ತಾರೆ, ನೂಕಾಡಿ/ತಳ್ಳಾಡಿ ಸರಿಯಾಗಿ ದೇವರ ವಿಗ್ರಹವನ್ನು ನೋಡದೆ ಹೊರಕ್ಕೆ ಬರುತ್ತಾರೆ. ದೇವರ ಮುಂದೆ ಬಂದು ನಿಂತಾಗ ಕಣ್ಣು ಮುಚ್ಚುತ್ತಾರೆ. ನಾನು ಶಬರಿ ಮಲೈಗೆ ಹೋದಾಗಲೂ ಅಷ್ಟೆ, ಪಂಪಾ ನದಿಯಲ್ಲಿ ಸ್ನಾನ ಮಾಡಿ ಉಪಯೋಗಿಸಿದ ಬಟ್ಟೆಯನ್ನು, ಬಾಕಿ ಉಳಿದ ಸೋಪು, ಶಾಂಪೂ ಇತರೆ ವಸ್ತುಗಳನ್ನು ನದಿಗೆ ಬಿಟ್ಟು ಮಲೀನ ಮಾಡುತ್ತಾರೆ. ಮಾಲೆ ಹಾಕಿದಾಗಲೂ ಕೆಲವರು ಅಂಗಡಿಯವರಿಗೆ ಮೋಸ ಮಾಡಿ ಬರುವುದನ್ನು ನಾನು ಕಂಡಿದ್ದೇನೆ. ಅಲ್ಲಲ್ಲಿಯೇ ಶೌಚಾಲಯಗಳಿದ್ದರೂ ದಾರಿ ಬದಿಯಲ್ಲಿಯೇ ಶೌಚಾ ಮಾಡುವವರನ್ನು ಕೆಲವೊಮ್ಮೆ ನಾನೆ ಗದರಿಸಿರುವುದುಂಟು. 

ಉಪಸಂಹಾರವೆನ್ನುವುದಾದರೇ, ನೀವು ಯಾವುದನ್ನು ಮಾಡಿದರೂ ನಿಷ್ಟೆಯಿಂದ ನಿಮ್ಮ ಸ್ವಂತ ಮನಸ್ಸಿನಾಳದ ಪ್ರೀತಿಯಿಂದ ಮಾಡಬೇಕು. ಭಕ್ತಿಯೆನ್ನುವುದು ಪ್ರೀತಿಯ ಇನ್ನೊಂದು ಭಾವನೆ. ವಿಗ್ರಹವೋ, ಧೈವವೋ, ವ್ಯಕ್ತಿಯೋ ಮುಖ್ಯವಲ್ಲ ನಿಮ್ಮ ಮನಸ್ಸಿಗೆ ನೆಮ್ಮದಿ ಮುಖ್ಯ. ನೀವು ಕೇದಾರನಾಥಕ್ಕೆ ಹೋದರೂ ನಿಮ್ಮ ಮನಸ್ಸಿನೊಳಗೆ ಕಲ್ಮಶವಿದ್ದರೆ ಏನೂ ಮಾಡಲಾಗುವುದಿಲ್ಲ. ಆದರೇ, ಎಲ್ಲವನ್ನೂ ಅನುಭವಿಸಲು ಪ್ರಯತ್ತಿಸಬಹುದು. ಹಿಡಿಸದೇ ಇದ್ದರೆ ಕಿತ್ತೆಸೆದು ಹೋಗಲು ಸಿದ್ದರಾಗಿರಬೇಕು. 

No comments:

Post a Comment