28 ಮೇ 2018

ಕೇವಲ ಅನುದಾನಕ್ಕಾಗಿ ಸಂಶೋಧನ ಸಂಸ್ಥೆಗಳು ಮತ್ತು ಹೆಸರಿಗಾಗಿ ಗುಂಪುಗಾರಿಕೆ !!!


ನಮಸ್ಕಾರ ಸ್ನೇಹಿತರೆ,
ಇದೊಂದು ಲೇಖನವನ್ನು ಸಾಕಷ್ಟು ವರ್ಷಗಳಿಂದ ಬರೆಯಲೇಬೇಕೆಂದಿದ್ದವನು ನಾನು. ಅದಕ್ಕೆ ಈಗ ಸಮಯ ಕೂಡಿಬಂದಿದೆ. ಅನೇಕರಿಗೆ ಸಂಶೋಧನೆ ಹೇಗೆ ನಡೆಯುತ್ತದೆ ಅದರ ಮಾನದಂಡಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ಲೇಖನ ದೀರ್ಘವಾದರೂ ಅನುಸರಿಸಿಕೊಂಡು ಓದಬೇಕಾಗಿ ವಿನಂತಿ. ನಾನು ಈ ಲೇಖನವನ್ನು ಕೆಲವು ಸಂಸ್ಥೆಗಳ ಮತ್ತು ಕೆಲವು ಸಂಶೋಧಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯುತ್ತಿದ್ದರೂ ಅವರುಗಳ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ನಿಮಗೆ ಈ ರೀತಿಯ ಸಂಶೋಧಕರು ಹಾದಿ ಬೀದಿಯಲ್ಲಿಯೂ ಸಿಗುವ ಕಾಲ ಒದಗಿಬಂದಿದೆ. ಇರಲಿ ಅದೆಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ. ಈ ಲೇಖನವನ್ನೂ ಯಾವ ಹಿನ್ನಲೆಯಲ್ಲಿ ಓದಬೇಕೆನ್ನುವುದನ್ನು ತಿಳಿಸುತ್ತೇನೆ. ಅದೇ ರೀತಿ ಇದನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಿ ವಿವರಿಸುತ್ತೇನೆ. ಮೊದಲನೆಯದಾಗಿ, ಭಾರತದಲ್ಲಿ ಸಂಶೋಧನೆ ಹೇಗೆ ನಡೆಯುತ್ತಿದೆ? ವಿವಿಧ ಆಯಾಮಗಳೇನು? ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ಸಂಶೋಧನೆ ಹೇಗೆ? ಮಾನದಂಡಗಳೇನು? ಉಪಯೋಗಗಳೇನು? ಇದರೊಳಗಿರುವ ರಾಜಕೀಯ, ಗುಂಪುಗಾರಿಕೆ, ಮೋಸಗಳೇನು? ಎನ್ನುವುದನ್ನೂ ಸೂಕ್ಷ್ಮವಾಗಿ ತಿಳಿಯೋಣ. ಇತ್ತೀಚೆಗೆ ನಮಗಾದ ಕೆಟ್ಟ ಅನುಭವವನ್ನು ನಿಮ್ಮ ಮುಂದಿಡುತ್ತೇನೆ.

ಸಂಶೋಧನೆಯೆಂಬುದು ಎಲ್ಲಾ ಕ್ಷೇತ್ರಗಳಲ್ಲಿಯೂ ನಡೆದರೂ ನಾನು ಇಲ್ಲಿ ವಿವರಿಸುವುದು ಕೇವಲ ಡೆವಲಪ್‍ಮೆಂಟ್ ಸೆಕ್ಟರ್ ಎಂದು ಕರೆಯಲ್ಪಡುವ ಕೆಲವು ಕ್ಷೇತ್ರಗಳ ಕುರಿತು ಮಾತ್ರ. ಅವುಗಳೆಂದರೇ, ನೀರು, ಪರಿಸರ, ನೈರ್ಮಲ್ಯಕ್ಕೆ ಸಂಬಂಧಿಸಿದವು ಎನ್ನಬಹುದು. ಈ ಕ್ಷೇತ್ರಗಳಲ್ಲಿ ವಿಶ್ವವಿದ್ಯಾಲಯ, ಸರ್ಕಾರಿ ಸಂಶೋಧನ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತವೆ. ವಿದ್ಯಾರ್ಥಿಗಳು ತಮ್ಮ ಪಿಎಚ್‍ಡಿಗೆಂದು ಸಂಶೋಧನೆ ಮಾಡುತ್ತಾರೆ. ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದರ ಕುರಿತು ಸಮಗ್ರ ಅಧ್ಯಯನ ನಡೆಸುತ್ತಾರೆ ಇದು ಮೂರರಿಂದ ಐದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಇದರ ಜೊತೆಗೆ ಅಲ್ಲಿನ ಉಪನ್ಯಾಸಕರು, ಪ್ರೋಫೆಸರುಗಳು ಕೂಡ ಕೆಲವೊಂದು ಸಂಶೋಧನ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಇದಕ್ಕಾಗಿ ಅನೇಕ ಸರ್ಕಾರಿ ಇಲಾಖೆಗಳು ಧನಸಹಾಯ ನೀಡುತ್ತವೆ. ಈ ಸಂಶೋಧನೆಯಲ್ಲಿ ಕಂಡುಹಿಡಿದ ಹೊಸ ಅಂಶಗಳನ್ನು ಪ್ರಬಂಧವಾಗಿ ಸಲ್ಲಿಸಬೇಕು. ಅದರ ಜೊತೆಗೆ ಕೆಲವೊಂದು ಲೇಖನಗಳನ್ನು ನಿಯತಕಾಲಿಕ (ಜರ್ನಲ್‍ಗಳಲ್ಲಿ) ಪ್ರಕಟಿಸಬೇಕಾಗುತ್ತದೆ. 

ಈ ನಿಯತಕಾಲಿಕಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನೊಮ್ಮೆ ತಿಳಿಯೋಣ. ನಿಯತಕಾಲಿಕಗಳು ನಮ್ಮ ವಾರ ಪತ್ರಿಕೆ, ಮಾಸ ಪತ್ರಿಕೆಗಳಂತೆ ಎಂದು ಕಲ್ಪಿಸಿಕೊಳ್ಳಿ. ಇದರಲ್ಲಿ ಹೇಗೆ ನಮ್ಮ ಬರಹಗಳನ್ನು ವಿಮರ್ಶಕರು ವಿಮರ್ಶಿಸಿ ಪ್ರಕಟಿಸುತ್ತಾರೋ ಅದೇ ರೀತಿ ಅಲ್ಲಿಯೂ ಪ್ರಕಟಿಸಲಾಗುತ್ತದೆ. ಆದರೇ, ಅಲ್ಲಿ ಕೆಲವೊಂದು ವ್ಯತ್ಯಾಸಗಳಿರುತ್ತವೆ. ಅನೇಕ ಜರ್ನಲ್‍ಗಳು ಬೇರೆ ಬೇರೆ ರೀತಿಯಲ್ಲಿ ಹಣ ಪಡೆದು ಪ್ರಕಟಿಸುತ್ತಾರೆ, ಇವುಗಳನ್ನು ಪೇಯ್ಡ್ ಜರ್ನಲ್‍ಗಳು ಎನ್ನುತ್ತೇವೆ. ಈ ರೀತಿ ಹಣ ಪಡೆಯುವ ಜರ್ನಲ್‍ಗಳಲ್ಲಿ ಯಾವೆಲ್ಲಾ ರೀತಿಯಲ್ಲಿ ಪಡೆಯುತ್ತಾರೆನ್ನುವುದು ಗಮನಾರ್ಹ. ಕೆಲವು ಜರ್ನಲ್‍ಗಳು ಪುಟಕ್ಕಿಷ್ಟು ಎಂದು ದೇಣಿಗೆ ಸಂಗ್ರಹ ಮಾಡುತ್ತವೆ, ಕೆಲವು ಜರ್ನಲ್‍ಗಳು ಚಂದಾದಾರರಾಗಿ ಎಂದು ದೇಣಿಗೆ ಸಂಗ್ರಹಿಸುತ್ತಾರೆ, ಮತ್ತು ಕೆಲವು ಜರ್ನಲ್‍ಗಳು ನಮ್ಮ ಸಂಪಾದಕರ ತಂಡಕ್ಕೆ ಸೇರಿದರೆ ನಿಮ್ಮ ಲೇಖನಗಳನ್ನು ಪ್ರಕಟಿಸಿಕೊಳ್ಳಬಹುದೆಂದು ದೇಣಿಗೆ ಸಂಗ್ರಹಿಸುತ್ತಾರೆ. ಇವುಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್‍ಗಳಿರುತ್ತವೆ. ಇದೇ ರೀತಿ ಇನ್ನೊಂದು ರೀತಿಯ ಜರ್ನಲ್‍ಗಳಿವೆ ಅವುಗಳಿಗೆ ಯಾವುದೇ ದೇಣಿಗೆ ನೀಡುವ ಅವಶ್ಯಕತೆಯಿಲ್ಲ. ಅಲ್ಲಿ ಗುಣಮಟ್ಟ ಮಾತ್ರವೇ ಮುಖ್ಯ ಪಾತ್ರವಹಿಸುತ್ತದೆ. ಇದು ಬಹಳ ಕಠಿಣವಾದ ಹಾದಿ. ಆದರೆ, ಈ ರೀತಿಯ ಜರ್ನಲ್‍ಗಳಲ್ಲಿ ಲೇಖನಗಳನ್ನು ಪ್ರಕಟಿಸಿದರೆ ಗೌರವ ಹೆಚ್ಚು. 

ಈ ಗೌರವವೆನ್ನುವುದನ್ನು ಹೇಗೆ ಪರಿಗಣಿಸಲಾಗುತ್ತದೆ ಎನ್ನುವುದನ್ನೊಮ್ಮೆ ನೋಡೋಣ. ಪ್ರತಿಯೊಂದು  ಲೇಖನಗಳಿಗೂ ಇಂತಿಷ್ಟು ಅಂಕಗಳಿರುತ್ತವೆ, ಕೆಲವೊಂದು ಜರ್ನಲ್‍ಗಳಿಗೆ ಅದರದ್ದೇ ಆದ ಅಂಕಗಳು (ಇಂಪಾಕ್ಟ್ ಫ್ಯಾಕ್ಟರ್) ಇರುತ್ತವೆ. ಸಂಶೋಧನವಲಯದಲ್ಲಿ ಮುಂಬಡ್ತಿಪಡೆಯಲು ಇದು ಅವಶ್ಯಕ. ತಾವುಗಳು ಎಷ್ಟು ಪುಸ್ತಕಗಳನ್ನು ಬರೆದಿದ್ದೀರಿ, ಎಷ್ಟು ಅಂಕಣಗಳು, ಎಷ್ಟು ಕಮ್ಮಟಗಳಲ್ಲಿ ಭಾಗವಹಿಸಿದ್ದೀರೆನ್ನುವುದೆಲ್ಲವೂ ಮುಖ್ಯವಾಗುತ್ತದೆ. ಕೆಲವರು ತಮ್ಮದೇ ಐಡಿಯಾಗಳನ್ನು ಸಾಧಿಸಲು ಗುಂಪುಗಾರಿಕೆ ಮಾಡುತ್ತಾರೆ. ಅದು ಹೇಗೆ ನಡೆಯುತ್ತದೆಂದು ಹೇಳುತ್ತೇನೆ. ಉದಾಹರಣೆಗೆ ನಾನು ಕಮ್ಮಟವನ್ನು ಆಯೋಜಿಸಿದಾಗ ನಿಮ್ಮನ್ನು ನಿಮ್ಮ ಸ್ನೇಹಿತರನ್ನು ಕರೆಯುವುದು, ನೀವು ನಿಮ್ಮ ಸ್ನೇಹಿತರು ಆಯೋಜಿಸುವಾಗ ನನ್ನನ್ನು ನನ್ನ ಸ್ನೇಹಿತರನ್ನು ಕರೆಯುವುದು, ಹೊರಗಿನವರನ್ನು ದೂರವಿಡುವುದು. ನನ್ನ ಬೆನ್ನು ನೀವು ಕೆರೆಯಿರಿ ನಿಮ್ಮದನ್ನು ನಾನು. ಅದೇ ರೀತಿ ಲೇಖನಗಳನ್ನು ಪ್ರಕಟಿಸುವಾಗ ಲೇಖಕರು ಕೆಲವು ವಿಮರ್ಶಕರ ಹೆಸರನ್ನೂ ಸೂಚಿಸಬೇಕು, ಅದು ಅವರಿಗೆ ಬೇಕರುವವರನ್ನೇ ಸೂಚಿಸುತ್ತಾರೆ. ಈಗಾಗಲೇ ಹೇಳಿರುವಂತೆ, ಅಲ್ಲಿನ ಸಂಪಾದಕರಲ್ಲಿ ಇವರೋ ಇವರ ಸ್ನೇಹಿತರೋ ಇದ್ದೇ ಇರುತ್ತಾರೆ. ಇತ್ತೀಚಿನ ನನ್ನ ಅನುಭವವನ್ನು ಹೇಳುತ್ತೇನೆ. 

ಇತ್ತೀಚೆಗೆ ಪ್ರಸಿದ್ದ ಸಂಸ್ಥೆಯೊಂದರ ಕೆಲವು ಸಂಶೋಧಕರು ಒಂದು ಲೇಖನವನ್ನು ಪ್ರಕಟಿಸಿದ್ದರು. ಅದು ಹೇಗಿತ್ತೆಂದರೆ. ಅವರು ಒಂದು ನದಿಕೊಳ್ಳದ ಕೇವಲ ಒಂದಿಷ್ಟು ಭಾಗವನ್ನು ಮಾತ್ರ ತೆಗೆದುಕೊಂಡು ಅಧ್ಯಯನ ಮಾಡಿದ್ದರು. ಇದು ಅನೇಕರು ಮಾಡುತ್ತಿರುವ ರೀತಿ. ಶೀರ್ಷಿಕೆಗೂ ಅವರ ಅಧ್ಯಯನ ಕ್ಷೇತ್ರಕ್ಕೂ ಸಂಭಂಧವೇ ಇರುವುದಿಲ್ಲ. ಉದಾಹರಣೆಗೆ, ಹಾಸನ ಜಿಲ್ಲೆಯಲ್ಲಿ ಬಾನುಗೊಂದಿ ಎನ್ನುವ ಸಣ್ಣ ಹಳ್ಳಿಯ ಕುರಿತು ಅಧ್ಯಯನ ಮಾಡಿ, ಇಡೀ ಹಾಸನವನ್ನು ಅಧ್ಯಯನ ಮಾಡಿದ್ದೀನಿ, ಎಂದರೆ? ನೀವುಗಳು ಉಗಿಯುವುದಿಲ್ಲವೆ? ಅಲ್ಲಯ್ಯ ನೀನು ಕೇವಲ ಒಂದು ಹಳ್ಳಿಯ ಕುರಿತು ಅಧ್ಯಯನ ಮಾಡಿ ಇಡೀ ಜಿಲ್ಲೆಯಲ್ಲಿಯೇ ನಡೆಸಿದೆ ಎನ್ನುತ್ತಿಯಾ? ಎಂದು. ಇಂಥವರ ಮತ್ತೊಂದು ಮುಖವೆಂದರೆ, ಇಲ್ಲಿಯವರೆಗೂ ಯಾರೂ ಇತಂಹ ಅಧ್ಯಯನವನ್ನೇ ಮಾಡಿಲ್ಲವೆನ್ನುವಂತೆ ಬಿಂಬಿಸುವುದು. ಇದು ಸಂಶೋಧನೆಗಾಗಿ ಅನುದಾನ ಪಡೆಯುವುದು ಸುಲಭ, ಅನುದಾನ ನೀಡುವ ಸಂಸ್ಥೆಯವರು ಹೇಳಿಕೊಳ್ಳಬಹುದು ಇದು ನಾವೇ ಮಾಡಿಸಿದ್ದೆಂದು. ನಾವೇ ಈ ಅಧ್ಯಯನ ನಡೆಸಿದವರಲ್ಲಿ ಮೊದಲಿಗರೆಂದು ತೋರಿಸುವುದು. ಉತ್ತಮ ಸಂಶೋಧಕನಾದವನು ಇಲ್ಲಿಯ ತನಕ ಈ ವಿಷಯಕ್ಕೆ ಸಂಬಂಧಹಿಸಿದಂತೆ ಏನೆಲ್ಲಾ ಸಂಶೋಧನೆ ನಡೆದಿದೆ, ಏನೆಲ್ಲಾ ಕೊರತೆಗಳಿವೆ ಎನ್ನುವುದನ್ನು ಅರಿಯಬೇಕು. ಕೊರತೆಯಿರುವ ವಿಷಯದ ಕುರಿತು ಸಂಶೋಧನೆ ನಡೆಸಬೇಕು ಅಥವಾ ಸಂಶೋಧನೆ ಬೇರೆ ಆಯಾಮಗಳನ್ನು ತೋರಿಸಿಕೊಡಬೇಕು. ಆದರೆ, ಕೆಲವರು ಈ ಹಿಂದೆ ಅನೇಕರು ನಡೆಸಿರುವ ಸಂಶೋಧನೆಗಳ ಯಾವೊಂದನ್ನು ಇವರು ಉಲ್ಲೇಖಿಸುವುದೇ ಇಲ್ಲ. ವಾಸ್ತವವಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಅಂದಅರೆ ಹವಮಾನ ವೈಪರಿತ್ಯ ಮತ್ತು ನೀರಿನ ಒಳಹರಿವು ಹಾಗೂ ಅಂತರ್ಜಲದ ಏರುಪೇರಿಕೆ ಕುರಿತಂತೆ ಅನೇಕ ಅಧ್ಯಯನಗಳು ನಿಮಗೆ ಸಿಗುತ್ತವೆ. ಆದರೇ, ಇವರುಗಳು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ್ದರು. 

ಇಂಥಹ ಸಂಸ್ಥೆಗಳ ಮತ್ತು ಈ ವರ್ಗದ ಸಂಶೋಧಕರಲ್ಲಿ ಮತ್ತೊಂದು ಅಂಶವಿದೆ. ದತ್ತಾಂಶಗಳ ಕೊರೆತಯಿದೆ,  ಮಾಹಿತಿಯೇ ಸಿಗುವುದಿಲ್ಲ, ಅಂದರೆ ಇಲಾಖೆಗಳಲ್ಲಿ ಒಳಹರಿವು, ಹೊರಹರಿವು, ಅಂತರ್ಜಲದ ಮಟ್ಟ ಕುರಿತಂತೆ ದತ್ತಾಂಶಗಳೇ ಇಲ್ಲ ಇದ್ದರೂ ಅವುಗಳ ಮೇಲೆ ಭರವಸೆ ಇಡುವಂತಿಲ್ಲ ಎನ್ನವುದು. ಇದಕ್ಕೆ ಮೂಲಕಾರಣ ಈ ಸಂಸ್ಥೆಗಳು ಮಾಹಿತಿ ಸಂಗ್ರಹಣೆಗಾಗಿ ಲಕ್ಷಾಂತರೆ ಅನುದಾನವನ್ನು ಪಡೆಯುವು ಇವರ ಮೂಲ ಉದ್ಧೇಶ. ನನ್ನ ಪ್ರಶ್ನೆ ಸರ್ಕಾರಿ ಇಲಾಖೆಗಳಲ್ಲಿಯೇ ಎಲ್ಲಾ ರೀತಿಯ ಮಾಹಿತಿಗಳು ದೊರೆಯುವಾಗ, ಅಥವಾ ನಿಮಗೆ ಬೇಕಿರುವ ಮಾಹಿತಿಗಳು ದೊರೆಯುವಾಗ ನೀವು ಲಕ್ಷಾಂತರ ರೂಗಳನ್ನು ಅದಕ್ಕಾಗಿ ವ್ಯಯಿಸುವುದೇಕೆ? ಈ ಯೋಜನೆಗಳ ರೂಪುರೇಷೆಗಳನ್ನೊಮ್ಮೆ ಗಮನಿಸೋಣ, ಹೆಚ್ಚೆಂದರೆ ಮೂರರಿಂದ ಐದು ವರ್ಷದ ಯೋಜನೆಗಳಾಗಿರುತ್ತವೆ. ಐದು ವರ್ಷದ ಮಾಹಿತಿ ಅದರಲ್ಲಿಯೂ ಹವಮಾನ ವೈಪರೀತ್ಯಕ್ಕೆ ಸಂಭಂದಿಸಿದಂತೆ ಯಾವ ತಿರ್ಮಾನಕ್ಕೆ ಬರಲಾಗುತ್ತದೆ ಹೇಳಿ. ವೈಜ್ಞಾನಿಕವಾಗಿ ನೋಡಿದರೆ ಇದೊಂದು ಮೋಸ. 

ಇವರು ನಡೆಸಿದ ಸಂಶೋಧನೆಯ ಲೇಖನಗಳನ್ನು ಲಕ್ಷಾಂತರ ರೂಪಾಯಿಗಳನ್ನು ನೀಡಿ ಪ್ರಕಟಿಸುವುದು. ಇದರ ಅವಶ್ಯಕತೆಯಾದರೂ ಏನಿದೆ? ಏಕೆಂದರೆ ಅಷ್ಟೆಲ್ಲ ದೇಣಿಗೆ ನೀಡಿದ ಮೇಲೆ ಅವರುಗಳು ಬೇರೆಯವರು ಪ್ರಶ್ನಿಸಲು ಬಿಡುವುದಿಲ್ಲ. ನೀವು ಪ್ರಶ್ನಿಸಬೇಕೆಂದರೆ ಕನಿಷ್ಠ ಇಷ್ಟು ಹಣವೆಂದು ಕೊಡಬೇಕು. ದುಡ್ಡು ಕೊಟ್ಟು ಏನು ಪ್ರಶ್ನಿಸುವುದು ಬೇಡ ಬಿಡಿ ಎನ್ನುತ್ತಾರೆ. ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ಮಾಫಿಯಾವಾಗಿದೆ, ಸಂಶೋಧನೆ ಮತ್ತು ಪ್ರಕಟನೆಗಳು. 


ಉತ್ತಮ ಸಂಶೋಧಕನ ನಡುವಳಿಕೆಗಳು ಹೇಗಿರಬೇಕು?: ಮೊದಲಿಗೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನಾ ಆ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೂ ನಡೆದಿರುವ ಎಲ್ಲಾ ಸಂಶೋಧನೆಯನ್ನು, ಲೇಖನಗಳನ್ನು, ಈಗಾಗಲೇ ಲಭ್ಯವಿರುವ ದತ್ತಾಂಶಗಳನ್ನು ಕೂಡಿಹಾಕಬೇಕು. ಅದರಲ್ಲಿರುವ ನ್ಯೂನ್ಯತೆ/ಕೊರತೆಗಳನ್ನು ಪಟ್ಟಿಮಾಡಬೇಕು. ನಂತರ ಯೋಜನೆಯ ಉದ್ದೇಶಗಳನ್ನು ಸಿದ್ದಪಡಿಸಬೇಕು. ಈ ಕ್ಷೇತ್ರದಲ್ಲಿ, ಆ ವಿಷಯದಲ್ಲಿ ಯಾರೆಲ್ಲಾ ಕೆಲಸ ಮಾಡಿರುತ್ತಾರೆ ಅವರೆಲ್ಲರನ್ನೂ ಗಣನೆಗೆ ತೆಗೆದುಕೊಂಡು ಚರ್ಚಿಸಬೇಕು. ಪ್ರಮುಖವಾಗಿ ಸರ್ಕಾರಿ ಇಲಾಖೆಗಳಲ್ಲಿರುವ ದತ್ತಾಂಶವನ್ನು ಪಡೆಯಬೇಕು. ಏಕೆಂದರೆ, ಸರ್ಕಾರದಲ್ಲಿ ಅನೇಕ  ವರ್ಷಗಳಿಂದ ಕೂಡಿಟ್ಟಿರುವ ಮಾಹಿತಿಗಳು ಸಿಗುತ್ತವೆ ಮತ್ತು ಅದಕ್ಕಾಗಿಯೇ ಹಣವಿಯೋಗವಾಗಿರುತ್ತದೆ. ಮತ್ತೊಮ್ಮೆ ಹಣ ವ್ಯಯಿಸುವ ಅಗತ್ಯತೆಯಿರುವುದಿಲ್ಲ. ಅದರ ಜೊತೆಗೆ ಬೇರೆ ಬೇರೆ ಕ್ಷೆತ್ರಗಳಲ್ಲಿ ಆಗಿರುವ ಸಂಬಂಧಪಟ್ಟ ಸಂಶೋಧನೆಯ ಮುಖ್ಯ ಅಂಶಗಳನ್ನು ಗುರುತು ಹಾಕಿಕೊಳ್ಳಬೇಕು. ಎರಡನೆಯದಾಗಿ, ಲೇಖನಗಳನ್ನು ಪ್ರಕಟಿಸಿಕೊಳ್ಳುವಾಗ ಹಣ/ದೇಣಿಗೆ ನೀಡಿ ಪ್ರಕಟಿಸುವುದನ್ನು ನಿಲ್ಲಿಸಬೇಕು ಮತ್ತು ಉತ್ತಮ ಗುಣಮಟ್ಟದ ಜರ್ನಲ್‍ಗಳಲ್ಲಿ ಪ್ರಕಟಿಸಿಕೊಳ್ಳಬೇಕು. ಏಕೆಂದರೆ, ಅಂತಹ ಜರ್ನಲ್‍ಗಳಲ್ಲಿ ವಿಮರ್ಶೆಯಾಗಿರುತ್ತದೆ ಅದು ಸಂಶೋಧಕನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ನಿಂದಿಸುವವರು, ವಿಮರ್ಶಕರಿಲ್ಲದೇ ಇದ್ದರೇ ನಾವು ಮಾಡಿದ್ದೇ ಸರಿಯೆಂದು ಅಹಂಮ್ಮಿನಲ್ಲಿ ಸಾಗುತ್ತದೆ. ಮೂರನೆಯದಾಗಿ, ಒಬ್ಬ ಸಂಶೋಧಕ ಮುಕ್ತವಾದ ವಿಮರ್ಶೆಗೆ ಚರ್ಚೆಗೆ ಸಿದ್ದನಿರಬೇಕು. ವಿಮರ್ಶಿಸುವವರನ್ನೆಲ್ಲ ದೂರವಿಟ್ಟು ಹೊಗಳುವವರ ಜೊತೆಗೆ ಸಾಗಿದರೆ ಅವನ ಬೌದ್ಧಿಕ ಗುಣಮಟ್ಟ ಹಳ್ಳಹಿಡಿಯುತ್ತದೆ. ನಾಲ್ಕನೆಯದಾಗಿ ನಮ್ಮೆಲ್ಲ ಸಂಶೋಧನೆಯ ಫಲಿತಾಂಶಗಳನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಸಾಧ್ಯವಾದಷ್ಟೂ ಸ್ಥಳೀಯ ಭಾಷೆಯಲ್ಲಿ ಮುಕ್ತವಾಗಿ ಬರೆಯಬೇಕು.


ಕೊನೆಹನಿ: ಸಂಶೋಧನೆ ಯಾವುದೇ ಕ್ಷೇತ್ರದಲ್ಲಿಯೇ ಇರಲಿ ಅದು ಜನ ಸಾಮಾನ್ಯರಿಗೆ ಅನುಕೂಲವಾಗುವಂತಿರಬೇಕು. ಸಂಶೋಧಕನಿಗೆ ಜವಬ್ದಾರಿ ಮತ್ತು ನೈತಿಕತೆಯಿರಬೇಕು. ಕೇವಲ ಅನುದಾನ ಪಡೆಯುವುದಕ್ಕಾಗಿ, ಹಣಕ್ಕಾಗಿ, ಹೆಸರುಗಳಿಕೆಗಾಗಿ, ಮುಂಬಡ್ತಿಗಾಗಿ ಹಾದಿತಪ್ಪಿಸುವ ಸಂಶೋಧನೆಯನ್ನು ಎಂದಿಗೂ ಮಾಡಬಾರದು. ಅದೊಂದು ಬೌದ್ದಿಕ ಸೂಲೆಗಾರಿಕೆಯಾಗುತ್ತದೆ. ಇವೆಲ್ಲವೂ ಜನಸಾಮಾನ್ಯರಿಗೆ ಮುಕ್ತವಾಗಿ ಸಿಗುವಂತೆ ಮತ್ತು ತಿಳಿಯುವಂತೆ  ಮಾಧ್ಯಮ ಮಿತ್ರರು ಸಹಕರಿಸಬೇಕಾಗಿ ವಿನಂತಿ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...