ಬರವಣಿಗೆ ಪ್ರಖ್ಯಾತಿಗಲ್ಲ, ಅಂತರಾಳದೊಳಗಿರುವ ಆಲೋಚನೆಗಳ ಸಾರುವುದಕೆ

ನಾನು ಬರೆಯಹೊರಟವನಲ್ಲ, ಬರೆಸಿಕೊಂಡವಳು ನೀನು. ನೀನೆಂದರೆ ನನ್ನೊಡಲು, ನನ್ನುಸಿರು ಕನ್ನಡ. ನಾನು ಬದುಕಹೊರಟವನಲ್ಲ ಬಾಳಿಸಿದವಳು ನೀನು ನನ್ನ ಕನಸುಗಳು. ಜೀವನವನ್ನು ಜೀವಿಸಬೇಕು, ನಲಿಯಬೇಕು, ನಗಿಸಬೇಕು, ಹೃದಯಾಂತರಾಳದಲ್ಲಿರುವ ಪ್ರೀತಿಯನ್ನು ಜಗತ್ತಿಗೆ ಹಂಚಬೇಕು, ಹಂಚಬಹುದು ಬರವಣಿಗೆಯ ಮೂಲಕವೂ...

05 May 2018

ನನ್ನನಿಸಿಕೆ: ಪ್ರಕಾಶ್ ರೈ - ಬಿಜೆಪಿ ವಾಕ್ಸಮರ


ನಾನು ಈ ವಿಷಯದ ಕುರಿತು ಬರೆಯಬೇಕೇ? ಬೇಡವೇ? ಎಂದು ಬಹಳ ದಿನಗಳಿಂದಲೂ ಆಲೋಚಿಸುತ್ತಿದ್ದೆ. ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೇ, ಅದ್ಯಾಕೋ ಇದರ ಕುರಿತು ನನ್ನ ನಿಲುವನ್ನು ಪ್ರಕಟಿಸಬೇಕೆಂದು ಮನಸ್ಸಾಗಿ ಬರೆಯುತ್ತಿದ್ದೇನೆ. ನಾನು ಪ್ರತಿ ಬಾರಿ ಹೇಳುವಂತೆ, ದಯವಿಟ್ಟು ಸಂಪೂರ್ಣ ಲೇಖನವನ್ನು ಓದಲು ಸಾಧ್ಯವಾದರೆ ಓದಿ, ಸಂಪೂರ್ಣ ಓದಿದ ನಂತರ ನಿಮ್ಮ ಪ್ರತಿಕ್ರಿಯೆ ಬರಲಿ. ಯಾವುದೋ ನಾಲ್ಕ ಸಾಲುಗಳನ್ನು ಓದಿ ಅಥವಾ ಶೀರ್ಷಿಕೆಯನ್ನು ನೋಡಿ ಪ್ರತಿಕ್ರಿಯಿಸಬೇಡಿ. ನೀವು ಓದುವುದು ಬಿಡುವುದು ನಿಮಗೆ ಸೇರಿದ್ದು, ನೀವು ಓದಲೇಬೇಕೆಂಬ ನಿಯಮವಿಲ್ಲ. 

ನಾನು ಹೇಳುತ್ತಿರುವ ವಿಷಯ, ಪ್ರಕಾಶ್ ರೈ ಮತ್ತು ಬಿಜೆಪಿಯ ನಡುವಿನ ವಾಕ್ಸಮರದ ಕುರಿತು. ನನ್ನ ಅನೇಕ ಮಾತುಗಳು ಕೆಲವರಿಗೆ ಅರ್ಥವಾಗುವುದಿಲ್ಲ ಮತ್ತು ಹಲವರಿಗೆ ಹಿಡಿಸುವುದಿಲ್ಲ. ಅದಕ್ಕೂ ವಿವರಣೆ ನೀಡುತ್ತೇನೆ. ನಾವು ಯಾವುದೇ ವಿಷಯವನ್ನು ಕೇಳುವಾಗ ನಮ್ಮ ಪೂರ್ವ ಅನುಭವದೊಂದಿಗೆ ಹೋಲಿಕೆ ಮಾಡಿ ಅಥವಾ ನಮ್ಮ ಅನುಭವದ ಪೆಟ್ಟಿಗೆಯೊಳಗೆಯೇ ನೋಡುತ್ತೇವೆ. ಅಂದರೆ, ನಾನು ನನ್ನೂರು ಬಾನುಗೊಂದಿಯ ಬಗ್ಗೆ ಹೇಳುವಾಗ ನೀವು ನಿಮ್ಮೂರನ್ನು ಕಲ್ಪಸಿಕೊಳ್ಳುತ್ತೀರಿ, ನಾನು ಕಾವೇರಿ ನದಿ ದಂಡೆ ಅಂದರೆ ನೀವು, ಎಂದೋ ಕಂಡಿರುವ ನದಿ ದಂಡೆಯನ್ನು ಕಲ್ಪಿಸಿಕೊಳ್ಳುತ್ತೀರಿ. ನಾನು ಅಮೇರಿಕಾದ ಹಳ್ಳಿಯಂದರೂ ಅದೇ ಕಲ್ಪನೆ ನಿಮಗೆ ತಿಳಿಯದೇ ಬಂದಿರುತ್ತದೆ. ನಾನು ಕೇರಳಕ್ಕೆ ಹೋಗುವ ಮುನ್ನಾ ನನ್ನ ಸ್ನೇಹಿತ ಬಿನು ಕುಮಾರ್ ಅವರ ಊರಿನ ಬಗ್ಗೆ ಹೇಳಿದರೆ ನನಗೆ ನನ್ನೂರು ತಲೆಯೊಳಗೆ ಬರತಿತ್ತು. ಅಲ್ಲಿಗೆ ಹೋಗಿ ಬಂದ ಮೇಲೆ ನನ್ನ ಅನುಭವ ಬೇರೆಯಾಗಿದ್ದು. ಕೇರಳದಲ್ಲಿ ಹಳ್ಳಿ, ಪಟ್ಟಣವೆಂಬ ಬೇಧಭಾವವೇ ಇಲ್ಲ, ಎಲ್ಲಿಂದ ಎಲ್ಲಿಗೆ ಹೋದರೂ ಮನೆಗಳು, ಉತ್ತಮ ರಸ್ತೆಗಳು, ಆದರೆ ನಾನು ಹೋಗುವ ಮುನ್ನಾ? ನನ್ನ ತಲೆಯೊಳಗಿನ ಕೇರಳವೇ ಬೇರೆ. ಅದೇ ರೀತಿ ನನ್ನ ಮಾತುಗಳನ್ನು ಮುಕ್ತವಾಗಿ ಕೇಳಿ, ಓದಿ, ನಿಮ್ಮ ಭೂತದೊಂದಿಗೆ ಹೋಲಿಕೆ ಮಾಡಬೇಡಿ. 

ಪ್ರಕಾಶ್ ರೈ ಮತ್ತು ಬಿಜೆಪಿಯ ಅದರಲ್ಲಿಯೂ ಕರ್ನಾಟಕ ಬಿಜೆಪಿಯ ವಾಕ್ಸಮರವನ್ನೊಮ್ಮೆ ಅವಲೋಕಿಸೋಣ. ಸಾಧ್ಯವಾದಷ್ಟು ಮುಕ್ತವಾಗಿ ಮತ್ತು ಪಕ್ಷಾತೀತವಾಗಿ ನೋಡೋಣ. ಪ್ರಕಾಶ್ ರೈ ವಾದಗಳೇನು? ಬಿಜೆಪಿಯವರ ವಾದವೇನು?  ಅಥವಾ ಅವರ ಪ್ರತಿಕ್ರಿಯೆಗಳೇನು? ಇಷ್ಟೊಂದು ದೊಡ್ಡ ಮಟ್ಟದ ಚರ್ಚೆಗಳು ಆಗೋಕೆ ಕಾರಣವೇನು? ಇವೆಲ್ಲವನ್ನೂ ಗಮನಿಸೋಣ. ವ್ಯಕ್ತಿ ಸ್ವಾತಂತ್ರ್ಯ ಅದರಲ್ಲಿಯೂ ವಾಕ್ ಸ್ವಾತಂತ್ರ್ಯ ಬಹಳ ಮುಖ್ಯ. ಯಾವುದೇ ಸಮಾಜ, ದೇಶ ಬದಲಾಗಬೇಕು, ಬೆಳವಣಿಗೆಯಾಗಬೇಕಾದರೆ ಚರ್ಚೆಗಳಾಗಬೇಕು, ಚರ್ಚೆಗಳು ಮುಕ್ತವಾಗಿರಬೇಕು. ಪ್ರಶ್ನಿಸಬೇಕು, ಪ್ರಶ್ನಿಸುವವರನ್ನು ಹತ್ತಿಕ್ಕಬಾರದು. ಭಾರತ ಬುದ್ದಿವಂತರ ನಾಡು ಎಂದು ಹೆಸರು ಗಳಿಸಿದ್ದು, ಬೆಳೆದಿದ್ದು ಆ ಸ್ವಾತಂತ್ರ್ಯದಿಂದ. ಉದಾಹರಣೆಗೆ, ಹೊಯ್ಸಳರ ಕಾಲದ ದೇವಸ್ಥಾನಗಳನ್ನು ನೋಡಿ, ಅದೆಷ್ಟು ಸುಂದರ ಎನಿಸುತ್ತವೆ. ಅದಕ್ಕೆ ಮೂಲ ಕಾರಣ ಸ್ವಾತಂತ್ರ್ಯ. ಆದರೇ ಇತ್ತೀಚಿನ ಬೆಳವಣಿಗೆಯಲ್ಲಿ, ಅದರಲ್ಲಿಯೂ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು ಎಲ್ಲರ ಕೈಯಲ್ಲಿರುವುದು ಮತ್ತು ಸಾಕಷ್ಟು ಎಡವಟ್ಟುಗಳನ್ನು ಮಾಡುತ್ತಿವೆ. ಇದನ್ನು ವಿಶ್ಲೇಷಿಸಲು ಸಾಕಷ್ಟು ಆಯಾಮಗಳಲ್ಲಿ ನೋಡಬೇಕು. 

ಎಲ್ಲರ ಕೈಯಲ್ಲಿ ಮೊಬೈಲ್ ಇಂಟರ್‍ನೆಟ್ ಇರುವುದು, ಮನಸ್ಸಿಗೆ ಬಂದದ್ದನ್ನು ಹಾಕುವುದು, ಬರೆಯುವುದು ಮತ್ತು ಮಾತಿನ ಮೇಲೆ ಹಿಡಿತವಿಲ್ಲದೆ, ಕೆಟ್ಟ ಭಾಷೆಯನ್ನು ಬಳಸುವುದು ಆತಂಕಕಾರಿ ಬೆಳವಣಿಗೆ. ಎರಡನೆಯದಾಗಿ, ಸಮಗ್ರವಾಗಿ ಮಾತನ್ನು ಅಥವಾ ವಾದವನ್ನು ಆಲಿಸದೇ, ಕೇವಲ ಆಯ್ದ ತುಣುಕುಗಳನ್ನು ಎಡಿಟ್ ಮಾಡಿ ಜನರನ್ನು ಹಾದಿ ತಪ್ಪಿಸುತ್ತಿರುವುದು. ಮೂರನೆಯದಾಗಿ, ಪ್ರತಿಯೊಂದು ವಿಷಯಕ್ಕೂ ಭಾವಾತ್ಮಕವಾಗಿ, ಪ್ರತಿಕ್ರಿಯಿಸುವುದು. ನಾಲ್ಕನೆಯದಾಗಿ, ಎಲ್ಲದ್ದಕ್ಕೂ ಭಾಷೆ, ರಾಜಕೀಯ ಪಕ್ಷ, ಜಾತಿ, ಧರ್ಮದ ನಂಟು ಹಾಕುತ್ತಿರುವುದು. ಐದನೇಯದಾಗಿ, ವ್ಯಕ್ತಿ ಆರಾಧನೆ ಅಥವಾ ವ್ಯಕ್ತಿ ನಿಂಧನೆ ಹೆಚ್ಚಾಗುತ್ತಿರುವುದು. ಇವೆಲ್ಲವನ್ನು ಒಂದೊಂದಾಗಿ, ನೋಡುತ್ತಾ ಹೋಗೋಣ. ಅವುಗಳು ಪ್ರಕಾಶ್ ರೈ ರವರ ವಿಚಾರಕ್ಕೆ ಸೇರಿಸಕೊಂಡು ಅವಲೋಕಿಸೋಣ. 

ಈ ಬೆಳವಣಿಗೆಗಳು ಶುರುವಾಗಿದ್ದು, ಗೌರಿ ಲಂಕೇಶ್‍ರವರ ಹತ್ಯೆಯ ಸಮಯದಿಂದ. ಪ್ರಕಾಶ್ ರೈ ರವರು ಗೌರಿ ಹತ್ಯೆಗೆ ಸಂಘ ಪರಿವಾರದವರ ಕೈವಾಡವಿದೆ ಎಂದು ಆರೋಪಿಸಿದರು ಮತ್ತು ಬುದ್ದಿಜೀವಿಗಳ ರಕ್ಷಣೆಗೆ ಪ್ರಧಾನ ಮಂತ್ರಿಗಳು ನಿಲ್ಲಬೇಕು, ಇದರ ಕುರಿತು ಪ್ರತಿಕ್ರಿಯೆ ನೀಡಬೇಕೆಂದರು. ಒಬ್ಬ ಸ್ನೇಹಿತ ತನ್ನ ಸ್ನೇಹಿತೆಯ ಕೊಲೆಯಾಗಿದ್ದಾಗ ಭಾವಾನಾತ್ಮಕವಾಗಿ ವ್ಯವಸ್ಥೆಯನ್ನು ದೂರುವುದು ಸರ್ವೇಸಾಮಾನ್ಯ. ಅವರ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು, ಕೇಳಿದರು, ಇದರಲ್ಲಿ ತಪ್ಪೇನು? ಅವರು ರಾಜ್ಯ ಸರ್ಕಾರವನ್ನೂ ಆಗ್ರಹಿಸಿದರು ಎನ್ನುವುದನ್ನು ಮರೆಯಬಾರದು. ಬಿಜೆಪಿಗರ ವಾದ ಅಥವಾ ಪ್ರತಿವಾದ ಏನಿರಬೇಕಿತ್ತು? ಮತ್ತು ಏನಾಯ್ತು? ಪ್ರತಾಪ್ ಸಿಂಹ, ಅನಂತ ಕುಮಾರ್ ಹೆಗ್ಡೆ ಸೇರಿದಂತೆ ಬಾಯಿಗೆ ಬಂದಂತೆ ಬೈದರು? ಅವರ ಮಗನ ಸಾವು ಮತ್ತು ಎರಡನೆಯ ಮದುವೆಯ ವಿಷಯವನ್ನು ತುಚ್ಛವಾಗಿ ನಿಂದಿಸಿದರು. ಇದರ ಅವಶ್ಯಕತೆಯಿತ್ತಾ? ಜನ ಪ್ರತಿನಿಧಿಯಾದವರು, ಸಂಸದರು ಬಳಸುವ ಪದಗಳಲ್ಲ ಅವುಗಳು. 

ಸರ್ವೇಸಾಮಾನ್ಯವಾಗಿ ಎಡಪಂಥಿಯರು ಪ್ರಕಾಶ್ ರೈರವರನ್ನು ಅವರೆಲ್ಲಾ ಕಾರ್ಯಕ್ರಮಗಳಿಗೆ ಆಹ್ವಾನಿಸೊತೊಡಗಿದರು. ಮೂಲತಃ ಪ್ರಕಾಶ್ ರೈ ಎಡಪಂಥೀಯ ಸಿದ್ದಾಂತವನ್ನು ಓದಿ ಬೆಳೆದವರು. ಹಾಗೆಂದ ಮಾತ್ರಕ್ಕೆ ಅವರು ಹಿಂದೂ ವಿರೋಧಿ ಅಥವಾ ಸಂಪ್ರದಾಯದ ವಿರೋಧಿ ಎನ್ನುವಂತಿಲ್ಲ. ಅವರು ಬೆಳೆದದ್ದು ವಿಜಯಮ್ಮ ಮತ್ತು ಬಿ.ಸುರೇಶರವರ ಮನೆಯಲ್ಲಿ. ಸಾಮಾಜಿಕ ಕಳಕಳಿ ಅವರಿಗೆ ಗೌರಿ ಸತ್ತ ಮೇಲೆ ಬಂದದ್ದಲ್ಲ. ಅದಕ್ಕೂ ಮುಂಚೆಯೇ ಅವರು ಆ ಕಾರ್ಯದಲ್ಲಿ ತೊಡಗಿದ್ದರು, ಹಳ್ಳಿಗಳನ್ನು ದತ್ತು ಪಡೆದಿದ್ದರು. ರೈತರಿಗೆ, ಶಾಲೆಗಳಿಗೆ, ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿದ್ದರು ಕೂಡ. ಬಿಡುವಿನ ವೇಳೆಯಲ್ಲಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕೆಲವರ ಆರೋಪಗಳು, ಪ್ರಕಾಶ್ ರೈ ಪಬ್ಲಿಸಿಟಿಗೆ, ದುಡ್ಡಿಗೆ ಹೀಗೆಲ್ಲಾ ಮಾಡುತ್ತಿದ್ದಾರೆಂದು. ನನ್ನ ಪ್ರಕಾರ ಅವರಿಗೆ ಅದೆರಡರ ಅವಶ್ಯಕತೆಯಾಗಲಿ, ಅನಿವಾರ್ಯತೆಯಾಗಲಿ ಇಲ್ಲವೇ ಇಲ್ಲ. ತನ್ನ ಪ್ರತಿಭೆಯ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಮ್ಮೆಯ ನಟ ಅವರು. ಅವರ ಜೀವನಕ್ಕೆ ಏನು ಬೇಕು ಅದೆಲ್ಲವನ್ನು ದುಡಿದು ಸಂಪಾದಿಸಿದ್ದಾರೆ, ಅದೆಲ್ಲವೂ ಅವರ ಶ್ರಮದ ಫಲ. ದಿಡೀರನೇ ಕರ್ನಾಟಕದ ಮೇಲೆ ಪ್ರೀತಿ ಬಂತು ಎಂದು ಕೆಲವರು ಹಂಗಿಸಿದ್ದಾರೆ. ದುಡಿಯುವ ಸಮಯದಲ್ಲಿ ಎಲ್ಲಿ ಸಾಧ್ಯವಾಗುತ್ತದೆ ಅಲ್ಲಿಗೇ ಹೋಗಲೇ ಬೇಕು ದುಡಿಯಲೇ ಬೇಕು. ನಾನು ದುಡಿಮೆಗೆ ಬೆಂಗಳೂರಿಗೆ ಬಂದಿದ್ದೇನೆ, ದುಡಿದ ನಂತರ ಊರಿಗೆ ಹೋಗಿ ಅಲ್ಲಿನವರಿಗೆ ಏನಾದರೂ ಮಾಡಬೇಕೆಂಬ ಹಂಬಲವಿದೆ. ಆದರೇ ಸಂಪಾದನೆಗಿಂತ ಮುಂಚೆ ಮಾಡಲಾಗುವುದಿಲ್ಲ. ರೈ ಕೂಡ ಹಾಗೇಯೆ ಮಾಡುತ್ತಿದ್ದಾರೆಂಬುದು ನನ್ನ ಅನಿಸಿಕೆ. 

ಕೆಲವು ಕಾಂಗ್ರೇಸ್ಸಿಗರು ಮತ್ತು ಎಡಪಂಥೀಯರು, ಅವರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದಂತೂ ನಿಜ. ಆ ಹಾದಿಯಲ್ಲಿ ಅವರು ಮೇವಾನಿಯ ಜೊತೆ ಸೇರಿದ್ದು ನನಗೆ ಸರಿ ಎನಿಸಲಿಲ್ಲ. ಮೇವಾನಿ ಜಾತಿಯ ಹೆಸರಲ್ಲಿ ರಾಜಕೀಯ ಮಾಡುತ್ತಿರುವ ಯುವ ರಾಜಕಾರಣಿ. ಜಾತಿ ಧರ್ಮಗಳ ಮೀರಿ ಬೆಳೆಯಬೇಕಿರುವ ಕಾಲಘಟ್ಟದಲ್ಲಿ ಇದು ಬೇಕಿರಲಿಲ್ಲ. ರೈ ರವರು ಮೋದಿಯನ್ನು ದೂರುವ ಸಲುವಾಗಿ ರಾಹುಲ್ ಗಾಂಧಿಯನ್ನು ಸಮರ್ಥಿಸಿಕೊಂಡಿದ್ದು ಸರಿಯಿಲ್ಲ. ಆದರೇ, ಅವರ ಸಮರ್ಥನೆ ಸರಿಯಿದೆ, ಮೋದಿ ಮತ್ತು ರಾಹುಲ್ ವಯಸ್ಸಿನ ವ್ಯತ್ಯಾಸವಿದೆ, ಆದರೆ ನೆನಪಿರಲಿ ರಾಹುಲ್ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ. ಮೋದಿಯನ್ನು ಸೋಲಿಸುವ ಉದ್ದೇಶದಿಂದ, ಯೋಗ್ಯತೆಯಿಲ್ಲದೆ ಆ ಹುದ್ದೆಯಲ್ಲಿರುವ ಕಾಂಗ್ರೇಸ್ ಅನ್ನು ಬೆಂಬಲಿಸುವುದು ಆತಂಕಕಾರಿ ವಿಷಯ. ಮೋದಿಯನ್ನು ವಿರೋಧಿಸಿ ಆದರೆ ಅವರ ಸ್ಥಾನಕ್ಕೆ ನಿಮ್ಮ ಆಯ್ಕೆ ಯಾವುದು? ರಾಹುಲ್ ಗಾಂಧಿಯೇ? ಮಮತಾ ಬ್ಯಾನರ್ಜಿಯೇ? ಲಾಲೂ ಪ್ರಸಾದ್ ಯಾದವ್? ಯಾರು ನಿಮ್ಮ ನಾಯಕ? ಇದು ದೇಶದ ವಿಷಯ. ಸದ್ಯಕ್ಕಂತೂ ಮೋದಿಯನ್ನು ಬಿಟ್ಟರೇ ಬಿಜೆಪಿಯಲ್ಲಿಯೇ ಮತ್ತೊಬ್ಬ ಒಳ್ಳೆಯ ನಾಯಕನಿದ್ದಾರೆಂಬ ನಂಬಿಕೆ ನನಗಿಲ್ಲ. ಅದರಂತೆಯೇ, ಆದಿತ್ಯನಾಥ್ ಯೋಗಿಯ ವಿಷಯದಲ್ಲಿಯೂ ಅಷ್ಟೆ, ಉತ್ತರ ಪ್ರದೇಶ, ಕರ್ನಾಟಕದಂತೆ ಅಲ್ಲಾ, ಅದು ಬಹಳ ದೊಡ್ಡ ರಾಜ್ಯ, ಶಿಕ್ಷಣದಲ್ಲಿ ಹಿಂದುಳಿದು, ಹೆಚ್ಚೂ ಕಡಿಮೆ ಗೂಂಡಾ ರಾಜ್ಯ ಎನಿಸಿಕೊಂಡಿತ್ತು. ಅದನ್ನು ಸುಧಾರಿಸುವುದು ಸುಲಭದ ಮಾತಲ್ಲ. 

ನಾನು ಗಮನಿಸಿದ ಹಾಗೆ, ಪ್ರಕಾಶ್ ರೈ ಬೇರೆ ನಟರಂತೆ ಅಲ್ಲಾ. ಅವರು ಸಿದ್ದಾಂತಗಳೊಂದಿಗೆ ಬೆಳೆದವರು. ಚೆನ್ನಾಗಿ ಓದಿಕೊಂಡವರು, ಅವರ ಸ್ನೇಹ ವರ್ಗ ಕೂಡ ಪ್ರಜ್ಞಾವಂತರಿಂದ ಕೂಡಿದೆ. ವಿಚಾರವಂತರ ಬಳಗ ಹೊಂದಿದ್ದಾರೆ. ತಳ ಮಟ್ಟದಲ್ಲಿನ ವಾಸ್ತವಿಕತೆ ಗೊತ್ತಿದೆ, ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ಬಂದವರು, ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಸುಮ್ಮನೆ ಕಾಟಾಚಾರಕ್ಕೆ ಮಾತನಾಡುವುದಿಲ್ಲ ಕೂಡ. ಅವರಿಗೆ ಉತ್ತರ ನೀಡುವ ಸಾಮಥ್ರ್ಯ ಬಹುತೇಕ ಕರ್ನಾಟಕದ ಬಿಜೆಪಿಯವರಲ್ಲಿ ಇದ್ದಂತೆ ನನಗೆ ಕಾಣಲಿಲ್ಲ, ಹಾಗಾಗಿಯೇ ಪ್ರಕಾಶ್ ರೈರವರನ್ನು ಕೆಟ್ಟ ಭಾಷೆಯಿಂದ ನಿಂದಿಸಿದರು, ಕೊನೆಗೆ ಯಾವ ಮಟ್ಟಕ್ಕೆ ಇಳಿಯಿತೆಂದರೆ ವಿವೇಕತನವೇ ಇಲ್ಲದ ಪ್ರಥಮ್, ಹುಚ್ಚ ವೆಂಕಟ್‍ರವರ ಮಾತುಗಳಿಗೆ ಮನ್ನಣೆ ನೀಡಿ, ಪ್ರಚಾರ ನೀಡಿದರು. 

ಇನ್ನೂ ಕರ್ನಾಟಕದ ಬಿಜೆಪಿಯ ವಿಷಯಕ್ಕೆ ಬರೋಣ. ನಾನು ಸೇರಿದಂತೆ ಕೋಟ್ಯಾಂತರ ಜನರು ಬಿಜೆಪಿಯನ್ನು ಬೆಂಬಲಿಸಿದ್ದೆವು. ಅದಕ್ಕೊಂದಿಷ್ಟು ಕಾರಣಗಳಿದ್ದವು, ನಿರೀಕ್ಷೆಗಳಿದ್ದವು. ಅದರ ಜೊತೆಗೆ ಕಾಂಗ್ರೇಸ್ ಬಗ್ಗೆ ತಿರಸ್ಕಾರ ಮತ್ತು ಬೇಸರವಿತ್ತು. ಬಿಜೆಪಿ ಬೆಳೆದಿದ್ದು, ವಿದ್ಯಾವಂತರ ಮತ್ತು ಪ್ರಜ್ಞಾವಂತರ ಪಕ್ಷವಾಗಿ. ಹಾಗಾಗಿಯೇ, ಇತ್ತೀಚಿನ ದಿನಗಳ ತನಕ ಗ್ರಾಮೀಣ ಪ್ರದೇಶ ಮತ್ತು ಸ್ಲಂ ಗಳಲ್ಲಿ ಬಿಜೆಪಿಗೆ ಓಟ್ ಕಡಿಮೆಯಿರುತ್ತಿತ್ತು. ನೀವು ಕರ್ನಾಟಕದಲ್ಲಿ ಬಿಜೆಪಿ ಬೆಳೆದು ಬಂದ ಹಾದಿಯನ್ನು ಗಮನಿಸಿದರೆ, ಮೊದಲೆಲ್ಲಾ ದಕ್ಷಿಣ ಕನ್ನಡದಲ್ಲಿಯೇ ಹೆಚ್ಚಿರುತ್ತಿತ್ತು. ಇದಕ್ಕೆ ಕಾರಣ, ಅದು ವಿದ್ಯಾವಂತರ ಜಿಲ್ಲೆ ಎನ್ನುವ ಮಾತಿತ್ತು. ಎಲ್‍ಕೆ ಅಡ್ವಾಣಿಯವರು ಯಡ್ಯೂರಪ್ಪರವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆಂದು ತಿಳಿದ ತಕ್ಷಣ ಅವರಿಂದ ದೂರ ಉಳಿದರು. ಪ್ರತಿ ವರ್ಷ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬರುತ್ತಿದ್ದರು, ಆದರೇ ನಂತರ ದೂರ ಇಟ್ಟರು. ಕಾರಣ ಆ ಪಕ್ಷದಲ್ಲಿನ ನೈತಿಕತೆ. ವಾಜಪೇಯಿ, ಮುರಳಿ ಮನೋಹರ್ ಜೋಷಿ, ಅಡ್ವಾಣಿಯವರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆದರೇ, ಕರ್ನಾಟಕದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ನಾಯಕರುಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಅದರಲ್ಲಿಯೂ ಇಂದಿನ ಕಾರ್ಯಕರ್ತರ ದೃಷ್ಟಿಯಲ್ಲಿ ಬಿಜೆಪಿ ಇರುವುದು ಹಿಂದುಗಳಿಗೆ ಮಾತ್ರ, ಅದಿಲ್ಲದೇ ಇದ್ದರೇ ಹಿಂದೂಗಳೇ ಇರುವುದಿಲ್ಲವೆಂದು ನಂಬಿದ್ದಾರೆ ಮತ್ತು ನಂಬಿಸುತ್ತಿದ್ದಾರೆ. 

ಹಾಗಾಗಿಯೇ ಪ್ರಕಾಶ್ ರೈ ವಿಷಯವನ್ನೂ ಪದೇ ಪದೇ ಧರ್ಮಕ್ಕೆ ಅಂಟಿ ಹಾಕುವುದು. ಮೊನ್ನೆ ಒಬ್ಬ ಪತ್ರಕರ್ತ ಮಂಡ್ಯದಲ್ಲಿ ಪ್ರಕಾಶ್ ರೈರವರನ್ನು ಬೇಕೆಂದೇ ಪ್ರಚೋದಿಸಿದ. ಆ ವಿಡಿಯೋವನ್ನು ಸಂಪೂರ್ಣವಾಗಿ ಹಾಕಲಿಲ್ಲ. ಕೇವಲ ಒಂದು ತುಣುಕನ್ನು ಹಾಕಿ, ಅದರಲ್ಲಿ ನಾನು ಹಿಂದೂ ಅಲ್ಲ ಎನ್ನುವುದನ್ನು ಹೈಲೈಟ್ ಮಾಡಲಾಗಿತ್ತು. ಈ ವಿಷಯಕ್ಕೆ ಸಂಭಂಧಿಸಿದಂತೆ ಸ್ವಲ್ಪ ಚರ್ಚಿಸೋಣ. ಹಿಂದೂ ದೇಶ ಎಂದರೇ ಏನು? ಭಾರತ ಯಾವಾತ್ತಾದರೂ ಹಿಂದೂ ದೇಶವಾಗಿತ್ತು? ಹಿಂದೂ ಎನ್ನವುದೇನು? ಹಾಗೆಂದು ಧರ್ಮವಿದೆಯಾ? ಇದೆಲ್ಲವೂ ಹೇಗೆ ಹುಟ್ಟಿತು? ಇದರ ಕುರಿತು ಪ್ರೋ. ಎಸ್.ಎನ್. ಬಾಲಗಂಗಾಧರರವರು ಕಳೆದ ನಲ್ವತ್ತು ವರ್ಷದಿಂದ ಸಂಶೋಧನೆ ಮಾಡುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಅವರ ಪುಸ್ತಕಗಳ ಮೂಲಕ ಅಥವಾ ಭಾಷಣಗಳ ಮೂಲಕ ತಿಳಿದುಕೊಳ್ಳಿ. ಸಂಕ್ಷಿಪ್ತವಾಗಿ ಹೇಳುವುದಾದರೇ ಹಿಂದೂ ಧರ್ಮವೆಂಬುದೇ ಇಲ್ಲ. ಮುಸಲ್ಮಾನರಿಗೆ, ಕ್ರೈಸ್ತರಿಗೆ ನಿದಿಷ್ಟವಾದ ಒಂದು ಪುಸ್ತಕವಿದೆ, ಅದರಂತೆಯೇ ಅವರು ಜೀವನ ಸಾಗಿಸಬೇಕು, ದೇವರನ್ನು ಕಾಣಬೇಕು. ನಮಗೆ ಹಾಗಿಲ್ಲ. ಭಾರತ ಸಂಸ್ಕøತಿ, ಸಂಪ್ರದಾಯಗಳ, ಆಚರಣೆಗಳ ದೇಶ. ನಮ್ಮಲ್ಲಿ ಧರ್ಮ ಎಂಬ ಪದ ಬಳಕೆಯೇ ಬೇರೆ, ಅದು ರಿಲಿಜಿನ್ ಅಲ್ಲಾ. ದಯೇಯೇ ಧರ್ಮದ ಮೂಲವಯ್ಯ – ಇಲ್ಲಿ ಧರ್ಮ ಎಂದರೆ ರಿಲಿಜಿನ್ ಅಲ್ಲ. ಹಾಗಾಗಿ ಈ ಹಿಂದೂ ಸ್ಥಾನ್ ಮಾಡುವುದು, ಹಿಂದೂ ರಾಷ್ಟ್ರ ಮಾಡುವುದು ಹೇಗೆ? ಮತ್ತೊಂದು ಉತ್ತಮ ಉದಾಹರಣೆ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು. ಅಲ್ಲಿ ಜೈನರು, ಬುದ್ದರು, ವೈಷ್ಣವರು, ಶೈವರು ಹೀಗೆ ಬಂದು ಹೋಗುತ್ತಿರುತ್ತಾರೆ ಯಾವುದೂ ಉಳಿದಿದ್ದು?

ನಮ್ಮೂರಿನ ಹತ್ತಿರ ಹಂಡ್ರಂಗಿ ಇದೆ. ಅಲ್ಲಿ ಘೋರಿಗಳಿವೆ. ಮಾಸ್ಮಾಲಮ್ಮ ಅಂತಾ ಜಾತ್ರೆ ಮಾಡ್ತಾರೆ, ಎಲ್ಲಾ ಜಾತಿಯವರು ಹೋಗ್ತಾರೆ, ಹರಕೆ ಕಟ್ತಾರೆ. ಈ ಧರ್ಮವೇ ಬರೋದಿಲ್ಲ. ಅದೇ ರೀತಿ ಸಾಕಷ್ಟು ಊರುಗಳು ನಿಮಗೆ ಸಿಗುತ್ತವೆ. ಇದು ಕರ್ನಾಟಕ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಕೂಡ. ಮೊಘಲರು ನಮ್ಮ ಮೇಲೆ ಆಕ್ರಮಣ ಮಾಡಿದರು, ನಾಶ ಮಾಡಿದರು, ಆದರೇ ನಮ್ಮ ಅನೇಕರು, ಅಕ್ಬರ್, ಔರಂಗಜೇಬ್, ಷಹಾಜಹಾನ್ ರವರ ಘೋರಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದರರ್ಥವೇನು? ನಾವು ಚಿಕ್ಕವರಿದ್ದಾಗ ಇಂಥವುಗಳು ನಮ್ಮ ತಲೆಯೊಳಕ್ಕೆ ಬರಲೇ ಇಲ್ಲ. ಬಹುಶಃ ಮಾಧ್ಯಮಗಳು ಕಡಿಮೆಯಿತ್ತು? ರಾಜಕಾರಣಿಗಳು ಈ ಮಟ್ಟಕ್ಕೆ ಇಳಿದಿರಲಿಲ್ಲ. ಇರಲಿ, ಇಲ್ಲಿ ರೈ ರವರು ಹೇಳುತ್ತಿರುವುದು ಅದನ್ನೇ. ಇದು ಎಲ್ಲರ ದೇಶವೆಂದು. ಅದನ್ನ ಅವರು ಜ್ಯಾತ್ಯಾತೀತ ಅನ್ನೊ ಪದವನ್ನು ಬಳಸುತ್ತಿದ್ದಾರೆ ಅಷ್ಟೆ. ವೈವಿಧ್ಯತೆಯೇ ಬದುಕು. ಬಿನ್ನಾಭಿಪ್ರಾಯಗಳಿರಬೇಕು. ಚರ್ಚೆಗಳಾಗಬೇಕು. ಪ್ರಶ್ನೆಗೆ ಉತ್ತರ ಕೊಡಬೇಕು ಮತ್ತು ಹುಡುಕಬೇಕು. ಅದನ್ನು ಬಿಟ್ಟು ಪ್ರಶ್ನೆಗೆ ಪ್ರಶ್ನೆ ಹಾಕುವುದಲ್ಲ. ಪಲಾಯನವಾದ ಮಾಡುವುದಲ್ಲ. 

ಈ ಲೇಖನಕ್ಕೆ ನೇರ ಸಂಭಂಧವಿಲ್ಲದೇಯಿದ್ದರೂ ಒಂದು ಮಾತನ್ನು ಹೇಳುತ್ತೇನೆ. ಇತ್ತೀಚಿನ ದಿನಗಳಲ್ಲಿ ಪಲಾಯನವಾದದ ಇನ್ನೊಂದು ಮುಖವಿದು. ಇದು ಭ್ರಷ್ಟಾಚಾರವನ್ನು ಬಿಗಿದಪ್ಪಿರುವುದರ ಪರಿಣಾಮ. ಇದಕ್ಕೆ ಯಾರೊಬ್ಬರೂ ಹೊರತಲ್ಲ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರೆ, ಬಿಜೆಪಿ ಮಾಡಿಲ್ವಾ? ಬಿಜೆಪಿ ಮಾಡಿದೆ ಎಂದರೇ ಕಾಂಗ್ರೇಸ್ ಮಾಡಿಲ್ವ? ವಂಶ ರಾಜಕೀಯ, ಅವರೂ ಮಾಡಿಲ್ವ? ಹೀಗೆ ಎಲ್ಲವನ್ನೂ ಸಮರ್ಥಿಸಿಕೊಳ್ಳವುದು. ಅವರು ಕಚಡ ತಿಂದರೇ ನೀವು ತಿನ್ನೋದಾ? ಪ್ರಕಾಶ್ ರೈ ಮೋದಿಯನ್ನು ಪ್ರಶ್ನಿಸಿದರೆ, ಸಿದ್ದರಾಮಯ್ಯರವರನ್ನು ಪ್ರಶ್ನಿಸಲಿ ಎನ್ನವುದು. ದಿನೇಶ್ ಗುಂಡೂರಾವ್ ಯೋಗಿಯನ್ನು ಬೈದರೆ ಮುಲ್ಲಾನನ್ನು ಬೈಯ್ಯಲಿ ಎನ್ನುವುದು. ಇದೆಲ್ಲಿಗೆ ತಲುಪಿತೆಂದರೆ ಆಸಿಫಾ ರೇಪ್ ವಿಷಯಕ್ಕೂ, ಹಿಂದೂ ಹುಡುಗಿಗೆ ಯಾಕೆ ಪ್ರತಿಭಟಿಸಿಲ್ಲ ಎಂದು ಕೇಳುವುದು. ಏನಾಗಿದೆ ರೀ ನಮ್ಮ ಜನಕ್ಕೆ. ನಾಚಿಕೆ ಮಾನ ಮರ್ಯಾದೆ ಅನ್ನೊದೆಲ್ಲಾ ಮಾರಿ ಕೊಂಡ್ರಾ? 

ಮತ್ತೊಂದು ಮುಖ್ಯವಾದ ವಿಷಯ. ಕಾವೇರಿ ವಿಷಯದಲ್ಲಿ ನಿಮ್ಮ ನಿಲುವೇನು? ಆಗ ಎಲ್ಲಿ ಹೋಗಿದ್ದರು? ಅಲ್ಲಾ ಸ್ವಾಮೀ. ಪ್ರಕಾಶ್ ರೈ ನಿಲುವಿಂದ ಏನಾಗುತ್ತೆ? ಅವರು ಯಾರು? ಇಂಜಿನಿಯರ್? ಜಲತಜ್ಞ? ಪರಿಣಿತ? ನಾನು ಗಮನಿಸಿದ್ದೇನೆ, ಟಿವಿಗಳಲ್ಲಿ ನಟರನ್ನ, ಸೆಲೆಬ್ರಿಟಿಗಳನ್ನ, ರಾಜಕಾರಣಿಗಳನ್ನ ತಂದು ಕೂರಿಸಿ ಕಾರ್ಯಕ್ರಮ ಮಾಡ್ತಿರಲ್ಲ. ನಿಮಗೆ ಒಂದು ನದಿಯ ಬಗ್ಗೆ ಏನಾದರೂ ಗೊತ್ತಾ? ಮೊನ್ನೆ ಅವರ ವಿಡಿಯೋ ಬಹಳ ಖುಷಿಯಾಯ್ತು. ನಾನು ಸತತ ಹತ್ತು ವರ್ಷಗಳ ಕಾಲ ನೀರಿನ ಬಗ್ಗೆ ಸಂಶೋಧನೆ ಮಾಡಿದ್ದೀನಿ, ಅದರಲ್ಲಿ ಆರು ವರ್ಷ ನದಿಯ ಕುರಿತು, ನನಗೆ ಇವರೆಲ್ಲರೂ ಮಾತನಾಡುವಾಗ ಅಸಹ್ಯ ಎನಿಸುತ್ತೆ. ವ್ಯವಸ್ತೆಯ ಕುರಿತು ಬೇಸರ ಜಿಗುಪ್ಸೆ ಕೂಡ ಬರುತ್ತೆ. ಹಾಗಾಗಿಯೇ ನಾನು ಹೆಚ್ಚಿನ ಬಾರಿ ಮಾಧ್ಯಮಗಳನ್ನು ಉಗಿದು ಉಪ್ಪಿನಕಾಯಿ ಹಾಕುವುದು. ಇವರು ತೋರಿಸುವ ಎಲ್ಲವನ್ನೂ ಜನರು ನಂಬುತ್ತಾರೆ. 

ಉಪಸಂಹಾರ: ಬಿಜೆಪಿಗರೇ ನಿಮ್ಮ ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಜನರು ಶ್ರಮಿಸಿದ್ದಾರೆ. ಬಿಜೆಪಿ ಉತ್ತಮ ಉದ್ದೇಶವನ್ನಿಟ್ಟುಕೊಂಡು ಆದರ್ಶಗಳನ್ನು, ಸಂಸ್ಕøತಿ, ಸಂಸ್ಕಾರವನ್ನು ಜೊತೆಗಿಟ್ಟುಕೊಂಡು ಬೆಳೆದ ಪಕ್ಷ. ದೇಶದ ಗೌರವ, ಘನತೆಯನ್ನು ಎತ್ತಿ ಹಿಡಿಯಬೇಕು. ಅದನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿ, ಕೆಟ್ಟ ಭಾಷೆಯಿಂದ ಹಾಳು ಮಾಡಬೇಡಿ. ಮೊದಲು ಓದಿಕೊಂಡು, ವಿಚಾರಗಳನ್ನು ತಿಳಿದು ಮಾತನಾಡಿ. ಪ್ರಕಾಶ್ ರೈ ಹೆಂಡತಿಯನ್ನು ಬೈದದ್ದು ಒಂದು ಹೆಣ್ಣಿಗೆ ಮಾಡಿದ ಅವಮಾನವೆಂಬುದನ್ನು ಮರೆಯಬೇಡಿ. ಪ್ರಕಾಶ್ ರೈ ರವರೆ ನೀವು ಮೋದಿಯನ್ನು ಬಿಜೆಪಿಯನ್ನು ದೂರುವ ಉತ್ಸಾಹದಲ್ಲಿ ರಾಹುಲ್ ಗಾಂಧಿಯಂತವರನ್ನು ಅಪ್ಪುವುದು ಸರಿಯಿಲ್ಲ. ಯೋಗ್ಯತೆಯಿರುವ ನಾಯಕರೊಂದಿಗಿರಿ, ಯಾವುದೇ ಪಕ್ಷದಲ್ಲಿರಲೇಬೇಕೆಂಬ ನಿಯಮವಿಲ್ಲ. ಎಲ್ಲರನ್ನೂ ಪ್ರಶ್ನಿಸೋಣ ಪಕ್ಷಾತಿತವಾಗಿ. 

No comments:

Post a Comment