28 ಏಪ್ರಿಲ್ 2020

ಓದು, ಬರವಣಿಗೆಯಿಂದ ದೂರಾಗಿ, ದೃಶ್ಯ ಮಾಧ್ಯಮದ ಆಯ್ದ ತುಣುಕುಗಳು ಮತ್ತು ಪೋಸ್ಟ್‍ಗಳ ಹಾವಳಿಯಿಂದ ನರಳುತ್ತಿರುವ ಭಾರತ!


ಆತ್ಮೀಯರೇ,

ನೀವು ನನ್ನ ಹಳೆಯ ಬರಹಗಳನ್ನು ಓದದೇ ಇದ್ದರೂ ಪರವಾಗಿಲ್ಲ, ಆದರೇ, ಈ ಲೇಖನವನ್ನು ಕಡ್ಡಾಯವಾಗಿಯೂ ಓದಬೇಕೆಂದು ವಿನಂತಿಸುತ್ತೇನೆ. ಒಮ್ಮೆ ಓದಿ, ನಂತರ ಪ್ರತಿಕ್ರಿಯಿಸಿ ಅಥವಾ ಮರೆತು ಬಿಡಿ, ಹೋದರೇ, ನಿಮ್ಮ ಹತ್ತು ನಿಮಿಷ ಹೋಗುತ್ತೇ ಅಷ್ಟೆ. ಸರಿ ಎನಿಸಿದರೇ, ಬದಲಾವಣೆಯ ಪರ್ವ ಶುರುವಾಗುತ್ತದೆ. ಓದುವಾಗ, ಸ್ವಲ್ಪ ಕಸಿವಿಸಿಯಾಗಲೂಬಹುದು. ಅದಕ್ಕಾಗಿ ಪೀಠಿಕೆಯನ್ನು ನೀಡುತ್ತೇನೆ. ಈ ಲೇಖನದ ಉದ್ದೇಶ, ಓದಿನ ಮಹತ್ವ, ಓದುಗರ ಮಿತಿ ಮತ್ತು ಆಯ್ಕೆಯಾಗಿದೆ.

ಓದುವುದು ಎಂದರೇ, ಅನೇಕರಿಗೆ ಅಲರ್ಜಿ, ಅದು ಮೆಚ್ಚುವ ಮಾತು. ಅದರಲ್ಲಿ ಅತಿಶಯೋಕ್ತಿಯೂ ಇಲ್ಲ, ಅಚ್ಚರಿಯೂ ಇಲ್ಲ. ಓದಿನ ಬಗ್ಗೆ ತಾತ್ಸಾರವೇಕೆ? ಅಸಡ್ಡೆ ಏಕೆ? ಎಲ್ಲರಿಗೂ ಯಾವುದಾದರೂ ಒಂದರ ಬಗ್ಗೆ ಆಸಕ್ತಿ ಇದ್ದೇ ಇರುತ್ತದೆ, ಮತ್ತೊಂದರ ಬಗ್ಗೆ ಅಸಡ್ಡೆ ಇದ್ದೇ ಇರುತ್ತದೆ. ಅದನ್ನು ಪಟ್ಟಿ ಮಾಡುತ್ತಾ ಹೋದರೇ, ನೀವು ಈ ಲೇಖನವನ್ನು ಹತ್ತು ನಿಮಿಷಕ್ಕೆ ಓದಿ ಮುಗಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮನೆಗಳಲ್ಲಿ ಕೇಳಿಬರುವ ಒಂದು ಮಾತು, ಟಿವಿ ಮತ್ತು ಮೊಬೈಲ್ ಇದ್ದರೇ ಸಾಕು, ಬೇರೆ ಜಗತ್ತೇ ಬೇಡ. ಇಪ್ಪತ್ತನಾಲ್ಕು ಗಂಟೆಯೂ ಮೊಬೈಲ್ ಮತ್ತು ಟಿವಿ ಮುಂದೆ ಕುಳಿತಿರುತ್ತಾರೆ. ಈ ವಿಷಯವನ್ನೇ ಚರ್ಚಿಸೋಣ. ಟಿವಿಯ ಬಗ್ಗೆ ವ್ಯಾಮೋಹವಿದೆ, ಆದರೇ, ಟಿವಿಯಲ್ಲಿ ಬರುವ ಎಲ್ಲವನ್ನೂ ನೋಡುತ್ತೇವೆಯೇ? ಇಲ್ಲ, ನಮಗೆ ಹಿಡಿಸುವುದನ್ನು ಮಾತ್ರ. ಅದರಂತೆಯೇ, ಸಿನೆಮಾ, ಎಲ್ಲಾ ಸಿನೆಮಾವನ್ನೂ ನೋಡುತ್ತೇವೆಯೇ? ನಾವೇ ಮೆಚ್ಚಿ, ಆರಾಧಿಸುವ ನಮ್ಮ ನಾಯಕ/ನಾಯಕಿಯ ಅದೆಷ್ಟೋ ಸಿನೆಮಾಗಳನ್ನು ನಾವು ದೂಷಿಸಿ ಥಿಯೆಟರಿನಿಂದ ಹೊರಬಂದಿಲ್ಲವೇ?

ಅಂದರೇ, ಆಸಕ್ತಿ ವಿಷಯದ್ದೇ ಆದರೂ ಅಲ್ಲಿಯೂ ಆಯ್ಕೆಯೆಂಬುದಿದೆ. ಆರಿಸುತ್ತೇವೆ. ಒಂದು ಪಕ್ಷವನ್ನು ಬೆಂಬಿಲಿಸಿದರೂ, ಎಲ್ಲರನ್ನೂ ಇಷ್ಟಪಡುತ್ತೇವೆಯೇ? ಒಂದು ಕ್ರಿಕೇಟ್ ಟೀಮ್ ಅನ್ನು ಪ್ರೀತಿಸಿದರೂ ಎಲ್ಲರನ್ನೂ ಪ್ರೀತಿಸಿಸುತ್ತೇವೆಯೇ? ಇಲ್ಲವೇ ಇಲ್ಲ.

ಈಗ ಓದಿಗೆ, ಮರಳಿ ಬರೋಣ. ಈ ಓದುವಿನ ಬಗ್ಗೆ ತಾತ್ಸಾರ ಹುಟ್ಟುವುದು, ಶಾಲೆ ಮತ್ತು ಕಾಲೇಜುಗಳಲ್ಲಿ. ಅದು, ಪಠ್ಯ ಪುಸ್ತಕಗಳು ಆಸಕ್ತರಹಿತವಾಗಿರುವುದಕ್ಕೋ ಅಥವಾ ಮಾಸ್ಟರುಗಳು ಆ ರೀತಿ ಪಾಠ ಮಾಡಿರುವುದಕ್ಕೋ ಗೊತ್ತಿಲ್ಲ. ಅಂತೂ, ಈ ಓದು ಇಲ್ಲಿಗೆ ಮುಗಿದರೇ ಸಾಕು ಎನಿಸುತ್ತದೆ. ಪ್ರಾಮಾಣಿಕವಾಗಿ ಹೇಳುತ್ತೇನೆ, ನನ್ನದು ಪರಿಸರ ವಿಜ್ಞಾನ ವಿಷಯ, ನನಗೆ ಕಾಲೇಜಿನಲ್ಲಿ ಓದಿದ್ದಕ್ಕಿಂತ ಹೆಚ್ಚು ಅರ್ಥವಾಗಿದ್ದು, ತೇಜಸ್ವಿಯವರ, ಕುವೆಂಪುರವರ, ಕಾರಂತಜ್ಜರ ಪುಸ್ತಕಗಳಿಂದ. ಅದ್ಯಾಕೆ, ಆ ಮಟ್ಟಿಗಿನ ಬೇಸರ ತರಿಸುವ ಪುಸ್ತಕಗಳನ್ನು ಬರೆಯುತ್ತಾರೆ? ಮತ್ತು ಅದನ್ನು ವಿದ್ಯಾರ್ಥಿಗಳ ಹಣೆಗೆ ಕಟ್ಟುತ್ತಾರೆ?
ಇರಲಿ, ಅದು ವಿದ್ಯಾರ್ಥಿದೆಸೆ. ಅದಕ್ಕಾಗಿಯೇ, ನೋಡಿ ಕೋಟ್ಯಾಂತರ ವಿದ್ಯಾರ್ಥಿಗಳು, ಕಾಲೇಜು ಮುಗಿದ ತಕ್ಷಣ ಓದುವುದನ್ನೇ ಬಿಟ್ಟುಬಿಡುತ್ತಾರೆ. ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಅಲ್ಲಿಂದ ಒಂದು ಹೆಜ್ಜೆ ಮುಂದಕ್ಕೆ ಹೋಗೋಣ. ಈ ಓದುವುದು ಏತಕ್ಕೆ? ಕೆಲಸ/ಉದ್ಯೋಗ ಪಡೆಯುವುದಕ್ಕೆ! ಇದು, ಚಿಕ್ಕನಿಂದಲೂ ಮಕ್ಕಳ ಮೆದುಳಲ್ಲಿ ನಾವು ತುಂಬುತ್ತಾ ಬಂದಿದ್ದೇವೆ. ಆದ್ದರಿಂದ, ಮಕ್ಕಳ ಗುರಿ ಕೆಲಸ ಕೊಡಿಸುವ ಪುಸ್ತಕವನ್ನು ಮಾತ್ರವೇ ಓದುವುದು.  ನಾನು ಅನೇಕರನ್ನು ಕೇಳಿದ್ದೇನೆ, ನೀವು ಪುಸ್ತಕ ಓದುತ್ತೀರಾ? ಎಂದು. ಅದಕ್ಕೇ ಅವರ ಒಂದೇ ಉತ್ತರ, ಅಷ್ಟೆಲ್ಲಾ ಟೈಮ್ ಎಲ್ಲಿದೆ? ಅಥವಾ ಓದಿನಿಂದ ಏನು ಬರಬೇಕೆಂಬ ತಾತ್ಸಾರದ ಉತ್ತರ. ಇದನ್ನು ಇನ್ನೂ ಸ್ವಲ್ಪ ಆಳಕ್ಕಿಳಿದು ನೋಡಬೇಕಿದೆ.
ಎಲ್ಲರೂ ಓದಲೇಬೇಕೆಂಬ ನಿಯಮವಿಲ್ಲ. ಆದರೇ, ಓದುವುದರಿಂದ ಏನೆಲ್ಲಾ ಲಾಭವಿದೆ ಎಂಬುದನ್ನಾದರು ತಿಳಿದಕೊಳ್ಳಬೇಕಿತ್ತು. ಆ ಜಾಗೃತಿ ಮೂಡಿಸಲು ಸಾಧ್ಯವೇ? ಅಸಾಧ್ಯವಾದದ್ದೂ. ಕೆಲವೊಂದು ವಿಚಾರಗಳು ಸ್ವಂತ ಅನುಭವಕ್ಕೆ ಬಂದರೇ ಮಾತ್ರವೇ ಗ್ರಹಿಸಲು ಸಾಧ್ಯ. ಈ ಓದುವುದು ಅಷ್ಟೆ. ಹಲವರು ಕೇಳುವ ಪ್ರಶ್ನೆಗಳು ಹೀಗಿರುತ್ತವೆ. ಏಕೆ ಓದಬೇಕು? ಅದರಿಂದ ಏನು ಉಪಯೋಗ? ಕೆಲಸ ಸಿಗುವಂತಿದ್ದರೇ ಓದೋನ. ನಮ್ಮ ವಿಷಯಕ್ಕೆ ಸಂಬಂಧಿಸಿದ್ದು ಇದ್ದರೇ ಓದೋನ. ಕೆಲಸದಲ್ಲಿ ಪ್ರಮೋಷನ್ ಸಿಗುವಂತಿದ್ದರೇ ಓದೋನ. ಅದನ್ನು ಬಿಟ್ಟು, ಸಾಹಿತ್ಯ, ವೈಚಾರಿಕತೆ ಇವೆಲ್ಲವೂ ಬೇಕಾ? ಇದು ಕಾಲಹರಣ. ಎಲ್ಲವನ್ನೂ ಲಾಭಾಂಶ, ಅದರಲ್ಲಿಯೂ ಲೌಕಿಕತೆ ಆಧಾರದಲ್ಲಿ ನೋಡಿರುವುದರ ಪರಿಣಾಮವಿದು. ಓದುವುದರ ಅಲೌಕಿಕ ಲಾಭಾಂಶಗಳ ಕಡೆಗೊಮ್ಮೆ ಗಮನ ಹರಿಸೋನ.

ಮುಂದಿನ ಭಾಗವನ್ನು ನಾನು ಮೂರು ಭಾಗಗಳಾಗಿ ವಿಂಗಡಿಸುತ್ತೇನೆ. ಮೊದಲನೆಯದ್ದು, ಓದದೇ ಇದ್ದರೇ ಆಗುವ ಅಥವಾ ಆಗುತ್ತಿರುವ ನಷ್ಟಗಳು, ಓದುವಾಗ ಆಯ್ಕೆ ಮಾಡಿಕೊಳ್ಳುವುದರ ನಷ್ಠಗಳು ಮತ್ತು ಅದರಿಂದಾಗಿ ಬದಲಾದ ಮನಸ್ಥಿತಿಗಳು.
ಹಾಗೆಯೇ, ಒಮ್ಮೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಹೋಗಿ ಬರೋಣ. ಜ್ಞಾನದ ಅಥವಾ ಮಾಹಿತಿಯ ಮೂಲ ಯಾವುದಿತ್ತು? ಓದು, ದಿನ ಪತ್ರಿಕೆಗಳು, ವಾರ ಪತ್ರಿಕೆಗಳು, ಮಾಸಿಕ ಪತ್ರಿಕೆಗಳು, ಪುಸ್ತಕಗಳು, ಇತ್ಯಾದಿ. ಒಟ್ಟಾರೆಯಾಗಿ ಓದುವುದೇ ಮೂಲವಾಗಿತ್ತು. ಅನೇಕ ವಿಚಾರಗಳನ್ನು ಓದಿದವರು, ತಿಳಿದವರು ಇತರರಿಗಿಂತ ಸ್ವಲ್ಪವಾದರೂ ಭಿನ್ನವಾಗಿ ಆಲೋಚಿಸುತ್ತಿದ್ದರು ಮತ್ತು ಆಲೋಚಿಸಲೇಬೇಕಿತ್ತು. ಈಗಲೂ, ಅಷ್ಟೆ ಸಾಮಾನ್ಯವಾಗಿ ತಪ್ಪಾಗಿ ಮಾತನಾಡಿದರೆ, ನಮ್ಮವರೇ ಹೇಳುವ ಮಾತುಗಳು, ನೀನೇನು ಅವಿದ್ಯಾವಂತನ ರೀತಿ ಮಾತಾಡುತ್ತೀಯ? ಗೊತ್ತಾಗಲ್ವ ಎಂದು. ಅಂದರೇ, ಓದಿಗೆ ಒಂದು ಬೆಲೆಯಿದೆ ಎಂಬುದರ ಅರ್ಥ.

ನಮ್ಮ ಹಿರಿಯ ಸಾಹಿತಿಗಳನ್ನೊಮ್ಮೆ ಸುತ್ತಿ ಬನ್ನಿ. ಅವರ ವಿದ್ಯಾರ್ಹತೆಗಳನ್ನು ನೋಡಿ. ಎಲ್ಲರೂ, ಕಾಲೇಜಿಗೆ, ಹೋಗಿ ಎಂಎ, ಪಿಎಚ್‍ಡಿ ಮಾಡಿದವರಲ್ಲ. ಅದರಲ್ಲಿ ನನ್ನ ನೆಚ್ಚಿನ ಲೇಖಕರಾದ ಕಾರಂತಜ್ಜ, ಯಾವ ವಿಜ್ಞಾನಿಗೂ, ಕಡಿಯಿಲ್ಲದ ಜ್ಞಾನವನ್ನು ಹೊಂದಿದವರು. ಆ ಕಾಲದಲ್ಲಿ, ಯಾವ ಮಾಹಿತಿ ತಂತ್ರಜ್ಞಾನವೂ ಇಲ್ಲದೇ, ಆ ಮಟ್ಟಕ್ಕೆ ಅವರು ಜ್ಞಾನಾರ್ಜನೆ ಮಾಡಿಕೊಂಡು, ಅಷ್ಟೊಂದು ವಿಚಾರಗಳ ಕುರಿತು ಬರೆಯುವುದಕ್ಕೆ ಹೇಗೆ ಸಾಧ್ಯವಾಯಿತು? ಕಥೆ, ಕಾದಂಬರಿ ಬರೆಯುವುದು ಒಂದು ವಿಧ. ಅನೇಕ ಬಾರಿ, ತಮ್ಮ ಅನುಭವದಿಂದ, ಕಲ್ಪನೆಯಿಂದ ಬರೆಯಬಹುದು. ಆದರೇ, ವಿಜ್ಞಾನ ಕುರಿತು ರಚಿಸಬೇಕೆಂದರೇ? ಅದೇ ರೀತಿ, ತೇಜಸ್ವಿಯವರು ಮಿಲ್ಲೇನಿಯಂ ಸರಣಿ ತಂದಾಗಲೂ ಅಷ್ಟೇ, ಸುಮಾರು ಐವತ್ತು ವರ್ಷಗಳ ಕಾಲ ನಿರಂತರವಾಗಿ ಮಲೆನಾಡಿನ ಯಾವುದೋ ಮೂಲೆಯಲ್ಲಿ ಕುಳಿತು, ವಿಜ್ಞಾನದ ಮಾಸಿಕ ಪತ್ರಿಕೆಗಳನ್ನು ತರಿಸಿಕೊಂಡು ಓದುವುದು, ಅದನ್ನು ಓದುಗರಿಗೆ ಕನ್ನಡದಲ್ಲಿ ತಲುಪಿಸಿದ್ದು! ಅಚ್ಚರಿಯಲ್ಲವೇ?

ಹಿಂದಿನ ಪೀಳಿಗೆಯನ್ನು ನೋಡಿ, ಓದಿದವರೆಲ್ಲಾ ಸರ್ಕಾರಿ ಕೆಲಸಕ್ಕೆ ಸೇರಿಲ್ಲ. ಆದರೂ, ಅಕ್ಷರ ಜ್ಞಾನಕ್ಕಾಗಿ ಓದಿದವರು. ಈಗ, ಪ್ರೈಮರಿ ಶಾಲೆಗೆ ಸೇರಿಸುವ ಮುನ್ನವೇ ಯೋಚಿಸುತ್ತಾರೆ. ಯಾವ ಶಾಲೆಗೆ ಸೇರಿದರೇ, ಯಾವ ಕೋರ್ಸ್ ಸಿಗುತ್ತದೆ. ಯಾವ ಕೋರ್ಸ್ ಮಾಡಿದರೇ, ಎಷ್ಟು ಉದ್ಯೋಗವಕಾಶವಿದೆ ಎಂದು. ಅದರಲ್ಲಿ ತಪ್ಪೇನು? ತಪ್ಪೇನು ಇಲ್ಲ. ಉದ್ಯೋಕ್ಕಾಗಿಯೇ ಓದುವವನು, ಪ್ರಪಂಚ ತಿಳಿಯಲಾರ. ತಿಳಿದು ಏನು ಮಾಡಬೇಕು? ಅದನ್ನು ಮುಂದಕ್ಕೆ ವಿವರಿಸುತ್ತೇನೆ.

ಅದಕ್ಕೂ ಮುಂಚಿತವಾಗಿ, ಹೇಗಿದ್ದ ಸನ್ನಿವೇಶಗಳು ಹೇಗೆ ಬದಲಾದವು ಎಂಬುದನ್ನೊಮ್ಮೆ ಅವಲೋಕಿಸೋನ. ಮೊದಲೆಲ್ಲ ಸುದ್ದಿ ಓದಿ ವಿಷಯ ಸಂಗ್ರಹಣೆಯಾಗುತ್ತಿತ್ತು. ನಂತರದ ದಿನಗಳಲ್ಲಿ, ವಾರ್ತೆಗಳು ಬಂದವು. ಅದರ ಜೊತೆಗೆ ತಿಳಿದವರ ಭಾಷಣ ಕೇಳುವುದು ರೂಢಿಯಾಗಿತ್ತು. ಒಂದು ಕಾಲದಲ್ಲಿ ಭಾಷಣಕಾರರಿಗೆ ಎಲ್ಲಿಲ್ಲದ ಬೇಡಿಕೆಯಿತ್ತು. ಅದಾದ, ನಂತರ 24 ಗಂಟೆಯು ಸುದ್ದಿ ವಾಹಿನಿಗಳು ಬಂದವು. ಗೂಗಲ್ ಬಂತು. ಎಲ್ಲದಕ್ಕೂ ಗೂಗಲ್ ಹುಡುಕುವ ಚಾಳಿ ಬಂತು. ನಂತರದ ದಿನಗಳಲ್ಲಿ ಯೂಟ್ಯೂಬ್ ನೋಡುವುದು ಪ್ರಾರಂಭವಾಯಿತು. ನಂತರ, ಆಯ್ದ ಭಾಗವನ್ನು ಮಾತ್ರ ಕತ್ತರಿಸಿ, ಸುದ್ದಿಯನ್ನು ತಿರುಚುವ ಪದ್ಧತಿ ಶುರುವಾಯಿತು. ಅಂದರೇ, ಒಂದು ಗಂಟೆಯ ಭಾಷಣದಲ್ಲಿ ಹಿಡಿಸುವ ಅಥವಾ ಹಿಡಿಸದ ಕೇವಲ ಐದತ್ತು ನಿಮಿಷಗಳನ್ನು ಕತ್ತರಿಸಿ ಪ್ರಸಾರ ಮಾಡುವುದನ್ನು ಸೋಷಿಯಲ್ ಮೀಡಿಯಾ ಬಂದ ಮೇಲೆ ಆರಂಭಿಸಿದವು. ಈಗ, ಅದೆಲ್ಲವನ್ನು ಮರೆತು, ಮನಸ್ಸಿಗೆ ಬಂದದ್ದನ್ನು ಕೇವಲ ನಾಲ್ಕು ಸಾಲುಗಳಲ್ಲಿ ಯಾವುದೋ ಫೋಟೋ ಹಾಕಿ ಅದನ್ನೇ ಸತ್ಯವೆಂಬಂತೆ ನಂಬಿಸುವ ಸಂಸ್ಕøತಿ ಬಂದಿದೆ. ಯಾವುದನ್ನೂ ಆಲೋಚಿಸದೇ, ಅದೇ ಸತ್ಯವೆಂದು ನಂಬಿ ಅವೆಲ್ಲವನ್ನೂ ಹಂಚಿಕೊಳ್ಳುವುದು ಅದರಿಂದ ಸಮಾಜದ ಆರೋಗ್ಯವನ್ನು ಹಾಳು ಮಾಡುವುದು ಅತಿಯಾಗಿದೆ.

ಓದುವುದರಿಂದಾಗುವು ಅನುಕೂಲಗಳಾವು? ಯಾವುದನ್ನೇ ಓದಿ, ಓದು ಎಂಬುದು ನಮಗೆ ಅರಿವಿಲ್ಲದೇ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸುತ್ತದೆ. ಅತಿಯಾದ ತಾಳ್ಮೆ ನಮಗೆ ಬರುತ್ತದೆ. ಏಕಾಗ್ರತೆ ನಮ್ಮನ್ನು ಆವರಿಸುತ್ತದೆ. ನಾವೆಷ್ಟು ಅಲ್ಪ ಜ್ಞಾನಿಗಳು, ನಾವೇನು ಎಂಬುದರ ವಾಸ್ತವಿಕ ಅರಿವು ನಮಗೆ ಬರುತ್ತದೆ. ನಾವು, ನಮ್ಮದೇ ರೀತಿಯಲ್ಲಿ ಆಲೋಚಿಸು ಸಾಮಥ್ಯವನ್ನು ಕೊಡುತ್ತದೆ. ನಮ್ಮದೇ ರೀತಿ ಎಂದರೇನು? ಹೌದು, ಓದದೇ ಇದ್ದರೆ, ನಾವು ಕಂಡಿದ್ದೆಲ್ಲವೂ ಸತ್ಯ, ನಾವು ಕೇಳಿದ್ದೆಲ್ಲವೂ ಸತ್ಯವೆಂಬ ಭ್ರಮೆಯಲ್ಲಿ ಜೀವನ ಸವೆಸುತ್ತೆವೆ. ಓದಿದಾಗ, ಬೇರೊಂದು ಆಯಾಮದಲ್ಲಿಯೂ ಅದನ್ನು ಕಾಣುವುದಕ್ಕೆ ಬರುತ್ತದೆ. ಓದು, ಪುಸ್ತಕವೆಂಬದು ಮನುಷ್ಯನ ಆಪ್ತ ಮಿತ್ರವೆಂಬುದರಲ್ಲಿ ಸಂಶಯವಿಲ್ಲ. ಯಾವುದೇ, ಸಮಯದಲ್ಲಿ ಎಂತಹ ಕೆಟ್ಟ ಸನ್ನಿವೇಶದಲ್ಲಿಯೂ ಒಂದು ಪುಸ್ತಕ ನಿಮ್ಮ ಖಿನ್ನತೆಯನ್ನು ದೂರವಿಡುವುದಕ್ಕೆ ಸಹಕರಿಸುತ್ತದೆ. 

ಈಗ ಕೊನೆಯ ಹಂತಕ್ಕೆ ಬರೋಣ ಯಾರು ಯಾವ ರೀತಿಯ ಪುಸ್ತಕಗಳು ಬಯಸುತ್ತಾರೆ ಮತ್ತು ಓದುತ್ತಾರೆ. ಅವರ ಮಿತಿಗಳೇನು? ಸಾಹಿತ್ಯ ಓದುವುದರಲ್ಲಿ, ನಾನು ಕನ್ನಡದ ಕುರಿತು ಮಾತನಾಡುತ್ತಿರುವುದರಿಂದ ಕನ್ನಡ ಓದುಗ ಮತ್ತು ಕನ್ನಡ ಲೇಖಕರ ಕುರಿತಾಗಿಯೇ ಮಾತನಾಡುವುದು ಉತ್ತಮ. ಈ ಮಾತುಗಳನ್ನು ಓದನ್ನು ಆಳವಾಗಿ ಇರಿಸಿಕೊಂಡಿರುವವರ ಕುರುತು ಎಂಬುದು ನೆನಪಿನಲ್ಲಿರಲಿ. ತೀರಾ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಪುಸ್ತಕ ಓದುವವರ ಬಗ್ಗೆ ಅಲ್ಲವೇ ಅಲ್ಲ. ಪುಸ್ತಕ ಆರಿಸಿಕೊಳ್ಳುವುದರಲ್ಲಿ ನಂಬಿರುವ ವೈಚಾರಿಕತೆ ಬಹಳ ಕೆಲಸ ಮಾಡುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ. ಸಾಧಾರಣವಾಗಿ ಕನ್ನಡ ಸಾಹಿತ್ಯ ಎಂದಾಕ್ಷಣ ಮೊದಲ ಹೆಸರೇ, ಕುವೆಂಪುರವರದ್ದು ಅದಾದ ನಂತರದ ಸ್ಥಾನಗಳು ಎಲ್ಲಾ ಜ್ಞಾನಪೀಠ ಪುರಸ್ಕøತರಿಗೆ ಮತ್ತು ಅವರ ಸಮಕಾಲೀನರಿಗೆ ಮೀಸಲಾಗಿರುತ್ತದೆ.

ಓದುಗರ ದೃಷ್ಠಿಯಿಂದ ನೋಡುವುದಾದರೇ, ಹೆಚ್ಚು ಓದುಗರ ಬಳಗವನ್ನು ಸಂಪಾದಿಸಿರುವವರ ಪಟ್ಟಿಯಲ್ಲಿ ಎಸ್.ಎಲ್.ಭೈರಪ್ಪರವರು, ತೇಜಸ್ವಿ, ಕಾರಂತರು ಸೇರುತ್ತಾರೆ. ಗಮನಿಸಿ ನೋಡಿ ಭೈರಪ್ಪರವರ ಸಮಗ್ರ ಕೃತಿಗಳನ್ನು ಓದಿದವರು ತೇಜಸ್ವಿಯನ್ನೋ ಅಥವಾ ಕುವೆಂಪುವನ್ನೋ ಓದಿರುವುದಿಲ್ಲ. ತೇಜಸ್ವಿಯವರನ್ನ ಓದಿದವರು ಖಂಡಿತವಾಗಿಯೂ ಕಾರಂತರನ್ನು, ಕುವೆಂಪುರವರನ್ನು ಓದಿರುತ್ತಾರೆ. ದೇವನೂರರವರನ್ನು ಓದಿದವರು ಖಂಡಿತವಾಗಿಯೂ ಲಂಕೇಶ್ ಮತ್ತು ತೇಜಸ್ವಿಯವರನ್ನು ಓದಿರುತ್ತಾರೆ. ತೇಜಸ್ವಿಯವರನ್ನು ಓದಿಕೊಂಡವರು ಹೆಚ್ಚಿನವರು ಗ್ರಾಮೀಣ ಪ್ರದೇಶದವರು ಎಂಬುದು ನಿರ್ವಿವಾದ. ಇಲ್ಲೊಂದು ತಮಾಷೆಯ ವಿಷಯವೆಂದರೇ ಹಲವರು ಕೇವಲ ಒಂದೋ ಎರಡೋ ಪುಸ್ತಕಗಳನ್ನು ಓದಿ ನಾನು ಅವರ ಕಟ್ಟಾಭಿಮಾನಿ ಎನ್ನುತ್ತಾರೆ. ನನಗೆ ಆ ಸಮಯದಲ್ಲಿ ಒಳಗೊಳಗೆ ನಗು.

ನಾನು ಹೇಳುವುದಾದರೇ, ಎಲ್ಲರನ್ನೂ ಓದುವ ಪ್ರಯತ್ನ ಮಾಡಿ. ದೇವನೂರರವರನ್ನು ಓದಿದವರಿಗೆ ಖಂಡಿತವಾಗಿಯೂ ಭೈರಪ್ಪರವರ ಕಾದಂಬರಿಗಳು ಹಿಡಿಸುವುದಿಲ್ಲ. ಆದರೂ, ಯಾವ ಅಂಶಗಳು ಹಿಡಿಸುವುದಿಲ್ಲವೆಂಬುದನ್ನು ತಿಳಿಯುವುದಕ್ಕಾದರೂ ಓದಿ ನೋಡಿ. ನಾನು ಅನೇಕ ಬಾರಿ ಗಾಂಧೀಜಿಯ ವಿಚಾರದಲ್ಲಿ ಇದನ್ನೇ ಹೇಳುತ್ತೇನೆ. ಒಮ್ಮೆ ಓದಿ ನೋಡಿ, ತಪ್ಪಿಲ್ಲವಲ್ಲ, ಒಂದೆರಡು ಪುಸ್ತಕಗಳು, ಹೆಚ್ಚೆಂದರೇ ಒಂದು ವಾರ ಹೋದೀತು. ಹೋಗಲಿ ಬಿಡಿ. ಎಲ್ಲರನ್ನೂ ಓದಲು ಪ್ರಯತ್ನಿಸಿ, ಮನಸ್ಸಿಗೆ ಓದಿಕ್ಕಿಂತ ಮಿತ್ರ ಮತ್ತೊಬ್ಬನಿಲ್ಲ.

ಕೊನೆಯದಾಗಿ ಹೇಳುವುದಾದರೇ, ಬರೆಯುವುದು. ದಯವಿಟ್ಟು ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಭಾರತೀಯರ ಸಮಸ್ಯೆಯೇ ಇದು. ಭಾಷಣ ಮಾಡಿ ಎಂದರೇ ಗಂಟೆಗಟ್ಟಲೇ ಹರಟುತ್ತೇವೆ. ಬರೆಯಿರಿ ಎಂದರೇ, ಮೈಲಿ ದೂರು ಓಡುತ್ತೇವೆ. ನಮ್ಮ ದೇಶ ಹಾಗಿತ್ತು ಹೀಗಿತ್ತು ಎಂದೆಲ್ಲಾ ಬೀಗುತ್ತೇವೆ. ಆದರೇ, ಅದ್ಯಾವುದನ್ನು ನಮ್ಮವರ ದಾಖಲಿಸಲೇ ಇಲ್ಲ. ಈಗ ನಮ್ಮ ಇತಿಹಾಸವನ್ನು ತಿರುಚಿದ್ದಾರೆಂಬ ಬೊಂಬಡ. ನಮ್ಮವರೇ ಬರೆದಿದ್ದರೇ ಈ ದೂರುಗಳು ಇರುತ್ತಿರಲಿಲ್ಲ ಅಲ್ಲವೇ? ನಮ್ಮ ಅನುಭವಗಳೇ ಬೆಟ್ಟದಷ್ಟಿರುತ್ತವೆ, ಆದರೇ, ನಾವುಗಳೇ ನಮ್ಮನ್ನು ಕುಬ್ಜವಾಗಿ ಕಾಣುತ್ತೇವೆ. ಬರವಣಿಗೆ ಮನದಾಳದ ಭಾವನೆಗಳನ್ನು ಹೊರದಬ್ಬಲು ಇರುವ ಸಿಹಿ ಸಾಧನ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...