29 ಮೇ 2018

ಪರಿಸರ ಸಂರಕ್ಷಣೆ: ಅವೈಜ್ಞಾನಿಕ ಪರಿಸರವಾದಿ ಮತ್ತು ತೋರಿಕೆಯ ಪರಿಸರ ಪ್ರೇಮಿಗಳಿಂದ ನರಳುತ್ತಿರುವ ಪರಿಸರ ವ್ಯವಸ್ಥೆ!!!



ನಮಸ್ಕಾರ ಸ್ನೇಹಿತರೇ,
ಶೀರ್ಷಿಕೆಯನ್ನು ಗಮನಿಸಿದಾಗಲೇ ತಮಗೆ ನನ್ನ ಲೇಖನದ ತಿರುಳು ತಿಳಿದಿರುತ್ತದೆ. ನಾನು ಇದನ್ನು ಬಹಳ ಆಕ್ರೋಶ ಮತ್ತು ಕೋಪದಿಂದಲೇ ಬರೆಯುತ್ತಿದ್ದೇನೆ. ಇತ್ತಿಚಿನ ದಿನಗಳಲ್ಲಿ ಎಲ್ಲವೂ ಟ್ರೆಂಡ್ ಆಗುತ್ತದೆ. ರಾತ್ರಾರಾತ್ರಿ ಹೀರೋಗಳಾಗುತ್ತಾರೆ, ಜನಪ್ರಿಯರಾಗುತ್ತಾರೆ, ಜನಪ್ರಸಿದ್ದೀಯ ಉತ್ತುಂಗಕ್ಕೂ ಹೋಗುತ್ತಾರೆ. ಇದು ಎಲ್ಲಾ ಕ್ಷೇತ್ರದಲ್ಲಿಯೂ ಅದರಲ್ಲಿ ಭಾರತದಲ್ಲಿ ಆಗುತ್ತಿರುವ ಮಾರಕ ಪ್ರಕ್ರಿಯೆ. ಮಾರಕ ಎನ್ನುವ ಪದಬಳಕೆಯ ಉದ್ದೇಶವಿದೆ. ಯಾವುದು ದಿಡೀರ್ ಪ್ರಸಿದ್ದಿಯಾಗಬಾರದು ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಗಮನಿಸಿನೋಡಿ, ಕೆಲವರು ಇದ್ದಕ್ಕಿದ್ದಂತೆ ಪ್ರಸಿದ್ದಿಯಾದರು, ಸಿನೆಮಾ, ಕಿರುತೆರೆ, ರಿಯಾಲಿಟಿ ಶೋ, ಸಾರ್ವಜನಿಕ ಕ್ಷೇತ್ರ, ಕ್ರಿಕೇಟ್, ರಾಜಕೀಯ, ಪರಿಸರ ಸಂರಕ್ಷಣೆ, ರೈತ ಹೋರಾಟ, ಧರ್ಮ, ಜಾತಿ, ಭಾಷೆ, ರಾಜ್ಯ, ದೇಶ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಅಷ್ಟೆ. ಅವರೆಲ್ಲರ ಮುಖ ನಿಧಾನವಾಗಿ ಬದಲಾಗುತ್ತಾ ಹೋಯಿತು, ಕೆಲವರು ತೆರೆಮರೆಗೆ ತೆರಳಿದರು, ಆದರೇ ಅವರು ಮಾಡಿದ ಹಾನಿ? ಅದನ್ನು ತುಂಬಲು ಸಾಕಷ್ಟು ವರ್ಷ ಬೇಕಾಗುತ್ತದೆ ಮತ್ತು ಇವರಿಂದ ಪ್ರೇರೇಪಿತರಾಗಿರುವ ಎರಡನೆಯ ದರ್ಜೆಯ ನಾಯಕರು ಇನ್ನುಷ್ಟು ಹಾಳು ಮಾಡುತ್ತಾರೆ. 


ಸದ್ಯಕ್ಕೆ ಜೂನ್ ಐದು ಹತ್ತಿರವಿರುವುದರಿಂದ ಪರಿಸರ ಸಂರಕ್ಷಣೆಯಲ್ಲಿ ಈ ಮಹಾನುಭಾವರು ಮಾಡಿರುವ ಯಡವಟ್ಟುಗಳನ್ನೊಮ್ಮೆ ನೋಡೋಣ. ಅದಕ್ಕೂ ಮುಂಚೆ ಪರಿಸರ ಮತ್ತು ಪರಿಸರ ವ್ಯವಸ್ಥೆ ಕುರಿತು ಕೆಲವೊಂದು ಸರಳ ವಿಚಾರಗಳನ್ನು ತಿಳಿದುಕೊಳ್ಳೋಣ. ಪರಿಸರವೆಂದರೇನು? ಪರಿಸರ ವ್ಯವಸ್ಥೆಯೆಂದರೇನು? ನಮ್ಮ ಸುತ್ತು ಮುತ್ತಲಿರುವ ಜೀವವಿರುವ ಮತ್ತು ಇಲ್ಲದೇಯಿರುವ ಎಲ್ಲವನ್ನೂ ಸೇರಿಸಿ ಪರಿಸಅರವೆನ್ನುತ್ತೇವೆ. ಅಂದರೇ, ಮುಗಿಯಿತು ಇಲ್ಲಿಗೆ ನಿಮಗೆ ಇಷ್ಟವಿರಲಿ ಇಲ್ಲದೇಯಿರಲಿ, ಸುತ್ತ ಮುತ್ತವಿರುವ ಎಲ್ಲವೂ ಪರಿಸರದ ಅಂಗ. ಅದರಂತೆಯೇ ಪರಿಸರ ವ್ಯವಸ್ಥೆಯೆಂದರೇನು? ಅಲ್ಲಿ ಏನು ನಡೆಯುತ್ತದೆ? ಪರಿಸರದಲ್ಲಿ ಒಂದು ವ್ಯವಸ್ಥೆಯಿದೆ, ಅದರಲ್ಲಿ ಜೀವವಿರುವ ಜೀವಿಗಳ ನಡುವೆ, ಮತ್ತು ಜೀವವಿಲ್ಲದೇಯಿರುವ ವಸ್ತುಗಳ ನಡೆಯುವ ಚಟುವಟಿಕೆಗಳೆಲ್ಲವನ್ನೂ ಸೇರಿಸಿಕೊಂಡು ಪರಿಸರ ವ್ಯವಸ್ಥೆಯೆನ್ನಲಾಗಿದೆ. ಇದರಲ್ಲಿಯೂ ಅಷ್ಟೇ ಎಲ್ಲವೂ ಸೇರುತ್ತವೇ, ಸೇರಲೇಬೇಕು. ಇನ್ನೂ ನೇರವಾಗಿ ನಿಮಗೆ ಹೇಳಬೇಕೆಂದರೆ ಈ ಸೃಷ್ಟಿಯಲ್ಲಿರುವ ಪ್ರತಿಯೊಂದು ಬೇಕೆ ಬೇಕು ಮತ್ತು ಯಾವುದನ್ನೂ ನಿರ್ಲಕ್ಷಿಸುವಂತಿಲ್ಲ, ಜೀವವಿರಲಿ ಇಲ್ಲದೇಯಿರಲಿ ಎಲ್ಲದರ ಪಾತ್ರವೂ ಇದೆ. ಇದನ್ನು ನಾವು ಪಾಲಿಸುತ್ತಿದ್ದೇವಾ? ನಾವೇನು ಮಾಡುತ್ತಿದ್ದೇವೆನ್ನುವುದನ್ನು ಅವಲೋಕಿಸೋಣ.


ಇತ್ತಿಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಅಂತರಾಷ್ಟ್ರೀಯ ದಿನಗಳಿವೆ. ಅವುಗಳು ದಿನ ದಿನಕ್ಕೂ ಹೆಚ್ಚೆಚ್ಚು ಪ್ರಸಿದ್ದಿಯಾಗುತ್ತಿವೆ. ಅದರಲ್ಲಿ ಒಂದು ವಿಶ್ವ ಪರಿಸರ ದಿನ. ವಿಶ್ವ ಪರಿಸರ ದಿನದ ಉದ್ದೇಶವೊಂದೆ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಜನರಿಗೆ ತಲುಪಿಸುವುದು, ಅದಕ್ಕಾಗಿ ವರ್ಷಕ್ಕೊಂದು ವಿಷಯವನ್ನಿಟ್ಟುಕೊಂಡು ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಆದರೇ ಭಾರತದಲ್ಲಿ ಆಗುತ್ತಿರುವ ಬೆಳವಣಿಗೆಗಳು ಅಚ್ಚರಿ ಮತ್ತು ಆತಂಕವನ್ನುಂಟು ಮಾಡುತ್ತಿವೆ. ನೀವು ಹಾಗೆಯೇ ಗಮನಿಸಿ ಪರಿಸರವೆಂದರೆ ಬಹುತೇಕರ ಬಾಯಲ್ಲಿ ಬರುವುದು ಗಿಡ ನೆಡುವುದು, ಮರ ಬೆಳೆಸುವುದು. ಇದರಿಂದ ಆಚೆಗೆ ಮಾತನಾಡುವವರು ಬಹಳ ಕಡಿಮೆ. ಅರಣ್ಯ ಇಲಾಖೆ ಸೇರಿದಂತೆ ಅನೇಕರು ಕೋಟಿ ಕೋಟಿ ಗಿಡಗಳನ್ನು ನೆಡುತ್ತಿದ್ದೇವೆ ಎನ್ನುತ್ತಿದ್ದಾರೆ, ಇವುಗಳನ್ನು ಅನೇಕ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ ಮತ್ತು ಅವರು ನೆಟ್ಟಿದ್ದಾರೆ. ಪ್ರತಿ ವರ್ಷಕ್ಕೂ ಕೋಟಿ ಗಿಡಗಳನ್ನು ನೆಟ್ಟಿದ್ದಾದರೇ ನಮ್ಮ ರಾಜ್ಯ ಸಂಪೂರ್ಣ ಕಾಡಾಗಬೇಕಿತ್ತು ಅಲ್ವಾ? ನೆಟ್ಟ ಗಿಡಗಳೆಲ್ಲಿ? ಪರಿಸರ ದಿನದಂದು ಗಿಡಗಳನ್ನು ನೆಟ್ಟು ಆ ಕಡೆಗೆ ತಿರುಗಿಯೂ ನೋಡದ ಅದೆಷ್ಟೋ ಪರಿಸರವಾದಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಒಂದೊಂದು ಗಿಡವನ್ನು ಅರಣ್ಯ ಇಲಾಖೆಯ ನರ್ಸರಿಯಲ್ಲಿ ಬೆಳೆಸಲು ಕನಿಷ್ಠ ಒಂದು ವರ್ಷ ಕಷ್ಟಪಟ್ಟಿರುತ್ತಾರೆ, ಆ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ಮಾರಲಾಗುತ್ತದೆ. ಖಾಸಗಿ ನರ್ಸರಿಯಲ್ಲಿ 50-60 ರೂಪಾಯಿಗೆ ಮಾರುವ ಗಿಡಗಳನ್ನು ಇಲಾಖೆಯು ಕೇವಲ 5-10 ರೂಪಾಯಿಗಳಿಗೆ, ಕೆಲವೊಮ್ಮೆ ಉಚಿತವಾಗಿಯೇ ನೀಡುತ್ತಿದೆ. ಸಸಿ ಬೆಳೆಸಲು ಹಾಕಿದ ವೆಚ್ಚ ಯಾರ ಹಣ?


ಮೇಲಿನ ಸಾಲುಗಳ ಅರ್ಥವಿಷ್ಟೆ, ಗಿಡ ನೆಡುವುದು ಮುಖ್ಯವಲ್ಲ ಅದರ ಬಗ್ಗೆ ಎಚ್ಚರಿಕೆ ವಹಿಸಿ ಬೆಳೆಸುವುದು ಮುಖ್ಯ. ಪ್ರತಿವರ್ಷ ತೋರಿಕೆಯ ಪರಿಸರಪ್ರೇಮವನ್ನು ನಿಲ್ಲಿಸಬೇಕು. ಅದಲ್ಲದೆ ಪರಿಸರವೆಂದರೇ ಕೇವಲ ಮರಗಳು ಮಾತ್ರವಲ್ಲ ಎನ್ನವುದನ್ನು ಅರಿಯಬೇಕು. ಇದರಲ್ಲಿಯೇ ಇನ್ನೊಂದನ್ನು ಗಮನಿಸೋಣ, ವೈಜ್ಞಾನಿಕವಾಗಿ. ಒಂದು ಕೋಟಿ ಗಿಡಗಳನ್ನು ನೆಡುತ್ತೀರೆಂದೇ ಪರಿಗಣಿಸೋಣ, ನೀವು ಎಲ್ಲಿ ನೆಡುತ್ತಿದ್ದೀರಿ? ಅಷ್ಟು ಜಾಗವೆಲ್ಲಿದೆ? ಜಾಗ ಸಿಕ್ಕಿತ್ತೆನ್ನೋಣ, ಅದಕ್ಕೆ ನೀರೆಲ್ಲಿಂದ? ಕುಡಿಯುವುದಕ್ಕೆ ನೀರಿಲ್ಲವೆಂದು ಪರದಾಡುತ್ತಿರುವಾಗ ಮರ ಬೆಳೆಸಲು ನೀರನ್ನು ಎಲ್ಲಿಂದ ತರುತ್ತೀರಿ? ನೀವು ನೆಡುತ್ತಿರುವ ಸಸಿಗಳಾವು? ಯಾವ ಜಾತಿಯವು? ಯಾವುದು ನರ್ಸರಿಯಲ್ಲಿ ಸಿಗುತ್ತದೆಯೋ ಅದನ್ನು ನೀವು ತಂದು ನೆಡುತ್ತಿರಿ, ಅದು ಆ ವಾತಾವರಣಕ್ಕೆ ಹೊಂದುತ್ತದೆಯೇ? ಗೊತ್ತಿಲ್ಲ. 


ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹುಚ್ಚಾಟದ ಅತಿರೇಕದಲ್ಲಿರುವ ಎರಡು ವಿಷಯಗಳು. ಮೊದಲನೆಯದಾಗಿ ಕೆಲವರು ಸಂದೇಶಗಳನ್ನು ಕಳುಹಿಸುತ್ತಾರೆ, ನೀವು ತಿನ್ನುವ ಹಣ್ಣಿನ ಬೀಜಗಳನ್ನು ಎಸೆಯಬೇಡಿ, ಮಳೆಗಾಲದಲ್ಲಿ ನೀವು ಹೊರಗೆ ಹೋದಾಗ ಎಸೆಯಿರಿ, ಅವುಗಳು ಮರಗಳಾಗುತ್ತವೆ, ಎಂಥಹ ಮೂರ್ಖತನದ ಪರಮಾವಧಿ? ಯಾವ ಬೀಜ ಎಲ್ಲಿ ಮೊಳಕೆಯಾಗುತ್ತದೆ? ಯಾವ ಜಾಗದಲ್ಲಿ ಬೆಳೆಯಬೇಕು? ಎನ್ನುವ ಕನಿಷ್ಠ ಜ್ಞಾನವೂ ಇಲ್ಲವೆ? ಎರಡನೆಯ ವಿಷಯ, ಸೀಡ್‍ಬಾಲ್. ಈ ಪದವನ್ನು ಕೇಳಿದರೆ ನನಗೆ ಮೈಯೆಲ್ಲಾ ಕುದಿಯುತ್ತದೆ. ಏನಿದು ಸೀಡ್‍ಬಾಲ್? ಎಂದು ತಿಳಿಯೋಣ. ಯಾವುದೋ ಜಾತಿಯ ಮರಗಳ ಬೀಜಗಳನ್ನು ಸಂಗ್ರಹಿಸಿ, ಅದಕ್ಕೆ ಮಣ್ಣು/ಗೊಬ್ಬರದ ಸಹಾಯದಿಂದ ಉಂಡೆಮಾಡಿಕೊಳ್ಳುವುದು, ಮುಂಗಾರು ಶುರುವಾದಾಗ ಖಾಲಿ ಜಾಗಕ್ಕೆ ತೆರಳಿ ಎಸೆಯುವುದು. ಎಸೆದಾಗ ಅವುಗಳೆಲ್ಲವು ಬೆಳೆದು ಮರವಾಗುವುದೆಂಬುದು ಇವರ ನಂಬಿಕೆ. ಇದನ್ನು ವೈಜ್ಞಾನಿಕವಾಗಿ ನೋಡೋಣ. ಮೊದಲನೆಯದಾಗಿ ಯಾವ ಜಾತಿಯ ಬೀಜಗಳಿವು? ಯಾವುದೋ ಜಾತಿಯವು. ಇವುಗಳನ್ನು ಖಾಲಿ ಜಾಗದಲ್ಲಿ ಎಸೆಯುತ್ತಾರೆ. ಈ ಖಾಲಿ ಜಾಗ ಇದಕ್ಕೂ ಮುಂಚೆ ಏನಾಗಿತ್ತು? ಪ್ರಕೃತಿಯಲ್ಲಿ ಕೆಲವು ಜಾಗಗಳು ಬರಡಾಗಿಯೇ ಇರಬೇಕು. ಬರಡು ಪ್ರದೇಶವನ್ನು ಹಸಿರು ಪ್ರದೇಶವಾಗಿಸುತ್ತೇವೆಂದರೆ ಏನರ್ಥ? ಮಲೆನಾಡನ್ನು ಬಯಲು ಸೀಮೆ ಮಾಡಿದರೆ ಎಷ್ಟು ಅಪಾಯವೋ ಅಷ್ಟೆ ಅಪಾಯ, ಬರಡು ಪ್ರದೇಶವನ್ನು ಹಸಿರು ಪ್ರದೇಶವನ್ನಾಗಿಸುವುದು. ಮರ ಬೆಳೆಸುತ್ತೇನೆಂಬ ಹುಂಬತನದಿಂದ ಎಲ್ಲೆಂದರಲ್ಲಿ ಸಿಕ್ಕಿ ಸಿಕ್ಕಿದ ಜಾತಿಯ ಮರಗಳನ್ನು ಹಾಕಿದರೆ ಅಲ್ಲಿನ ಪರಿಸರದ ಮೇಲೆ ಎಂಥಹ ವ್ಯತಿರಿಕ್ತ ಪರಿಣಾಮ ಬೀರುವುದು ಆಲೋಚಿಸಿ. 


ನೀವು ಯಾವುದಾದರೂ ನಿಸರ್ಗದತ್ತ ಕಾಡನ್ನು ನೋಡಿ, ಅದನ್ನು ಗಮನಿಸಿ. ನೀವುಗಳು ಚಾರಣಿಗರಾದರೇ ಅದರ ಅನುಭವವಿರುತ್ತದೆ. ಇಲ್ಲದೇ ಇದ್ದರೂ ನಾನು ಅದನ್ನು ವಿವರಿಸುತ್ತೇನೆ. ಕಾಡಿನಲ್ಲಿ ಒಂದೇ ರೀತಿಯ ಮರಗಳಿರುವುದಿಲ್ಲ, ಅದಿದ್ದರೆ ಅದನ್ನು ಕಾಡು ಎನ್ನುವುದಿಲ್ಲ, ನೆಡುತೋಪು ಎನ್ನಬೇಕು. ಪ್ರತಿ ಕಾಡಿನಲ್ಲಿಯೂ ಸಣ್ಣ ಪುಟ್ಟ ಗಿಡಗಳು, ಪೊದೆಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಮರಗಳು ಹೆಚ್ಚಾದರೆ ನೆರಳು ಹೆಚ್ಚಾದರೆ ಅದೆಷ್ಟೋ ಜಾತಿಯ ಗಿಡಗಳು ಬರುವುದಿಲ್ಲ.  ಅದರಂತೆಯೇ ಪ್ರತಿಯೊಂದು ಕಾಡಿನ ತುತ್ತ ತುದಿಯನ್ನು ನೋಡಿ, ಅಲ್ಲೆಲ್ಲಾ ಹುಲ್ಲುಗಾವಲಿರುತ್ತದೆ. ಕೆಲವು ಪ್ರಾಣಿಗಳಿಗೆ ಹುಲ್ಲು ಬೇಕು, ಕೆಲವಕ್ಕೆ ಹಣ್ಣು ಬೇಕು, ಕೆಲವಕ್ಕೆ ಆ ಪ್ರಾಣಿಗಳೇ ಬೇಕು. ಇದು ಪ್ರಕೃತಿಯ ನಿಯಮ. ವೈವಿಧ್ಯತೆಯಿಂದರಬೇಕು. ಅಂತಹ ಪರಿಸರವನ್ನು ನೀವುಗಳು ಒಂದೇ ಜಾತಿಯ ಬೀಜಗಳನ್ನು ಎಸೆದು ಹಾಳು ಮಾಡುತ್ತಿರುವುದು ನಿಮಗೆ ತಿಳಿಯುತ್ತಿಲ್ಲವೇ? ಆದರೇ, ನಾನು ಗಮನಿಸಿದಂತೆ, ಕೆಲವು ಭಾಗದಲ್ಲಿ ಅದರಲ್ಲಿಯೂ ಸಿರಸಿಯ ನಮ್ಮ ಸ್ನೇಹಿತರಾದ ಉಮಾಪತಿ ಭಟ್ಟರು, ಅಲ್ಲಿನ ಕಾಡಿನಲ್ಲಿ ನಶಿಸುತ್ತಿರುವ ಪ್ರಭೇಧಗಳ ಬೀಜಗಳನ್ನು ಆಯ್ದು ತಂದು ಸೀಡ್‍ಬಾಲ್ ಮಾಡಿ ನಿಯಮಿತವಾಗಿ ಅದೇ ಕಾಡಿಗೆ ಎಸೆಯುತ್ತಿದ್ದಾರೆ. ಇದನ್ನು ನಾನು ಸಂಪೂರ್ಣವಾಗಿ ಬೆಂಬಲಿಸದೇ ಇದ್ದರೂ ಅವರಲ್ಲಿ ಸ್ವಲ್ಪವಾದರೂ ವೈಜ್ಞಾನಿಕ ಪ್ರಜ್ಞೆಯಿರುವುದು ನೆಮ್ಮದಿಯ ವಿಷಯ. ಆದರೇ ಬಹುತೇಕರು ಮಾಡುತ್ತಿರುವುದು ಮಾತ್ರ ಮಾರಕ.


ಇದೇ ರೀತಿಯ ಇನ್ನೊಂದಿಷ್ಟು ಉದಾಹರಣೆಗಳನ್ನು ಮಾತ್ರ ನೀಡುತ್ತೇನೆ. ಅದರ ಕುರಿತು ವಿವರವಾಗಿ ಮತ್ತೊಮ್ಮೆ ಚರ್ಚಿಸೋಣ. ನೀವು ಗಮನಿಸಿರುವ ಹಾಗೆ ಎಲ್ಲೆಂದರಲ್ಲಿ ಮಳೆ ನೀರು ಕೊಯ್ಲು ಮಾಡಿಸುವುದು. ಎಲ್ಲಿ ಮಾಡಿಸುವುದು ಸೂಕ್ತ ಎನ್ನುವ ಪರಿಜ್ಞಾನವೇ ಇಲ್ಲದೆ ಮಾಡಿಸುವುದು, ಅದರಂತೆಯೇ ಚೆಕ್‍ಡ್ಯಾಮ್‍ಗಳು, ಕೃಷಿ ಹೊಂಡ ಇವುಗಳು ಯಾವ ವಾತಾವರಣಕ್ಕೆ ಬೇಕು, ಎಲ್ಲಿಗೆ ಬೇಡ ಎನ್ನುವುದನ್ನೆ ಆಲೋಚಿಸದೆ ನಿರ್ಮಿಸುವುದು. 

ಕೊನೆಹನಿ: ಇದಕ್ಕೆಲ್ಲಾ ಮೂಲ ಕಾರಣ ಸೋಗಿನ ಪರಿಸರ ಪ್ರೇಮ ಮತ್ತು ಪ್ರಚಾರಕ್ಕಾಗಿ ಮಾಡುವ ಪರಿಸರ ಸಂರಕ್ಷಣೆ. ವೈಜ್ಞಾನಿಕವಾಗಿ ಪರಿಸರವನ್ನು ಕಾಣಲಾಗದೆ ಇರುವುದು. ಭಾರತದ ಮಟ್ಟಿಗೆ ಪರಿಸರ ಸಂರಕ್ಷಣೆ ನಮ್ಮ ಜೀವನದ ಅಂಗವಾಗಿದ್ದ ಸಂಪ್ರದಾಯ ನಮ್ಮದು. ಇದನ್ನು ಮೂರ್ನಾಲ್ಕು ಸಾಲುಗಳಲ್ಲಿ ಹೇಳುತ್ತೇನೆ. ಮೂವತ್ತು ವರ್ಷ ಹಿಂದಕ್ಕೆ ಹೋಗಿ, ಮನೆಯಲ್ಲಿ ದನ ಕರುಗಳಿದ್ದವು, ಯಾವುದೇ ಆಹಾರ ಉಳಿದರು ದನಕರುಗಳಿಗೆ ಕಲಗಚ್ಚಾಗುತ್ತಿತ್ತು, ಸೀಮೆ ಗೊಬ್ಬರದ ಮಾತಿಲ್ಲ, ಸಗಣಿ ಗೊಬ್ಬರ, ಔಷಧಿ ಎನ್ನುವಂತೆಯೆ ಇರಲಿಲ್ಲ, ಮನೆಯ ಹಿಂದೆ ನುಗ್ಗೆ ಮರ, ಮುಂದಕ್ಕೆ ತೊಂಡೆ ಚಪ್ಪರ, ಪಾತ್ರೆ ತೊಳೆದ ನೀರು ಬಾಳೆ ಮರ, ನಮ್ಮ ತರಕಾರಿ ನಮ್ಮಲ್ಲಿಯೇ ಬೆಳೆಯುತ್ತಿದ್ದವು. ಸ್ನಾನ ಮಾಡಿದ ನೀರು ಕೂಡ ಯಾವುದೋ ಒಂದು ಗಿಡಕ್ಕೆ ಹೋಗುತ್ತಿತ್ತು, ಸೋಪು ಕಡಿಮೆಯಿತ್ತು ಸೀಗೆಕಾಯಿ ಹೆಚ್ಚಿತ್ತು, ಬಟ್ಟೆ ತೊಳೆಯುವುದಕ್ಕೆ ನದಿ ದಂಡೆ, ಎಲ್ಲರೊಂದಿಗೂ ಮಾತುಕತೆ, ಒಣಗಿಸುವುದಕ್ಕೆ ಸೂರ್ಯನ ಬೆಳಕು ಹೀಗಿತ್ತು ಬದುಕು. ಈಗೇನಾಯ್ತು? ಎನ್ನುವುದು ನಿಮಗೆ ಗೊತ್ತಿದೆ. 

ಪರಿಸರ ದಿನ, ಪರಿಸರ ಸಂರಕ್ಷಣೆಯೆಂದರೆ ಕೇವಲ ಗಿಡ ನೆಡುವುದು ಮಾತ್ರವಲ್ಲ ಅವೈಜ್ಞಾನಿಕವಾಗಿ ಮಾಡುವುದೂ ಅಲ್ಲ ಎನ್ನುವುದಕ್ಕೆ ಈ ನನ್ನ ಮಾತುಗಳು. ನಿಮಗೆ ಯಾವುದೇ ಬಿನ್ನಾಭಿಪ್ರಾಯಗಳಿದ್ದರೂ ನೀವು ನನ್ನೊಂದಿಗೆ ಚರ್ಚಿಸಬಹುದು. ಸುಳ್ಳು ಪರಿಸರವಾದಿಗಳ ಬಗ್ಗೆ ಎಚ್ಚರವಿರಲಿ, ಇವರು ರಾಜಕಾರಣಿಗಳಂತೆಯೇ ಮಾರಕ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...