21 ಫೆಬ್ರವರಿ 2018

ಶ್ರಮಜೀವನಕ್ಕೆ ಬಲಿಯಾದವರಿಲ್ಲ, ಅವರ ಸೋಮಾರಿತನಕ್ಕೆ ಬೇಸತ್ತು ಸತ್ತವರು ಸಾವಿರಾರು ಜನರಿದ್ದಾರೆ!!!




ಬರೆಯುವುದಕ್ಕೆ ಮನಸ್ಸಿದ್ದಾಗ ಬರೆದುಬಿಡಬೇಕು. ಆಲೋಚನೆಗಳು, ಚಿಂತನೆಗಳು ಯಾವಾಗ ಬರುತ್ತವೆ, ಯಾವಾಗ ಬತ್ತುತ್ತವೆಂದು ಹೇಳಲಾಗುವುದಿಲ್ಲವೆಂದು ತೀರ್ಮಾನಿಸಿ ಬರೆಯಲು ಶುರು ಮಾಡಿದೆ. ಆದರೇ ಶುರುಮಾಡಿ ಒಂದು ವಾರವಾಗಿತ್ತು. ಅದೇನೇ ಆಗಲಿ, ಈ ದಿನ ಇದನ್ನು ಬರೆದು ಮುಗಿಸಬೇಕೆಂದು ಕುಳಿತಿದ್ದೇನೆ. ಈ ಬರವಣಿಗೆ ಬಿಟ್ಟು ಬಿಟ್ಟು ಬರೆದಿರುವುದರಿಂದ ಓದಿಸಿಕೊಂಡು ಹೋಗುತ್ತದೆಯೆಂಬ ಸಂಪೂರ್ಣ ನಂಬಿಕೆ ನನಗಿಲ್ಲ. ಆದರೂ ಸಾಧ್ಯವಾದಷ್ಟೂ ತಿದ್ದುಪಡಿ ಮಾಡಿದ್ದೇನೆಂಬ ಅಲ್ಪ ತೃಪ್ತಿಯಿದೆ. ಇಂದಿನ ಜನರ ಮನಸ್ಥಿತಿಯ ಕುರಿತು ಅದರಲ್ಲಿಯೂ ಸರ್ಕಾರಿ ನೌಕರರನ್ನು ಕುರಿತು ನಾಲ್ಕು ಮಾತನಾಡಬೇಕೆಂದು ತೀರ್ಮಾನಿಸಿದ್ದೇನೆ. ಈ ಬರವಣಿಗೆಯಿಂದ ಅವರನ್ನು ಟಾರ್ಗೇಟ್ ಮಾಡುತ್ತಿದ್ದೇನೆಂದು ಅಥೈಸಿಕೊಳ್ಳಬಾರದು. ನನ್ನ ಮಾತಿಗೆ ಅವರು ಕಿವಿಗೊಡುವುದಿಲ್ಲವೆಂಬುದು ನನಗೆ ತಿಳಿದಿದೆ. ಆದರೂ ನಾನು ಹೇಳುವುದನ್ನು ಹೇಳಿ ಮುಗಿಸುತ್ತೇನೆ. ಇದನ್ನು ಒಪ್ಪುವುದಿಲ್ಲವೆನ್ನುವುದು ನನಗೆ ತಿಳಿದಿದೆ, ಅದರ ಬಗ್ಗೆ ನನಗೇನೂ ಬೇಸರವಿಲ್ಲ. ಆದರೆ ಚಿಂತನೆಗಳು ಮೊಳಗಲಿ. ಯಾವುದೇ ಹೊಸತರ ಆಲೋಚನೆಗಳು ಬಂದಾಗ ಯಾರೂ ಒಪ್ಪವುದಿಲ್ಲ, ಏಕೆಂದರೆ ಅದು ಹಳೆ ಬದುಕಿನ ಹಾದಿಯಲ್ಲಿ ಬದುಕುತ್ತಿರುವ ಅಥವಾ ಆಲೋಚಿಸುವ ತಲೆಯೊಳಕ್ಕೆ ಹೋಗುವುದು ಕಷ್ಟವಾಗುತ್ತದೆ. ಹಾಗೆಂದ ಮಾತ್ರಕ್ಕೆ ಇಂತಹ ವಿಚಾರದಲ್ಲಿ ಚಿಂತನೆಯೇ ಬೇಡ, ಚರ್ಚೆಯೇ ಬೇಡವೆಂದರೆ ಮುಂದೊಂದು ದಿನ ದೊಡ್ಡ ಅನಾಹುತ ಸಂಭವಿಸಬಹುದು.

ನಿಮ್ಮಲ್ಲಿ ಸಾಕಷ್ಟು ಜನರು ಶಿವರಾಮ ಕಾರಂತರ ನಾವು ಕಟ್ಟಿದ ಸ್ವರ್ಗವನ್ನು ಓದಿಲ್ಲವೆಂದು ನಂಬಿ ಬರೆಯುತ್ತಿದ್ದೇನೆ. ಓದದೇ ಇರುವ ಪ್ರತಿಯೊಬ್ಬರು ಅದನ್ನೊಮ್ಮೆ ಓದಲೇ ಬೇಕೆಂದು ಶಿಫಾರಸ್ಸು ಮಾಡುತ್ತೇನೆ. ನಿಜವಾಗಿಯೂ ಹೇಳುತ್ತೇನೆ, ನಾನು ತಾರತಮ್ಯ ಮಾಡುವುದು ಎರಡೇ ವಿಷಯದಲ್ಲಿ. ಒಂದು ಓದದೇ ಇರುವವರ ಕುರಿತು, ಮತ್ತೊಂದು ದೇಶ ಸುತ್ತಾಡದೇ ಇರುವವರು ಕುರಿತು. ನನಗೆ ಈ ಎರಡನ್ನು ಮಾಡದೆ ಮಾತನಾಡುವವರು ಒಂದು ರೀತಿಯಲ್ಲಿ ಹಿಡಿಸದೆ ಇರುವವರು. ನೀವು ಓದದೇ ಮತ್ತು ಲೋಕ ಸುತ್ತಾಡದೇ ನನ್ನೊಂದಿಗೆ ಮಾತ್ರವಲ್ಲ ಯಾರೊಂದಿಗೂ ಚರ್ಚಿಸಲು ಯೋಗ್ಯರಲ್ಲ. ಓದು ಎಂದಾಕ್ಷಣ ಯಾವುದನ್ನು ಓದಬೇಕು, ಏಕೆ ಓದಬೇಕು, ಹೇಗೆ ಓದಬೇಕು ಎನ್ನುವ ಮಾತು ಬರುತ್ತದೆ. ಕೇವಲ ನಿಮ್ಮ ವೃತ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಓದಿಕೊಂಡು ಮಾತನಾಡಿದರೆ, ನೀವು ನನಗೆ ಆಸ್ಥಾನ ಕವಿಯಂತೆ ಕಾಣುತ್ತೀರೆ ಹೊರತು ವಿದ್ವತ್ತರಾಗಿಯಲ್ಲ. ನಾನು ಪರಿಸರ ವಿಜ್ಞಾನದ ವಿಷಯದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದಿದ್ದೇನೆ, ಅದರ ಕುರಿತು ನನ್ನ ಪಾಂಡಿತ್ಯವನ್ನು ಸುರಿಸಿದರೆ ಅಲ್ಲೇನಿದೆ ವಿಶೇಷತೆ? ಅದನ್ನು ಹೊರತುಪಡಿಸಿ, ಮಾನವಿಕ ವಿಜ್ಞಾನದಲ್ಲಿಯೂ, ಸಮಾಜ ಶಾಸ್ತ್ರದಲ್ಲಿಯೋ, ಸಾಹಿತ್ಯದಲ್ಲಿಯೋ ಮಾತನಾಡಿದರೆ ಅದನ್ನು ನನ್ನ ಯೋಗ್ಯತೆ ಮೀರಿದ ಜ್ಞಾನವೆನ್ನಬಹುದು.

ಓದುವ ವಿಷಯವನ್ನು ಮತ್ತಷ್ಟೂ ಚರ್ಚಿಸೋಣ. ನನ್ನ ಯುವರಾಜ ಕಾಲೇಜು ಮತ್ತು ಮಹರಾಜ ಕಾಲೇಜಿನ ದಿನಗಳ ನೆನಪು ಬರುತ್ತದೆ. ಆ ದಿನಗಳಲ್ಲಿ ಮೋಜು ಗೋಜು, ರತಿ ವಿಜ್ಞಾನಗಳು ಉತ್ತುಂಗದಲ್ಲಿದ್ದವು. ಆ ದಿನಗಳಲ್ಲಿ ಆ ರೀತಿಯ ಪುಸ್ತಕಗಳನ್ನು ಓದುತ್ತಿದ್ದವರ ಸಂಖ್ಯೆ ನಮ್ಮ ಹಾಸ್ಟೆಲಿನಲ್ಲಿ ಅಪಾರವಾಗಿತ್ತು. ಅದರಲ್ಲಿ ನಾನು ಒಬ್ಬನಾಗಿದ್ದೆನೆಂಬುದನ್ನು ಯಾವ ನಾಚಿಕೆಯಿಲ್ಲದೇ ಒಪ್ಪಿಕೊಳ್ಳುತ್ತೇನೆ. ಇದನ್ನು ಏಕೆ ಇಲ್ಲಿ ಪ್ರಸ್ತಾಪಿಸಿದೆಯೆಂದರೆ, ನನಗೆ ಆ ದಿನದಲ್ಲಿ ಈ ಮಟ್ಟಕ್ಕೆ ಭೌದ್ಧಿಕವಾಗಿ ಬೆಳೆಯುತ್ತೇನೆಂಬ ಕನಸು ಕೂಡ ಇರಲಿಲ್ಲ. ನಮ್ಮಲ್ಲಿ ಬಹಳಷ್ಟು ಜನರಿಗೆ ಇದು ಸರ್ವೇ ಸಾಮಾನ್ಯ. ಅದನ್ನು ನಾವು ಹಂಗಿಸಬಾರದು. ಮೊನ್ನೆ ಮೊನ್ನೆ ತನಕ ಹಾಗಿದ್ದವನು ಈಗ ಬಹಳ ಸಾಚಾ ತರಹ ಆಗಿದ್ದಾನೆ? ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಮಹಾತ್ಮ ಗಾಂಧಿಯವರನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ ಅವರು ಜಗತ್ಪ್ರಸಿದ್ದಿಯಾಗುತ್ತಾರೆಂದು ಅವರಿಗೂ ನಂಬಿಕೆಯಿರಲಿಲ್ಲ. ಆದರೆ ಅದು ಜೀವನದಲ್ಲಿ ಶಿಸ್ತು ಸಂಯಮದಿಂದ ಮುನ್ನುಗಿದಂತೆ ದಾರಿ ಮತ್ತು ಗುರಿ ದೊಡ್ಡದಾಗುತ್ತಾ ಹೋಗಿತು.

ಅದರಂತೆಯೇ, ನನ್ನ ಕಾಲೇಜು ದಿನಗಳು. ಅದು ಆ ದಿನದ ಆ ವಯಸ್ಸಿನ ಆ ಸಂಘದ ಅನುಭವವೆಂದರು ತಪ್ಪಿಲ್ಲ. ಕಾಲ ಬದಲಾದಂತೆ ನಾನು ಬೇರೆ ಬೇರೆ ಪುಸ್ತಕಗಳನ್ನು ಓದುವುದಕ್ಕೆ ಆರಂಭಿಸಿದೆ. ಕೆಲವರು ಯಾವುದನ್ನೂ ಓದದೇ ಅಲ್ಲಿಯೇ ನಿಂತರು. ಅವರು ನನಗಿಂತ ನಾಲ್ಕಾರು ಪಟ್ಟು ಹೆಚ್ಚು ಹಣ ಸಂಪಾದಿಸಿರಬಹುದು, ಹೆಸರು ಕೀರ್ತಿಯೂ ಇರಬಹುದು. ಆದರೇ ನಾನು ಓದಿರುವ ಪುಸ್ತಕಗಳು ಮತ್ತು ಪುಸ್ತಕಗಳನ್ನು ಓದುವಾಗ ನಾನು ಅನುಭವಿಸಿರುವ ಆನಂದವನ್ನು ಆನಂದಿಸಲಾರರು. ಒಂದೊಂದು ವಯಸ್ಸಿಗೆ ಒಂದೊಂದು ರೀತಿಯ ಪುಸ್ತಕಗಳು ಆನಂದಗೊಳಿಸುತ್ತವೆ. ಅದನ್ನು ಅನುಭವಿಸುತ್ತಾ ಮುನ್ನುಗ್ಗಬೇಕು. ನನ್ನ ಪದವಿ ಮತ್ತು ಸ್ನಾತಕ್ಕೊತ್ತರದ ದಿನಗಳಲ್ಲಿ ಭೈರಪ್ಪರವರು ಮತ್ತು ರವಿ ಬೆಳಗೆರೆ ಅಚ್ಚುಮೆಚ್ಚು ಅನಿಸುತ್ತಿತ್ತು. ಅದರ ನಡುವೆ, ಸತ್ಯಕಾಮರವರ ಪುಸ್ತಕಗಳು, ನಾಗತೀಹಳ್ಳಿ ಚಂದ್ರಶೇಖರವರ ಪುಸ್ತಕಗಳು ಹೆಚ್ಚು ಹಿಡಿಸಿದ್ದವು. ಈಗ ಅವರನ್ನು ಓದುವುದಕ್ಕೆ ಮನಸ್ಸು ಬರುವುದಿಲ್ಲ. ಆದರೆ ಅವರ ಕೃತಿಗಳಿಂದ ನನಗೆ ಬಹಳ ಅನುಕೂಲವಾಗಿದೆ, ಅದನ್ನೇ ಮೆಲುಕು ಹಾಕುತ್ತ ಜೀವನ ಸವೆಸಲು ಅಥವಾ ಆ ನೆನಪುಗಳಲ್ಲಿಯೇ ಸಾಯಲು ನಾನು ಸಿದ್ದನಿರಲಿಲ್ಲವೆನ್ನುವುದು ಹೆಮ್ಮೆಯನ್ನು ತಂದಿದೆ.

ನನ್ನ ನೆಚ್ಚಿನ ಲೇಖಕರಲ್ಲಿ ತೇಜಸ್ವಿ, ಕಾರಂತರು ಅಗ್ರಗಣ್ಯರು ನಂತರದ ಸ್ಥಾನ ಕುವೆಂಪುರವರಿಗೆ. ಭಾಷೆಯ ವಿಷಯ ಬಂದರೆ ಮೊದಲ ಸ್ಥಾನ ಕುವೆಂಪುರವರಿಗೆ. ಅನುಭವದ ವಿಷಯಕ್ಕೆ ಬಂದರೆ ತೇಜಸ್ವಿ ಮತ್ತು ಕಾರಂತರಿಗೆ. ತೇಜಸ್ವಿ ಮತ್ತು ಕಾರಂತರು, ಏಕೆ ಅಷ್ಟೊಂದು ಇಷ್ಟವಾಗುತ್ತಾರೆಂದರೇ ಇಬ್ಬರೂ ಸಾಕಷ್ಟು ಓದಿಕೊಂಡವರು. ತೇಜಸ್ವಿಯವರು ಸುಮಾರು 1965 ರಿಂದಲೇ ಜಿಯೋಗ್ರಾಫಿಕ್ ಮಾಗ್‍ಜಿನ್ ಓದುತ್ತಾ ಬಂದವರು. ಕಾರಂತರಂತೂ ಕಾಲಿಡದ ಜಾಗವಿಲ್ಲ, ಕೈ ಹಾಕದ ಕ್ಷೇತ್ರವಿಲ್ಲ. ಅವರು ಜೀವನವನ್ನು ಆನಂದಿಸಿದವರು, ಅನುಭವಿಸಿದವರು, ಅವರ ಜೀವನವೇ ಅವರ ಬರವಣಿಗೆಯೊಳಗಿದೆ. ಆಡುವ ಮಾತು, ನಡೆಯುವ ರೀತಿ, ಜೀವಿಸುವ ವಿಧಾನ ಎಲ್ಲವೂ ಒಂದೇ ಆದರೆ ಮಾತ್ರ ಜೀವನಕ್ಕೆ ಮೌಲ್ಯ ಸೇರಿಕೊಳ್ಳುವುದು. ಹೇಳುವುದೊಂದು ಮಾಡುವುದೊಂದು ಆದರೆ? ಅದೇನೇ ಇರಲಿ, ಓದುವಾಗಲೂ ಅಷ್ಟೆ, ಎಷ್ಟು ವೈವಿಧ್ಯತೆಯ ಲೇಖಕರನ್ನು ಓದುತ್ತೀವೋ ಅಷ್ಟೂ ವೈವಿದ್ಯಮಯವಾಗುತ್ತದೆ ನಮ್ಮ ಬದುಕು. ಉದಾಹರಣೆಗೆ, ನೀವು ತರಾಸರು, ಮಾಸ್ತಿಯವರನ್ನು ಓದುವಾಗ ಸಿಗುವ ಜಗತ್ತೇ ಬೇರೆ, ಯಂಡಮೂರಿ ವೀರೇಂದ್ರರ ಜಗತ್ತೇ ಬೇರೆ, ಹಾಗೇಯೇ ದೇವನೂರರ ಮತ್ತು ಅನಂತಮೂರ್ತಿರವರ ಬರವಣಿಗೆಯ ಸಮಾಜವೇ ಬೇರೆ. ಇರಲಿ ವಿಷಯಕ್ಕೆ ಬರೋಣ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಸಂಘ ಕಟ್ಟಿ ಹೋರಾಡುವುದು ಸಾಮಾನ್ಯವಾಗಿದೆ. ಎಲ್ಲಾ ಕಾರ್ಮಿಕರು, ನೌಕರರು, ರೈತರು, ವಿದ್ಯಾರ್ಥಿಗಳು, ಆದರೆ ಯಾವುದೇ ಸರ್ಕಾರ ಇವರ್ಯಾರ ಮನವಿಯನ್ನು ಕೇಳುವಷ್ಟು ಸಂಯಮ ತೋರುತ್ತಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್ ಅಂತೂ ಚಳುವಳಿಗಾಗಿಯೇ ನಿರ್ಮಿಸಿರುವ ವೇದಿಕಯಾಗಿದೆ. ನೀವು ಆ ಹಾದಿಯಲ್ಲಿ ಹೋದರೇ ಯಾವುದಾದರೂ ಒಂದು ಜಾಥಾ ಇದ್ದೇ ಇರುತ್ತದೆ. ಇದೆಲ್ಲವನ್ನೂ ಸಮಗ್ರವಾಗಿ ನೋಡಬೇಕಾದ ಅನಿವಾರ್ಯತೆಯಿದೆ. ಆದರೇ, ನಮ್ಮಲ್ಲಿ ಎಲ್ಲವನ್ನೂ ಸಮಗ್ರವಾಗಿ ನೋಡುವ ಮನೋಭಾವ ಬಾರದಿರುವುದು ದುರಂತ. ಸರ್ಕಾರಿ ನೌಕರರು ಎಂದಾಕ್ಷಣ ಎಲ್ಲಾ ನೌಕರರು ಒಂದಾಗುವುದಿಲ್ಲ. ವಿವಿಧ ಇಲಾಖೆಯವರು, ಅದರಲ್ಲೂ ವಿವಿಧ ದರ್ಜೆ, ಮಹಿಳಾ ಮತ್ತು ಪುರುಷ ಹೀಗೆ ಒಂದು ಒಗ್ಗಟ್ಟಿರುವುದಿಲ್ಲ. ಬಿಸಿಯೂಟದವರು ಪ್ರತಿಭಟನೆ ಮಾಡಿದರೆ ಅವರ ಶಾಲೆಯಲ್ಲಿರುವ ಶಿಕ್ಷಕರು ಸೇರುವುದಿಲ್ಲ, ಅಂಗನವಾಡಿಯವರು ಪ್ರತಿಭಟನೆಗೆ ಅಡುಗೆಯವರು ದನಿಗೂಡಿಸುವುದಿಲ್ಲ. ಅಷ್ಟೆಲ್ಲಾ ಏಕೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಬೇರೆ, ಪ್ರೌಢಶಾಲೆಯ ಶಿಕ್ಷಕರ ಸಂಘ ಬೇರೆ, ಅಷ್ಟಕ್ಕೇ ನಿಲ್ಲುವುದಿಲ್ಲ, ಪ್ರತಿಯೊಂದು ಜಾತಿಯ, ಪ್ರತಿಯೊಂದು ವಿಷಯದ ಆಧಾರದಲ್ಲಿ ಸಂಘ ಸಂಸ್ಥೆಗಳು, ಸಾರಿಗೆಯಲ್ಲಿ ವಿವಿಧ ವಿಭಾಗಗಳು. ಹಾಗಾಗಿ ಸರ್ಕಾರವೂ ಎಲ್ಲಿ ಹೆಚ್ಚಿನ ಸಂಖ್ಯೆಯ ನೌಕರರಿದ್ದಾರೆ ಅವರಿಗೆ ಬೇಗ ಮಣಿಯುತ್ತದೆ, ಎನ್ನುವ ನಂಬಿಕೆಯಿದೆ. ಅದಕ್ಕಿಂತಲೂ ಶಿಕ್ಷಕರ ಕ್ಷೇತ್ರ, ಪದವೀಧರರ ಕ್ಷೇತ್ರದಿಂದ ಚುನಾವಣೆ ನಡೆಯುವುದು ಒಂದು ಕಾರಣವೂ ಇದೆ. ಇಡೀ ಸಮಾಜವೇ ಒಂದು ಕುಟುಂಬ, ಎಲ್ಲಾ ನೌಕರರು ಒಂದೂ ಎನ್ನುವ ಭಾವ ನಮ್ಮಲ್ಲಿ ಬಂದಿಲ್ಲ. ನಮ್ಮಲ್ಲಿ ಹೋಲಿಕೆಯ ಜೀವನ ಮುಗಿಲು ಮುಟ್ಟಿದೆ. ಎಲ್ಲರೂ ಬೇರೆ ಇಲಾಖೆಯವರನ್ನೋ ಅಥವಾ ಬೇರೆ ದರ್ಜೆಯವರನ್ನೋ ನೋಡಿ ಹೋಲಿಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಖಾಸಗಿ ಕ್ಷೇತ್ರದಲ್ಲಿ ಹೆಚ್ಚು ದುಡಿಯುತ್ತಿರುವವರನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ನೀವು ಯಾವುದರ ಹಿಂದೆ ಹೋದರೂ ಅಷ್ಟೆ, ಅದು ನಿಮಗೆ ತೃಪ್ತಿ ಕೊಡುವುದಿಲ್ಲ. ಮನುಷ್ಯನ ಬೇಕುಗಳಿಗೆ ಕೊನೆಯಿಲ್ಲ. 

ಇದನ್ನು ಇನ್ನಷ್ಟು ಆಳಕ್ಕೆ ಚರ್ಚಿಸೋಣ. ನಾನು ಅನೇಕರನ್ನು ಈ ಪ್ರಶ್ನೆ ಕೇಳಿದ್ದೇನೆ. ನಿಮಗೆ ತಿಂಗಳಿಗೆ ನೆಮ್ಮದಿಯ ಬದುಕನ್ನು ನಡೆಸಲು ಎಷ್ಟು ಸಂಬಳ ಬೇಕು ಮತ್ತು ಯಾವ್ಯಾವುದಕ್ಕೆ ಎಷ್ಟು ಬೇಕೆಂದು. ಅವರುಗಳಿಂದ ನನಗೆ ಶೇ. ಒಂದರಷ್ಟು ನಿರ್ದಿಷ್ಟ ಉತ್ತರ ಬಂದಿಲ್ಲ. ತಿಂಗಳಿಗೆ ಸುಮಾರು 30-40 ಸಾವಿರ ಎನ್ನುತ್ತಾರೆ, ದಿಡೀರನೇ ಏರಿಸುತ್ತಾರೆ. ಅವರ ಬೇಕುಗಳು ಹೆಚ್ಚಾಗುತ್ತಾ ಹೋಗುತ್ತವೆ. ದಿನ ನಿತ್ಯದ ಖರ್ಚು ಹೆಚ್ಚಾಗುತ್ತಿದೆ ಅದರಲ್ಲಿ ಸಂಶಯವಿಲ್ಲ. ಆದರೇ ಅದಕ್ಕೊಂದು ಲೆಕ್ಕ ಅಂತಾ ಬೇಕಲ್ಲವೇ? ಉದಾಹರಣೆಗೆ. ನಾನು ಇಲ್ಲಿಂದ ಶಬರಿಮಲೈಗೆ ಹೋಗಿ ಬರುವುದಕ್ಕೆ ನನಗೆ ರೈಲಿನ ಖರ್ಚನ್ನು ಕಳೆದು 2 ಸಾವಿರ ರೂಪಾಯಿಗಳು ಬೇಕು. ಯಾವುದಕ್ಕೆ ಬೇಕು? ದೇವಸ್ಥಾನದಿಂದ ರೈಲ್ವೇ ನಿಲ್ದಾಣ ತಲುಪಲು ನಂತರ ಅಲ್ಲಿನ ಬಸ್ಸಿನ ಖರ್ಚು, ಊಟ, ವಸತಿ ಮತ್ತು ಪ್ರಸಾದ. ಪ್ರತಿಯೊಂದಕ್ಕೂ ಲೆಕ್ಕ ಹಾಕಿಯೇ ಹೋಗುತ್ತೇನೆ. ಅದರಂತೆಯೇ, ದುಡಿಯುವ ವರ್ಗವು ಏಕೆ ನಮಗೆ ಇಷ್ಟು ಬೇಕೆನ್ನುವುದನ್ನು ನಿಗದಿ ಮಾಡಿಕೊಳ್ಳುವುದಿಲ್ಲ. ಯಾರೋ ಸೈಟ್ ತೆಗೆದು ಮನೆ ಕಟ್ಟಿದರೆ ನಾನು ಕಟ್ಟಬೇಕೆಂಬ ಹಟ ಏಕೆ? ಯಾರೋ ಒಬ್ಬ ಮಕ್ಕಳನ್ನು ಇಂಟರ್‍ನ್ಯಾಷನಲ್ ಸ್ಕೂಲಿನಲ್ಲಿ ಓದಿಸುತ್ತಾರೆಂದರೆ ನಾನು ಏಕೆ ಓದಿಸಬೇಕು? ರಜಾ ದಿನ ಕಳೆಯಲು ಯಾರೋ ಗೋವಾಗೆ ಹೋದರೆ ನಾನೂ ಯಾಕೆ ಅಲ್ಲಿಗೆ ಹೋಗಬೇಕು? ಹೆಚ್ಚು ಹಣ ಸಂಪಾದನೆ, ಹೆಚ್ಚು ಸಂಬಳದ ಬೇಡಿಕೆ ಇವೆಲ್ಲವೂ ಬೇರೊಬ್ಬರ ಜೊತೆಗೆ ಹೋಲಿಕೆ ಮಾಡಿಕೊಳ್ಳುತ್ತಿರುವುದರ ಪರಿಣಾಮವೆಂಬುದು ನನ್ನ ಅನಿಸಿಕೆ. ವಸ್ತು ಪ್ರಾಧಾನ್ಯತೆಯ ಬದುಕು ದಿನ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆಯೆನ್ನುವುದು ನನ್ನ ವಾದ. ಅದರಲ್ಲಿ ತಪ್ಪೇನು ಎನ್ನಲೂಬಹುದು, ತಪ್ಪಿಲ್ಲ ಆದರೆ ನೆಮ್ಮದಿಯ ಅರ್ಥ ಬದಲಾಗಿಸುತ್ತದೆ. 

ಕೋಟ್ಯಾಂತರ ಜನರು ಸೇರಿ ಹೆಚ್ಚು ಹೆಚ್ಚು ಸಂಬಳಕ್ಕೆ ಬೇಡಿಕೆಯಿಡುವುದಕ್ಕಿಂತ ನಮಗೆ ಬೇಕಿರುವ ಅವಶ್ಯತೆಗಳನ್ನು ಸರ್ಕಾರವೇ ಭರಿಸುವಂತಾಗಲಿ ಎಂದು ಏಕೆ ಕೇಳುವುದಿಲ್ಲ. ಉದಾಹರಣೆಗೆ. ನಮ್ಮ ಸಂಬಳದ ಬೇಡಿಕೆ ಯಾವುದಕ್ಕೆ? ಮೊದಲನೆಯದಾಗಿ ಮಕ್ಕಳ ವಿದ್ಯಾಬ್ಯಾಸ - ಸರ್ಕಾರವೇ ಗುಣಮಟ್ಟದ ಉಚಿತ ಶಿಕ್ಷಣವನ್ನು ನೀಡಲಿ, ಎಲ್ಲಾ ಸರ್ಕಾರಿ ಶಾಲೆಗಳು ಅಬಿವೃದ್ದಿಯಾಗಲಿ ಎಂದು ಬೇಡಿಕೆ ಏಕೆ ಇಡಬಾರದು? ಎರಡನೆಯದಾಗಿ – ಆರೋಗ್ಯ ಸರ್ಕಾರವೇ ಗುಣಮಟ್ಟದ ಉಚಿತ ಆರೋಗ್ಯ ಸೌಕರ್ಯವನ್ನು ನೀಡಲಿ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಬಿವೃದ್ದಿಯಾಗಲಿ ಎಂದು ಬೇಡಿಕೆ ಏಕೆ ಇಡಬಾರದು? ಮೂರನೆಯದಾಗಿ - ದಿನ ನಿತ್ಯ ಬಳಕೆಯ ವಸ್ತುಗಳು - ಬೆಲೆಯನ್ನು ಇಳಿಕೆ ಮಾಡಲಿ. ನಾವು ಹೆಚ್ಚು ಸಂಬಳ ಪಡೆದರೂ ಮತ್ತೆ ಅದನ್ನು ಖರ್ಚು ಮಾಡುತ್ತೇವೆ. ಅದಕ್ಕಿಂದ ಬೆಲೆಯನ್ನೇ ಇಳಿಸಿದರೆ? ಅದೇ ರೀತಿ ಕೆಲವು ಕಚೇರಿಗೆ ಕೆಲಸಕ್ಕೆ ಹೋಗುವವರು, ಬೆಳ್ಳಿಗ್ಗೆಯಿಂದ ಸಂಜೆಯ ತನಕ ಕಚೇರಿಯಲ್ಲಿಯೇ ಇರುತ್ತಾರೆ, ಸಾರ್ವಜನಿಕ ಸಾರಿಗೆಯನ್ನು ಉತ್ತಮಗೊಳಿಸಿದರೆ ಕಚೇರಿಗೆ ಬರುವ ಎಲ್ಲರೂ ವಾಹನ ತರುವುದು, ಅದಕ್ಕೆ ಇಂಧನವೆಚ್ಚ ಭರಿಸುವುದು ತಪ್ಪುವುದಿಲ್ಲವೇ? ನಾವು ಲಕ್ಷ ಸಂಬಳ ಪಡೆದು 95 ಸಾವಿರ ಖರ್ಚು ಮಾಡುವುದಕ್ಕಿಂತ 20 ಸಾವಿರ ಪಡೆದು 15 ಸಾವಿರಕ್ಕೆ ಜೀವನ ನಡೆಸುವುದು ಬುದ್ದಿವಂತಿಕೆ ಎನಿಸುವುದಿಲ್ಲವೇ? ಆಲೋಚಿಸಿ. 

ಸಂಬಳ ಹೆಚ್ಚಾಗಬೇಕೆಂಬುದು ಪ್ರತಿಯೊಬ್ಬರ ದನಿಯಾಗಿದೆ. ಅದರಲ್ಲಿ ತಪ್ಪಿಲ್ಲ. ಆದರೆ ಯಾವ ಮಾನದಂಡದಿಂದ ಸಂಬಳ ಹೆಚ್ಚಾಗಬೇಕೆಂಬುದು ನನ್ನ ಪ್ರಶ್ನೆ. ನಾನು ಕಳೆದ ಹತ್ತು ವರ್ಷದಿಂದ ಖಾಸಗಿ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಐಸೆಕ್ ಎಂಬ ಸಂಸ್ಥೆಯಲ್ಲಿ ಸತತ ಎರಡು ವರ್ಷ ಕೇವಲ ಆರು ಸಾವಿರ ರೂಪಾಯಿಗಳಿಗೆ ಕೆಲಸ ಮಾಡಿದ್ದೇನೆ. ಮೊನ್ನೆ ಅಂದರೆ ಮೂರು ತಿಂಗಳ ಹಿಂದೆ ನವದೆಹಲಿಯ ಒಂದು ಸಂಸ್ಥೆಯ ಕೆಲಸಕ್ಕಾಗಿ ಒಂದು ದಿನಕ್ಕೆ ಐದು ಸಾವಿರ ರೂಗಳನ್ನು ಪಡೆದಿದ್ದೇನೆ. ಪಡೆದಿದ್ದೇನೆ ಎನ್ನುವುದಕ್ಕಿಂತ ಚಾರ್ಜ್ ಮಾಡಿದ್ದೇನೆ. ಇದು ನಾನು ಬೆಳೆದು ಬಂದ ಹಾದಿ ಮತ್ತು ನಾನು ನನ್ನನ್ನು ಮಾರುಕಟ್ಟೆಯಲ್ಲಿ ತೋರಿಸಿಕೊಂಡಿರುವ ರೀತಿ. ಇದನ್ನು ಏಕೇ ಉಲ್ಲೇಖಿಸುತ್ತಿದ್ದೇನೆ ಎನ್ನುವುದನ್ನು ವಿವರಿಸುತ್ತೇನೆ. ನನಗೆ ಆ ಸಂಸ್ಥೆ ದಿನಕ್ಕೆ 5 ಸಾವಿರ ರೂಪಾಯಿಗಳನ್ನು ನೀಡುತ್ತದೆಯೆಂದರೆ ನನ್ನಿಂದ ಎಷ್ಟು ಸಾವಿರ ರೂಪಾಯಿಗಳ ಕೆಲಸವನ್ನು ಮಾಡಿಸಿರಬಹುದು? ಇದನ್ನು ಇನ್ನೊಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ನಮ್ಮದು ಸ್ವಲ್ಪ ಅಡಿಕೆ ತೋಟವಿದೆ, ಅದರಲ್ಲಿ ಕೆಲವೊಂದು ಕೆಲಸಗಳು ನಿರಂತರವಾಗಿರುತ್ತವೆ. ಕಳೆ ತೆಗೆಯುವುದು, ಪಾತಿ ಮಾಡುವುದು, ಗೊಬ್ಬರ ಹಾಕುವುದು, ನೀರು ಹಾಯಿಸುವುದು ಹೀಗೆ. ಇದೆಲ್ಲವನ್ನೂ ಕೆಲಸದವರನ್ನು ಕರೆದು ಮಾಡಿಸುತ್ತೇವೆ. ಅವರಿಗೆ ಯಾವ ಮಾನದಂಡದಲ್ಲಿ ದುಡ್ಡು ಕೊಡುತ್ತೇವೆ? ಮಾಡಿದ ಕೆಲಸದ ಮೇಲೆ. ಇದು ವರ್ಷ ವರ್ಷಕ್ಕೆ ಏರುತ್ತಿದೆ. ಕೆಲಸಕ್ಕೆ ಜನರು ಬಂದರೇ ಸಾಕು ಕೂಲಿ ಎಷ್ಟಾದರೂ ಆಗಲಿ ಎನ್ನುವ ಹಂತಕ್ಕೆ ಕೆಲವು ಜಿಲ್ಲೆಯ ಕೃಷಿಕರು ತಲುಪಿದ್ದಾರೆ. ನಾನು ಇಲ್ಲಿಯವರೆಗೂ ವೇತನ ಪಡೆದ ಎಲ್ಲಾ ಸಂಸ್ಥೆಗಳಲ್ಲಿಯೂ ಅಥವಾ ಗುತ್ತಿಗೆ ಕೆಲಸದಲ್ಲಿಯೂ ಅವರು ನೀಡಿದ ಟಾರ್ಗೆಟ್/ಗುರಿಗಿಂತ ಹೆಚ್ಚನ್ನೂ ಮಾಡಿದ್ದೇನೆ ಹೊರತು ಅದಕ್ಕಿಂತ ಕಡಿಮೆ ಮಾಡಿಲ್ಲ. ನನಗೆ ಲಾಭ ನಷ್ಠ ಎನ್ನುವ ಮಾತೇ ಉದ್ಬವವಾಗಿಲ್ಲ. ನನ್ನ ಹಳೆಯ ಬರವಣಿಗೆಯನ್ನು ನೋಡಿದರೆ ನನ್ನ ಕಾರ್ಯವೈಖರಿ ನಿಮಗೆ ತಿಳಿಯುತ್ತದೆ. ಐಸೆಕ್ ದಿನಗಳಲ್ಲಿ ಮುಂಜಾನೆ 8ರಿಂದ ರಾತ್ರಿ ಹತ್ತರವರೆಗೆ ಕೆಲಸ ಮಾಡಿದ್ದೇನೆ. ನನ್ನನ್ನು ಯಾರೂ ಮಾಡೆಂದು ಹೇಳಲಿಲ್ಲ. ನಾನು ಮಾಡಿದೆ, ನಾನು ಕಲಿತೆ, ನಾನು ಬೆಳೆದೆ. 

ನಮ್ಮ ಸರ್ಕಾರಿ ನೌಕರರು ಸಂಬಳ ಹೆಚ್ಚಳದ ಮನವಿಯನ್ನು ಇಟ್ಟಿದ್ದಾರೆ. ಆದರೇ, ನನ್ನ ಪ್ರಶ್ನೆ, ಎಲ್ಲರಿಗೂ ಸಮಾನ ವೇತನ ಹೆಚ್ಚಳ ಏಕೆ ಆಗಬೇಕು? ಕೆಲವರು ಶ್ರಮಿಕರಿದ್ದಾರೆ ಕೆಲವು ಮೈಗಳ್ಳರಿದ್ದಾರೆ ಎಲ್ಲರಿಗೂ ಒಂದೇ ರೀತಿಯ ಸಂಬಳ ಏರಿಕೆ ಏಕಾಗಬೇಕು? ನಾನು ಗಮನಿಸಿರುವಂತೆ ಕೆಲವು ಅಧಿಕಾರಿಗಳು ಸಮಯಕ್ಕೆ ಮುಂಚೆ ಕಛೇರಿಗೆ ಬರುತ್ತಾರೆ, ಅವರು ಯಾವೊಂದೂ ಕಡತಗಳನ್ನು ವಿಳಂಬ ಮಾಡುವುದಿಲ್ಲ. ಆದರೇ, ಅದೇ ಇಲಾಖೆಯಲ್ಲಿರುವ ಕೆಲವರು ತಿಂಗಳುಗಟ್ಟಲೆ ಅಲೆಸುತ್ತಾರೆ. ಲಂಚ ಕೊಟ್ಟರೂ ಮಾಡುವುದಿಲ್ಲ, ಅವರ ಕಾರ್ಯ ವೈಖರಿಯನ್ನು ಅವಲೋಕಿಸಬಾರದೇಕೆ? ಉತ್ತಮ ಕೆಲಸ ಮಾಡುವವರಿಗೆ ಒಂದಲ್ಲ ಎರಡು ಬಡ್ತಿ ಕೊಡಲಿ ಬೇಡ ಎನ್ನುವವರಾರ್ಯಾರು? ಕೆಲವು ಸರ್ಕಾರಿ ಶಾಲೆಗಳಲ್ಲಿಯೇ ನೋಡಿ, ನಿಷ್ಠಾವಂತ ಶಿಕ್ಷಕರಿದ್ದಾರೆ ಅದೇ ರೀತಿ ಸೋಮಾರಿಗಳೂ ಇದ್ದಾರೆ. ಇಬ್ಬರಿಗೂ ಏಕೆ ಸಮಾನ ವೇತನ ಹೆಚ್ಚಳವಾಗಬೇಕು? ಇದನ್ನು ಇನ್ನೊಂದು ಉದಾಹರಣೆಯೊಂದಿಗೆ ನೋಡಿ, ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಜನ ಸಂದಣಿಯಿರುತ್ತದೆ, ಅದೇ ರೀತಿ ಅಂಚೆ ಕಛೇರಿಯಲ್ಲಿಯೂ ಕೂಡ. ಅವರ್ಯಾಕೆ ಕೆಲಸದ ಒತ್ತಡ ನಾಳೆ ಮಾಡುತ್ತೇನೆಂದು ಹೇಳುವುದಿಲ್ಲ? ಕೇಂದ್ರ ಸರ್ಕಾರದ ಹಲವಾರು ಇಲಾಖೆಗಳು ಬಹಳ ಚೆನ್ನಾಗಿ ಕೆಲಸ ಮಾಡುತ್ತವೆ. ನೀವು ಹೇಳಬಹುದು, ಅವರಿಗೆ ಹೆಚ್ಚಿನ ಸಂಭಳವೆಂದು. ಆದರೆ ಈಗಿರುವ ಸೋಮಾರಿಗಳಿಗೆ ಮತ್ತೂ ಸಂಬಳ ಹೆಚ್ಚಿಸಿ ಏನು ಮಾಡುವುದು? ಅಷ್ಟಕ್ಕೂ ಸರ್ಕಾರಕ್ಕೆ ಹಣವೆಲ್ಲಿಂದ ಬರಬೇಕು?

ಖಾಸಗಿ ಸಂಸ್ಥೆಗಳಲ್ಲಿ ಎಲ್ಲರೂ ನಿಷ್ಠಾವಂತರೂ ಎನ್ನುವುದಿಲ್ಲ. ಆದರೆ ಅಲ್ಲಿನ ವ್ಯವಸ್ಥೆ ಸೋಮಾರಿತನವನ್ನು ದೂರವಿಡಿಸುತ್ತದೆ. ಭದ್ರತೆಯಿಲ್ಲದ ಕೆಲಸವೆಂದು ಹೆಚ್ಚೆಚ್ಚು ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಪ್ರತಿ ಮೂರು ತಿಂಗಳಿಗೆ, ಆರು ತಿಂಗಳಿಗೆ, ಮತ್ತು ವರ್ಷಕ್ಕೆ ನಮ್ಮ ಮೇಲಧಿಕಾರಿಗಳು ನಮ್ಮ ಕಾರ್ಯ ವೈಖರಿಗೆ ಅಂಕಗಳನ್ನು ನೀಡಿ ಮೌಲ್ಯಮಾಪನ ಮಾಡುತ್ತಾರೆ. ಆ ಭಯದಿಂದಲೇ ಕೆಲಸ ಮಾಡಿದರೂ ಅಡ್ಡಿಯಿಲ್ಲ ಕನಿಷ್ಠ ಪಕ್ಷ ಕೆಲಸ ಮಾಡುತ್ತಾರೆ. ನಾನು ಭೇಟಿ ನೀಡಿದ ಅದೆಷ್ಟೋ ಶಾಲೆಗಳಿಗೆ ಮಾಸ್ಟರುಗಳು ಸರಿಯಾದ ಸಮಯಕ್ಕೇ ಬರುವುದಿಲ್ಲ, ಬಂದರೂ ಸಂಜೆಯವರೆಗೂ ಇರುವುದಿಲ್ಲ. ಅದನ್ನು ಖಾಸಗಿ ಶಾಲೆಯಲ್ಲಿ ಮಾಡಲಾಗುತ್ತದೆಯೇ? ಸರ್ಕಾರಿ ಶಾಲೆಯ ಶಿಕ್ಷಕರುಗಳು ಒಮ್ಮೆ ಕೇವಲ ಒಂದು ಬಾರಿ ಖಾಸಗಿ ಶಾಲೆಯ ಶಿಕ್ಷಕರೊಂದಿಗೆ ಹೋಲಿಕೆ ಮಾಡಿ ನೋಡಿ. ಸ್ವಇಚ್ಛೆಯಿಂದ ಹೋಲಿಕೆ ಮಾಡಿ, ಆತ್ಮ ಸಾಕ್ಷಿಗೆ ವಂಚಿಸಬೇಡಿ. ನಿಮ್ಮಲ್ಲಿ ಅದೆಷ್ಟು ಜನರು ಸಂಬಳಕ್ಕೆ ನ್ಯಾಯ ಒದಗಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ. ನಾನು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ಆಫೀಸಿಗೆ ಹೋದರೆ ಮುಗಿಯಿತು ಸಂಜೆಯ ತನಕ ನನ್ನ ವೈಯಕ್ತಿಕ ಕೆಲಸವನ್ನು ಮಾಡಲು ಸಾಧ್ಯವೇ ಇರಲಿಲ್ಲ. ಆದರೇ, ಬನ್ನಿ ನನ್ನೊಂದಿಗೆ ಅದೆಷ್ಟು ಅಧಿಕಾರಿಗಳು ಕೆಲಸದ ಸಮಯದಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆಂಬುದನ್ನು ತೋರಿಸುತ್ತೇನೆ. ಕಚೇರಿಗೆ ಸಹಿ ಹಾಕಿ, ನಾಮಕರಣದಿಂದ, ಮದುವೆ, ಬೀಗರ ಊಟಕ್ಕೆ ಹೋಗಿಬರುವವರನ್ನು ತೋರಿಸುತ್ತೇನೆ. ಕೆಲಸದ ಸಮಯ ಬೆಳ್ಳಿಗ್ಗೆ 10.30 ರಿಂದ ಸಂಜೆ 5.30ರವರಗೆ ಎಂದರೆ, ಆ ನೌಕರ ಅಲ್ಲಿರಬೇಕು, ಅಷ್ಟೆ. ಆದರೇ ಶೇಕಡ 20-30ರಷ್ಟು ನೌಕರರು ಇರುವುದೇ ಇಲ್ಲ. 

ಸರ್ಕಾರವೆಂದರೇ ಕೇವಲ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಮಾತ್ರವಲ್ಲ. ಎಲ್ಲಾ ನೌಕರರು ಸೇರುತ್ತಾರೆ. ಒಂದು ಉತ್ತಮ ಸಮಾಜ ಸರ್ಕಾರಿ ನೌಕರರ ಮೇಲೆ ನೇರ ಅವಲಂಬಿತವಾಗಿರುತ್ತದೆ. ಒಂದು ಕೆಲಸಕ್ಕೆ ಐದು ಬಾರಿ ಒಬ್ಬ ಓಡಾಡಬೇಕೆಂದರೆ ಅವನಿಗೆ ತೆಗಳುವ ಖರ್ಚು ವೆಚ್ಚ ಸಮಾಜದ ಮೇಲೆಯೇ ಬೀಳುತ್ತದೆ. ಅವನು ತನ್ನ ಕೆಲಸವನ್ನೆಲ್ಲಾ ಬಿಟ್ಟು ಬಂದಿರುತ್ತಾನೆ. ಒಂದು ಸಮಾಜ ಯಾವತ್ತಿಗು ಒಂದಕ್ಕೊಂದು ಬೆಸೆಯುವ ಕೊಂಡಿಯಂತೆ. ಎಲ್ಲಾ ಕೊಂಡಿಗಳು ಕೂಡಿದ್ದರೆ ಸಮಾಜ. ಬೆಸೆಯುವ ಕೊಂಡಿಗಳು, ಸಮಾನ ಅವಕಾಶ, ಸಮಾನ ಬೆಳವಣಿಗೆಯೊಂದಿಗಿರಬೇಕು. ನಾನು ದಿನ ನಿತ್ಯ ನಮ್ಮ ಮನೆಯ ಮುಂದೆ ಸಾಲು ಸಾಲು ಹೆಣ್ಣು ಮಕ್ಕಳು ಗಾರ್ಮೆಂಟ್ಸ್‍ಗೆ ಓಡುವುದನ್ನು ನೋಡಿದ್ದೇನೆ. ಮರಿಯಪ್ಪನ ಪಾಳ್ಯ, ಕೆಂಚನಪುರ ಕ್ರಾಸ್ ಕಡೆಯಿಂದ ಜೈರಾಮ್ ದಾಸ್ ಕಡೆಗೆ ನಡೆದು ಪರದಾಡುತ್ತ ಕೆಲಸಕ್ಕೆ ಹೋಗುವುದನ್ನು ಮತ್ತು ಮುಸ್ಸಂಜೆ ಕತ್ತಲಲ್ಲಿ ನಡೆದು ಬರುವುದನ್ನು ನೋಡಿದ್ದೇನೆ. ಇವರೆಲ್ಲರು ಶ್ರಮ ಜೀವಿಗಳು, ತಿಂಗಳಿಗೆ 5 ಸಾವಿರ ಬಂದರೆ ಹೆಚ್ಚು. ಐದು ನಿಮಿಷ ತಡವಾಗಿ ಆಫೀಸಿಗೆ ಹೋಗುವಂತಿಲ್ಲ. ಬೇಗ ಬರುವಂತಿಲ್ಲ. ಆಟೋ, ಬಸ್ಸಿನಲ್ಲಿ ಹೋದರೆ ಖರ್ಚಾದೀತು ಎಂದು ನಡೆದು ಹೋಗುತ್ತಾರೆ. ಇವರುಗಳ ನೋವು ನಮಗೆ ತಟ್ಟುವುದೇ ಇಲ್ಲ. ಅದಕ್ಕೂ ಇದಕ್ಕೂ ಏನು ಸಂಬಂಧ ಎನ್ನಬಹುದು. ಸಂಬಂಧವಿದೆ. ಸರ್ಕಾರಿ ಕೆಲಸ ನಿಮಗೆ ಸಿಕ್ಕಿರುವುದು ಇಂತಹವರ ಕೆಲಸ ಮಾಡುವುದಕ್ಕೆ ಎನ್ನುವುದನ್ನು ನೀವು ಮರೆತಿದ್ದೀರಿ. 
ಸರ್ಕಾರಿ ಶಾಲೆಯ ಶಿಕ್ಷಕರಿಗೆ, ಶಿಕ್ಷಕರಿಗೆ ಮಾತ್ರವೇನು. ಇಡೀ ಇಲಾಖೆಯ ಸಂಬಳ ಅಂತಾ ಇರೋದು ಬಡವರ, ಕೂಲಿ ಕಾರ್ಮಿಕರ ಮಕ್ಕಳು ನಿಮ್ಮ ಶಾಲೆಗೆ ಬರುತ್ತಿರುವುದರಿಂದ. ನೀವು ಅವರ ಋಣದಲ್ಲಿದ್ದೀರಿ ಎನ್ನುವುದನ್ನು ಮರೆಯಬೇಡಿ. ಶಾಲೆಗಳಲ್ಲಿ ದಾಖಲಾತಿ ಕುಸಿದಿದೆ ಇದಕ್ಕೆ ಕಾರಣ ಯಾರು? ಇದೇ ರೀತಿ ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲರೂ ಸಾರ್ವಜನಿಕರ ಕೆಲಸಕ್ಕೆ ನೀವು ಸಂಬಳ ಪಡೆಯುತ್ತಿದ್ದೀರಿ ಎನ್ನುವುದನ್ನು ಮರೆತಿರುವುದು ಏಕೆ? 

ಇದು ಎಲ್ಲಿಂದ ಶುರುವಾಯಿತೆಂದು ಹೇಳುವುದು ಕಷ್ಟವಾಗುತ್ತದೆ. ಆದರೂ ಈ ಲೇಖನವನ್ನು ಮುಗಿಸುವುದಕ್ಕಾಗಿ ಕೆಲವೊಂದು ಅಂಶಗಳನ್ನು ಹೇಳಿಬಿಡುತ್ತೇನೆ. ಕೆಲವೊಂದು ನಿಯಮಗಳಿರುತ್ತವೆ, ಅವುಗಳನ್ನು ಒಪ್ಪಿದರೂ ಸರಿ, ಒಪ್ಪದೇಯಿದ್ದರೂ ನಾವು ಪಾಲಿಸಲೇಬೇಕಾಗುತ್ತದೆ. ಪ್ರತಿಯೊಂದು ಚಿಕ್ಕ ಚಿಕ್ಕ ನಡುವಳಿಕೆಗಳು ಮನುಷ್ಯನನ್ನು ಬದಲಾಯಿಸುತ್ತಾ ಹೋಗುತ್ತವೆ. ಕೆಲವು ಬೆಳೆಸುತ್ತಾ ಹೋಗುತ್ತವೆ, ಕೆಲವೊಂದು ಮುಳುಗಿಸುತ್ತಾ ಹೋಗುತ್ತವೆ. ಈ ಕೆಳಗಿನ ಮಾತುಗಳನ್ನು ತಾವುಗಳು ಸಂಪೂರ್ಣವಾಗಿ ನಂಬುವುದಿಲ್ಲ, ಆದರೂ ಓದಿನೋಡಿ. 

ಒಂದು ಅಂಗಡಿಗೆ ಹೋಗುತ್ತೇವೆ, 8 ರೂಪಾಯಿಗೆ ವಸ್ತುವನ್ನು ಕೊಳ್ಳುತ್ತೇವೆ, ಬಾಕಿ ಎರಡು ರೂಪಾಯಿಗೆ ಚಾಕೋಲೇಟ್ ಕೊಟ್ಟು ಕಳುಹಿಸುತ್ತಾನೆ, ಇದು ಮೋಸವಲ್ಲವೇ? ನಮಗೆ ಕೋಪ ಬರುತ್ತದೆ, ವಿಧಿಯಿಲ್ಲದೆ ತಡೆದುಕೊಂಡು ಬರುತ್ತೇವೆ. ಇದು ಕೆಲವು ಟೋಲ್‍ಗಳಲ್ಲಿಯೂ ಸಾಮಾನ್ಯ. ಕೆಲವು ಹೋಟೆಲ್‍ನಲ್ಲಿ ತಿಂಡಿ ತಿಂದ ಮೇಲೆ ಬಿಲ್ ಪಾವತಿ ಮಾಡಿದಾಗ, ತರಕಾರಿ ಕೊಂಡಾಗ ಎಲ್ಲಾ ಕಡೆಯಲ್ಲಿಯೂ ಇದು ಸಾಮಾನ್ಯವಾಗಿದೆ. ಇದೆಲ್ಲವೂ ಮೋಸವೆಂದು ಅವರ್ಯಾರೂ ಒಪ್ಪುವುದಿಲ್ಲ. ಚಿಲ್ಲರೆಯಿಲ್ಲವೆನ್ನುವುದೊಂದು ನೆಪವಾಗಿರಲೂಬಹುದು. ಆದರೇ, ಆ ವ್ಯಕ್ತಿ ನಿಷ್ಠತೆಯಿಂದು, ನಿಯತ್ತಿನಿಂದ ದೂರ ಹೋಗುತ್ತಿರುತ್ತಾನೆಂಬುದನ್ನು ಅವನು ಗಮನಿಸುವುದೇ ಇಲ್ಲ. ಚಿಲ್ಲರೆ ಕೊಡದೆ ಯಾವುದೋ ಒಂದು ವಸ್ತುವನ್ನು ಕೊಟ್ಟು ಕಳುಹಿಸುವುದೇ ಅವನ ವೃತ್ತಿಯಾಗತೊಡಗುತ್ತದೆ. ಜನರು ಗಮನಿಸಿ ಗಮನಿಸಿ ಮುಂದೊಂದು ದಿನ ಅವನ ಅಂಗಡಿಗೆ ಹೋಗುವುದಕ್ಕೆ ಹಿಂಜರಿಯಬಹುದು, ಅಥವಾ ದೊಡ್ಡ ಗಲಾಟೆ ಮಾಡಲೂಬಹುದು. ನಾನು ನನ್ನ ಕೆಲವು ಸಹದ್ಯೋಗಿಗಳನ್ನು ನೋಡಿದ್ದೇನೆ, ಅವರಿಗೆ ಸರಿಯಾದ ಸಮಯಕ್ಕೆ ಆಫೀಸಿಗೆ ಬರಲು ಇಷ್ಟವಿರಲಿಲ್ಲ, ಯಾವುದೋ ಒಂದು ಕಾರಣ ಸಿಗುತ್ತಿತ್ತು. ಆದರೇ, ನನ್ನ ಗೆಳೆಯ ಪವನ್ ಕುಮಾರ್ ನನ್ನೊಂದಿಗೆ ಹಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಅವನು ಅದೇನೇ ಆದರೂ ಆಫೀಸಿನ ವೇಳೆಯಲ್ಲಿ ವೈಯಕ್ತಿಕ ವಿಷಯವನ್ನು ಚರ್ಚಿಸುತ್ತಿರಲಿಲ್ಲ. ಆಫೀಸು ಮುಗಿದ ಮೇಲೆ ಗಂಟೆಗಟ್ಟಲೆ ಹೊರಗಡೆ ನಿಂತು ಹರಟಿ ಹೋಗುತ್ತಿದ್ದೆವು. ಅವನ ಆ ನಡುವಳಿಕೆ ಕೆಲವು ದಿನ ನನಗೂ ಅಂಟಿತ್ತು ಎಂದರೇ ತಪ್ಪಿಲ್ಲ. 

ನೀವೂ ಗಮನಿಸಿ ನೋಡಿ, ನಿಮ್ಮ ಸುತ್ತ ಮುತ್ತಲೂ ಅನೇಕರು ನಿಯಮಬಾಹಿರವಾಗಿ ಬದುಕನ್ನು ನಡೆಸುತ್ತಿರುತ್ತಾರೆ. ಆದರೇ, ಅದ್ಯಾವುದು ನಿಮಗೂ ಅವರಿಗೂ ಸಮಸ್ಯೆಯೇ ಎನಿಸುವುದಿಲ್ಲ, ಏಕೆಂದರೆ, ಅದೂ ಮಾಮೂಲಿಯಾಗಿರುತ್ತದೆ. ಅವರು ಇರೋದೆ ಹಾಗೆ ಎನಿಸಿಬಿಡುತ್ತದೆ. ಎಷ್ಟು ಹೇಳಿದರೂ ಕೇಳುವುದಿಲ್ಲ. ಟೀ ಕುಡಿಯಲು ಗಂಟೆಗಟ್ಟಲೇ, ಊಟ ಮಾಡುವುದಕ್ಕೆ ಗಂಟೆಗಟ್ಟಲೇ ಹೋಗುವ ಅದೆಷ್ಟೋ ಜನರನ್ನು ನಾನು ನೋಡಿದ್ದೇನೆ. ಆದರೆ, ಅದೆಲ್ಲವನ್ನು ಕೆಲಸದ ಸಮಯದಲ್ಲಿ ಏಕೆ ಮಾಡಬೇಕೆಂಬುದು ನನ್ನ ಪ್ರಶ್ನೆ. ಇದ್ಯಾವುದೂ ನೈತಿಕ ಪ್ರಶ್ನೆಯಾಗುವುದೇ ಇಲ್ಲ. ನರೇಂದ್ರ ಮೋದಿಯವರು ದಿನದಲ್ಲಿ 18 ಗಂಟೆ ಕೆಲಸ ಮಾಡಿದ್ದಾರೆ, ಹನ್ನೆರಡು ವರ್ಷದಿಂದ ರಜೆ ತೆಗೆದುಕೊಂಡಿಲ್ಲವೆಂದು ಸಂದೇಶ ಕಳುಹಿಸುವವರು, ತಾವೇಕೆ ಆ ಹಾದಿಯಲ್ಲಿ ಕೆಲವು ತಿಂಗಳುಗಳು ಇರಬಾರದೆಂದು ಯೊಚಿಸುವುದಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ನಾನು ಎರಡು ಮಾತನ್ನು ಸದಾ ಹೇಳುತ್ತಿರುತ್ತೇನೆ ಮತ್ತು ನಂಬಿ ಬದುಕನ್ನು ಸಾಗಿಸುತ್ತಿದ್ದೇನೆ. ಮೊದಲನೆಯದಾಗಿ, ವರ್ಕ್ ನೆವರ್ ಕಿಲ್ಸ್ – ಕೆಲಸ ಯಾವತ್ತು ನಮ್ಮನ್ನು ಸಾಯಿಸುವುದಿಲ್ಲ. ಸದಾ ಕೆಲಸ ಮಾಡುತ್ತಿರಬೇಕು. ಎರಡನೆಯದಾಗಿ, ಯಾವೊಂದು ಬದಲಾವಣೆಯೂ ದುರಂತವೂ ರಾತ್ರೋ ರಾತ್ರಿ ಆಗುವುದಿಲ್ಲ. ನಮ್ಮ ಗುಣ, ಯಶಸ್ಸು, ನಡುವಳಿಕೆ ಎಲ್ಲವೂ ಅಷ್ಟೆ ದಿನ ದಿನ ಸಣ್ಣ ಪುಟ್ಟ ಬದಲಾವಣೆಯಿಂದ, ಚಿಂತನೆಗಳಿಂದ, ಚಟುವಟಿಕೆಗಳಿಂದ ಬೆಳೆಯುತ್ತವೆ. ಸೋಮಾರಿತನವೂ ಅಷ್ಠೆ, ದಿಡೀರನೇ ಯಾರೂ ಸೋಮಾರಿಗಳಾಗುವುದಿಲ್ಲ, ಅದೇ ರೀತಿ ಯಾರೊಬ್ಬರೂ ದಿಡೀರನೇ ಶ್ರಮ ಜೀವಿಗಳಾಗುವುದಿಲ್ಲ, ಯಾರೊಬ್ಬರೂ ದಿಡೀರನೇ ನಿಷ್ಟಾವಂತರಾಗುವುದಿಲ್ಲ, ಯಾರೊಬ್ಬರೂ ದಿಡೀರನೇ ಕ್ರೂರಿಗಳಾಗುವುದಿಲ್ಲ. 

ಈ ಲೇಖನವೂ ನಾಲ್ಕಾರು ವಿಷಯಗಳನ್ನು ಬೇರೆ ಬೇರೆ ಆಯಾಮಗಳಿಂದ ನೋಡಬೇಕಾಗಿರುವುದರಿಂದ ಕೆಲವು ಗೊಂದಲಗಳು ಮೂಡಿರಬಹುದು. ಸರಳವಾಗಿ ಹೇಳುವುದಾದರೇ ನಮ್ಮ ಆಲೋಚನಾ ಲಹರಿ ಇಡೀ ವಿಶ್ವವೇ ಒಂದು ಎನ್ನುವುದರ ಕಡೆಗೆ ಹರಿಯಲಿ ಮತ್ತು ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಲಿ. ಹಣ ಬೇಡಿಕೆಯೇ ದುಡಿಮೆಯಾಗಬಾರದು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...