06 ಫೆಬ್ರವರಿ 2013

ಯಾವುದನ್ನು ಬರೆಯುವುದು ಯಾವುದನ್ನು ಓದುವುದು ಯಾವುದನ್ನು ಆಡುವುದು ಯಾವುದನ್ನು ನೋಡುವುದು ಯಾವುದನ್ನು ಕೇಳುವುದು ಯಾವುದನ್ನು ಕಿವಿ ಮುಚ್ಚುವುದು. ಎಲ್ಲವು ತಲೆಯೊಳಗೆ ಹೋಗಲಾರದು, ಎಲ್ಲವನ್ನು ತಲೆಯಿಂದ ತೆಗೆಯಲಾರದು. ದೈವನ ಲೀಲೆಯೆಂಬುದೋ? ದೇವರ ಆಟವೆಂಬುದೋ? ಇಲ್ಲಾ ಕಾಟವೆಂಬುದೋ? ಪುಟ್ಟ ದ್ವೀಪದಲ್ಲಿ ತನ್ನದೇ ಜೀವನ ನಡೆಸುತ್ತಾ ಬದುಕುತ್ತಿದ್ದ ಜನರನ್ನು ಸುನಾಮಿ ಬಂದು ಬಡಿದೆಬ್ಬಿಸಿದರೇ? ಎಲ್ಲ ಜನರನ್ನೂ ಒಮ್ಮೆಗೆ ಯಮಲೋಕದ ರೈಲು ಹತ್ತಿಸಿದರೇ? ದ್ವೀಪವೆಂಬ ಕಗ್ಗಾಡಿನಲ್ಲಿದ್ದ ಜನ ದೇವರು ನಮ್ಮನ್ನು ಕರೆದೊಯ್ಯುತ್ತಿರುವುದು, ಯಮನ ಮನೆಗೆ, ಸ್ವರ್ಗಕ್ಕೆಂದು ನಲಿದಾಡಬೇಕೋ? ಇಲ್ಲಾ ಏನಾದರೂ ಹೇಗಿದ್ದರೂ ನಾವು ಹುಟ್ಟಿದ ನೆಲ ನಮಗೆ ಸ್ವರ್ಗವೆಂದು, ನಾವು ನಿನ್ನೂರಿಗೆ ಬರುವುದಿಲ್ಲವೆಂದು ದೇವರಿಗೆ ಮೊರೆಗೊಡಬೇಕಾ? ಹುಟ್ಟುವಾಗ ಯಾರನ್ನೂ ಕೇಳಿ ಬರಲಿಲ್ಲ, ಸಾಯುವಾಗಲೂ ಕೇಳುವುದಿಲ್ಲ! ಮತ್ತ್ಯಾಕೆ ಬಡತನ ಬೇಗೆಯಲ್ಲಿ ಬೆಂದು, ತಿನ್ನಲು ಅನ್ನವಿಲ್ಲದೇ, ಕೊರಗಬೇಕು. ಹಗಲಿರುಳ್ಳೆನ್ನದೇ ದುಡಿದರೂ ನೂರು ರೂಪಾಯಿ ಕೂಲಿ ಅಷ್ಟೇ? ಅಕ್ಕಿಯ ಬೆಲೆ ಐವತ್ತಾಯಿತು, ನೂರು ರೂಪಾಯಿ ದುಡಿದರೇ, ಆರು ಜನರು ತಿನ್ನಬೇಕು, ಉರುವಳಿಗೆಯಿಲ್ಲ ಬೇಯಿಸಲು, ಕಾಸಿಲ್ಲ, ಗ್ಯಾಸ್ ಕೊಳ್ಳಲು, ಸ್ವಂತ ಮನೆಯಿದ್ದರಲ್ಲವೇ ಗ್ಯಾಸ್ ಬೇಕಿರುವುದು. ಯಾವುದೋ ಪೈಪಿನ ಅಡಿಯಲ್ಲಿ ಮಲಗಿದರೂ ನಿದ್ದೆ ಬರುತ್ತದೆ, ನೆಮ್ಮದಿಯಿಂದಲ್ಲ, ಮುಂಜಾನೆಯಿಂದ ದುಡಿದ ನೋವಿನಿಂದ. ಇದ್ಯಾವ ನ್ಯಾಯ, ಬಡವನ ಜೀವಕ್ಕೆ ಬೆಲೆಯಿಲ್ಲವೇ? ಬಡವನಾಗಬೇಕೆಂದು ಬಯಸಿ ಹುಟ್ಟಲ್ಲಿಲ್ಲ, ಹುಟ್ಟಿದ್ದು ಆಯ್ತು, ಬದುಕಬೇಕೆಂದರೆ, ತಿನ್ನುವ ಅನ್ನವೇ, ಇಲ್ಲ, ಇರುವ ಸೂರಿಲ್ಲ, ರೋಗ ಬಂದರೇ ಗುಣವಾಗುವ ಸೂಚನೆಯಿಲ್ಲ, ದೇಶ ಬೆಳಗುತ್ತಿದೆಯೆಂದರೆ, ಯಾವುದು? ಬೀದಿ ದೀಪಗಳಿವೆ, ತಟ್ಟೆಗೆ ಕೈ ಹಾಕಿದರೇ ಅನ್ನ ಮುಟ್ಟುತ್ತಿರುವ ಭಾವನೆ ಮಾತ್ರ, ಕತ್ತಲಲ್ಲಿ ಕಣ್ಣಗಳಿಸಿದರೂ ಅನ್ನ ಕಾಣುವುದಿಲ್ಲ, ಹಸಿವು ಅದನ್ನೆಲ್ಲಾ ಯೋಚಿಸುವುದಿಲ್ಲ, ಅನ್ನವೋ ಕಲ್ಲೋ ಮಣ್ಣೋ ಮೊದಲು ಬಾಯಿಗೆ ಬೀಳಬೇಕು, ಅಷ್ಟೇ. ರುಚಿ ಎಂದರೇನೆಂಬ ಅರಿವೇ ಇಲ್ಲ. ಅದರ ಅವಶ್ಯಕತೆಯೂ ಇಲ್ಲ. ತಿನ್ನುವುದು ಒಂದು ಔಷಧಿ, ಬದುಕಲು ತಿನ್ನಬೇಕು, ಔಷಧಿ ಎಂದ ಮೇಲೆ ಹೆಚ್ಚು ತಿನ್ನುವ ಹಾಗಿಲ್ಲ, ಮಿತವಾಗಿರಬೇಕಲ್ಲವೇ? ನಾಲ್ಕೆ ತುತ್ತು, ಹೊಟ್ಟೆ ಕೂಗುತ್ತದೆ ಇನ್ನೂ ಬೇಕೆಂದು, ಇದ್ದರಲ್ಲವೇ, ಕೈಯಿಂದ ಬಾಯಿಗೆ ಹೋಗುವುದು, ನಾಳೆಯೂ ಬದುಕಿದ್ದರೇ ತಿನ್ನೋನವೆಂದ ಸಮಧಾನವಾಗುತ್ತದೆ, ಅನಿವಾರ್ಯತೆಯಲ್ಲವೇ, ಬದುಕುತ್ತೇನೆಂಬ ವಿಶ್ವಾಸವಲ್ಲ, ದೇವರು ಸಾಯಿಸುವುದಿಲ್ಲವೆಂಬ ನಂಬಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿರಂತರ ಅಕಾಲಿಕ ಮಳೆ, ಹವಮಾನ ವೈಪರಿತ್ಯದ ಎಚ್ಚರಿಕೆಯ ಘಂಟೆ: ಡಾ. ಹರೀಶ್ ಕುಮಾರ ಬಿ.ಕೆ

  ನಿರೀಕ್ಷೆ ಮೀರಿದ ಮಟ್ಟದಲ್ಲಿ ಬೀಳುತ್ತಿರುವ ಮಳೆಯ ಆತಂಕದಲ್ಲಿರುವಾಗಲೇ ಮುಂದಿನ ವರ್ಷ ಬಿಸಿಲು ಹೆಚ್ಚಾಗುವ ಆತಂಕದ ಜೊತೆಗೆ ಬಡವರ ಊಟಿ ಸೇರಿದಂತೆ ರಾಜ್ಯದ ಹಲವಾರು ಜಿಲ್ಲ...